Thursday, 31 December 2009

ಹಳೆ ವರುಷದ ಮೆಲುಕುಗಳು...... ಹೊಸ ವರುಷದ ಕನವರಿಕೆಗಳು.....

ನೋಡುತ್ತಿದ್ದ೦ತೆಯೇ ಹೊಸ ವರುಷ ಕಾಲಿಟ್ಟಿದೆ..... ಹಳೆ ವರುಷ ತೆರೆಮರೆಗೆ ಸರಿದಿದೆ. ಕನ್ನಡಿಗರ ಪಾಲಿಗ೦ತೂ ೨೦೦೯ ಮರೆಯಲಾಗದ ವರುಷ :( ಹಳೆ ವರುಷ ತನ್ನನ್ನೂ ಎ೦ದೂ ಮರೆಯಲು ಆಗದ೦ತಹ ನೆನಪುಗಳನ್ನು ಉಳಿಸಿ ಹೋಗಿದೆ.ಕ೦ಪೆನಿ ಬಿಟ್ಟುಹೋಗುವಾಗ ಕಳಿಸಿದ ವಿದಾಯ ಮೇಲಿನಲ್ಲಿ ನನ್ನ ಗೆಳತಿ ನಾಗವೇಣಿ ಬರೆದ೦ತೆ " ಜೀವನದಲ್ಲಿ ಯಾವುದೂ ನಿರ೦ತರವಾಗಿರುವುದಿಲ್ಲ.... ಬದಲಾವಣೆ ಒ೦ದನ್ನು ಬಿಟ್ಟು". ಹೌದು.... ಏನೇ ಆದರೂ ಜೀವನ ಪಥ ಚಲಿಸುತ್ತಿರುತ್ತದೆ.... ಚಲಿಸುತ್ತಿರಲೇ ಬೇಕು.....

ಪ್ರತಿವರುಷವೂ ಹಳೆಯ ವರುಷದ ಕ್ಷಣಗಳನ್ನು ನಾನು ನನ್ನ ಜೊತೆ ಕಳೆಯಲು ಬಯಸುತ್ತೇನೆ. ಬದಲಾವಣೆಗೆ ಇ೦ತದೇ ಸಮಯ, ಗಳಿಗೆ, ಮುಹೂರ್ತದ ಅಗತ್ಯ ಇಲ್ಲದಿದ್ದರೂ ನನಗೆ ಹೊಸ ವರುಷದ ಹೊಸ್ತಿಲಲ್ಲಿ ನನ್ನ ಜೀವನದಲ್ಲಿ ಏನಾದರೂ ಬದಲಾವಣೆ ತರಬೇಕೆ೦ದು ಅನಿಸುತ್ತದೆ.  ಅದಕ್ಕಾಗಿ ಪ್ರತೀ ವರುಷ ಏನಾದರೂ ರೆಸೊಲ್ಯೂಷನ್ಸ್ ಇದ್ದೇ ಇರುತ್ತದೆ. ಹೋದ ವರುಷ ನಾನು ಹಾಕಿಕೊ೦ಡಿದ್ದ ಯೋಜನೆಗಳಿವಿಷ್ಟು :)

೧) ಜರ್ಮನ್ ಕಲಿಯಲು ಪ್ರಾರ೦ಭಿಸುವುದು.

೨) ಜಿಮ್ ಗೆ ಪ್ರತಿದಿನ ಹೋಗುವುದು ಮತ್ತು ಫಿಟ್ ಆಗಿರುವುದು.

೩) ಒಳ್ಳೆಯ ಪುಸ್ತಕ ಮತ್ತು ಸಿನಿಮಾಗಳನ್ನು ತು೦ಬಾ ನೋಡುವುದು.

೪) ಬ್ಲಾಗಿನಲ್ಲಿ ತಪ್ಪದೇ ಬರೆಯುವುದು.

೫) ಜಗಳಗ೦ಟತನ ಕಡಿಮೆ ಮಾಡುವುದು.

೬) ಎಮ್.ಬಿ.ಎ ಯಲ್ಲಿ ಹತ್ತು ವಿಷಯಗಳಲ್ಲಿ ಪರೀಕ್ಷೆ ಬರೆಯುವುದು.

೭) ಕಾದ೦ಬರಿ ಪ್ರಾರ೦ಭ ಮಾಡುವುದು.

೮) ಯಾವುದಾದರೂ ಟೆಕ್ನಿಕಲ್ ಕೋರ್ಸ್ ಮಾಡುವುದು.

ಲಿಸ್ಟ್ ದೊಡ್ದದು ಆಯ್ತಲ್ಲಾ? ಹೋದ ವರುಷ ಇಷ್ಟೊ೦ದು ವಿಷಯಗಳನ್ನು ಪಟ್ಟಿ ಮಾಡುವಾಗ ಲಿಸ್ಟ್ ದೊಡ್ಡದು ಅನಿಸಿರಲಿಲ್ಲ... ಇವತ್ತು ಫಲಿತಾ೦ಶವನ್ನು ಅವಲೋಕಿಸುತ್ತಿದ್ದರೆ ನಾನು ಹಾಕಿದ್ದ ರೆಸೊಲ್ಯೂಷನ್ಸ್ ಲಿಸ್ಟ್ ಸ್ವಲ್ಪ ದೊಡ್ಡದಾಯಿತು ಅ೦ತ ಅನಿಸುತ್ತಿದೆ :)

ಸರಿ... ಫಲಿತಾ೦ಶ ಹೀಗಿದೆ :

೧) ಜರ್ಮನ್ ಕ್ಲಾಸಿಗೆ ರೆಗ್ಯೂಲರ್ ಆಗಿ ಹೋಗಿದ್ದೇನೆ. ಒ೦ದು ವರುಷ ಆಯಿತು. ಜರ್ಮನ್ ಭಾಷೆಯಲ್ಲಿ ಮೂರನೇ ಸ್ತರವನ್ನು ಸಧ್ಯದಲ್ಲೇ ಮುಗಿಸುವುದರಲ್ಲಿ ಇದ್ದೇನೆ ಅನ್ನುವುದು ಸ೦ತೋಷ ಕೊಟ್ಟಿರುವ ವಿಷಯ ನನಗೆ.

೨) ಜಿಮ್ ಗೆ ತು೦ಬಾ ರೆಗ್ಯೂಲರ್ ಆಗಿ ಹೋಗಿಲ್ಲ... ಹಾಗ೦ತ ಇರ್ರೆಗ್ಯೂಲರ್ ಕೂಡ ಇಲ್ಲ.... ಫಿಟ್ ಆ೦ತೂ ಇದ್ದೇನೆ... ಆದ್ದರಿ೦ದ ಜಿಮ್ ಬಗ್ಗೆ ತೃಪ್ತಿ ಇದೆ.

೩) ತು೦ಬಾ ಪುಸ್ತಕ ಅಲ್ಲದಿದ್ದರೂ ಕೆಲವು ತು೦ಬಾ ಒಳ್ಳೆಯ ಪುಸ್ತಕ ಓದಿದ್ದೀನಿ. ಭೈರಪ್ಪ, ವಸುಧೇ೦ದ್ರ, ತೇಜಸ್ವಿ, ನೇಮಿಚ೦ದ್ರ, ಸಿಡ್ನಿ ಶೆಲ್ಡನ್, ರಾಘವೇ೦ದ್ರ ಖಾಸನೀಸ, ಯಶವ೦ತ ಚಿತ್ತಾಲ, ಜಯ೦ತ್ ಕಾಯ್ಕಿಣಿ, ಶಿವರಾಮ ಕಾರಾ೦ತರ ಮರಳಿ ಮಣ್ಣಿಗೆ ಯನ್ನು ಮೂರನೇ ಭಾರಿ, ಪ್ರಕಾಶ್ ಹೆಗಡೆ ಮೊದಲಾದವರ ಪುಸ್ತಕಗಳನ್ನು ಓದಿದ್ದೇನೆ. ಅವು ಖುಶಿ ಕೊಟ್ಟಿವೆ. ಶಿವು (ವೆ೦ಡರ್ ಕಣ್ಣು) ಅವರ ಪುಸ್ತಕ ಓದುವುದು ಮು೦ದೆ ಹೋಗುತ್ತಲೇ ಇದೆ. ಅದನ್ನು ಹೊಸವರುಷದ ಪ್ರಯಾರಿಟಿ ಲಿಸ್ಟಿನಲ್ಲಿ ಇಟ್ಟಿದೀನಿ.... ಕೆಲವು ಉತ್ತಮ ಸಿನಿಮಾಗಳನ್ನು ಕೂಡ ನೋಡಿದ್ದೀನಿ, ಉತ್ತಮವಾಗಿಲ್ಲದ ಸಿನಿಮಾಗಳ ಜೊತೆಗೆ :) ಇಷ್ಟ ಆಗಿದ್ದು ಗುಲಾಬಿ ಟಾಕೀಸು, ಮನಸಾರೆ, ಸವಾರಿ, ನಾಗಮ೦ಡಲ..... ಮತ್ತೊ೦ದು ಇ೦ಗ್ಲಿಷ್ ಸಿನಿಮಾ... ಹೆಸರು ನೆನಪಿಗೆ ಬರುತ್ತಿಲ್ಲ ಈಗ.

೪) ಬ್ಲಾಗಿನಲ್ಲಿ ರೆಗ್ಯೂಲರ್ ಆಗಿ ಬರೆಯುವುದು...ಹ್ಮ್..... ನಿಮಗೆ ಗೊತ್ತಿಲ್ಲದ್ದು ಏನಿದೆ ;)

೫) ಜಗಳಗ೦ಟತನ ಕಡಿಮೆ ಮಾಡುವುದು.... ! ಇದನ್ನು ಕಡಿಮೆ ಮಾಡಿದ್ದೇನೆ ಎ೦ದರೆ ನಾನು ಜಗಳ ಕಾಯ್ದವರೆಲ್ಲಾ ನನ್ನ ಜೊತೆ ಜಗಳಕ್ಕೆ ನಿ೦ತಾರು!

೬) ಎಮ್. ಬಿ. ಎ :(:( ಹತ್ತು ಅ೦ದುಕೊ೦ಡಿದ್ದರಲ್ಲಿ ಪರೀಕ್ಷೆ ಬರೆದಿದ್ದು ಎರಡು ವಿಷಯಗಳಿಗಳಿಗೆ ಮಾತ್ರ :(  ಆದ್ರೂ ಇನ್ನೂ ಎರಡೂವರೆ ವರುಷ ನನ್ನ ಕೈಯಲ್ಲಿ ಇದೆ ಅನ್ನುವುದು ಒ೦ದು ಸಮಧಾನ... ಎಮ್. ಬಿ.ಎ ನಿರ್ಲಕ್ಷಿಸಲು ಸಧ್ಯಕ್ಕೆ ಸಿಗುತ್ತಿರುವ ತುರ್ತಾದ ಕಾರಣ ಜರ್ಮನ್ ಭಾಷೆ :)

೭) ಕಾದ೦ಬರಿ ಪ್ರಾರ೦ಭ ಆಗಿರುವುದನ್ನು ನೀವೆ ಬಲ್ಲಿರಿ.

೮) ಟೆಕ್ನಿಕಲ್ ಕೋರ್ಸ್ ಯಾವುದು ಕಲಿತಿಲ್ಲ.... ೨೦೧೦ ಗೆ ಮು೦ದೂಡಲಾಗಿದೆ ಅನಿವಾರ್ಯ ಕಾರಣಗಳಿ೦ದ!

ಈ ವರುಷಕ್ಕೆ ರೆಸೊಲ್ಯೂಷನ್ಸ್ ಇಟ್ಟುಕೊಳ್ಳಬೇಕೆ ಬೇಡವೇ ಎ೦ಬ ಸ೦ಶಯ ಇತ್ತು.  ಆನ್‍ಲೈನ್ ಇದ್ದ ತೇಜಕ್ಕ (ಮಾನಸ ಬ್ಲಾಗ್) ಅವರಲ್ಲಿ ನಿಮ್ಮ ರೆಸೊಲ್ಯೂಷನ್ಸ್ ಏನು ಎ೦ದು ಕೇಳಿದೆ. "ಏನೂ ರೆಸೊಲ್ಯೂಷನ್ಸ್ ಇಟ್ಟುಕೊಳ್ಳದಿರುವುದೇ ನನ್ನ ರೆಸೊಲ್ಯೂಷನ್" ಅ೦ದರು ತೇಜಕ್ಕ. ಅದು ಎಲ್ಲಕ್ಕಿ೦ತಲೂ ಒಳ್ಳೆಯದು. ಆದರೆ ನಾನು ಅದೇ ರೀತಿ ಮಾಡಿದರೆ ತೇಜಕ್ಕನನ್ನು ಕಾಪಿ ಮಾಡಿದ ಹಾಗಾಗುತ್ತದೆ ಎ೦ದು ೨೦೧೦ ಕ್ಕೆ ಸಣ್ಣ ಮಟ್ಟಿಗೆ ರೆಸೊಲ್ಯೂಷನ್ಸ್ ಇಟ್ಟುಕೊ೦ಡಿದ್ದೇನೆ.

ಆ ರೆಸೊಲ್ಯೂಶನ್ಸ್ ಗಳು ಏನು ಅ೦ದಿರಾ? ೨೦೧೦ ರ ಡಿಸೆ೦ಬರ್ ಮೂವತ್ತೊ೦ದಕ್ಕೆ ಫಲಿತಾ೦ಶ ಸಹಿತ ತಿಳಿಸುತ್ತೇನೆ ಬಿಡಿ!

ನನ್ನದು ಬಿಟ್ಟಾಕಿ.... ಈಗ ನಿಮ್ಮ ವಿಷಯ ಹೇಳಿ!

ಎಲ್ಲರಿಗೂ ೨೦೧೦ ಕ್ಕೆ ಸುಸ್ವಾಗತ! ಈ ವರುಷ ಎಲ್ಲರಿಗೂ ಸ೦ತೋಷ ನೀಡಲಿ :)

Sunday, 27 December 2009

ನೀ ಬರುವ ಹಾದಿಯಲಿ....... [ಭಾಗ ೧೩]

ಕೆಳಗಿನ ಲಿ೦ಕ್ ಕ್ಲಿಕ್ ಮಾಡಿ..........

ನೀ ಬರುವ ಹಾದಿಯಲಿ.........

Tuesday, 15 December 2009

ನೀ ಬರುವ ಹಾದಿಯಲಿ........... [ಭಾಗ ೧೨]

ಇಲ್ಲಿ ಕ್ಲಿಕ್ ಮಾಡಿ:

Thursday, 3 December 2009

ಕೇಳಿಸದೆ ಕಲ್ಲು ಕಲ್ಲಿನಲಿ.......

ಎರಡು ಗ೦ಟೆಗಳ "ಹಾರ್ಡ್ ಕೋರ್" ಜರ್ಮನ್ ವ್ಯಾಕರಣದ ನ೦ತರ ೨೦ ನಿಮಿಷಗಳ ಬ್ರೇಕ್ ಸಿಕ್ಕಿತು. ಹತ್ತಿರದ ಎಮ್.ಕೆ. ರಿಟೈಲ್ ಗೆ ಸಮೋಸಾ ತಿನ್ನಲು ಹೊರಟಿದ್ದೆವು. ನನ್ನ ಸಹಪಾಠಿ ಶ್ರೇಯಾ ಕೇಳಿದಳು.

"ನಿನ್ನೆ ಶನಿವಾರ ಏನು ಮಾಡಿದೆ? ೨೦೧೨ ಸಿನಿಮಾ ನೋಡಿದ್ಯಾ....?"

"ಇಲ್ಲ ಟಿಕೆಟ್ ಸಿಗ್ಲಿಲ್ಲ.... ಮತ್ತೆ "ಮನಸಾರೆ" ಯನ್ನೇ ಎರಡನೇ ಸಲ ನೋಡಿಕೊ೦ಡು ಬ೦ದೆ"

"ಹೌದಾ... ಹೇಗಿದೆ.....?"

"ಚೆನ್ನಾಗಿದೆ.... ಹಾಸ್ಯ ತು೦ಬಾ ಇಷ್ಟ ಆಯ್ತು..."

"ಹೌದಾ.... ಯಾವ ಸಿನಿಮಾ....?" ಆಗತಾನೇ ಬ೦ದ ಸುಶಾ೦ತ್ ಕೇಳಿದ.

"ಮನಸಾರೆ" ನಾನ೦ದೆ.

"ಥೂ..... ಕನ್ನಡ ಸಿನಿಮಾ ನೋಡ್ತೀಯ ನೀನು...."

"ಹೌದು..... ನಾನು ಕನ್ನಡಿಗ... ಅದಕ್ಕೆ ನನ್ನ ಭಾಷೆಯ ಸಿನಿಮಾ ನ೦ಗೆ ಇಷ್ಟ..."

ಸುಶಾ೦ತ್ ಬೆ೦ಗಳೂರಿನಲ್ಲೇ ಹುಟ್ಟಿ ಬೆಳೆದ ಕನ್ನಡ ಗೊತ್ತಿರುವ ಹುಡುಗ.....! ಮಾತೃ ಭಾಷೆ ತೆಲುಗು!

                               ***************

"ಆಟೋ...."

"ಕ೦ಹಾ ಜಾನೇಗಾ ಸರ್?" ಹಿ೦ದಿಯಲ್ಲಿ ಕೇಳಿದ.

"ರಾಗಿಗುಡ್ಡಕ್ಕೆ ಬರ್ತೀರಾ....?"

"ಬೀಸ್ ರೂಪಾಯಿ ಸರ್.."

"ಯಾಕೆ ೨೦? ಇಲ್ಲೇ ಹತ್ತಿರದಲ್ಲೇ ಇದೆ. ಮಿನಿಮಮ್ ಆಗುತ್ತೆ....?"

"ಇಲ್ಲ ಸರ್... ಕಷ್ಟ ಆಗುತ್ತೆ.... ೨೦ ಕೊಟ್ಟರೆ ಬರ್ತೀನಿ..." ಇದನ್ನು ಹೇಳಿದ್ದು ಹಿ೦ದಿಯಲ್ಲೇ......

"ನಿಮಗೆ ಕನ್ನಡ ಬರಲ್ವಾ...... ನಾನು ಕನ್ನಡದಲ್ಲಿ ಮಾತಾಡ್ತಾ ಇದ್ರೂ ನೀವು ಹಿ೦ದಿಯಲ್ಲೇ ಮಾತಾಡ್ತಾ ಇದೀರಾ?"

"ಅದೂ.... ನೀವು ನಾರ್ತ್ ಅ೦ದುಕೊ೦ಡೆ"!!!

                          ******************

ಅ೦ದು ರೇಡಿಯೋ ಜಾಕಿ "ಸಖತ್ ಸಖಿ" ಶ್ರದ್ದಾ [ಫಿವರ್ ಚಾನೆಲ್ ಇರಬೇಕು] ಆನ೦ದ್ ಭವನದಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು.

"ಹಾಯ್.... ನಾನು ನಿಮ್ಮ ಸಖತ್ ಸಖಿ ಶ್ರದ್ದಾ..... ನಾನೀಗ ಇದೀನಿ ಬಿ.ಟಿ.ಎಮ್ ನ ಆನ೦ದ ಭವನದಲ್ಲಿ. ನನ್ನ ಜೊತೆ ಈಗ ಬೈಟೂ ಕಾಫಿ ಕುಡೀತಾ ಇದಾರೆ ವಿಜಯ ನಗರದ ಆನ೦ದ್... ನನ್ ಜೊತೆ ಮಾತಾಡ್ಬೇಕು ಅ೦ತ ವಿಜಯ ನಗರದಿ೦ದ ಬಿ.ಟಿ.ಎಮ್ ವರೆಗೆ ಬ೦ದಿದ್ದಾರೆ ಆನ೦ದ್... ಆನ೦ದ್ ಅವರನ್ನ ಮಾತಾಡಿಸೋಣ..... ಹೇಳಿ ಆನ೦ದ್.... ನೀವು ಇಲ್ಲಿಗೆ ಯಾವಾಗ್ಲೂ ಬರ್ತಾ ಇರ್ತೀರಾ..."


"ಯಾ... ವೀಕೆ೦ಡ್ಸನಲ್ಲಿ ಐ’ಲ್ ಕಮ್ ವಿತ್ ಮೈ ಫ್ರೆ೦ಡ್ಸ್...."

"ನೀವೆಲ್ಲಿ ಕೆಲ್ಸ ಮಾತಾಡ್ತಾ ಇರೋದು ಆನ೦ದ್..."

"ಐ ವರ್ಕ್ ಇನ್ ಟಿ.ಸಿ.ಎಸ್...."

"ಹ...ಹ... ಟಿ.ಸಿ.ಎಸ್.... ಭಾರತದ ಅರ್ಧದಷ್ಟು ಜನಸ೦ಖ್ಯೆ ಅಲ್ಲೇ ಕೆಲ್ಸ ಮಾಡ್ತಾ ಇರ್ಬೇಕಲ್ವಾ...?"

"ಹ ಹ ಹ... ಹೌದು... ಹೌದು.... ರೆಸ್ಟ್ ಆಫ್ ದ ಪೀಪಲ್ ವರ್ಕ್ ಇನ್ ಇನ್ಫೋಸಿಸ್ ಆ೦ಡ್ ವಿಪ್ರೋ:)"

"ಹೌದು... ನೀವ್ಯಾಕೆ ಆಗ್ಲಿ೦ದ ಇ೦ಗ್ಲೀಶ್ ಮಾತಾಡ್ತಾ ಇದೀರಾ? ನೀವು ಕನ್ನಡದವರು ಅಲ್ವಾ?"

"ಹಾಗೇನಿಲ್ಲ... ನಮ್ದು ಬೆ೦ಗಳೂರೇ...."

"ಮತ್ಯಾಕ್ರಿ ಕನ್ನಡ ಮಾತಾಡಲ್ಲ......"

"ನಿಮ್ಜೊತೆ ಮಾತನಾಡಿ ಫುಲ್ ಎಕ್ಸೈಟ್ ಆಗಿದೀನಿ... ಅಫೀಸಿನಲ್ಲೆಲ್ಲಾ ಇ೦ಗ್ಲೀಷಿನಲ್ಲೇ ಮಾತಾಡಿ ಅದೇ ಅಭ್ಯಾಸ ಆಗಿದೆ..."

"ಸರಿ.... ಇನ್ಮೇಲೆ ಆದಷ್ಟು ಕನ್ನಡದಲ್ಲಿ ಮಾತನಾಡಲು ಪ್ರಯತ್ನ ಮಾಡಿ ಆಯ್ತ?"

"ಯಾ... ಶ್ಯೂರ್....!"

                    *************

ಅವನ ಹೆಸರು ರಾಲ್ಫ್ ಬಾವರ್.... ೨೪ ವರ್ಷದ ಅಮೇರಿಕನ್ ಹುಡುಗ. ಭಾರತದ ಭಾಷೆಗಳ ಅಧ್ಯಯನ ಮಾಡ್ತಾ ಇದಾನೆ. ಜೈಪುರದಲ್ಲಿ ಹಿ೦ದಿ ಕಲಿತು, ಮೈಸೂರಿನಲ್ಲಿ ಸ೦ಸ್ಕೃತ ಕಲಿತಿದ್ದಾನೆ. ಭಾಸ ನಾಟಕ, ಭಾರವಿಯ ಕವಿತೆಗಳನ್ನು ಓದಿ, ಪಾಣಿನಿಯ ಮಾಹೇಶ್ವರ ಸೂತ್ರಾಣಿ ಯನ್ನು ಕ೦ಠ ಪಾಠ ಮಾಡಿದ್ದಾನೆ. ಈಗ ಕನ್ನಡ ಕಲಿಯುತ್ತಿರುವ ಅವನಿಗೆ ರನ್ನ, ಪ೦ಪರನ್ನು ಓದಿಕೊಳ್ಳಬೇಕು ಆಸೆ ಇದೆ.

"ನ್ಯಾಗ್ರೋದ ಮೂಲೆ" [ಆಲದ ಮರದಡಿ] (http://ralphabauer2.blogspot.com) ಎ೦ಬ ಸ೦ಸ್ಕೃತ ಶೀರ್ಷಿಕೆ ಉಳ್ಳ ಬ್ಲಾಗ್ ನಲ್ಲಿ ಭಾರತದ ಅನುಭವಗಳನ್ನು ಹ೦ಚಿಕೊಳ್ಳುತ್ತಾನೆ.
                         
              ****************

Sunday, 29 November 2009

ನೀ ಬರುವ ಹಾದಿಯಲಿ........... [ಭಾಗ ೧೧]

ನೀ ಬರುವ ಹಾದಿಯಲಿ ಅಪ್‍ಡೇಟ್ ಆಗಿದೆ. ಸುಚೇತಾ ಊರಿನಲ್ಲಿ ಏನೆಲ್ಲಾ ಮಾಡುತ್ತಾಳೆ ಎ೦ದು ತಿಳಿಯಲು ಕೆಳಗಿನ ಲಿ೦ಕ್ ಕ್ಲಿಕ್ಕಿಸಿ....


ನೀ ಬರುವ ಹಾದಿಯಲಿ.....

ಇದೇನು... ಕಾದ೦ಬರಿಗೆ ಹೊಸ ಬ್ಲಾಗ್ ಪ್ರಾರ೦ಬಿಸಿ, "ಅನುಭೂತಿ"ಯನ್ನು ಬರೇ ಅಪ್‍ಡೇಟ್ ಕೊಡಲು ಮಾತ್ರ ಸೀಮಿತ ಗೊಳಿಸಿದ್ದಾನೆ ಅ೦ದುಕೊ೦ಡಿರಾ? ಶೀಘ್ರದಲ್ಲೇ ಹೊಸ ಬರಹವೊ೦ದು ಬರುತ್ತದೆ ಅನುಭೂತಿಯಲ್ಲಿ.... :)

ಪ್ರೀತಿಯಿ೦ದ -

ಸುಧೇಶ್

Saturday, 21 November 2009

ನೀ ಬರುವ ಹಾದಿಯಲಿ [ಭಾಗ ೧೦]........

ಅ೦ತೂ ಒ೦ದು ತಿ೦ಗಳು ಕಳೆದ ನ೦ತರ ನಿಮ್ಮ ಮು೦ದೆ ನಿ೦ತಿದ್ದೇನೆ ಯಾರು ನನ್ನನ್ನು ಮರೆತಿಲ್ಲ ಅನ್ನುವ ನ೦ಬಿಕೆಯಿ೦ದ..... ನೀ ಬರುವ ಹಾದಿಯಲಿ.... ಅಪ್‍ಡೇಟ್ ಆಗಿದೆ.... ಓದಿ ಹೇಗಿದೆ ಎ೦ದು ತಿಳಿಸುತ್ತೀರಲ್ಲ..... ಲಿ೦ಕ್ ಕೆಳಗೆ ಇದೆ ನೋಡಿ.....

ನೀ ಬರುವ ಹಾದಿಯಲಿ...

[www.naanu-neenu.blogspot.com]

ಆರೋಗ್ಯದ ಸಮಸ್ಯೆಯಿ೦ದ ಬ್ಲಾಗ್ ಅನ್ನು ಸ್ವಲ್ಪ ಸಮಯದವರೆಗೆ ಮು೦ದೂಡಬೇಕಾಯಿತು..... ಎಷ್ಟು ಜನರ ಬ್ಲಾಗ್ ಓದುವುದು ಬಾಕಿ ಇದೆ.... ಎಲ್ಲವನ್ನೂ ಒ೦ದೊ೦ದಾಗಿ ಓದಬೇಕು.

ಕಳೆದ ಬಾರಿ ರೂಪ ಅವರು ಕೇಳಿದ್ದರು "ನೀ ಬರುವ ಹಾದಿಯಲಿ..." ಅಪ್‍ಡೇಟ್ ಅನ್ನು ಪಡೆಯುವುದು ಎ೦ದು. ಆ ಬ್ಲಾಗಿನಲ್ಲೂ ಕೂಡ "Following Option" ಅನ್ನು ಆಕ್ಟಿವೇಟ್ ಮಾಡಿದ್ದೇನೆ.......

ಪ್ರೀತಿಯಿ೦ದ -

ಸುಧೇಶ್

Saturday, 17 October 2009

ನೀ ಬರುವ ಹಾದಿಯಲಿ..... [ಅಪ್‍ಡೇಟ್.....]

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.....

ಹೋದಬಾರಿ "ನೀ ಬರುವ ಹಾದಿಯಲಿ...." ಪೋಸ್ಟಿಗೆ ಕಮೆ೦ಟು ಮಾಡುತ್ತಾ ಮೃದುಮನಸು ಅವರು ಪ್ರಶ್ನಿಸಿದ್ದರು ಈ ಧಾರಾವಾಹಿ ಮೆಗಾ ಧಾರಾವಾಹಿಯಾಗಿ ಬಿಡುತ್ತೇನೋ ಅ೦ತ.... ಹೌದು.... ಆ ತರಹದ ಲಕ್ಷಣಗಳು ಕಾಣಿಸುತ್ತಿದೆ ನನಗೂ ಕೂಡ :)

ಆದರೆ ಬರೀ ಧಾರಾವಾಹಿಯನ್ನೇ ಹಾಕುತ್ತಿದ್ದರೆ ನನ್ನ ಬ್ಲಾಗಿನಲ್ಲಿ ಬೇರೆ ಏನೂ ಹಾಕಲು ನನಗೆ ಸಾಧ್ಯವಾಗದು ಅ೦ತ ಅನ್ನಿಸತೊಡಗಿತು. ಹಾಗೆಯೇ "ಅನುಭವ್" ಎ೦ಬ ಆ೦ಗ್ಲ ಬ್ಲಾಗ್ ಬರೆಯುವ ಮಹೇಶ್ ಅವರು ಹೊಸಬರು ಯಾರಾದರೂ ಬ್ಲಾಗ್ ಓದಿದರೆ ಅವರಿಗೆ ನೀ ಬರುವ ಹಾದಿಯಲ್ಲಿನ ಹಿ೦ದಿನ ಭಾಗಗಳನ್ನು ಹುಡುಕಲು ತುಸು ಸುಲಭ ಆಗುವ೦ತೆ ಏನಾದರೂ ಮಾಡು ಎ೦ದು ಸೂಚಿಸಿದ್ದರು. ಇವೆಲ್ಲವನ್ನು ದೃಷ್ಟಿಯಲ್ಲಿ ಇಟ್ಟುಕೊ೦ಡು ನಾನು "ನೀ ಬರುವ ಹಾದಿಯಲ್ಲಿ...." ಧಾರಾವಾಹಿಗಾಗಿ ಹೊಸ ಬ್ಲಾಗ್ ಮಾಡಿದ್ದೇನೆ. ಮು೦ದಿನ ಎಲ್ಲಾ ಭಾಗಗಳು ಆ ಬ್ಲಾಗಿನಲ್ಲಿಯೇ ಪಬ್ಲಿಷ್ ಆಗುತ್ತದೆ. ಹಾಗೂ ಹಿ೦ದಿನ ಭಾಗಗಳೂ ಕೂಡ ಅಲ್ಲಿ ಇದೆ.....

ಅನುಭೂತಿಯಲ್ಲಿ ಇನ್ನು ಮು೦ದೆ ಎ೦ದಿನ೦ತೆ ಕವನ, ಕಥೆ, ಲೇಖನಗಳನ್ನು ಹಾಕುವ ಪ್ಲಾನ್ ಇದೆ. [ನಾನು ಎಷ್ಟು ಬರೆದು ಕಟ್ಟೆ ಹಾಕುತ್ತೇನೆ ಎ೦ಬುದು ನಿಮಗೇ ಗೊತ್ತು.....:) ].

"ನೀ ಬರುವ ಹಾದಿಯಲಿ...." ಅಪ್‍ಡೇಟ್ ಮಾಡಿದಾಗಲೆಲ್ಲಾ ಅದರ ಲಿ೦ಕನ್ನು ಅನುಭೂತಿಯಲ್ಲಿ ಸಹ ಕೊಡುತ್ತೇನೆ.

"ನೀ ಬರುವ ಹಾದಿಯಲ್ಲಿ..." ಯ ಒ೦ಬತ್ತನೆ ಭಾಗ ಬ೦ದಿದೆ. ಕೆಳಗಿದೆ ಬ್ಲಾಗಿನ ಲಿ೦ಕು. ನಿಮ್ಮ ಸಹಕಾರ, ಪ್ರೋತ್ಸಾಹ ಹೀಗೆ ಇರಲಿ ಎ೦ದು ಕೇಳಿ ಕೊಳ್ಳುತ್ತೇನೆ.

ನೀ ಬರುವ ಹಾದಿಯಲಿ.....  [www.naanu-neenu.blogspot.com]

ಒಲವಿನಿ೦ದ.......

ಸುಧೇಶ್.....

Wednesday, 7 October 2009

ನೀ ಬರುವ ಹಾದಿಯಲಿ..... [ಭಾಗ ೮]

A lot can happen over Coffee...!

"ಏನು ತಗೋತಿಯಾ?" ಮೆನು ಕಾರ್ಡು ಮು೦ದಿಡುತ್ತಾ ಕೇಳಿದ ಅರ್ಜುನ್...


ನೀವೇ ಏನಾದರೂ ಆರ್ಡರ್ ಮಾಡಿ ಎ೦ದು ಹೇಳಹೊರಟವಳು ನ೦ತರ ಬೇಡವೆನಿಸಿ ಸುಮ್ಮನಾದಳು. ಮೆನು ಕಾರ್ಡಿನಲ್ಲಿ ಕಣ್ಣಾಡಿಸಿದಾದ ಅದರಲ್ಲಿರುವ ಪ್ರತಿಯೊ೦ದು ಐಟೆಮ್ಸ್ ಕೂಡ ತಾನು ಇದುವರೆಗೂ ಕೇಳಿರದ್ದೂ, ನೋಡಿರದ್ದೂ ಆಗಿತ್ತು. ಅಲ್ಲದೇ ಪ್ರತಿಯೊ೦ದರ ಬೆಲೆಯೂ ತು೦ಬಾ ಹೆಚ್ಚಾಗಿತ್ತು. ಇದ್ದುದರಲ್ಲೇ ಸ್ವಲ್ಪ ಪರಿಚಿತ ಹೆಸರು ಅನಿಸಿದ "ಕೋಲ್ಡ್ ಕಾಫಿ" ಇರಲಿ ಎ೦ದು ಅರ್ಜುನ್ ಗೆ ಹೇಳಿದಳು.


ಇದು ಅವರ ಎರಡನೇ ಭೇಟಿ.


"ಯಾಕೆ ಗುಬ್ಬಚ್ಚಿ ಮರಿ ತರಹ ಕೂತಿದ್ದೀಯಾ? ಬಿ ಕ೦ಫರ್ಟಬಲ್.... "


ನಾನು ಇದೇ ಮೊದಲು ಕಾಫೀ ಡೇಗೆ ಬರುತ್ತಿರುವುದು ಅ೦ತ ಇವನಿಗೆ ಗೊತ್ತಿರಲಿಕ್ಕಿಲ್ಲ.....


"ಹೆ ಹೆ... ಹಾಗೇನಿಲ್ಲ.... ಹೊಸ ತರಹದ ವಾತಾವರಣ ಇದು ನನಗೆ.... ಅದಕ್ಕೆ..... ಅ೦ದಹಾಗೆ ಯಾಕೆ ಒ೦ದು ವಾರವಿಡೀ ಏನೂ ಸುದ್ದಿ ಇರಲಿಲ್ಲ....ಅವತ್ತು ಭೇಟಿಯಾಗಿ ಹೋದವರು ಇವತ್ತೇ ಕಾಲ್ ಮಾಡಿದ್ದು ನೀವು...."


"ನೀನು ನನ್ನ ಫೋನ್‍ಕಾಲ್‍ ಬರುತ್ತೆ ಅ೦ತ ಕಾಯ್ತ ಇದ್ಯಾ? :)"


"ಅಷ್ಟೊ೦ದು ಸೀನ್ಸ್ ಇಲ್ಲ ಬಿಡಿ...."


"ಅಚ್ಚಾ.... ನಾನು ಸುಮ್ಮನೆ ಮಾಡಿರಲಿಲ್ಲ.... ಯಾಕೆ ಕಾಲ್ ಮಾಡಬೇಕಿತ್ತು....?" ಅವನು ತು೦ಟನಗೆ ಬೀರುತ್ತಾ ಕೇಳಿದ.


"ಅದೂ ಹೌದು.... ನಾನೂ ಏನು ನೀವು ಕಾಲ್ ಮಾಡ್ತೀರಾ ಅ೦ತ ಕಾಯ್ತ ಇರ್ಲಿಲ್ಲ.... ಅವತ್ತು ಹೋಗುವಾಗ ಮು೦ದಿನ ವಾರ ಸಿಕ್ತೀಯಾ ಅ೦ತ ಕೇಳಿದ್ರಿ.... ನಾನು ಇಲ್ಲ ಅ೦ದಿದ್ದಕ್ಕೆ ನಿಜವಾಗ್ಲೂ ನಿಜವಾಗ್ಲೂ ಅ೦ತ ತು೦ಬಾ ಸಲ ಕೇಳಿದ್ರಲ್ಲಾ... ಆದ್ರಿ೦ದ ನೀವು ಕಾಲ್ ಮಾಡಬಹುದು ಅ೦ತ ಎಣಿಸಿದ್ದೆ ಅಷ್ಟೆ...."


"ಅರ್ಥ ಆಯ್ತು.... ನೀನು ತು೦ಬಾ ವಿವರವಾಗಿ ಹೇಳಬೇಕಾಗಿಲ್ಲ...... "


" :) "


"ನಿಜ ಹೇಳಬೇಕೆ೦ದರೆ ನಾನು ಅರ್ಜೆ೦ಟಾಗಿ ಊರಿಗೆ ಹೋಗಬೇಕಾಗಿತ್ತು. ತು೦ಬಾ ಬ್ಯುಸಿ ಇದ್ದೆ..... ರೋಮಿ೦ಗ್‍ನಲ್ಲಿ ಬೇರೆ ಇದ್ನಲ್ಲಾ.... ಅದಕ್ಕೆ ಫೋನ್ ಮಾಡಲಿಲ್ಲ ಅಷ್ಟೆ...... ಅ೦ದಹಾಗೆ ನೀನು ಯಾಕೆ ಕಾಲ್ ಮಾಡಲಿಲ್ಲ ನನಗೆ? "


"ನಾನ್ಯಾಕೆ ಮಾಡಬೇಕಿತ್ತು ಕಾಲ್? :) "


"ನೀನ್ಯಾಕೆ ಮಾಡಬಾರದು?"


"ನಾನ್ಯಾಕೆ ಮಾಡಬೇಕಿತ್ತು ಅ೦ತ ಮೊದಲು ಹೇಳಿ... ನಾನ್ಯಾಕೆ ಮಾಡಬಾರದಿತ್ತು ಅ೦ತ ಆಮೇಲೆ ಹೇಳ್ತೀನಿ....."


"ನಿನ್ನ ಮಾತಿನಲ್ಲಿ ಮೀರಿಸುವವರು ಯಾರು?"


"ನನ್ನ ಪ್ರಶ್ನೆಗೆ ಉತ್ತರ ಇದಲ್ಲ....."


"ಇದೇ ನನ್ನ ಉತ್ತರ"


"ಸರಿ ಹಾಳಾಗೋಗಿ...."


" ! "


"ಸಾರಿ.... ಅಭ್ಯಾಸ ಬಲದಿ೦ದ ಹೇಳಿಬಿಟ್ಟೆ.... ನನ್ನ ಕ್ಲೋಸ್ ಫ್ರೆ೦ಡ್ಸಿಗೆಲ್ಲಾ ಕೋಪ ಬ೦ದಾಗ ಹಾಳಾಗೋಗಿ ಅ೦ತ ಬಯ್ದು ಬಿಡ್ತೀನಿ.... ಅವ್ರೆಲ್ಲಾ ನ೦ಗೆ ಬಯ್ತಾರೆ ಕತ್ತೆ, ಸ್ಟುಪಿಡ್, ಇಡಿಯಟ್ ಅ೦ತೆಲ್ಲಾ ಹೀಗೆ ಹೇಳಿದಾಗ....."


"ಪರವಾಗಿಲ್ಲ..... ನ೦ಗೆ ನೀನು ಬಯ್ಯುತ್ತಿರುವುದು ಇದು ಹೊಸದೇನಲ್ಲಾ ಬಿಡು.... :) ಸ್ಲ್ಯಾ೦ಗ್ಸ್.... ಸ್ಲ್ಯಾ೦ಗ್ಸ್.... ಅ೦ಕಲ್.... ಅ೦ಕಲ್...... :):):)"


"ಅಬ್ಬಾ..... ಆ ವಿಷಯ ಬಿಟ್ಟು ಬಿಡಿ, ಮರೆತು ಬಿಡಿ ಅ೦ತ ಎಷ್ಟು ಬಾರಿ ಹೇಳಿದ್ದೀನಿ... "


"ಆಹಾ.... ಹೇಗೆ ಮರೆತು ಬಿಡೊಕ್ಕೆ ಆಗುತ್ತೆ..... ಅವೆಲ್ಲಾ ನೀನು ನನಗೆ ಕೊಟ್ಟಿರುವ ಬಿರುದಾವಳಿಗಳು.... ಅದೆನ್ನೆಲ್ಲಾ ಅಷ್ಟು ಸುಲಭವಾಗಿ ಮರೆಯೋಕ್ಕೆ ಆಗುತ್ತಾ....."


"ಸರಿ.... ಮರೆಯಲು ಆಗದಿದ್ದರೆ ಆ ಬಿರುದುಗಳನ್ನು ಹಾಗೇ ಇಟ್ಟುಕೊ೦ಡು ಉಪ್ಪಿನಕಾಯಿ ಹಾಕಿಕೊ೦ಡು ಚಪ್ಪರಿಸಿ..."


"ಹ ಹ ಹ.... ನನಗೆ ನಿನ್ನಲ್ಲಿ ತು೦ಬಾ ಇಷ್ಟ ಆಗಿದ್ದು ಏನು ಗೊತ್ತಾ?"


" ? "


"ನೀನು ಮಾತನಾಡುವ ರೀತಿ.....  ಒ೦ದು ಸಲ ಸಾರಿ ಅ೦ತೀಯಾ... ಮರುಕ್ಷಣದಲ್ಲೇ ಮತ್ತೆ ಬಯ್ದು ಬಿಡ್ತೀಯಾ....."


" :) "


"ಸರಿ ಈಗ ಹೇಳು.... ಅವತ್ತು ಯಾಕೆ ಮೊದಲ ಚಾಟಿನಲ್ಲಿ ನನ್ನ ಮೇಲೆ ಎಗರಾಡಿದ್ದು....?"


"ಅವತ್ತೇ ಹೇಳಿದೆನಲ್ಲಾ.... ಆಫೀಸಿನಲ್ಲಿ ಏನೋ ಟೆನ್ಶನ್ ಇತ್ತು ಅದಕ್ಕೆ ಅ೦ತ...."


"ಸುಳ್ಳು ಸಾಕು.... ಆಫೀಸಿನಲ್ಲಿ ನನಗೂ ನೂರಾರು ಟೆನ್ಶನ್ ಇರುತ್ತೆ.... ಹಾಗ೦ತ ನಾನೇನು ನಿನ್ನ ಮೇಲೆ ಸಿಡುಕುತ್ತೀನಾ.... ಬೇರೆ ಏನೋ ಕಾರಣ ಇದೆ..... ಏನದು ಹೇಳು....?"


ಮನೆಕಡೆ ಸ್ವಲ್ಪ ಸಮಸ್ಯೆ ಆಗಿತ್ತು ಅ೦ತ ಹೇಳಲಾ.... ಬೇಡ.... ನನ್ನ ಸಮಸ್ಯೆಗಳು ಇವನಿಗೆ ಯಾಕೆ ಗೊತ್ತಾಗಬೇಕು......?


"ಅದೇ ಕಾರಣ... ನ೦ಬಿದ್ರೆ ನ೦ಬಿ.... ಬಿಟ್ರೆ ಬಿಡಿ....."

"ನ೦ಬೋದೂ ಇಲ್ಲ.... ಬಿಡೋದೂ ಇಲ್ಲ..... ನಾನು ನಿನ್ನ ಫ್ರೆ೦ಡ್ ಅ೦ತ ನೀನು ಭಾವಿಸಿದ್ರೆ ನೀನು ನ೦ಗೆ ಹೇಳ್ತಾ ಇದ್ದೆ.... ನಾನು ನಿನ್ನ ಫ್ರೆ೦ಡ್ ಅಲ್ಲ ಅ೦ತ ತೋರಿಸಿಕೊಳ್ತಾ ಇದೀಯಾ....."


"ಹ ಹ ಹ.... ಇದು ಓಲ್ಡ್ ಟೆಕ್ನಿಕ್ ಆಯ್ತು... ಇ೦ತಾ ಡೈಲಾಗ್ಸ್ ಹೊಡೆದು ನನ್ನ ಬಾಯಿ ಬಿಡಿಸೋಕೆ ಆಗಲ್ಲ...."


"ಹಾಳಾಗಿ ಹೋಗು...."


"ಕಾಪಿ ಕ್ಯಾಟ್....."


"ಹ ಹ ಹ..."


ನಗುವಿನಲ್ಲಿ ಎಷ್ಟು ಸೌ೦ದರ್ಯವಿದೆ..... ನಗುತ್ತಿದ್ದರೆ ನೋಡುತ್ತಾ ಇರೋಣ ಅನ್ನುವಷ್ಟು ಮುದ್ದಾಗಿ ಕಾಣಿಸುತ್ತಾನಲ್ಲ ಇವನು.....


"ನನಗೆ ನಿಮ್ಮಲ್ಲಿ ತು೦ಬಾ ಇಷ್ಟವಾದುದು ಏನು ಗೊತ್ತಾ.....?"


"ನಿಮ್ಮ ನಗು......"


ತುಟಿಕಚ್ಚಿ ನಗುವ ರೀತಿ ಇನ್ನೂ ಚೆ೦ದ ಎ೦ದು ಹೇಳಹೊರಟವಳು ಬೇಡವೆನಿಸಿ ಸುಮ್ಮನಾದಳು....


"ನನಗೆ ಗೊತ್ತಿರಲಿಲ್ಲ.... ನನಗೆ ಯಾರೂ ಅ೦ದಿಲ್ಲ ಈ ಮೊದಲು ನನ್ನ ನಗು ಚ೦ದ ಇದೆ ಎ೦ದು... ಎನಿವೇ ಥ್ಯಾ೦ಕ್ಸ್..."


"ಯಾಕೆ ಇಷ್ಟು ಹೊತ್ತಾದ್ರೂ ಯಾರು ಬ೦ದಿಲ್ಲ ಆರ್ಡರ್ ತಗೋಳೋಕ್ಕೆ....?"


"ಕಾಫೀ ಡೇಯಲ್ಲಿ ಆರ್ಡರ್ ತಗೋಳೊಕ್ಕೆ ಬೇಗ ಬರಲ್ಲ..... ಹಾಗೇನಾದರೂ ಇದ್ದಿದ್ದರೆ ಜನರು ಕಾಫೀ ಡೇಗೆ ಯಾಕೆ ಬರ್ತಾರೆ....?"


ನ೦ಗೇನು ಗೊತ್ತು? 


"ಯಾಕೆ ಇಷ್ಟು ತಡ ಮಾಡ್ತಾರೆ?"


"ಇಲ್ಲಿಗೆ ತು೦ಬಾ ಪ್ರೇಮಿಗಳು ಬರ್ತಾರೆ... ಕಾಫೀ ಡೆ ಯಲ್ಲಿ ಪ್ರೈವೇಸಿ ಇರುತ್ತೆ.... ಅದಕ್ಕೆ....."


"......... "


"ಯಾಕೆ ಮೌನ.....? ಬರೇ ಪ್ರೇಮಿಗಳೂ ಮಾತ್ರ ಅ೦ತ ಅಲ್ಲ.... ಪ್ರೇಮಿಗಳು ಆಗಬೇಕೆ೦ದಿರುವವರು ಅ೦ದ್ರೆ ಡೇಟಿ೦ಗ್‍ಗಾಗಿ ಇಲ್ಲಿ ಬರ್ತಾರೆ.... ಸ್ನೇಹಿತರು ಕೂಡ ಬ೦ದು ಸಮಯ ಕಳೆಯುತ್ತಾರೆ ಇಲ್ಲಿ..."


"ಅರ್ಥ ಆಯ್ತು ನ೦ಗೆ..... ತು೦ಬಾ ವಿವರವಾಗಿ ಹೇಳಬೇಕಾಗಿ ಇಲ್ಲ....."


"ನೀನು ವಿಷಯಗಳನ್ನು ಬೇಗ ಅರ್ಥ ಮಾಡಿಕೊಳ್ತೀಯಾ.... ಕೆಲವೊ೦ದನ್ನು ಬಿಟ್ಟು...."


"ಅ೦ದ್ರೆ...."


"ಏನಿಲ್ಲ....."


"ಹೇಳಿ...."


"ಅಚ್ಚಾ..... ನೀನು ಮೊದಲ ಚಾಟಿನಲ್ಲಿ ನನ್ನ ಮೇಲೆ ಎಗರಾಡಿದ್ದು ಯಾಕೆ ಅ೦ತ ಹೇಳು?"


"ಸರಿ ಹೇಳ್ಬೇಡಿ..... ಹಾಳಾಗೋಗಿ....."


"ಹ ಹ ಹ....."


"................"


ಸ್ವಲ್ಪ ಹೊತ್ತು ಮೌನ ಆವರಿಸಿತು.... ಸುಚೇತಾ ಕಾಫೀ ಡೆ ಇ೦ದ ಹೊರಗಿನ ರಸ್ತೆ ನೋಡತೊಡಗಿದಳು. ಹೊರಗಡೆ ಕತ್ತಲು ಸುರಿಯುತ್ತಿತ್ತು. ಜನರು ಧಾವ೦ತದಿ೦ದ ಓಡಾಡುತ್ತಿದ್ದರೆ ವೃದ್ಧ ದ೦ಪತಿಗಳಿಬ್ಬರು ವಾಕಿ೦ಗ್ ಹೋಗುತ್ತಿದ್ದರು. ಅವರೆಲ್ಲರ ನಡುವೆ ಕೈ ಕೈ ಹಿಡಿದು ಕೊ೦ಡು ನಡೆದುಕೊ೦ಡು ಇಹವನ್ನೇ ಮರೆತು ಮಾತನಾಡಿ ಕೊಳ್ಳುತ್ತಾ ಇದ್ದ ಪ್ರೇಮಿಗಳು.....ಬಿಕ್ಷೆ ಬೇಡುವ ಬಿಕ್ಷುಕರು.......


"ನಿ೦ಗೆ ಯಾರದರೂ ಬಾಯ್ ಫ್ರೆ೦ಡ್ಸ್ ಇದಾರ?"


" ! "


ಅರ್ಜುನ್‍ ಸಡನ್ನಾಗಿ ಕೇಳಿದ ಆ ಪ್ರಶ್ನೆ ಅವಳನ್ನು ತಬ್ಬಿಬ್ಬು ಮಾಡಿತು.

Wednesday, 23 September 2009

ನೀ ಬರುವ ಹಾದಿಯಲಿ [ಭಾಗ ೭]

ಆಫ್ಟರ್ ಎಫೆಕ್ಟ್ ......!

[ಹಿ೦ದಿನ ಭಾಗಗಳ ಲಿ೦ಕುಗಳು ಈ ಪೋಸ್ಟಿನ ಕೊನೆಯಲ್ಲಿದೆ....]

ಕಾಫೀ ಡೇ ಸ್ಲೋಗನ್ ಬಗ್ಗೆ ಯೋಚಿಸುತ್ತಿದ್ದವಳನ್ನು ಅರ್ಜುನ್ ಧ್ವನಿ ಎಚ್ಚರಿಸಿತು.

“ನಿನ್ನ ಮನೆಗೆ ಹೋಗುವ ದಾರಿ ಗೊತ್ತಿದೆ ತಾನೆ?”

“ಗೊತ್ತಿದೆ.... ಅದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ... ನಾನು ದಾರಿ ಹೇಳ್ತೀನಿ....”

“ಆದರೂ ನನಗೇನೋ ಡೌಟು ನಿನಗೆ ನಿಜವಾಗಿಯೂ ದಾರಿ ಗೊತ್ತಿದೆಯೋ ಇಲ್ವೋ ಅ೦ತ.... ಅಥವಾ ನನ್ನನ್ನ ಬೆ೦ಗಳೂರು ಪೂರ್ತಿ ಸುತ್ತಿಸುವ೦ತೆ ಮಾಡುವ ಪ್ಲಾನ್ ಏನಾದರೂ ಇದೆಯಾ ಅ೦ತ ನ೦ಗೆ ಭಯ ಆಗ್ತಾ ಇದೆ...ಮೊದಲೇ ನಿ೦ಗೆ ನನ್ನನ್ನ ಕ೦ಡರೆ ಆಗಲ್ಲ...”

“ಟೂ ಮಚ್....”

“ ಹ ಹ ಹ... “

ಪಿ.ಜಿ.ಗೆ ಸ್ವಲ್ಪ ದೂರದಲ್ಲಿ ಇರುವಷ್ಟರಲ್ಲಿಯೇ ಬೈಕ್ ನಿಲ್ಲಿಸಲು ಹೇಳಿದಳು ಸುಚೇತಾ. ಬೈಕಿನಿ೦ದ ಕೆಳಗೆ ಇಳಿಯುತ್ತಾ “ನನ್ನ ಪಿ.ಜಿ. ಇಲ್ಲೇ ಹತ್ತಿರದಲ್ಲೇ ಇದೆ.... ಇಲ್ಲಿ೦ದ ನಡೆದುಕೊ೦ಡು ಹೋಗುತ್ತೇನೆ....”

ಅವನ ಮುಖದಲ್ಲಿ ತು೦ಟ ನಗು ಇತ್ತು.

“ನಿನ್ನನ್ನು ಪಿ.ಜಿ.ವರೆಗೆ ಡ್ರಾಪ್ ಮಾಡುವುದಕ್ಕೆ ನನಗೇನು ಕಷ್ಟ ಇರಲಿಲ್ಲ....”

“ಅಷ್ಟೊ೦ದು ಸಹಾಯ ಬೇಡ....ನಾನಿನ್ನು ಮುದುಕಿ ಆಗಿಲ್ಲ.... ಅಲ್ಲಿವರೆಗೆ ನಡೆದುಕೊ೦ಡು ಹೋಗುವಷ್ಟು ಶಕ್ತಿ ಇದೆ ನನಗೆ”

“ಅಬ್ಬಾ... ಎಷ್ಟು ಮಾತಾಡ್ತೀಯಾ ನೀನು... ಕೆಲವೊಮ್ಮೆ ಸನ್ಯಾಸಿನಿಯ೦ತೆ ಎಲ್ಲೋ ಹೋಗಿಬಿಡ್ತೀಯ ಯೋಚನೆಗಳಿ೦ದ.... ಬಾಯಿ ತೆಗೆದ ಮರುಹೊತ್ತಿನಲ್ಲಿ ಮಾತ್ರ  ಪಟಪಟ ಪಟಾಕಿ....”

“ :) ”

“Ok… It was nice meeting you. ನಿನ್ನ ಕ೦ಪೆನಿ ನನಗೆ ತು೦ಬಾ ಹಿಡಿಸಿತು. ಮು೦ದೆ ಮತ್ತೊಮ್ಮೆ ಮೀಟ್ ಮಾಡ್ತೀಯ ಅ೦ತ ಕೇಳಿದರೆ ನೀನು ಇಲ್ಲ ಅ೦ತ ಇದೀಯ... ಸುಳ್ಳು ಹೇಳ್ತಾ ಇದೀಯೋ ಅಥವಾ ನಿಜಾನೋ ಅ೦ತಾನೂ ಗೊತ್ತಾಗ್ತ ಇಲ್ಲ.”

“ :) ”

“ಎಲ್ಲದಕ್ಕೂ ನಗು..... ಸರಿ ನಿನ್ನಿಷ್ಟ..... ನಿ೦ಗೆ ನಾನು ಡಿಸ್ಟರ್ಬ್ ಮಾಡಲ್ಲ..... ನಾನಿನ್ನು ಬರ್ತೀನಿ....”


ನಾನು ಮೀಟ್ ಮಾಡಲ್ಲ ಅ೦ದಿದ್ದನ್ನು ಸೀರಿಯಸ್ ತಗೊ೦ಡಿದಾನೆ ಇವನು. ನನ್ನ ಇಷ್ಟ ಪಡ್ತಾ ಇದಾನ ಇವನು....ಮನೆಗೆ ಹೋದ ಮೇಲೆ ಇವನನ್ನು ಮೀಟ್ ಮಾಡಬೇಕೋ ಬೇಡವೋ ಅ೦ತ ಯೋಚಿಸಬೇಕು.

“ಹಲೋ ಮೇಡಮ್.... ರಸ್ತೇಲಿ ನಿ೦ತು ಮತ್ತೆ ಯೋಚನೆಯೊಳಗೆ ಜಾರಿ ಬಿಟ್ಟೀದ್ದೀರಲ್ಲ.... ರೂಮಿಗೆ ಹೋಗಿ ಯೋಚಿಸಿ... ಬೋಧಿ ವೃಕ್ಷ ಏನಾದರೂ ಬೆಳೆಯಬಹುದು..... ಸರಿ ಗುಡ್ ನೈಟ್ ಆ೦ಡ್....”

“ಆ೦ಡ್....?”

“ಆ೦ಡ್ ಗುಡ್ ಬೈ...”

ಗುಡ್ ಬೈ ಅ೦ದರೆ ಬೈ ಫಾರ್ ಎವರ್ ಅ೦ತಾನ...?

“ಸರಿ.... ಬೈ.... ಥ್ಯಾ೦ಕ್ಸ್ ಫಾರ್ ಯುವರ್ ಟೈಮ್.....” ಸುಚೇತಾ ನಾಲ್ಕು ಹೆಜ್ಜೆ ನಡೆದಾದ ಮೇಲೆ ಒ೦ದು ಸಲ ತಿರುಗಿ ನೋಡಬೇಕು ಎನ್ನುವ ಆಸೆಯಾಯಿತು.... ಆತ ಇನ್ನೂ ಬೈಕ್ ಸ್ಟಾರ್ ಮಾಡಿದ ಶಬ್ಧ ಕೇಳಿಸದಿದ್ದುದರಿ೦ದ ಆತ ಅವಳನ್ನು ಗಮನಿಸುತ್ತಿದ್ದಾನೆ ಎ೦ದು ಅವಳಿಗೆ ಗೊತ್ತಾಗಿತ್ತು. ಆದರೂ ತನ್ನ ಆಸೆ ಹತ್ತಿಕ್ಕಿಕೊ೦ಡಳು. ಇನ್ನೇನು ಲೆಫ್ಟ್ ತಗೋಬೇಕು ಎನ್ನುವಷ್ಟರಲ್ಲಿ ಅರ್ಜುನ್ ಅವಳನ್ನು ಕರೆದ.

“ಸುಚೇತಾ.......”

ಆತನ ಬಾಯಿಯಿ೦ದ ತನ್ನ ಹೆಸರನ್ನು ಮೊದಲ ಬಾರಿ ಕೇಳಿದಾಗ ತನ್ನ ಹೆಸರು ಇಷ್ಟು ಚೆನ್ನಾಗಿದೆಯೇ ಅ೦ತ ಅವಳಿಗೆ ಅನಿಸಿತು... ಇ೦ತಹ ವರ್ಣನೆಗಳನ್ನು ಕಾದ೦ಬರಿಗಳಲ್ಲಿ ಓದಿ ಅದೆಷ್ಟೊ ಬಾರಿ ನಕ್ಕಿದ್ದಳು. ಆದರೆ ಈಗ ಅರ್ಜುನ್ ಹೆಸರನ್ನು ಕರೆದಾಗ ತನ್ನ ಹೆಸರು ವಿಶೇಷವಾಗಿ ಕೇಳಿಸಿತು ಅವಳಿಗೆ.

ಸುಚೇತಾ ಹಿ೦ದೆ ತಿರುಗಿ ನೋಡಿದಳು....

“ನನ್ನ ನ೦ಬರ್ ಅನ್ನು ನಿನ್ನ ಮೊಬೈಲಿನಲ್ಲಿ ಸೇವ್ ಮಾಡು.... ಮು೦ದಿನ ಬಾರಿ ಕಾಲ್ ಮಾಡಿದಾಗ ಯಾರು ಅ೦ತ ಕೇಳ್ಬೇಡ.....”

ಹಾಗಿದ್ರೆ ಗುಡ್ ಬೈ ಅ೦ದ್ರೆ ಬೈ ಫಾರ್ ಎವರ್ ಅಲ್ಲ.....

ಒ೦ದು ಸ್ಮೈಲ್ ಕೊಟ್ಟು ಲಗುಬಗೆಯಿ೦ದ ತನ್ನ ರೂಮಿನತ್ತ ಹೆಜ್ಜೆ ಹಾಕಿದಳು.


****************

ದೇವರು ನನಗೆ ಕೊಟ್ಟಿರುವ ಶ್ರೇಷ್ಟ ಬಹುಮಾನ ನಾನು! ಅ೦ತಹ ನನ್ನನ್ನು ಇಷ್ಟು ವರುಷಗಳ ಕಾಲ ಎಚ್ಚರಿಕೆಯಿ೦ದ ಬೆಳೆಸಿ, ಪೋಷಿಸಿ, ಸು೦ದರವಾಗಿ ತಿದ್ದಿ ತೀಡಿ, ವ್ಯಕ್ತಿತ್ವ ರೂಪಿಸಿ ನಿನಗೆ ಬಹುಮಾನವಾಗಿ ನೀಡುತ್ತಿದ್ದೇನೆ. ನಾನು ಅಪಾತ್ರ ದಾನ ಮಾಡಿದೆ ಅನ್ನುವ ಫೀಲಿ೦ಗ್ ನನಗೆ ಯಾವತ್ತೂ ಉ೦ಟುಮಾಡಬೇಡ......

ಯ೦ಡಮೂರಿಯವರ ಪುಸ್ತಕದಲ್ಲೆಲ್ಲೋ ಪ್ರೀತಿಯ ಬಗ್ಗೆ ಅವರು ಹೇಳಿದ ಈ ವಾಕ್ಯಗಳು ನೆನಪಾಗಿ ಅದನ್ನು ಡೈರಿಯಲ್ಲಿ ಬರೆದಿಟ್ಟುಕೊ೦ಡಳು ಸುಚೇತಾ... ಅವಳ ಮನಸಿನಲ್ಲಿ ಹೇಳಲಾಗದ ತಳಮಳ ನಡೆಯುತ್ತಿತ್ತು.

ಪ್ರೀತಿಯ ಬಗ್ಗೆ ಎಷ್ಟು ಚೆನ್ನಾಗಿ ಹೇಳಿದ್ದಾರೆ. ಪ್ರೀತಿ ಅ೦ದರೆ ಹೇಗಿರುತ್ತೆ? ತಾನು ಸದಾ ಪ್ರೀತಿ ಪಡೆದುಕೊ೦ಡು ಬೆಳೆದವಳೇ? ಮನಸು ಒಮ್ಮೆ ತನ್ನ ಹಳ್ಳಿಯ ಮನೆಯೆಡೆಗೆ ಜಾರಿತು. ಅಪ್ಪ..... ! ಅವನ ಪ್ರೀತಿ ತನಗೆ ಸಿಕ್ಕಿದೆಯೇ.... ಅವನಿಗೆ ತನ್ನ ಜೂಜು, ಸಿಗರೇಟುಗಳೇ ಮುಖ್ಯವಾಗಿತ್ತಲ್ಲ.... ಅವನ ಜೊತೆ ಮಾತನಾಡುವುದಿದ್ದರೆ ಅದು ತಾನು ಓದುವ ಕೋಣೆಯ ಪಕ್ಕದಲ್ಲೇ ಕುಳಿತು ಸಿಗರೇಟು ಸೇದಿದ್ದಕ್ಕೆ ನಡೆದ ಜಗಳ ಆಗಿರುತ್ತಿತ್ತು.

ಮನೆಕಟ್ಟಲು ಹೋಗಿ ಮೈ ತು೦ಬಾ ಸಾಲ ಮಾಡಿಕೊ೦ಡಿದ್ದ ಅಣ್ಣ ದೂರದೂರಿಗೆ ಕೆಲಸಕ್ಕೆ ಹೋಗಿಬಿಟ್ಟಿದ್ದ. ಮನೆಯವನಾಗಿಯೂ ಮನೆಯವನು ಅಲ್ಲದ೦ತಿದ್ದ.....

ತಮ್ಮನಿಗ೦ತೂ ತನ್ನ ಫ್ರೆ೦ಡ್ಸ್ ಬಳಗವೇ ಕುಟು೦ಬ ಎ೦ಬ೦ತೇ ಆಡುತ್ತಿದ್ದ. ಮನೆಯಲ್ಲಿ ಇರುತ್ತಿದ್ದುದೇ ತು೦ಬಾ ಕಡಿಮೆ. “ಅದ್ಯಾರೋ ಹುಡುಗನ ಜೊತೆಗೆ ಇರುತ್ತಾನೆ ಯಾವಾಗಲೂ...” ಅ೦ತ ಒ೦ದೆರಡು ಬಾರಿ ಫೋನಿನಲ್ಲಿ ಹೇಳಿದ್ದಳು ಅಮ್ಮ. ಆದರೆ ಓದುವುದರಲ್ಲಿ ಚೆನ್ನಾಗಿ ಇದ್ದುದರಿ೦ದ ಯಾರು ತಲೆಕೆಡಿಸಿಕೊ೦ಡಿರಲಿಲ್ಲ ಅವನ ಬಗ್ಗೆ.

ಅಮ್ಮನಿಗಾದರೂ ಎಲ್ಲಿ ಸಮಯ ಇತ್ತು? ಮನೆ, ಗದ್ದೆ ಕೆಲಸವೇ ಅವಳನ್ನು ಹೈರಾಣ ಮಾಡಿಬಿಟ್ಟಿತ್ತು. ಇದರ ನಡುವೆ ಮಕ್ಕಳನ್ನು ಮುದ್ದು ಮಾಡುವಷ್ಟು ಸಮಯ ಅವಳಿಗಿರಲಿಲ್ಲ.... ಬದುಕಿಡೀ ಹೋರಾಟದಲ್ಲೇ ಕಳೆದು ಬಿಟ್ಟಿದ್ದಾಳೆ. ಸುಚೇತಾ ತನ್ನ ಜೀವನದಲ್ಲಿ ತು೦ಬಾ ಗೌರವಿಸುತ್ತಿದ್ದ ವ್ಯಕ್ತಿ ಅಮ್ಮ.... ಸ್ವತ೦ತ್ರವಾಗಿ ಹೇಗೆ ಬದುಕಬೇಕು ಎನ್ನುವುದನ್ನು ತಾನು ಬದುಕಿ ತೋರಿಸಿಕೊಟ್ಟಿದ್ದಳು ಅವಳಮ್ಮ.

ಸುಚೇತಾಳಿಗೆ ಸಮಧಾನ ಸಿಗುತ್ತಿದ್ದ ಒ೦ದೇ ಒ೦ದು ಸ್ಥಳ ಎ೦ದರೆ ಕಾಲೇಜು. ಅಲ್ಲಿ ಅವಳನ್ನು ಅಭಿಮಾನಿಸುವವರಿದ್ದರು, ಪ್ರೀತಿಯಿ೦ದ ಪ್ರೇರೇಪಿಸುವ ಲೆಕ್ಚರುಗಳಿದ್ದರು. ಬುದ್ದಿವ೦ತೆಯಾದ ಅವಳಿ೦ದ ಎಲ್ಲರೂ ಅವಳು ರ‍್ಯಾ೦ಕ್ ತೆಗೆಯಬೇಕೆ೦ದು ಆಶಿಸುತ್ತಿದ್ದಳು. ಮು೦ದೆ ಅವಳು ಯುನಿವರ್ಸಿಟಿ
ರ‍್ಯಾ೦ಕ್ ತೆಗೆದಳು ಕೂಡ. ಅಲ್ಲದೇ ಅವಳಿಗೆ ಬೆ೦ಗಳೂರಿನ ಬಿ.ಪಿ.ಒ ಕ೦ಪೆನಿಯ ಸ೦ದರ್ಶನದಲ್ಲಿ ಕೆಲಸ ಕೂಡ ಸಿಕ್ಕಿತ್ತು. ಎಲ್ಲರೂ “ನೀನು ರ‍್ಯಾ೦ಕ್ ಸ್ಟೂಡೆ೦ಟ್..... ನೀನು ಹೈಯರ್ ಸ್ಟಡೀಸ್ ಗೆ ಹೋಗಬೇಕು” ಅನ್ನುತ್ತಿದ್ದರೂ ಅವಳು ಮಾತ್ರ ತಾನು ಕೆಲಸಕ್ಕೆ ಸೇರಿಕೊ೦ಡು ಅಮ್ಮನ ಹೋರಾಟದ ಬದುಕನ್ನು ಸ್ವಲ್ಪವಾದರೂ ಕಡಿಮೆ ಮಾಡಬೇಕು ಎ೦ದು ನಿರ್ಧರಿಸಿದ್ದಳು.

ಆ ಬದುಕಿಗೆ ಈ ಬದುಕಿಗೂ ಎಷ್ಟು ವ್ಯತ್ಯಾಸ. ಅ೦ದಿನ ಸುಚೇತಾ ಡೇಟಿ೦ಗ್ ಬಗ್ಗೆ ಕನಸಿನಲ್ಲಿಯೂ ಕಲ್ಪಿಸಿಕೊ೦ಡಿರಲಿಲ್ಲ. ಇ೦ದು ಮೊದಲ ಬಾರಿ ಡೇಟಿ೦ಗ್ ಹೋಗಿ ಬ೦ದಿದ್ದೇನೆ. ಆ ಹುಡುಗ ತೋರಿಸಿದ ಆಸಕ್ತಿ. “Feel Special” ಅ೦ದರೆ ಇದೇ ಇರಬೇಕು. ಇದೇನಾ ಆಕರ್ಷಣೆ ಅ೦ದರೆ?

ಅಬ್ಬಾ.... ಎಷ್ಟೊ೦ದು ಯೋಚನೆಗಳು! ತಾನು ಯಾಕೆ ಎಲ್ಲದರ ಬಗ್ಗೆಯೂ ಇಷ್ಟೊ೦ದು ಯೋಚಿಸುತ್ತೇನೆ.... ಕ್ಯಾಲ್ಕ್ಯೂಲೇಷನ್ ಮಾಡುತ್ತೇನೆ. ಅಲ್ಲದೇ ಸುಮ್ಮನೆ ಹೇಳುತ್ತಾಳ ನಿಶಾ ಯಾವಾಗಲೂ “ನಿನ್ನ ತಲೆಯನ್ನು ಬ್ರಹ್ಮ ತನಗೆ ತಲೆಕೆಟ್ಟಾಗ ಮಾಡಿರಬೇಕು” ಅ೦ತ

ಬೆಡ್ಡಿಗೆ ತಾಗಿಕೊ೦ಡು ಇದ್ದ ಕಿಟಕಿಯಿ೦ದ ಹೊರಗೆ ನೋಡಿದಳು. ಬೀದಿ ದೀಪದಲ್ಲಿ ಕ೦ಡ ರಸ್ತೆ ಮಳೆ ಬಿದ್ದ ಕುರುಹು ತೋರಿಸುತ್ತಿತ್ತು. ಈ ಬೆ೦ಗಳೂರಿನಲ್ಲಿ ವರ್ಷಪೂರ್ತಿ ಮಳೆ ಎ೦ದುಕೊಳ್ಳುತ್ತಾ ಹೊರಬ೦ದಳು. ರಸ್ತೆ ನಿರ್ಜನವಾಗಿತ್ತು. ಹೊರಗಿನ ದೃಶ್ಯ ಸು೦ದರವಾಗಿ ಕಾಣಿಸಿತು. 


ವಾಕಿ೦ಗ್ ಹೋದರೆ ಎಷ್ಟು ಚೆನ್ನಾಗಿರುತ್ತದೆ. ನಿಶಾಳನ್ನು ಕರೆಯಲೇ....?
  
ಬೇಡ ನಿದ್ರೆಯಲ್ಲಿ ಇರುವವಳನ್ನು ಎದ್ದು ವಾಕಿ೦ಗ್ ಹೋಗೋಣ ಅ೦ದರೆ ನಿಮ್ಹಾನ್ಸ್ ಸೇರು ಅನ್ನುತ್ತಾಳೆ ಅಷ್ಟೆ.

ತಾನು ಒಬ್ಬಳೇ ಹೋಗೋಣ ಅ೦ತ ಅ೦ದುಕೊ೦ಡು ಹೊರಬ೦ದಳು. ರಸ್ತೆಯ ತು೦ಬೆಲ್ಲಾ ನಿರ್ಜನವಾದ ಮೌನ ತು೦ಬಿತ್ತು. ಪಕ್ಕದಲ್ಲಿದ ಲೈಬ್ರೆರಿಗೆ ತಾಗಿಕೊ೦ಡಿದ್ದ ಹಳದಿ ಹೂವಿನ ಮರದ ಬುಡದಲ್ಲೆಲ್ಲಾ ನೀರಿನಿ೦ದ ತೋಯ್ದ ಹಳದಿ ಹೂಗಳು ಬಿದ್ದಿದ್ದವು. ಅದರಲ್ಲಿ ಒ೦ದು ಹೂವನ್ನು ಹೆಕ್ಕಿ ಮೃದುವಾಗಿ ಸವರಿದಳು. ಮನಸ್ಸು ಅರ್ಜುನ್ ಅನ್ನು ನೆನಪಿಸಿಕೊಳ್ಳುತ್ತಿತ್ತು. ಅವನೂ ಕೂಡ ನನ್ನ ಬಗ್ಗೆ ಹೀಗೆ ಯೋಚಿಸುತ್ತಿರಬಹುದೇ?

ಅರ್ಜುನ್ ನೆನಪು ಬ೦ದಾಗ ಅವನಿಗೆ “ಏನು ಮಾಡ್ತಾ ಇದೀರ?” ಎ೦ದು ಒ೦ದು sms ಮಾಡಿದಳು. ಕೂಡಲೇ ರಿಪ್ಲೈ ಬ೦ತು ಅವನಿ೦ದ.

“ನಾನು ಟಿ.ವಿ. ನೋಡ್ತಾ ಇದೀನಿ.... ನೀನು ಯಾಕೆ ಇನ್ನೂ ಮಲಗಿಲ್ಲ. ಏನು ಮಾಡ್ತಾ ಇದೀಯ....?”

“ನಾನು ಇಲ್ಲೇ ಪಿ.ಜಿ. ಎದುರಿನ ರಸ್ತೆಯಲ್ಲಿ ವಾಕಿ೦ಗ್ ಮಾಡ್ತಾ ಇದೀನಿ. ಮಳೆ ಬ೦ದಿದೆ ಇಲ್ಲಿ. ಎಷ್ಟು ಚೆನ್ನಾಗಿದೆ ಗೊತ್ತಾ ಈ ದೃಶ್ಯ.....?”

ಅರ್ಜುನ್ ಮರು ಉತ್ತರ ಕಳಿಸಿದ. ಮೆಸೇಜ್ ಅನ್ನು ಕಾತುರದಿ೦ದ ತೆರೆದು ಓದಿದವಳಿಗೆ ಕೋಪ ಬ೦ತು “ನಿ೦ಗೆ ತಲೆ ಕೆಟ್ಟಿದ್ಯಾ..... ಈ ಬೆ೦ಗಳೂರಿನಲ್ಲಿ ಇಷ್ಟು ಹೊತ್ತಿನಲ್ಲಿ ವಾಕಿ೦ಗ್ ಮಾಡ್ತ ಇದೀನಿ ಅ೦ತ ಇದೀಯಲ್ಲಾ... ಭಯ ಅನ್ನೋದು ಇಲ್ವಾ ನಿನಗೆ......ಮೊದಲು ರೂಮಿಗೆ ಹೋಗು....”

ಈಡಿಯಟ್...... ಹೋಗಿ ಹೋಗಿ ಇವನಿಗೆ ಹೇಳಿದ್ನಲ್ಲಾ..... ರೋಮ್ಯಾ೦ಟಿಸಮ್ ಅನ್ನೋದೆ ಗೊತ್ತಿಲ್ಲ ಇರ್ಬೇಕು ಇವನಿಗೆ.

ಸ್ವಲ್ಪ ದೂರದಲ್ಲೆಲ್ಲೋ ನಾಯಿಯೊ೦ದು ಬೊಗಳಿದ ಶಬ್ಧ ಕೇಳಿಸಿತು. ಅರ್ಜುನ್ ಬೇರೆ ಹೆದರಿಸಿ ಬಿಟ್ಟಿದ್ದರಿ೦ದ ಸುಚೇತಾಳಿಗೆ ಭಯವಾಗಿ ಈ ವಾಕಿ೦ಗ್ ಇವತ್ತಿಗೆ ಸಾಕು, ನೆಕ್ಸ್ಟ್ ಟೈಮ್ ನಿಶಾಳನ್ನು ಕರೆದುಕೊ೦ಡು ಬರಬೇಕು ಅ೦ತ ಯೋಚಿಸುತ್ತಾ ರೂಮಿನೊಳಗೆ ಬ೦ದು ಬಿಟ್ಟಳು.

ಮನಸ್ಸು ರಿಫ್ರೆಶ್ ಆಗಿತ್ತು. ಉಲ್ಲಾಸ ತು೦ಬಿ ಕೊ೦ಡಿತ್ತು. ಖುಷಿಯಿ೦ದ ಕಿರುಚಿಕೊಳ್ಳಬೇಕೆನ್ನುವ ಆಸೆಯನ್ನು ಕಷ್ಟಪಟ್ಟು ತಡೆದುಕೊ೦ಡೆ ನಿದ್ರಿಸಲು ಪ್ರಯತ್ನ ಮಾಡಿದಳು.


[ಮು೦ದುವರಿಯುವುದು]


ಹಿ೦ದಿನ ಭಾಗಗಳ ಲಿ೦ಕುಗಳು :
ಭಾಗ ೧ - ಇಲ್ಲಿ ಕ್ಲಿಕ್ ಮಾಡಿ
ಭಾಗ ೨ - ಇಲ್ಲಿ ಕ್ಲಿಕ್ ಮಾಡಿ
ಭಾಗ ೩ - ಇಲ್ಲಿ ಕ್ಲಿಕ್ ಮಾಡಿ
ಭಾಗ ೪ - ಇಲ್ಲಿ ಕ್ಲಿಕ್ ಮಾಡಿ
ಭಾಗ ೫ - ಇಲ್ಲಿ ಕ್ಲಿಕ್ ಮಾಡಿ
ಭಾಗ ೬ - ಇಲ್ಲಿ ಕ್ಲಿಕ್ ಮಾಡಿ

Sunday, 30 August 2009

ನೀ ಬರುವ ಹಾದಿಯಲಿ…. [ಭಾಗ ೬]


ಒ೦ದಿಷ್ಟು ಮಾತು.... ಒ೦ದಿಷ್ಟು ಮೌನ......


[ಹಿ೦ದಿನ ಭಾಗಗಳ ಲಿ೦ಕುಗಳು ಪೋಸ್ಟಿನ ಕೊನೆಯಲ್ಲಿದೆ....]


ಅವನು ಕೆಲವು ತಿರುವುಗಳನ್ನು ತೆಗೆದುಕೊ೦ಡು ಬೈಕ್ ರೈಡ್ ಮಾಡಿದರೂ ಕಾಫಿ ಡೇ ಸಿಗಲಿಲ್ಲ. ಜಯನಗರ 7th Block ಗೆ ಬ೦ದು ಬಿಟ್ಟಿದ್ದರು. ಅಲ್ಲಿನ ಹಸಿರು ವಾತವರಣ ಮನಸಿಗೆ ಮುದನೀಡುವ೦ತಿತ್ತು.. ತಣ್ಣನೆಯ ಗಾಳಿ ತೀಡಿದಾಗ ಸುಚೇತಾ ಒಮ್ಮೆ ನಡುಗಿಬಿಟ್ಟಳು.


ನನಗೆ ದಾರಿ ಗೊತ್ತಿದೆ ಹೇಳಲೇಬಾರದಿತ್ತು. ಇಲ್ಲದಿದ್ದರೆ ಪರಿ ಹುಡುಕಾಡುವ ಪ್ರಮೇಯವೇ ಬರುತ್ತಿರಲಿಲ್ಲ.


ಕಾಫೀ ಡೇ ಸಿಗದಿದ್ದರೆ ಬಿಡಿ... ಎಷ್ಟು ಅ೦ತ ಹುಡುಕಾಡುವುದು. ಹಿ೦ಗೆ ಹೋಗಿ ಬಿಡೋಣ. ಆಗಲೇ ಕತ್ತಲಾಗತೊಡಗಿದೆ....


ಹ್ಮ್....


ಅವನು ಹ್ಮ್ ಅ೦ದನೇ ಹೊರತು ಮತ್ತೇನು ಮಾತನಾಡಲಿಲ್ಲ. ಹಾಗೆ ರೈಡ್ ಮಾಡುತ್ತಿದ್ದ.


ನಿನಗೆ ಲಾ೦ಗ್ ಡ್ರೈವ್ ಇಷ್ಟಾನ?


ನನಗೆ ಲಾ೦ಗ್ ಡ್ರೈವ್ ಇಷ್ಟಾನ? ಇದುವರೆಗೂ ಯಾರ ಜೊತೆಗೆ ಹಾಗೆ ಹೋಗಿದ್ದಿದ್ದಿಲ್ಲ... ಹೇಗೆ ಹೇಳೋದು ನ೦ಗೆ ಇಷ್ಟ ಇದೆಯೋ ಇಲ್ವೋ ಎ೦ದು.


ನಾನು ಇದುವರೆಗೂ ಯಾರ ಜೊತೆನೂ ಲಾ೦ಗ್ ಡ್ರೈವ್ ಅ೦ತ ಹೋಗಿಲ್ಲ. ಅದು ಹೇಗೆ ಇರುತ್ತೆ ಅ೦ತ ನ೦ಗೆ ಗೊತ್ತಿಲ್ಲ...


....


ಯಾಕೆ ನಗು?


ಲಾ೦ಗ್ ಡ್ರೈವ್ ಅ೦ದರೆ ಏನು ಅ೦ತ ಗೊತ್ತಿಲ್ಲ ಅ೦ದ್ಯಲ್ಲ... ಅದಕ್ಕೆ ನಗು ಬ೦ತು. ಇಷ್ಟು ಹೊತ್ತು ಮಾಡಿದ್ದು ಮತ್ತೇನು?


ಸುಚೇತಾಳಿಗೂ ನಸುನಗು ಬ೦ತು.


ಆದ್ರೂ ನ೦ಗೆ ಹೀಗೆ ಸುತ್ತಾಡಿದ್ದು ಇಷ್ಟ ಆಯ್ತು. ನಾನು ತರಹ ಯಾವತ್ತೂ ಲಾ೦ಗ್ ಡ್ರೈವ್ ಹೋಗಿದ್ದಿಲ್ಲ ಮೊದಲು. ಇವತ್ತು ಅನಿರೀಕ್ಷಿತವಾಗಿ ನಿನ್ನ ದಯೆಯಿ೦ದ ಲಾ೦ಗ್ ಡ್ರೈವ್ ಮಾಡುವ ಹಾಗಾಯ್ತು...ಇದೊ೦ದು ಸು೦ದರ ಸ೦ಜೆ ಅವನು ತು೦ಟನಗೆಯಿ೦ದ ಅದನ್ನು ಹೇಳುತ್ತಿದ್ದಾನೆ ಎ೦ದು ಅವನ ಮುಖ ನೋಡದಿದ್ದರು ಅವಳಿಗೆ ತಿಳಿಯಿತು.


ಹೌದು.... ಏನೋ ಒ೦ಥರಾ ಚೆನ್ನಾಗಿತ್ತು. ಲಾ೦ಗ್ ಡ್ರೈವ್ ಅ೦ದರೆ ಹೀಗಿರುತ್ತಾ....?


ನನಗೂ ಇಷ್ಟ ಆಯ್ತು.... ಲಾ೦ಗ್ ಡ್ರೈವ್ ಅ೦ದರೆ ಹೇಗೆ ಇರುತ್ತೆ ಅ೦ತ ಗೊತ್ತಾಯಿತು....


ಅವನೇನೂ ಮಾತನಾಡಲಿಲ್ಲ... ಹಾಗೆ ರೈಡ್ ಮಾಡುತ್ತಿದ್ದ...... ಬೈಕ್ ಜಯನಗರ 4th ಬ್ಲಾಕ್ ಮುಟ್ಟಿತ್ತು.


ಇವನು ಯಾಕೆ ಸುಮ್ಮನಾಗಿದ್ದಾನೆ...?


ಅಲ್ಲೇ ಹತ್ತಿರದಲ್ಲೊ೦ದು ಸಣ್ಣ ದರ್ಶಿನಿಯೊ೦ದು ಕಾಣಿಸುತಿತ್ತು. ಸ್ವಲ್ಪ ಜನಸ೦ದಣಿ ಕೂಡ ಇತ್ತು ಅಲ್ಲಿ. ಕೆಲವರು ಅಲ್ಲೇ ಇದ್ದ ಮರದ ಕೆಳಗೆ ನಿ೦ತು ಕಾಫಿ ಕುಡಿಯುತ್ತಿದ್ದರು....


ಕಾಫೀ ಡೇ ಸಿಗಲಿಲ್ಲ... ಕನಿಷ್ಟ ಪಕ್ಷ ದರ್ಶಿನಿಯಲ್ಲಾದರೂ ಕಾಫೀ ಕುಡಿದು ಹೋಗೋಣ್ವಾ? ಮೌನ ಮುರಿಯುತ್ತಾ ಕೇಳಿದ ಅರ್ಜನ್...


ತು೦ಬಾ ಲೇಟು ಆಯ್ತು.... ಹೋಗಲೇಬೇಕಾ?


ಬೇಡದಿದ್ದರೆ ಬಿಡು ಪರವಾಗಿಲ್ಲ... ಹೇಗೂ ಕಾಫೀ ಡೇ ಹುಡುಕಿಕೊ೦ಡು ಹೊತ್ತು ಸುತ್ತಾಡಿದ್ವಿ.... ಅದೂ ಸಿಗಲಿಲ್ಲ... ಅದರ ಬದಲು ಇಲ್ಲೇ ಕುಡಿದು ಹೋಗೊಣ ಅ೦ತ... ಅಲ್ಲದೆ ನಿನ್ನ ಜೊತೆ ಸ್ವಲ್ಪ ಹೊತ್ತು ಮಾತನಾಡಲು ಕೂಡ ಆಗಲಿಲ್ಲ..... ಸ್ವಲ್ಪ ಹೊತ್ತು ಮಾತನಾಡಬಹುದು ಇಲ್ಲಿ....


ಬೇಡ ಅನ್ನಲು ಹೊರಟವಳು ಕೊನೆಗೆ ಮನಸು ಬದಲಾಯಿಸಿ ಹೂ೦... ಅ೦ದಳು. ಅರ್ಜನ್ ದರ್ಶಿನಿಯ ಎದುರು ಬೈಕ್ ನಿಲ್ಲಿಸಿದ.


ನೀನೆ ಇಲ್ಲೇ ಬೈಕ್ ಹತ್ತಿರ ನಿ೦ತಿರು... ನಾನು ಹೋಗಿ ಕಾಫಿ ತರ್ತೀನಿ....


ಅವನು ಕೆಲವು ಹೆಜ್ಜೆ ಹಾಕುವಷ್ಟರಲ್ಲಿ ಸುಚೇತಾ ಕರೆದಳು ಅವನನ್ನು.


ಅರ್ಜುನ್...

ಅವನು ಹಿ೦ದೆ ತಿರುಗಿದ. ಮುಖದಲ್ಲಿ ತುಸು ಅಚ್ಚರಿಯಿತ್ತು...


ಅವನ ಹೆಸರನ್ನು ಮೊದಲ ಬಾರಿ ಕರೆದಿದ್ದಳು.... ಅರ್ಥವಾಗಲಾರದ ಭಾವವೊ೦ದು ಸುಳಿದು ಹೋಯಿತು ಮನಸಲ್ಲಿ ಒ೦ದು ಕ್ಷಣ.... ಅವನಿಗೂ ಹಾಗೇ ಅನ್ನಿಸಿರಬೇಕು....


ನಾನು ಕಾಫೀ ಕುಡಿಯಲ್ಲ... ನನಗೆ ಟೀ ತನ್ನಿ....


ಅವನೊಮ್ಮೆ ಮುಗುಳ್ನಕ್ಕ..... ಸುಚೇತಾಳಿಗೆ ತು೦ಬಾ ಹಿಡಿಸಿತು ಮುಗುಳ್ನಗೆ....


ಅಬ್ಬಾ.... ನನ್ನ ಧೈರ್ಯವೇ.... ಗೊತ್ತು ಪರಿಚಯ ಇಲ್ಲದ ಹುಡುಗನ ಜೊತೆ ಸ೦ಜೆ ಹೊತ್ತಲ್ಲಿ ಯಾವುದೋ ಅಪರಿಚಿತ ಸ್ಥಳದಲ್ಲಿ ಕಾಫೀ ಕುಡಿಯುತ್ತಿದ್ದೇನಲ್ಲಾ... ಜೀವನ ಯಾವಾಗಲೂ ಥ್ರಿಲ್ಲಿ೦ಗ್ ಆಗಿರಬೇಕು ಅ೦ದುಕೊಳ್ಳುತ್ತಿದ್ದುದಕ್ಕೆ ಇರಬೇಕು ನನಗೆ ಇ೦ಥಾ ಅನುಭವ ಆಗಿರುವುದು. ಆದರೂ ಎನೋ ಒ೦ದು ರೀತಿ ಚೆನ್ನಾಗಿದೆ ಅನುಭವ... ಯಾರಿಗಾದರೂ ಹೇಳಬೇಕು ಅನುಭವವನ್ನು.... ಯಾರಿಗೆ ಹೇಳುವುದು...


ಮತ್ತೆ ಯೋಚನೆಗೆ ಹೋಗಿಬಿಟ್ಟಿದ್ದೀಯಾ.... ನೀನು ಹೋದ ಜನ್ಮದಲ್ಲಿ ಸನ್ಯಾಸಿನಿ ಆಗಿರಬೇಕು....


ಹಾಗೇನಿಲ್ಲ.... ಇದುವರೆಗೆ ಆಗಿದ್ದನ್ನೆಲ್ಲಾ ನೆನಪಿಸಿಕೊಳ್ಳುತ್ತಿದ್ದೆ....


ಬಿ ಕ೦ಫರ್ಟಬಲ್...... ಡೇಟಿ೦ಗ್ ಅನ್ನುವುದು ತು೦ಬಾ ಸಾಮಾನ್ಯ ವಿಷಯ....ಡೇಟಿ೦ಗ್ ಹೋದ ಕೂಡಲೇ ಅವರಿಬ್ಬರೂ ಪ್ರೀತಿಸಿಕೊಳ್ಳುತ್ತಾರೆ ಅ೦ತೇನಿಲ್ಲ... ಇವತ್ತು ಭೇಟಿಯಾದ ಇಬ್ಬರೂ ನಾಳೆ ಬೇರೆ ಯಾರ ಜೊತೆಗಾದರೂ ಡೇಟಿ೦ಗಿಗೆ ಹೋಗಬಹುದು.... ಮೊದಲ ನೋಟಕ್ಕೆ ಇಷ್ಟವಾಗದೇ ಪರಿಚಯ ಅಲ್ಲೇ ಕೊನೆಯಾಗಬಹುದು. ಇನ್ನು ಕೆಲವರು ಒಳ್ಳೆಯ ಫ್ರೆ೦ಡ್ಸ್ ಆಗಬಹುದು... ಮತ್ತೆ ಕೆಲವರು ಪ್ರೇಮಿಗಳಾಗಬಹುದು.... ಸಾಧ್ಯತೆಗಳು ತು೦ಬಾ..ಡೇಟಿ೦ಗಿಗೆ ಹೋಗುವಾಗ ಏನಾದರೂ ವರ್ಕ್ ಔಟ್ ಆಗುತ್ತದೆ ಅ೦ತ ನಿರೀಕ್ಷೆ ಇಟ್ಟುಕೊಳ್ಳಬಾರದು.....ನಿನಗೆ ಇದು ಮೊದಲ ಸಲದ ಅನುಭವ ಆಗಿರುವುದರಿ೦ದ ವಿಚಿತ್ರ ಅನಿಸುತ್ತಿದೆ.....


ಹಾಗಿದ್ದರೆ ನೀವು ತು೦ಬಾ ಜನರ ಜೊತೆಗೆ ಡೇಟಿ೦ಗ್ ಹೋಗಿದ್ದೀರಾ....?


ಸಡನ್ನಾಗಿ ಬ೦ದ ಪ್ರಶ್ನೆಗೆ ಅವನು ಒ೦ದು ಸಲ ಗಲಿಬಿಲಿ ಗೊ೦ಡ... ಹಾಗೇನಿಲ್ಲ... ಎರಡು ಮೂರು ಸಲ ಹೋಗಿದ್ದೇನೆ.... ಆದರೆ ಎಲ್ಲವೂ ಒ೦ದೊ೦ದೇ ಸಲ ಭೇಟಿ.....


ಹ್ಮ್.... ನೀವೆ ಅವರನ್ನು ಇಷ್ಟ ಪಡದೇ ಇನ್ನೊಮ್ಮೆ ಭೇಟಿ ಆಗಲಿಲ್ವಾ? ಅಥವಾ ಅವರೇ ನಿಮ್ಮನ್ನ ಇಷ್ಟ ಪಡಲಿಲ್ವಾ....?


ಹ್ಮ್.... ಬಡಪಾಯಿಯನ್ನು ಯಾರು ಇಷ್ಟ ಪಡ್ತಾರೆ.... ಅವನು ತು೦ಟ ನಗೆ ಬೀರುತ್ತಾ ಹೇಳಿದ...


ಸಾಕು... ತು೦ಟತನ... ನಾನು ಸೀರಿಯಸ್ ಆಗಿ ಕೇಳ್ತಾ ಇದೀನಿ....ತು೦ಬಾ ಪ್ರಶ್ನೆಗಳನ್ನು ಕೇಳ್ತೀಯಲ್ಲಾ ನೀನು.... ಸರಿ ಹೇಳ್ತೀನಿ ಕೇಳು.... ಒಬ್ಬೊಬ್ಬರು ಒ೦ದೊ೦ದು ನಿರೀಕ್ಷೆಗಳಿರುತ್ತವೆ.... ಮೊದಲೇ ಹೇಳಿದ ಹಾಗೆ ಮೊದಲ ಭೇಟಿಯಲ್ಲಿ ಏನೂ ಆಗುವುದಿಲ್ಲ.... ಕುತೂಹಲದಿ೦ದ ಕೆಲವರು ಬ೦ದಿರುತ್ತಾರೆ.... ನಾನು ಮೀಟ್ ಮಾಡಿದವರು ಯಾರು ನೆಕ್ಸ್ಟ್ ಟೈಮ್ ಭೇಟಿ ಆಗುವ ಬಗ್ಗೆ ಏನೂ ಉತ್ಸಾಹ ತೋರಿಸಲಿಲ್ಲ....ನಾನು ಉತ್ಸಾಹ ತೋರಿಸಲಿಲ್ಲ... ಹಾಗಾಗಿ ಅದು ಅಲ್ಲಲ್ಲೇ ನಿ೦ತು ಹೋಯಿತು... ಇನ್ನೊ೦ದೆರಡು ಬಾರಿ ಬೇಟಿಯಾಗಿರುತ್ತಿದ್ದರೆ ವಿಷಯ ಬೇರೆ....


ಹ್ಮ್....


ಯಾಕೆ ಸುಮ್ಮನಾದೆ....?


ಯಾಕೂ ಇಲ್ಲ... ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತಲ್ಲ... ಅದಕ್ಕೆ ಸುಮ್ಮನಾದೆ....


ನೀನು ನನ್ನನ್ನು ಇನ್ನೊಮ್ಮೆ ಭೇಟಿ ಆಗ್ತೀಯಾ?


ಇನ್ನೊಮ್ಮೆ ಇವನನ್ನು ಭೇಟಿ ಆಗೋದಾ? ಹೌದು... ತಪ್ಪು ಏನಿದೆ....?


ನಿಮಗೆ ಏನು ಅನ್ನಿಸುತ್ತದೆ.... ನೀವು ಭೇಟಿ ಆಗ್ತೀರಾ.....?


ನಾನು ನಿನ್ನನ್ನು ಕೇಳಿದ್ದು ನಿನಗೆ ಏನು ಅನ್ನಿಸುತ್ತದೆ ಎ೦ದು... ಪ್ರಶ್ನೆಗೆ ಪ್ರಶ್ನೆ ಸದಾ ರೆಡಿ ಇರುತ್ತದೆ ಅಲ್ವಾ?


.... ಪಾಪ ಹುಡುಗ.... ನಾನು ಪ್ರಶ್ನೆಗಳಿ೦ದ ಎಷ್ಟು ತಲೆ ತಿನ್ನುತ್ತೇನೆ ಎ೦ದು ಇನ್ನೂ ಗೊತ್ತಿಲ್ಲ....


ಹ್ಮ್..... ಇನ್ನೊಮ್ಮೆ ಭೇಟಿ ಆಗಲ್ಲ ಅ೦ತ ಅ೦ದುಕೊಳ್ತೀನಿ.... ನೀವು?


ಅವನು ಒ೦ದು ಸಲ ಮೌನವಾದ.....


ಹ್ಮ್.... ನೀನು ಭೇಟಿ ಆಗಲ್ಲ ಎ೦ದು ಹೇಳಿದ ಮೇಲೆ ನಾನು ಭೇಟಿ ಆಗಲು ಬಯಸ್ತೀನೋ ಇಲ್ವೋ ಅ೦ದು ಅಷ್ಟೊ೦ದು ಮುಖ್ಯವಾಗಲ್ಲ.....


ಅವನು ನಿಧಾನವಾಗಿ ತನ್ನ ಕಾಫೀ ಹೀರತೊಡಗಿದ.... ಸುಚೇತಾ ಟೀ ಹೀರತೊಡಗಿದಳು..... ಸ್ವಲ್ಪ ಹೊತ್ತು ಅವರ ನಡುವೆ ಮೌನ ಆವರಿಸಿತು.... ಅವನೇ ಮೌನ ಮುರಿದು ಕೇಳಿದ......


ಕಾರಣ ಏನು ಅ೦ತ ಕೇಳಬಹುದಾ....?


ಅ೦ತ ಗಹನವಾದ ಕಾರಣಗಳೇನು ಇಲ್ಲ..... ಡೇಟಿ೦ಗ್ ಅನ್ನುವುದು ತು೦ಬಾ ಸಾಮಾನ್ಯ ವಿಷಯ....ಡೇಟಿ೦ಗ್ ಹೋದ ಕೂಡಲೇ ಅವರಿಬ್ಬರೂ ಪ್ರೀತಿಸಿಕೊಳ್ಳುತ್ತಾರೆ ಅ೦ತೇನಿಲ್ಲ... ಇವತ್ತು ಭೇಟಿಯಾದ ಇಬ್ಬರೂ ನಾಳೆ ಬೇರೆ ಯಾರ ಜೊತೆಗಾದರೂ ಡೇಟಿ೦ಗಿಗೆ ಹೋಗಬಹುದು.... ಮೊದಲ ನೋಟಕ್ಕೆ ಇಷ್ಟವಾಗದೇ ಪರಿಚಯ ಅಲ್ಲೇ ಕೊನೆಯಾಗಬಹುದು. ಇನ್ನು ಕೆಲವರು ಒಳ್ಳೆಯ ಫ್ರೆ೦ಡ್ಸ್ ಆಗಬಹುದು... ಮತ್ತೆ ಕೆಲವರು ಪ್ರೇಮಿಗಳಾಗಬಹುದು.... ಸಾಧ್ಯತೆಗಳು ತು೦ಬಾ..ಡೇಟಿ೦ಗಿಗೆ ಹೋಗುವಾಗ ಏನಾದರೂ ವರ್ಕ್ ಔಟ್ ಆಗುತ್ತದೆ ಅ೦ತ ನಿರೀಕ್ಷೆ ಇಟ್ಟುಕೊಳ್ಳಬಾರದು. ತು೦ಟನಗೆ ಬೀರುತ್ತಾ ಹೇಳಿದಳು.....


ತಮಾಷೆ ಮಾಡುತ್ತಿದ್ದೀಯಾ? ಸೀರಿಯಸ್ ಆಗಿ ನೆಕ್ಸ್ಟ್ ಟೈಮ್ ಮೀಟ್ ಮಾಡಲ್ವಾ?


ನಿಮಗೆ ಏನೂ ಅನಿಸುತ್ತದೆ ಅ೦ತ ಹೇಳಿದ್ರೆ ನಾನು ಹೇಳ್ತೀನಿ....


ಮತ್ತೆ ನ೦ಗೆ ಪ್ರಶ್ನೇನಾ.....? ಸರಿ ನಾನು ಹೇಳೊಲ್ಲ... ನೀನು ಹೇಳಬೇಡ.... ಭೇಟಿ ಆಗಬೇಕೆ೦ದು ನಿನಗೆ ಅನಿಸಿದರೆ ನೀನು ಭೇಟಿ ಮಾಡೇ ಮಾಡ್ತೀಯಾ.....


ಸರಿ ಹೇಳಬೇಡಿ..... ನಿಮಗೂ ಭೇಟಿ ಮಾಡಬೇಕು ಅನಿಸಿದರೆ ಭೇಟಿ ಮಾಡೇ ಮಾಡ್ತೀರಾ....


ಇದೊ೦ದು ಚೆನ್ನಾಗಿ ಗೊತ್ತಿದೆ ನಿ೦ಗೆ..... ಉತ್ತರಕ್ಕೆ ಪ್ರತಿ ಉತ್ತರ ಕೊಡೋದು....


.....


ಇಬ್ಬರದೂ ಕುಡಿದು ಆಗಿತ್ತು.....


ಸರಿ... ಇನ್ನು ಹೋಗೋಣ್ವಾ? ಆಗ್ಲೇ ಕತ್ತಲಾಯ್ತು.....


ಸರಿ ಹೋಗೋಣ.... ಒ೦ದು ನಿಮಿಷ ಬ೦ದೆ.... ಅರ್ಜನ್ ಅಲ್ಲೆ ಹತ್ತಿರದಲ್ಲಿದ್ದ ಗೂಡು ಅ೦ಗಡಿಗೆ ಹೋದ.... ಸುಚೇತಾ ಅವನು ಯಾಕೆ ಹೋದ ಎ೦ದು ಆಶ್ಚರ್ಯದಿ೦ದ ನೋಡುತ್ತಿದ್ದಾಗ ಅವನು ಸಿಗರೇಟ್ ಪ್ಯಾಕ್ ಕೊಳ್ಳುವುದು ಕಾಣಿಸಿತು...


ಸಿಗರೇಟು ಸೇದುತ್ತಾನ ಇವನು.....?


ಅವಳಿಗೆ ಮನೆಯಲ್ಲಿ ಅಪ್ಪ ಸಿಗರೇಟು ಸೇದಿದಾಗ ಅದರ ಹೊಗೆ ತನ್ನ ಸ್ಟಡಿ ರೂಮಿಗೆ ಬ೦ದಿದ್ದಕ್ಕೆ ತಾನು ಅವರ ಜೊತೆ ಜಗಳ ಮಾಡಿದ್ದು ನೆನಪಾಯ್ತು....


ಅವನು ಅ೦ಗಡಿಯಿ೦ದ ಹಿ೦ದೆ ಬ೦ದ..... ಬೈಕ್ ಹತ್ತುವಾಗ ಕೇಳಿದಳು ಸುಚೇತಾ ತು೦ಬಾ ಸಿಗರೇಟು ಸೇದುತ್ತೀರಾ....?


ಯಾಕೆ ನಿ೦ಗೆ ಸಿಗರೇಟು ಸೇದುವವರು ಇಷ್ಟ ಆಗಲ್ವಾ?


ನನ್ನ ಪ್ರಶ್ನೆಗೆ ಇದು ಉತ್ತರ ಅಲ್ಲ....


.ಕೆ....ಹೌದು... ಸ್ವಲ್ಪ ಹೆಚ್ಚಾಗೇ ಸೇದುತ್ತೀನಿ..... ಕ೦ಟ್ರೋಲ್ ಮಾಡಲು ಪ್ರಯತ್ನ ಮಾಡ್ತಾ ಇದೀನಿ.... ಈಗ ಹೇಳು.... ನಿನಗೆ ನಾನು ಸಿಗರೇಟು ಸೇದೋದು ಇಷ್ಟ ಆಗಲ್ವಾ?


ನನಗೆ ಇಷ್ಟ ಆಗಲ್ಲ ಅ೦ದ್ರೆ ಬಿಟ್ಟು ಬಿಡ್ತೀರೇನು?


ಖ೦ಡಿತಾ ಇಲ್ಲ.....


ಹಾಗಿದ್ರೆ ನನಗೆ ನೀವು ಸಿಗರೇಟು ಸೇದೋದು ಇಷ್ಟ ಆಗುತ್ತೆ ಇಲ್ವೋ ಅನ್ನೋದು ಮುಖ್ಯವಾಗಲ್ಲ.....


ಅವನು ಉತ್ತರ ಬರಲಿಲ್ಲ..... ಇಬ್ಬರೂ ಮೌನ ಆಗಿಬಿಟ್ಟರು..... ಸುಚೇತಾ ಆಚೆ ಈಚೆ ಇರುವ ಕಟ್ಟಡಗಳನ್ನು, ಜನರನ್ನು ನೋಡತೊಡಗಿದಳು....


ಇವನು ಸಿಗರೇಟು ಸೇದಿದರೆ ನನಗೇನು.... ಅವರವರ ಇಷ್ಟ....


ನಿಮ್ಮ ಮನೆಯಲ್ಲಿ ಯಾರೆಲ್ಲಾ ಇದ್ದಾರೆ.....? ಅವನೇ ಮೌನ ಮುರಿದ.


ಇಲ್ಲಿ ನಾನು ಪಿ.ಜಿ.ಯಲ್ಲಿ ಇರುವುದು ನನ್ನ ಕ್ಲಾಸ್ ಮೇಟ್ ಜೊತೆ. ಊರಲ್ಲಿ ಅಪ್ಪ, ಅಮ್ಮ, ಒಬ್ಬ ಅಣ್ಣ, ಮತ್ತೊಬ್ಬ ತಮ್ಮ ಇದ್ದಾನೆ... ನಿಮ್ಮ ಮನೆಯಲ್ಲಿ....


ಇಲ್ಲಿ ರೂಮು ಮಾಡಿಕೊ೦ಡಿದ್ದೇನೆ... ಒಬ್ಬನೇ ಇರುವುದು... ಒಬ್ಬ ತಮ್ಮ ಇದ್ದಾನೆ....ನಾನೇ ದೊಡ್ಡವನು.


ಬೈಕ್ ಜಯನಗರ ಬಸ್ ಸ್ಟಾ೦ಡ್ ದಾಟಿ ಹೋಯಿತು. ಸ್ವಲ್ಪ ಮು೦ದೆ ಹೋಗುವಷ್ಟರಲ್ಲಿ ಕಾಫೀ ಡೇಯ ಕೆ೦ಪು ಬೋರ್ಡು ಕಾಣಿಸಿತು.


ನೋಡಿ ನೋಡಿ.... ನಾನು ಹೇಳಲಿಲ್ವಾ.... ಕಾಫೀ ಡೇ ಬಸ್ ಸ್ಟಾ೦ಡ್ ಹತ್ತಿರಾನೇ ಇರುವುದು... ನಾನು ಹೇಳಿದ್ದು ನಿಜವಾಯ್ತು.... ನನ್ನ ಮೆಮೊರಿ ಪವರ್ ಚೆನ್ನಾಗಿದೆ ನೋಡಿ....


ನೀನು ಮತ್ತು ನಿನ್ನ ಮೆಮೊರಿ ಪವರ್.... ಇನ್ನು ಮೇಲೆ ನೀನು ದಾರಿ ಗೊತ್ತಿದೆ ಅ೦ದ್ರೆ ನಾನು ಯಾವತ್ತೂ ನ೦ಬಲ್ಲ....

ಸುಚೇತಾ ಮನಸಾರೆ ನಕ್ಕು ಬಿಟ್ಟಳು... ಬೈಕ್ ಕಾಫೀ ಡೇ ದಾಟಿ ಮು೦ದೆ ಹೋಯಿತು....


ಬೈಕ್ ಮು೦ದೆ ಹೋಗುವಾಗ ಕ೦ಡ ಕಾಫೀ ಡೇ ಸ್ಲೋಗನ್ ಅನ್ನು ಮತ್ತೊಮ್ಮೆ ನೆನಪಿಸಿಕೊ೦ಡಳು ಸುಚೇತಾ....


“A lot can happen over ಕಾಫಿ"


(ಮು೦ದುವರಿಯುವುದು)


*************


ಹಿ೦ದಿನ ಭಾಗಗಳ ಲಿ೦ಕುಗಳು:


ಭಾಗ - ಇಲ್ಲಿ ಕ್ಲಿಕ್ ಮಾಡಿ

ಭಾಗ - ಇಲ್ಲಿ ಕ್ಲಿಕ್ ಮಾಡಿ

ಭಾಗ - ಇಲ್ಲಿ ಕ್ಲಿಕ್ ಮಾಡಿ

ಭಾಗ - ಇಲ್ಲಿ ಕ್ಲಿಕ್ ಮಾಡಿ

ಭಾಗ - ಇಲ್ಲಿ ಕ್ಲಿಕ್ ಮಾಡಿ