Sunday, 4 March 2012

ಪಾರಿವಾಳ ಮತ್ತು ಹುಟ್ಟಿದ ಹಬ್ಬ...

ಮು೦ಬಯಿಗೆ ಬ೦ದು ಆಗಲೇ ಎ೦ಟು ತಿಂಗಳುಗಳು ಕಳೆದಿದ್ದವು . ನಾವು ವಾಸಿಸುತ್ತಿದ್ದ ಮನೆಯಲ್ಲಿ ಹಲ್ಲಿಗಳು ತಮ್ಮ ಅಸ್ತಿತ್ವವನ್ನು ಆಗಾಗಲೇ ಪ್ರತಿಷ್ಟಾಪಿಸಿಕೊಂಡು ಟೆಕ್ನಿಕಲಿ ನಮ್ಮದೂ ಕೂಡ ಒ೦ದು ಮನೆ ಎ೦ದು ತೋರಿಸಿಕೊಟ್ಟಿದ್ದವು. ಹೀಗಿರುವ ನಮ್ಮ ಮನೆಗೆ ಹೊಸ ಅತಿಥಿಗಳು ಬರುವರೆಂಬ ಕಲ್ಪನೆ ನಮಗಿರಲಿಲ್ಲ.
ಮು೦ಬಯಿಗೆ ಹೋದ ಹೊಸದರಲ್ಲಿ ಆಶ್ಚರ್ಯ ಆಗುತ್ತಿದ್ದುದ್ದು ಅಲ್ಲಿರುವ ಪಾರಿವಾಳಗಳ ಸ೦ಖ್ಯೆ ಕಂಡು. ಅಲ್ಲಿ ಎಲ್ಲಿ ನೋಡಿದರೂ ಪಾರಿವಾಳ. ನಮ್ಮೂರಲ್ಲಿ ಎಲ್ಲಿ ನೋಡಿದರೂ ಕಾಗೆಗಳು ಕಾಣಿಸುವ ಹಾಗೆ. ಊರಿನಿಂದ ಮು೦ಬಯಿಯಲ್ಲಿ ಒಂದು ವಾರ ಇರಲು  ಬಂದ ನನ್ನ ಅಕ್ಕ ಕೂಡ ಪ್ರತಿದಿನ ಹೇಳುತ್ತಿದ್ದಳು "ಎ೦ತ ಮಾರಾಯ. ಇಲ್ಲಿ ಬಂದಾಗಿನಿಂದ ಕಾಗೆಗಳೇ ಕಾಣಿಸಲು ಸಿಗುತ್ತಿಲ್ಲ. ಊರಲ್ಲಿದ್ದರೆ ಕಾಗೆಗಳನ್ನು ಓಡಿಸಿ ಸಾಕಾಗುತ್ತಿತ್ತು. ಇಲ್ಲಿ ಬಾರೆ ಪಾರಿವಾಳಗಳೇ ಕಾಣಿಸುತ್ತವೆ" ಎ೦ದು ಕಾಗೆಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಳು.
ಒ೦ದು ದಿನ ಮನೆ ಗುಡಿಸುವಾಗ ನೋಡುತ್ತೇನೆ ನಮ್ಮ ಬಾಲ್ಕನಿಯಲ್ಲಿ ಕಸ ಕಡ್ಡಿಗಳನ್ನು ಹೇರಿಕೊಂಡು ಒ೦ದು ಪಾರಿವಾಳ ಗೂಡು ಕಟ್ಟಲು ಶುರು ಮಾಡಿದೆ. ನನ್ನ ರೂಮಿಯನ್ನು ಕರೆದು ತೋರಿಸಿದೆ. "ನೋಡು ನಮ್ಮ ಮನೆಗೆ ಹೊಸ ಅತಿಥಿಗಳು  ಬಂದಿವೆ". ಅವನು ಗೂಡಿನ ಸಮೇತ ಪಾರಿವಾಳವನ್ನು ಓಡಿಸೋಣ ಅ೦ದಾಗ ನಾನು "ಪಾಪ ಇರಲಿ ಬಿಡು' ಎ೦ದು ಬಾಯಿ ಮುಚ್ಚಿಸಿದೆ. ಆಮೇಲೆ ಒಂದೆರಡು ದಿನದಲ್ಲಿ ಗೂಡು ಕಟ್ಟಿ ಮುಗಿಸಿತು ಪಾರಿವಾಳ. ಅಷ್ಟರಲ್ಲಿ ನಾವಿಬ್ಬರೂ ರಜೆಗೆ ಊರಿಗೆ ಹೊರಟಿದ್ದೆವು. ರಜೆ ಮುಗಿಸಿ ಬಂದ ದಿನ ನನ್ನ ರೂಮಿ ಹೋಗಿ ನೋಡುತ್ತಾನೆ ಬಾಲ್ಕನಿಯಲ್ಲಿದ್ದ ಗೂಡಿನಲ್ಲಿ
ಪಾರಿವಾಳಗಳ ಮೊಟ್ಟೆ ಇವೆ. ಅದರ ಮೇಲೆ ಕಾವು ಕೊಡಲು ಕೂತಿದ್ದ ಪಾರಿವಾಳ ನಮ್ಮನ್ನು ನೋಡಿ ಹಾರಿ ಹೋಗಿ ಸ್ವಲ್ಪ ದೂರ ಕೂತಿತು.
"ಇವನ್ನು ಹೀಗೆ ಬಿಟ್ಟರೆ ಆಗುವುದಿಲ್ಲ ಮಾರಾಯ. ಆಮೇಲೆ ಮನೆಯ ಓನರ್ ಬಯ್ಯುವುದು ನಮ್ಮನ್ನೇ. ಈ ಮೊಟ್ಟೆಗಳನ್ನು ಇವತ್ತೇ ಬಿಸಾಡಿ ಬಿಡಬೇಕು." ನನ್ನ ರೂಮಿ ಅ೦ದ.
"ಪಾಪ... ಒಂದು ಹಕ್ಕಿಯ ಸಂಸಾರ ನಾಶ ಮಾಡಿದ ಹಾಗಾಗುತ್ತದೆ. ಅದೆಷ್ಟು ಪ್ರೀತಿಯಿಂದ ಕಾವು ಕೊಡುತ್ತಾ ಇದೆ. ಮೊಟ್ಟೆ ಬಿಸಾಡುವುದು ಪಾಪ." ಅ೦ತ ನಾನು ಎಮೋಷನಲ್ ಬ್ಲಾಕ್ ಮೇಲ್ ಮಾಡಿದೆ.
"ನೀನು ಕೋಳಿ ಮೊಟ್ಟೆ ತಿನ್ನುವವನು. ನಿನಗ್ಯಾಕೆ ಅಷ್ಟೊಂದು ಕನಿಕರ!" ಅವನ೦ದ.
ನನಗೆ ಏನು ಉತ್ತರಿಸಬೇಕೆಂದು ತಿಳಿಯಲಿಲ್ಲ. "ಸರಿ ಮಾರಾಯ ನಿನ್ನ ಇಷ್ಟ. ಬಿಸಾಡುವುದಾದರೆ ನೀನೆ ಬಿಸಾಡಿ ಬಾ. ನಾನಂತೂ ಬಿಸಾಡುವುದಿಲ್ಲ." ಎ೦ದು ಸುಮ್ಮನಾದೆ.
ಅವನು ಸ್ವಲ್ಪ ಪಾಪ ಪುಣ್ಯಗಳ ಭಯ ಇರುವವನು. ಅವನಾಗಿಯೇ ಬಿಸಾಡಲಿಲ್ಲ. "ಅದಕ್ಕೆ ನಾನು ಹೇಳಿದ್ದು. ಅವತ್ತು ಗೂಡು ಕಟ್ಟುತ್ತಿರುವಾಗಲೇ ಗೂಡನ್ನು ಬಿಸಾಡಿ ಬಿಡೋಣ ಎ೦ದು. ಓನರ್ ಕೇಳಿದರೆ ನೀನೇ ಉತ್ತರ ಕೊಡಬೇಕು."
"ಸರಿ.... ಪಾರಿವಾಳ ಮೊಟ್ಟೆ ಒಡೆದು ಹೊರಬರಲು ಸಾಮಾನ್ಯವಾಗಿ ೧೫ - ೧೮ ದಿನಗಳು ತೆಗೆದುಕೊಳ್ಳುತ್ತದೆ. ಅಷ್ಟರೊಳಗೆ ಓನರ್ ಖಂಡಿತ ಮನೆಗೆ ಬರುವುದಿಲ್ಲ. ಹಾಗೊಂದು ವೇಳೆ ಬಂದರೆ ನಾನೇ ಉತ್ತರ ಕೊಡುತ್ತೇನೆ" ಎ೦ದು ಸಾಗ ಹಾಕಿದೆ.


ಆದರೂ ಅವನು ಕೋಳಿ ಮೊಟ್ಟೆ ಬಗ್ಗೆ ಕೇಳಿದ ಪ್ರಶ್ನೆ ತುಸು ಹೊತ್ತು ಕಾಡುತ್ತಿತ್ತು. ಕೋಳಿಗಳು ವರ್ಷ ಪೂರ್ತಿ ಕೂಡ ಮೊಟ್ಟೆ ಇಡಬಲ್ಲವು. ನನಗೆ ಇನ್ನೂ ನೆನಪಿದೆ. ಕೋಳಿ ಮೊಟ್ಟೆ ಇಡಲು ಶುರು ಮಾಡಿದ ಮೇಲೆ ಅವನ್ನೆಲ್ಲ ಸ೦ಗ್ರಹಿಸಿ, ಅದು ಕಾವು ಕೊಡಲು ತಯಾರಾಗುವ ಹೊತ್ತಿಗೆ ಒಂದೆರಡು ಮೂರು ಮೊಟ್ಟೆಗಳನ್ನು ಕಾವು ಕೊಡಲು ಇಡುತ್ತಿದ್ದರು ನನ್ನ ಅಮ್ಮ. ಅದೊಂಥರ ಬರ್ತ್ ಕಂಟ್ರೋಲ್ ತರಹ. ಕೋಳಿ ಮೊಟ್ಟೆ ಇಡಲು ಶುರು ಮಾಡಿದ ಮೇಲೆ ಅದನ್ನು ದಿನ ಸ೦ಗ್ರಹಿಸಿ ಇಡಬೇಕು. ಇಲ್ಲದಿದ್ದರೆ ಒಂದಷ್ಟು ಮೊಟ್ಟೆಗಳು ಗೂಡಿನಲ್ಲಿ ಸ೦ಗ್ರಹವಾದ ಮೇಲೆ ಕೋಳಿ ಇನ್ನು ಮೊಟ್ಟೆ ಇಟ್ಟಿದ್ದು ಸಾಕು ಅ೦ದುಕೊ೦ಡು ಕಾವು ಕೊಡಲು ಶುರು ಮಾಡುತ್ತದೆ. ಹಾಗಾಗಿ ಮೊಟ್ಟೆಗಳನ್ನೂ ದಿನಾ ಸ೦ಗ್ರಹಿಸಿ ಇಡುವುದರ ಮೂಲಕ ಕೋಳಿಯಿಂದ ತು೦ಬಾ ಮೊಟ್ಟೆ ಪಡೆಯಬಹುದು. ಅಲ್ಲದೆ ಕೋಳಿ ಕಾವು ಇಡಲು ತಯಾರಾಗುವ ಹೊತ್ತಿಗೆ ಗೂಡಿನಲ್ಲಿ ಮೊಟ್ಟೆ ಇಲ್ಲದಿದ್ದರೂ ಸುಮ್ಮನೆ ಕೂತು ಕಾವು ಕೊಡುವುದೂ ಇದೆ. ಹಾಗಾಗಿಯೇ ಗೂಡಿನಲ್ಲಿ ಒಂದೆರಡು ಮೊಟ್ಟೆ ಇಡುವುದು. ಅದು ಎಷ್ಟು ಕೋಳಿಮರಿಗಳು ಬೇಕು ಎನ್ನುವ ಅಗತ್ಯದ ಮೇಲೆ ನಿ೦ತಿದೆ.
ಪ್ರತಿಯೊಂದು ಪ್ರಾಣಿಯನ್ನೂ ಸಾಕುವುದು ಅದರಿಂದ ಏನಾದರೂ ಪ್ರಯೋಜನ ಇದೆ ಎ೦ದೆ. ಹಾಗೆ ನೋಡಿದರೂ ದನದ ಹಾಲು ಕರೆಯುವುದು ಕೂಡ ಪಾಪವೇ ಆಗುತ್ತದೆ. ಕರುವಿಗೆ ಸಲ್ಲ ಬೇಕಾದ ಹಾಲು ಮನುಷ್ಯ ತೆಗೆದುಕೊಂಡರೂ ಕರುವನ್ನು ಸಾಕುವ ಜವಾಬ್ದಾರಿ ಕೂಡ ಆತನೇ ತೆಗೆದು ಕೊಳ್ಳುತ್ತಾನೆ. ಅದನ್ನು ಪಾಪ ಅನ್ನಲು ಆಗುವುದಿಲ್ಲ. ಇಷ್ಟೆಲ್ಲಾ ಮಂಥನ ನಡೆಯಿತು ಮನಸಿನಲ್ಲಿ. ಆತ ನಾನು ಕೋಳಿ ಮೊಟ್ಟೆ ತಿನ್ನುವುದರಿಂದ ನನಗೆ ಪಾಪ ಪುಣ್ಯದ ಬಗ್ಗೆ ಮಾತನಾಡುವ ಅಧಿಕಾರ ಇಲ್ಲ ಅನ್ನುವ ಹಾಗೆ ಮಾತಾಡಿದ್ದು ಇಷ್ಟ ಆಗಲಿಲ್ಲ. ಪಾರಿವಾಳಗಳು ಕೋಳಿಗಳಂತೆ ತು೦ಬಾ ಮೊಟ್ಟೆ ಇಡುವುದಿಲ್ಲ. ಅವು ಸಾಮಾನ್ಯವಾಗಿ ಇಡುವುದು ಒಂದು ಹೆಚ್ಚೆಂದರೆ ಎರಡು. ಎರಡಕ್ಕಿಂತ ಹೆಚ್ಚು ಇಡುವುದು ತುಂಬ ಕಡಿಮೆ. ಅದನ್ನು ಕೋಳಿ ಮೊಟ್ಟೆಗೆ ಹೋಲಿಸುವುದು ತಪ್ಪು ಎ೦ದೆಲ್ಲಾ ಯೋಚಿಸಿದರೂ ನನ್ನ ರೂಂಮೇಟಿಗೆ ಅದನ್ನು ವಿವರಿಸುವ ಅಗತ್ಯ ಕಾಣಿಸಲಿಲ್ಲ. ನಾನು ಸುಮ್ಮನಾದೆ.
ಮೊದಲು ಒಂದೇ ಪಾರಿವಾಳ ಇದೆ ಎ೦ದು ಅ೦ದುಕೊ೦ಡಿದ್ದೆ. ಆದರೆ ಸ್ವಲ್ಪ ದಿನಗಳ ಮೇಲೆ ಅಲ್ಲಿ ಎರಡು ಪಾರಿವಾಳಗಳು ಇವೆ ಅನಿಸ ತೊಡಗಿತು. ಯಾಕೆಂದರೆ ಕೆಲವೊಮ್ಮೆ ನಾವು ಬಾಲ್ಕನಿಗೆ ಬ೦ದರೆ ಕಾವು ಕೊಡುತ್ತಿರುವ ಪಾರಿವಾಳ ಪುರ್ರ್ ಎ೦ದು ಹಾರಿ ಹೋಗಿ ದೂರ ಕೂತಿರುತ್ತಿತ್ತು. ಇನ್ನು ಕೆಲವೊಮ್ಮೆ ನಾವು ಬಂದರೂ ಸುಮ್ಮನೆ ಕಾವು ಕೊಡುವುದನ್ನು ಮುಂದುವರಿಸುತ್ತಿತ್ತು. ಆಗ ಅನಿಸುತ್ತಿತ್ತು ಆ ಎರಡು ಮೊಟ್ಟೆಗಳು ಬೇರೆ ಬೇರೆ ಪಾರಿವಾಳದವು ಇರಬೇಕು ಅ೦ತ. ಆಮೇಲೆ ಗೊತ್ತಾಯಿತು ಕಾವು ಕೊಡುವ ಜವಾಬ್ದಾರಿಯನ್ನು ಹೆಣ್ಣು ಮತ್ತು ಗ೦ಡು ಪಾರಿವಾಳಗಳೂ ಸೇರಿ ಮಾಡುತ್ತವೆ ಎ೦ದು.
  ಮರಿಗಳು ಮೊಟ್ಟೆ ಒಡೆದು ಹೊರಬಂದಾಗ ಹೇಗೆ ಕಾಣಿಸಬಹುದು ಎನ್ನುವ ಕುತೂಹಲ ನನಗಿತ್ತು. ಆ ದಿನವೂ ಬ೦ದೇ ಬಿಟ್ಟಿತು.ಆದರೆ ಮರಿಗಳು ನಾನು ಊಹಿಸಿದ ಹಾಗೆ ಇರಲಿಲ್ಲ. ಮರಿಗಳಿಗೆ ಗರಿಗಳೇ ಇರುವುದಿಲ್ಲ. ಬರೇ ಚರ್ಮ ಅಷ್ಟೇ. ಗರಿಗಳು  ನಿಧಾನವಾಗಿ ಮೂಡುತ್ತವೆ. ಎರಡು ಮೊಟ್ಟೆಯಲ್ಲಿ ಒಂದು ಮಾತ್ರ ಫಲಿತವಾಯಿತು ಅನಿಸುತ್ತದೆ. ಒಂದು ಮರಿ ಮಾತ್ರ ಇತ್ತು. ಮರಿಗಳು ಹುಟ್ಟಿದ ೭ - ೮ ದಿನಗಳ ನಂತರ ಗೂಡು ಬಿಟ್ಟು ಹೊರಬರಲು ಶಕ್ತವಾಗಿರುತ್ತದೆ. ಒಂದೆರಡು ಫೋಟೋ ಕೂಡ ತೆಗೆದು. ಆದರೆ ಬಾಲ್ಕನಿಯನ್ನು, ಗೂಡನ್ನು ಅವು ಆಗಾಗಲೇ ಗಲೀಜು ಮಾಡಿ ಬಿಟ್ಟಿದ್ದರಿಂದ ಫೋಟೋಗಳು ಚೆನ್ನಾಗಿ ಬರಲಿಲ್ಲ. ತೆಗೆದ ಫೋಟೋಗಳನ್ನೂ ಶಿವೂ ಸರ್ ನೋಡಿದರೆ ನಕ್ಕು ಬಿಟ್ಟಾರು ಎ೦ದು ಆ ಕ್ಷಣ ಅನಿಸಿತ್ತು ಕೂಡ :) ಅಲ್ಲದೆ ಲ್ಯಾಪ್ ಟಾಪ್ ಕ್ರ್ಯಾಶ್ ಆಗಿದ್ದರಿಂದ ಈಗ ಆ ಫೋಟೋಗಳು ಕೂಡ ಇಲ್ಲ.
ಅ೦ತು ಮುಗಿಯಿತು ಈ ಪಾರಿವಾಳಗಳ ಸಹವಾಸ ಎ೦ದು ನೆಮ್ಮದಿ ತಂದುಕೊಳ್ಳುವ ಹಾಗಿರಲಿಲ್ಲ. ಯಾಕೆಂದರೆ ಕೆಲವೇ ದಿನಗಳಲ್ಲಿ ಮತ್ತೆರಡು ಮೊಟ್ಟೆಗಳು ಕಾಣಿಸಿದವು. ಮೊಟ್ಟೆಗಳು ಗೂಡಿನಲ್ಲಿ ಇದ್ದರೆ, ಮರಿ ಪಾರಿವಾಳ ಸ್ವಲ್ಪ ದೂರ ಕೂತಿರುತಿತ್ತು. ಇದೊಳ್ಳೆ ಗ್ರಹಚಾರ ಆಯಿತಲ್ಲ ಎ೦ದು ನನಗೆ ಅನಿಸಿತು. ಈ ಬಾರಿ ನನ್ನ ರೂಮಿ ಏನು ಆಕ್ಷೇಪಣೆ ಎತ್ತಲಿಲ್ಲ. ಓನರ್ ಕೇಳಿದರೆ ನಾನೇ ಉತ್ತರ ಕೊಡುತ್ತೇನೆ ಎ೦ದು ಮೊದಲೇ ಒಪ್ಪಿದ್ದರಿಂದ ಇರಬೇಕು.
ಆಮೇಲೆ ನಾನು ಕೂಡ ಅವುಗಳನ್ನು ಗಮನಿಸುವುದನ್ನು ಬಿಟ್ಟು ಬಿಟ್ಟೆ. ಮೊಟ್ಟೆಗಳನ್ನು ಇಡುವುದು, ಮರಿ ಆಗುವುದು ನಡೆದೇ ಇತ್ತು. ಬಹುಷಃ ಆ ಪಾರಿವಾಳಗಳು ತಮ್ಮ ಗೆಳೆಯ ಗೆಳತಿಯರಿಗೆಲ್ಲ ಹೇಳಿರಬೇಕು ಇಲ್ಲೊಂದು ಪಾರಿವಾಳ ಫ್ರೆಂಡ್ಲಿ ಮನೆ ಇದೆ, ಅಲ್ಲಿ ಮೊಟ್ಟೆ ಇಟ್ಟು ಮರಿ ಮಾಡಬಹುದು ಎ೦ದು. ಬಾಲ್ಕನಿಯಂತೂ ಗಲೀಜಾಗಿ ಕೆಟ್ಟದಾಗಿ ಕಾಣಿಸುತ್ತಿತ್ತು. ನನ್ನ ಸಲಿಗೆಯನ್ನು ದುರುಪಯೋಗ ಪಡಿಸಿಕೊಂಡ ಪಾರಿವಾಳಗಳ ಮೇಲೆ ನನಗೂ ಸಣ್ಣದಾಗಿ ಕೋಪ ಬರತೊಡಗಿತು.
ನಮ್ಮ ಅಗ್ರೀಮೆಂಟ್ ಮುಗಿದು  ನಾವು ಮನೆ ಖಾಲಿ ಮಾಡಿಹೋಗಬೇಕಾದ ದಿನಗಳು ಹತ್ತಿರ ಬರತೊಡಗಿತು. ನಾವು ಮನೆ ಖಾಲಿ ಮಾಡಿ ಹೋಗುತ್ತೇವೆ ಎ೦ದು ಮೊದಲೇ ಹೇಳಿದ್ದರಿ೦ದ ಮನೆ ಬ್ರೋಕರ್ ಆಗಾಗಲೇ ಮನೆಯನ್ನು ಬೇರೆಯವರಿಗೆ ತೋರಿಸಲು ಶುರು ಮಾಡಿದ್ದ. ಮನೆ ನೋಡಲು ಬ೦ದವರೆಲ್ಲಾ ಬಾಲ್ಕನಿಯ ಆವಾ೦ತರ ನೋಡಿ ಮುಖ ಒಂದು ರೀತಿ ಮಾಡಿಕೊಂಡು ಹೋಗುತ್ತಿದ್ದರು.


ಒ೦ದು ದಿನ ಬೆಳಗ್ಗೆ ಇದ್ದಕ್ಕಿದ್ದಂತೆ ಓನರ್ ಮಗಳು ರಿ೦ಕು ಸಿ೦ಗ್ ಮನೆಗೆ ಬ೦ದರು. ಬಾಗಿಲು ತೆಗೆದಿದ್ದು ನಾನು. ಆಗಷ್ಟೇ ನನ್ನ ರೂಮಿ ಎದ್ದು ಬಚ್ಚಲು ಮನೆಗೆ ಹೋಗಿದ್ದ. ರಿ೦ಕು ಒಳಗೆ ಬ೦ದವರೇ ನನ್ನ ರೂಮಿ ಎಲ್ಲಿ ಎ೦ದು ಕೇಳಿದರು. ಅವರಿಗೆ ನನಗೆ ಸರಿಯಾಗಿ ಹಿಂದಿ ಮಾತನಾಡಲು ಬರುವುದಿಲ್ಲ ಎ೦ದು ಗೊತ್ತಿತ್ತು. ನಾನು ಅವನು ಬಚ್ಚಲು ಮನೆಗೆ ಹೋಗಿದ್ದಾನೆ, ಸ್ವಲ್ಪ ಹೊತ್ತಿನಲ್ಲಿ ಬರುತ್ತಾನೆ ಎ೦ದೆ. ಅವರು ಹಾಗೆ ಮನೆಯನ್ನು ಗಮನಿಸುತ್ತಾ ಬಾಲ್ಕನಿಗೆ ಹೋದರು. ಬಾಲ್ಕನಿ ನೋಡಿದವರೇ ಅವರು ಹೌಹಾರಿದರು. 


"ಹೇ ಭಗವಾನ್... ಯೇ  ಸಬ್ ಕ್ಯಾ ಹೇ? ತುಮ್ ಲೋಗ್ ಸೋಚ್ತೆ ಹೋ ಕಿ ತುಮ್ ಜ೦ಗಲ್ ಮೇ ರೆಹ್ತೆ ಹೋ? ಯೇ ಚೀಸೇ ಕ್ಯಾ ಹೇ? ಯೇ ಪಂಚಿಯೋನ್ ಕೆ ಘೋಸ್ಲೆ, ಖಬೂತರ್, ಔರ್ ಉನ್ಕ ಮಲ್! ತುಮ್ ಲೋಗ್ ಸಚ್ಚೀ ಜ೦ಗಲ್ ಮೇ ರೆಹ್ತೆ ಹೋ! ಕಲ್ ಕಿಸಿ ಸಾಂಪ್ ಕೋ ಯಹಾ೦ ರೆಹ್ನೆ ದೋ!" (ಓ ದೇವರೇ... ಇವೆಲ್ಲಾ ಏನು? ನೀವು ಕಾಡಿನಲ್ಲಿ ವಾಸಿಸುತ್ತಿದ್ದೀರಿ ಅ೦ತ ಅ೦ದು ಕೊಂಡಿದ್ದೀರೇನು? ಈ ಪಾರಿವಾಳ, ಅದರ ಮರಿ ಹಕ್ಕಿಗಳು, ಅವುಗಳ ಮಲ! ನೀವು ನಿಜವಾಗಿಯೂ ಕಾಡಿನಲ್ಲೇ ಇದ್ದೀರಿ! ನಾಳೆ ಯಾವುದಾದರೂ ಹಾವು ಬ೦ದರೆ ಅದನ್ನು ಇರಲು ಬಿಡಿ.)


ಆಗಿದ್ದಿಷ್ಟು! ಮನೆ ನೋಡಲು ಬ೦ದ ಕೆಲವರಲ್ಲಿ ಮನೆ ಓಕೆ, ಆದರೆ ಬಾಲ್ಕನಿ ಕೆಟ್ಟದಾಗಿದೆ, ಅಲ್ಲಿ ಪಾರಿವಾಳಗಳ ಕುಟುಂಬವೇ ಇದೆ ಎ೦ದು ಕ೦ಪ್ಲೇ೦ಟ್ ಮಾಡಿದ್ದರು. ಅದಕ್ಕೆ ರಿ೦ಕು ಸ್ವತಃ ಪರಿಶೀಲಿಸಲು ಮನೆಗೆ ಬಂದಿದ್ದರು. ಅವರು ಬಯ್ಯುತ್ತಿರುವಾಗ ನನಗೆ ಏನು ಹೇಳಬೇಕು ಎ೦ಬುದು ತಿಳಿಯಲಿಲ್ಲ. ಒ೦ದು ದಿನದಲ್ಲಿ ಅವನ್ನೆಲ್ಲಾ ಸ್ವಚ್ಚ ಮಾಡುತ್ತೇನೆ ಎ೦ದು ಅವರಿಗೆ ಆಶ್ವಾಸನೆ ನೀಡಿದೆ. ಬಚ್ಚಲು ಮನೆಗೆ ಹೋದ ಐದು ನಿಮಿಷದಲ್ಲಿ ಹೊರಬರುವ ನನ್ನ ರೂಮಿ ಅವತ್ತು ಎಷ್ಟು ಹೊತ್ತಾದರೂ ಹೊರಗೆ ಬಂದಿರಲಿಲ್ಲ!


ರಿ೦ಕು ಹೋದ ಸ್ವಲ್ಪ ಹೊತ್ತಿನ ನ೦ತರ ಅವನು ಹೊರ ಬ೦ದ. ನಾನು ಸುಮ್ಮನೆ ಇದ್ದೆ. ಮೊದಲೇ ಹೇಳಿದ್ದೆನಲ್ಲ ಓನರ್ ಕೇಳಿದರೆ ಉತ್ತರಿಸುವ ಜವಾಬ್ದಾರಿ ನನ್ನದು ಎ೦ದು. ಹಾಗಾಗಿ ಅವನಿಗೆ ಏನು ಹೇಳಲು ಹೋಗಲಿಲ್ಲ. ಅವನೂ ಏನು ಕೇಳಲಿಲ್ಲ. ಸ್ವಲ್ಪ ಹೊತ್ತಿನ ನಂತರ ಅವನು ಅಮ್ಮನ ಜೊತೆ ಫೋನ್ ನಲ್ಲಿ ಮಾತಾಡುವುದು ಕೇಳಿಸಿತು. "ಹಾಂ.. ಓನರ್ ಬ೦ದು ಚೆನ್ನಾಗಿ ಬಯ್ದು ಹೋದರು... ನಾನು ಬಚ್ಚಲು ಮನೆಗೆ ಹೋಗಿದ್ದೆ ಅಷ್ಟೇ ಆಗ.. ಹಾಗಾಗಿ ಹೊರಬರಲು ನನಗೆ ಆಗಲಿಲ್ಲ. ಸುಧೇಶ್ ಮಾತಾಡ್ತಾ ಇದ್ದ.... "
ನಾನು ಬಾಲ್ಕನಿ ಶುಚಿ ಮಾಡಲು ಶುರು ಮಾಡಿದೆ!


ಉಪಸ೦ಹಾರ:


ಬ್ಲಾಗಿಗೆ ನಾಲ್ಕು ವರುಷ ತು೦ಬಿದ ಕಾರಣಕ್ಕೆ ಬ್ಲಾಗ್ ಅಂಗಳ ಗುಡಿಸಿ, ಈ ಸಣ್ಣ ರಂಗೋಲಿ ಇಡುವ ಪ್ರಯತ್ನ ಮಾಡಿದ್ದೇನೆ. ಚಿತ್ರಾ   ಅವರ ಧಾಟಿಯಲ್ಲೇ ಹೇಳುತ್ತಿದ್ದೇನೆ. ಆಗೀಗ ಮನೆಯನ್ನು ಶುಚಿ ಮಾಡಿ ರ೦ಗೊಲಿ ಹಾಕುವ ಪ್ರಯತ್ನ ಖಂಡಿತ ಮಾಡುತ್ತೇನೆ. ಕಾದಂಬರಿ ಬಿಡುಗಡೆಯ ನಂತರ ಬ್ಲಾಗ್ ಕಡೆ ತಲೆ ಹಾಕಿರಲೇ ಇಲ್ಲ. ಎಷ್ಟೋ ಬ್ಲಾಗ್ ಓದುವುದು ಬಾಕಿ ಇದೆ ಕೂಡ. ನಿಧಾನವಾಗಿ ಎಲ್ಲಾ ಬ್ಲಾಗ್ ಓದಬೇಕು ಅಂದುಕೊಂಡಿದ್ದೇನೆ.


ಹ್ಯಾಪಿ ಬ್ಲಾಗಿಂಗ್ :)