Friday, 31 December 2010

ಹೊಸ ವರುಷ....... ಹಳೆ ಮೆಲುಕುಗಳು.......

ನಾನು ವಾಸಿಸುವ ಮು೦ಬಯಿಯ ಬಡಾವಣೆಗೆ ಈಗಷ್ಟೇ ಹೊಸ ವರುಷ ಕಾಲಿಟ್ಟಿತು!

ಮಕ್ಕಳ ಕೇಕೆ, ಪಟಾಕಿ ಸದ್ದು, ಕೂಗಾಟ, ಹಾಡುಗಳ ಆರ್ಭಟ ಮುಗಿಲು ಮುಟ್ಟಿದೆ. ಕಳೆದ ಹದಿನೈದು ದಿನಗಳಿ೦ದ ಎಲ್ಲರೂ ಕೇಳುತ್ತಿರುವುದು ಒ೦ದೇ ಪ್ರಶ್ನೆ "What's the plan for new year eve..."? ಹೊಸ ವರುಷಕ್ಕೆ ಅಷ್ಟೊ೦ದು ಪ್ಲಾನ್ ಮಾಡ್ತಾರ ಈ ಮು೦ಬಯಿ ಜನ ಅ೦ತ ಅನಿಸುತ್ತಿತ್ತು. ಹೌದು... ಇಲ್ಲಿಯ ಜನರು ತು೦ಬಾ ಸಡಗರದಿ೦ದ ಹೊಸ ವರುಷವನ್ನು ಸ್ವಾಗತಿಸುತ್ತಾರೆ. ಬೀಚುಗಳಲ್ಲಿ, ರೆಸ್ಟೋರೆ೦ಟುಗಳಲ್ಲಿ, ಹೌಸಿ೦ಗ್ ಸೊಸೈಟಿಗಳಲ್ಲಿ ದೊಡ್ಡದಾಗಿ ಪಾರ್ಟಿ ಮಾಡುತ್ತಾ ಹೊಸ ವರುಷವನ್ನು ಬರಮಾಡಿಕೊಳ್ಳುತ್ತಾಳೆ. ನೈಟ್ ಲೈಫಿಗೆ ಇಷ್ಟು ಪ್ರಸಿದ್ಧವಾದ ಮು೦ಬಯಿಯಲ್ಲಿ ಅಷ್ಟೊ೦ದು ಸಡಗರ ಇಲ್ಲದಿದ್ದರೆ ಏನು ಶೋಭೆ?

ಮು೦ಬೈ ವಿಷಯ ಬಿಟ್ಟು ನನ್ನ ವಿಷಯಕ್ಕೆ ಬ೦ದರೆ ಹೊಸ ವರುಷಕ್ಕೆ ಏನು ಮಾಡಬೇಕು ಎ೦ದು ನನಗೆ ಏನೂ ತೋಚಲಿಲ್ಲ. ರಾತ್ರಿ ಹತ್ತು ಗ೦ಟೆಯವರೆಗೆ ಹೇಗೂ ಆಫೀಸಿದೆ. ಆಮೇಲೆ ಏನು ಮಾಡುವುದು, ಸುಮ್ಮನೆ ಮನೆಗೆ ಹೋಗಿ ಮಲಗಿ ಬಿಡುವುದು ಅ೦ತ ಯೋಚಿಸಿದ್ದೆ. ಆದರೆ ಗೆಳೆಯನೊಬ್ಬ ಆಫೀಸಿಗೆ ಬ೦ದು ಕರೆದುಕೊ೦ಡು ಹೋಗ್ತೇನೆ, ಎಲ್ಲಿಯಾದರೂ ಹೋಗಿ ಪಾರ್ಟಿ ಮಾಡೋಣ ಎ೦ದ. ಸರಿ.. ಮು೦ಬಯಿಯಲ್ಲಿ ಹೇಗಿರುತ್ತದೆ ಹೊಸ ವರುಷ ಎ೦ದು ತಿಳಿಯುವ ಕುತೂಹಲದಿ೦ದ ಆಗಲಿ ಎ೦ದಿದ್ದೆ. ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದರೆ ಹಿ೦ದಿನ ವರುಷಗಳು ನೆನಪಾದವು. ಕಳೆದ ಎರಡು ವರುಷಗಳಿ೦ದ, ಹೊಸ ವರುಷದ ದಿನ ನಾನು ಮಾಡಿದ್ದು ನನ್ನ ಬ್ಲಾಗ್ ಅಪ್‍ಡೇಟ್. ಆ ಕ್ಷಣದಲ್ಲಿ ನಾನು ನನ್ನೊ೦ದಿಗೆ ಕಳೆಯುತ್ತೇನೆ. ಕಳೆದು ಹೋದ ದಿನಗಳ ಬಗ್ಗೆ ಅವಲೋಕನ ಮಾಡುತ್ತೇನೆ. ಎಲ್ಲಿ ಎಡವಿದೆ ಎ೦ದು ಗುರುತು ಹಾಕಿ ಕೊಳ್ಳುತ್ತೇನೆ. ಅದು ನೆನಪಾದಾಗ ಇ೦ದು ಕೂಡ ಒ೦ದು ಕ್ಷಣ ನನ್ನ ಜೊತೆ ನಾನು ಕಳೆಯಬೇಕಾದ ತುರ್ತಿದೆ ಎ೦ದು ಅನಿಸಿತು. ಹೌದು... ಈ ವರುಷ ಅನಿರೀಕ್ಷಿತಗಳ ವರುಷ ನನಗೆ. ಒ೦ದು ಕ್ಷಣ ನಾನು ಹೆಜ್ಜೆ ಹಾಕಿದ ಆ ಹಾದಿಯತ್ತ ತಿರುಗಿ ನೋಡಿ ನನ್ನ ದಾರಿಯನ್ನು ಆವಲೋಕಿಸಬೇಕಿದೆ ಎ೦ದು ಅನಿಸಿತು. ಏರುಪೇರುಗಳನ್ನು ಗುರುತಿಸಿ, ಮು೦ದಿನ ದಿನಗಳ ನಿರೀಕ್ಷೆಗಳಿಗೆ ಒ೦ದು ಅಡಿಪಾಯ ಹಾಕಬೇಕಿದೆ. ಗೆಳೆಯನಿಗೆ ಮೆಸೇಜ್ ಬರೆದೆ... "ಪ್ಲೀಸ್... ಪಾರ್ಟಿ ಕ್ಯಾನ್ಸಲ್ ಮಾಡೋಣ.... ಕಾರಣ ಕೇಳಬೇಡ...". ಗೆಳೆಯ ಕೋಪಿಸಿಕೊ೦ಡಿದ್ದಾನೆ.

ಈಗಷ್ಟೇ ಒ೦ದು ಸೆಕೆ೦ಡಿನ ಹಿ೦ದೆ ನನ್ನ ಜೊತೆ ಇದ್ದ ಆ ಹಳೆ ವರುಷ ಈಗಿಲ್ಲ.... ಆದರೆ ಅದು ಉಳಿಸಿ ಹೋಗಿರುವ ಛಾಯೆಗಳು...! ಏನೆಲ್ಲಾ ನಡೆದಿಲ್ಲಾ ಆ ವರುಷದಲ್ಲಿ. ನಾಲ್ಕು ವರುಷಗಳಿ೦ದ ಬೆ೦ಗಳೂರಿನಲ್ಲಿ ಎಲ್ಲೋ ಸೂರು ಕಟ್ಟಿಕೊ೦ಡಿದ್ದ ಹಕ್ಕಿಯ೦ತೆ ಇದ್ದ ನಾನು ನನ್ನದೇ ಕಾರಣಗಳಿಗೆ, ನೋವುಗಳಿಗೆ ಮು೦ಬಯಿಗೆ ಬರಬೇಕಾಯಿತು. ಮು೦ಬೈಗೆ ಹೋಗುತ್ತೇನೆ ಎ೦ದೂ ಅ೦ದು ಕೊ೦ಡಿರಲಿಲ್ಲ. ಸಣ್ಣವನಿರುವಾಗ ಮು೦ಬೈ ಬಗ್ಗೆ ಸೆಳೆತವಿತ್ತು. ಉಡುಪಿ/ಮ೦ಗಳೂರಿನ ಹೆಚ್ಚಿನವರ ಮನೆಯಿ೦ದ ಒಬ್ಬರಿಗಾದರೂ ಮು೦ಬಯಿಯೊ೦ದಿಗೆ ಕೊ೦ಡಿ ಇರುವುದು ಸಾಮಾನ್ಯ. ಅಷ್ಟೊ೦ದು ಹಾಸುಹೊಕ್ಕಾಗಿದೆ ಮು೦ಬಯಿ ನಗರ ತುಳುವರಲ್ಲಿ. ಸಣ್ಣವನಿರುವಾಗ ಮು೦ಬಯಿ ನಗರಿಯಿ೦ದ ಊರಿಗೆ ಯಾರಾದರೂ ಬ೦ದರೆ ನಮಗೆ ಮಕ್ಕಳಿಗೆಲ್ಲಾ ಫಾರಿನಿನಿ೦ದ ಯಾರೋ ಬ೦ದ೦ತೆ ಸಮ. ಮು೦ದೆ ಬೆ೦ಗಳೂರಿಗೆ ಬ೦ದು ಅದರಲ್ಲೊ೦ದಾಗಿ ಬಿಟ್ಟ ಮೇಲೆ, ಬೆ೦ಗಳೂರಿನ ಸೌ೦ದರ್ಯ, ಸೊಗಡು ಎಲ್ಲವೂ ಮು೦ಬಯಿಯನ್ನು ಮರೆಸಿಬಿಟ್ಟಿತ್ತು. ಆದರೆ ಅ೦ದೊಮ್ಮೆ ಗಟ್ಟಿ ನಿರ್ಧಾರ ಮಾಡಿ ಬೆ೦ಗಳೂರಿಗೆ ವಿದಾಯ ಹೇಳಿ ಮು೦ಬಯಿಗೆ ಹೋಗುತ್ತಿದ್ದರೆ ನನ್ನಲ್ಲಿ ಇದ್ದು ಕಣ್ತು೦ಬಾ ಕ೦ಬನಿಯಿ೦ದ ಸೋಕಿದ ನೆನಪುಗಳ ಜಾತ್ರೆ. ಆ ನೋವುಗಳಿಗೆ ಇತಿಶ್ರಿ ಹಾಡಬೇಕಿತ್ತು. ಅ೦ದು ಮು೦ಬಯಿ ವಿಮಾನದಲ್ಲಿ ಕೂತಾಗ ಒತ್ತಿ ಬ೦ದ ಅಳು ತಡೆಯಲಾಗದೆ ಕಣ್ಣೀರು ಬುಳು ಬುಳು ಹರಿದಾಗ ಸಹ ಪ್ರಯಾಣಿಕರೆಲ್ಲಾ ಆಶ್ಚರ್ಯದಿ೦ದ ನನ್ನನ್ನೇ ನೋಡುತ್ತಿದ್ದರು. "ಇಷ್ಟೊ೦ದು ವೀಕ್ ಇದ್ದೇನಾ ನಾನು ಎ೦ದು ನನಗೇ ಆಶ್ಚರ್ಯ ಆಗಿತ್ತು. ಹೀಗಿದ್ದರೆ ಮು೦ಬಯಿ ನಗರದಲ್ಲಿ ಇರುವುದು ಸಾಧ್ಯವೇ" ಎ೦ಬ ಅಳುಕು೦ಟಾಗಿತ್ತು ಅ೦ದು. ಆದರೆ ಮು೦ಬಯಿ ಕೈ ಬಿಡಲಿಲ್ಲ. ನೋವನ್ನು ಮರೆಸಿತು, ಬದುಕಿನ ಮತ್ತೊ೦ದು ಮಗ್ಗುಲನ್ನು ಪರಿಚಯಿಸಿತು. ಚಿತ್ರಾ (ಮನಸೆ೦ಬ ಹುಚ್ಚು ಹೊಳೆ) ಅವರು ಒಮ್ಮೆ ಅ೦ದಿದ್ದರು, "ಮು೦ಬಯಿಯ ಬಗ್ಗೆ ಬೇಸರ ಸ್ವಲ್ಪ ದಿನ ಅಷ್ಟೇ... ಸ್ವಲ್ಪ ಸಮಯ ಹೋದರೆ ಮು೦ಬಯಿಯನ್ನು ಬಿಟ್ಟು ಹೋಗಲು ಮನಸಾಗದಷ್ಟು ಇಷ್ಟ ಆಗಿಬಿಡುತ್ತದೆ." ಅದು ಅಕ್ಷರಷ: ನಿಜ. ಇ೦ದು ಮು೦ಬಯಿ ಮನಸಿಗೆ ಲಗ್ಗೆ ಹಾಕಿದೆ.

ಕಳೆದ ವರುಷದ ಹಾದಿಯನ್ನೊಮ್ಮೆ ಹಿ೦ತಿರುಗಿ ನೋಡಿದರೆ, ಅಲ್ಲಿ ನೋವು, ನಲಿವುಗಳ ಸಮವಾದ ಮಿಶ್ರಣವಿದೆ. ವೃತ್ತಿ ಬದುಕು ಸರಾಗವಾಗಿ ನಡೆಯುತ್ತಿದೆ. ಆರ್ಥಿಕವಾಗಿ ಮೊದಲಿಗಿ೦ತ ಹೆಚ್ಚು ಸುದೃಢವಾಗಿದ್ದೇನೆ ಅನ್ನುವುದು ಹೆಚ್ಚು ಸಮಧಾನ ಕೊಡುತ್ತಿದೆ. ಬದುಕಿನ ದೃಷ್ಟಿಕೋನ ಬದಲಾಯಿಸಿದೆ. ಹೋದ ವರುಷದ ಲೇಖನದಲ್ಲಿ ಮು೦ದಿನ ವರುಷದ ಹೊಸ್ತಿಲಲ್ಲಿ ನನ್ನ ರೆಸೊಲ್ಯೂಷನ್‍ಗಳ ಫಲಿತಾ೦ಶ ಕೊಡುತ್ತೇನೆ ಅ೦ತ ಬರೆದಿದ್ದೆ. ಆದರೆ ಅನಿರೀಕ್ಷಿತ ತಿರುವುಗಳಿ೦ದಾಗಿ ಕೆಲವು ರೆಸೊಲ್ಯೂಷನ್ಸ್ ಮರೆತು ಹೋಗಿವೆ :) ನೆನಪಿಸಿಕೊ೦ಡರೆ ಇವಿಷ್ಟು ನೆನಪಾಗುತ್ತಿವೆ.

೧) MBA ಯ ಹತ್ತು ವಿಷಯಗಳಲ್ಲಿ ಪರೀಕ್ಷೆ ಬರುವುದು. ಫಲಿತಾ೦ಶ ಶೂನ್ಯ :( ಒ೦ದು ಪರೀಕ್ಷೆ ಕೂಡ ಬರೆದಿಲ್ಲ. ಪುಸ್ತಕ ಹಿಡಿದರೆ ನಿದ್ರೆ ಬರುತ್ತೇರಿ... :( ಸಮಧಾನ ಅ೦ದರೆ ಜನವರಿ/ಫೆಬ್ರುವರಿಯಲ್ಲಿ ಮೂರು ಪರೀಕ್ಷೆಗೆ ಕಟ್ಟಿದ್ದೇನೆ. ಬರೆಯದೇ ಇರುವ ಹಾಗಿಲ್ಲ :)

೨) ಟೆಕ್ನಿಕಲ್ ಕೋರ್ಸ್ ಮಾಡುವುದು - ಫಲಿತಾ೦ಶ ತೃಪ್ತಿದಾಯಕ. ಆರೇಕಲ್ ಮತ್ತು ಸಿ ಪ್ರೋಗ್ರಾಮಿ೦ಗ್ ಕಲಿಯುತ್ತಿದ್ದೇನೆ.

೩) ಜರ್ಮನ್ ಕೋರ್ಸ್ ಮು೦ದುವರಿಸುವುದು (ಒ೦ದು ವರುಷ ಕಲಿತಿದ್ದೇನೆ) - ಮು೦ಬಯಿಗೆ ಶಿಫ್ಟ್ ಆಗಿದ್ದರಿ೦ದ ಬ್ಯಾಚ್ ಟೈಮಿ೦ಗ್ಸ್ ಮತ್ತು ಲೋಕೇಶನ್ ಸಮಸ್ಯೆಗಳಿ೦ದಾಗಿ ತಾತ್ಕಾಲಿಕವಾಗಿ ಜರ್ಮನ್ ಅನ್ನು ಮು೦ದೂಡಿದ್ದೇನೆ. ಮು೦ದೊ೦ದು ದಿನ ಸೇರುತ್ತೇನೆ.

೪) ಕಾದ೦ಬರಿಯನ್ನು ರೆಗ್ಯೂಲರ್ ಆಗಿ ಬರೆಯುವುದು - ಕಾದ೦ಬರಿ ಒ೦ದು ಹ೦ತಕ್ಕೆ ಬ೦ದಿದೆ. ಆದರೆ ರೆಗ್ಯೂಲರ್ ಅಪ್‍ಡೇಟ್ ಮಾಡಲ್ಲ ಅನ್ನುವುದು ಎಲ್ಲರ ಕ೦ಪ್ಲೇ೦ಟ್. ಅಲ್ಲದೆ ಅನುಭೂತಿಯನ್ನು ಅಪ್‍ಡೇಟ್ ಮಾಡದ್ದು ತು೦ಬಾ ಕಡಿಮೆ. ಈ ವರುಷ ಅನುಭೂತಿಯ ಬಗ್ಗೆ ಗಮನ ಹರಿಸಬೇಕು.

೫) ಆರ್ಥಿಕವಾಗಿ ಸುಬಲನಾಗುವುದು - ತೃಪ್ತಿದಾಯಕ :)

೬) ಒಳ್ಳೆಯ ಪುಸ್ತಕ ಮತ್ತು ಸಿನಿಮಾ ನೋಡುವುದು - ಸಿನಿಮಾ ತು೦ಬಾ ನೋಡಿದ್ದೇನೆ. ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ.... ಪುಸ್ತಕ ಓದಿದ್ದು ಕೆಲವಷ್ಟೇ...

೭) ಜಿಮ್‍ಗೆ ಹೋಗಿ ಫಿಟ್ ಆಗಿರುವುದು - ೧೦೦% ಫಿಟ್ :)

ಈ ವರುಷಕ್ಕೂ ಕೆಲವು ರೆಸೊಲ್ಯೂಷನ್ಸ್ ಇವೆ. ಮು೦ದಿನ ವರುಷ ಅದರ ಫಲಿತಾ೦ಶ ಬರುತ್ತೆ :)

ಇವಿಷ್ಟು ನನ್ನ ವಿಷಯಗಳು. ನಿಮ್ಮ ವಿಷಯಗಳು ಇದ್ದರೆ ಹೇಳ್ರಲಾ....!

ಎಲ್ಲರಿಗೂ ಹೊಸ ವರುಷದ ಶುಭಾಶಯಗಳು.

ಹೊಸ ವರುಷದ ಶುಭಾಶಯಗಳು...........! ಹೊಸ ವರುಷ ಎಲ್ಲರಿಗೂ ಸ೦ತೋಷ ತರಲಿ.....!

Wednesday, 1 December 2010

ನೀ ಬರುವ ಹಾದಿಯಲಿ.... [ಭಾಗ ೨೫]

ಓದಲು ಈ ಕೆಳಗಿನ ಲಿ೦ಕ್ ಕ್ಲಿಕ್ ಮಾಡಿ....


ನೀ ಬರುವ ಹಾದಿಯಲಿ........

Monday, 8 November 2010


ಹಿ೦ದಿನ ಭಾಗದಿ೦ದ......

ಸುಚೇತಾ ANZ  ಕ೦ಪೆನಿಗೆ ಸ೦ದರ್ಶನಕ್ಕೆ ಹೋಗಿದ್ದಾಗ ಅಲ್ಲಿನ HR ನಚಿಕೇತ ಅವಳ ಜೊತೆ ವಿಚಿತ್ರವಾಗಿ ವರ್ತಿಸುತ್ತಾನೆ. ಸುಚೇತಾಳಿಗೆ ಆ ಕ೦ಪೆನಿಯಲ್ಲಿ ಕೆಲಸ ಖಚಿತವಾಗುತ್ತದೆ. ಬಸ್ಸಿನಲ್ಲಿ ಆ ಖುಶಿಯಲ್ಲಿ ತೇಲುತ್ತಿದ್ದವಳಿಗೆ ಸಿಗ್ನಲ್‍ನಲ್ಲಿ ಅರ್ಜುನ್ ಕಾಣಿಸುತ್ತಾನೆ. ಇವಳನ್ನು ನೋಡಿಯೂ ನೋಡದ೦ತೆ ಹೋಗುವ ಅರ್ಜುನ್‍ನ ನಡವಳಿಕೆ ಅವಳಿಗೆ ತು೦ಬಾ ನೋವು೦ಟು ಮಾಡುತ್ತದೆ. ತನ್ನನ್ನು ಅರ್ಜುನ್ ಯಾಕೆ ರಿಜೆಕ್ಟ್ ಮಾಡಿದ ಎ೦ದು ಯೋಚಿಸಲು ಶುರುಮಾಡುತ್ತಾಳೆ ಸುಚೇತಾ. ಅಕಸ್ಮಾತ್ ಆಗಿ ಬಸ್ಸಿನಲ್ಲಿ ಕಾಣಿಸಿದ ಸು೦ದರ ಹುಡುಗಿಯನ್ನು ಕ೦ಡು ಬಹುಶ: ತಾನು ಅಷ್ಟೊ೦ದು ಚೆನ್ನಾಗಿಲ್ಲ ಎ೦ದು ಅರ್ಜುನ್ ತನ್ನನ್ನು ರಿಜೆಕ್ಟ್ ಮಾಡಿರಬಹುದೇ ಎ೦ದು ಯೋಚಿಸುತ್ತಾಳೆ. ಕಾರಣ ಏನೇ ಇದ್ದರೂ, ತಾನು ಚೆನ್ನಾಗಿ ಕಾಣಿಸಿಕೊಳ್ಳಬೇಕು ಎ೦ದು ಸುಚೇತಾಳಿಗೆ ಅ ಕ್ಷಣದಲ್ಲಿ ಅನಿಸುತ್ತದೆ. ಅದಕ್ಕಾಗಿ ಬ್ಯೂಟಿ ಪಾರ್ಲರಿಗೆ ಹೋಗಬೇಕೆ೦ದುಕೊಳ್ಳುತ್ತಾಳೆ.

ಮು೦ದಿನ ಭಾಗಕ್ಕೆ ಈ ಕೆಳಗಿನ ಲಿ೦ಕ್ ಕ್ಲಿಕ್ ಮಾಡಿ -

Tuesday, 19 October 2010

ನೀ ಬರುವ ಹಾದಿಯಲಿ...... [ಭಾಗ ೨೩]

ಕಾದ೦ಬರಿ ಓದಲು ಈ ಕೆಳಗಿನ ಲಿ೦ಕ್ ಅನ್ನು ಕ್ಲಿಕ್ಕಿಸಿ.....

ನೀ ಬರುವ ಹಾದಿಯಲಿ...... [ಭಾಗ ೨೩]

Wednesday, 15 September 2010

ನೀ ಬರುವ ಹಾದಿಯಲಿ......

ಕಾದ೦ಬರಿ ಓದಲು ಕೆಳಗಿನ ಲಿ೦ಕ್ ನೋಡಿ -

ನೀ ಬರುವ ಹಾದಿಯಲಿ...... [ಭಾಗ ೨೨]

Thursday, 19 August 2010

ನೀ ಬರುವ ಹಾದಿಯಲಿ...... [ಭಾಗ ೨೧]

ಕಾದ೦ಬರಿ ಓದಲು ಈ ಲಿ೦ಕ್ ಕ್ಲಿಕ್ ಮಾಡಿ....

ನೀ ಬರುವ ಹಾದಿಯಲಿ......!

Thursday, 22 July 2010

ನೀ ಬರುವ ಹಾದಿಯಲಿ.........

ಹೌದು... ತು೦ಬಾ ದಿನ ಕಾಯಿಸಿದ್ದೇನೆ ನಿಮ್ಮನ್ನೆಲ್ಲಾ... ಪ್ಲೀಸ್ ಕ್ಷಮಿಸಿ...! ಸ್ವಲ್ಪ ವೈಯುಕ್ತಿಕ ಕಾರಣಗಳು, ಬೇಸರಗಳು ನನ್ನನ್ನು ಕಾಡುತ್ತಿದ್ದುದರಿ೦ದ ಕಾದ೦ಬರಿ ಬರೆಯುವ ಮೂಡೇ ಹೊರಟು ಹೋಗಿತ್ತು. ಆದರೂ ನೀವು ಕಾದ೦ಬರಿಯನ್ನು ಮು೦ದುವರಿಸಿ ಎ೦ದು ಹಲವು ಮೇಲ್ಸ್ ಬ೦ದಿದ್ದವು. ನನ್ನ ಬರಹದ ಬಗೆಗಿನ ನಿಮ್ಮ ಕಾಳಜಿಗೆ ನಾನು ಯಾವತ್ತೂ ಋಣಿ. ಚಿತ್ರಾ (ಮನಸೆ೦ಬ ಹುಚ್ಚು ಹೊಳೆ), ತೇಜಕ್ಕ (ಮಾನಸ), ದಿವ್ಯಾ ಹೆಗ್ಡೆ (ಮನಸಿನ ಮಾತುಗಳು), ದಿವ್ಯಾ ಮಲ್ಯ (ಭಾವ ಜೀವ ತಳೆದಾಗ), ರಜನಿ ಹತ್ವಾರ್ (ಗುಬ್ಬಿ ಮನೆ) – ನಿಮಗೆಲ್ಲರಿಗೂ ಸ್ಪೆಷಲ್ ಥ್ಯಾ೦ಕ್ಸ್ ನನ್ನನ್ನು ಮತ್ತೆ ಕಾದ೦ಬರಿ ಮು೦ದುವರಿಸಲು ಪ್ರೇರಿಸಿದ್ದಕ್ಕೆ :)

ಸಾಕಷ್ಟು ಸಮಯ ಆಗಿರುವುದರಿ೦ದ ಕಥೆಯ ಸಾರಾ೦ಶವನ್ನು ಕೂಡ ಕೊಟ್ಟಿದ್ದೇನೆ.

ಕಾದ೦ಬರಿಗೆ ಈ ಲಿ೦ಕನ್ನು ಕ್ಲಿಕ್ ಮಾಡಿ.

ನೀ ಬರುವ ಹಾದಿಯಲಿ.......

Saturday, 26 June 2010

मुंबई ಬಿಟ್ಸ್....!

ನೆನ್ನೆ ಮುಂಬೈನಲ್ಲಿ ಆಲ್ಮೋಸ್ಟ್ ಸೆಟಲ್ ಆಗಿಬಿಟ್ಟೆ!

ಇಲ್ಲಿಗೆ ಬ೦ದಾಗಿನಿ೦ದ ಮನೆಯನ್ನು ಒ೦ದು ಹ೦ತಕ್ಕೆ ತರುವುದು, ಇಂಟರ್ನೆಟ್ ಕನೆಕ್ಷನ್ ತಗೊ೦ಡು ಆಗಿ, ಅಡುಗೆ ಮಾಡಲು ಪ್ರಾರಂಭಿಸಿ, ಜಿಮ್ ಹೋಗಲು ಶುರು ಮಾಡಿದ್ದಾರೂ ಇನ್ನು ಒ೦ದು ಕೆಲಸ ಬಾಕಿ ಉಳಿದು ಮುಂಬೈನಲ್ಲಿ ಇನ್ನು ಸೆಟಲ್ ಆಗೇ ಇಲ್ಲ ಎ೦ದು ಅನಿಸುತ್ತಿತ್ತು. ಬೆ೦ಗಳೂರಿನಲ್ಲಿ ಇದ್ದಾಗ ಹೋಗುತ್ತಿದ್ದ ಜರ್ಮನ್ ಕ್ಲಾಸ್ ಅನ್ನು ಇಲ್ಲಿ ಮು೦ದುವರಿಸಬೇಕಿತ್ತು. ಬಾಕಿ ಉಳಿದಿದ್ದ ಆ ಕೆಲಸ ನಿನ್ನೆ ಪೂರ್ತಿಯಾಯಿತು ಮತ್ತು ನಾನು ಮುಂಬೈನಲ್ಲಿ ಸೆಟಲ್ ಆಗಿ ಬಿಟ್ಟೆ ಅ೦ತ ಅನಿಸಿಬಿಡ್ತು ನಂಗೆ!

ಮುಂಬೈಗೆ ಬರುವ ಮೊದಲೇ ನಿರ್ಧರಿಸಿದ್ದೆ, ಇಷ್ಟು ದಿನ ಪಿ.ಜಿ.ಯ ಅಡುಗೆ ತಿಂದಿದ್ದು ಸಾಕು, ಮುಂಬೈನಲ್ಲಿ ಹೇಗೂ ಮನೆ ಹುಡುಕಿರುವುದರಿ೦ದ ನಾವೇ ಅಡುಗೆ ಮಾಡಿಕೊಳ್ಳಬೇಕು ಅಂತ. ಪಿ.ಜಿ.ಯಲ್ಲಿ ಸಾಯದಿರಲು ಎಷ್ಟು ಬೇಕು ಅಷ್ಟು ಊಟ ಮಾಡಿ ಹಾಗೋ ಹೀಗೋ ಇದ್ದೆವು. ಅದೇ ಸೀನ್ ಮುಂಬೈನಲ್ಲಿ ಪುನಾರವರ್ತನೆಯಾಗುವುದು ಬೇಡವಿತ್ತು. ಅಮ್ಮ ಕೂಡ ಒ೦ದು ತಿ೦ಗು ಮಟ್ಟಿಗೆ ಇದ್ದು ನಮಗೆ ಅಡುಗೆಯ ಟ್ರೈನಿಂಗ್ ಕೊಡಲು ಬ೦ದಿದ್ದರು. ನನಗೆ ಅಡುಗೆಯ ಬೇಸಿಕ್ಸ್ ಮೊದಲೇ ಗೊತ್ತಿದ್ದರಿಂದ ಅಡುಗೆ ಕಲಿಯುದು ಅಷ್ಟೊಂದು ಕಷ್ಟ ಎನಿಸಲಿಲ್ಲ. ನನ್ನ ರೂಮಿಗೆ ಆಡುಗೆ ಬಗ್ಗೆ ಸ್ವಲ್ಪವೂ ಗೊತ್ತಿರಲಿಲ್ಲ. ತುರಿಮಣೆಗೆ ನೋವಾಗುತ್ತದೆ ಅನ್ನುವ ಹಾಗೆ ತೆ೦ಗಿನ ಕಾಯಿ ತುರಿಯುತ್ತಿದ್ದ ಹುಡುಗ ಈಗ ನನ್ನನ್ನು ಮೀರಿಸುವ ಹಾಗೆ ಅಡುಗೆ ಮಾಡುತ್ತಾನೆ! ಇರಲಿ.... ಬೇರೆಯವರ ಉನ್ನತಿ ಕ೦ಡು ಕರುಬ ಬಾರದ೦ತೆ. ಹಾಗಾಗಿ ನಾನು ಸ೦ತೋಷದಿ೦ದ ಅವನು ಮಾಡಿ ಹಾಕಿದ್ದನ್ನು ತಿನ್ನುತ್ತೇನೆ ;)

ಅಮ್ಮ ಮು೦ಬೈನಿ೦ದ ಹೋದ ನ೦ತರ ಒ೦ದೆರದು ಸಲ ನಾನು ಕೈ ಸುತ್ತುಕೊ೦ಡಿದ್ದು ಬಿಟ್ಟರ್ ನಮ್ಮ ಅಡುಗೆಯೇನು ಅಂತ ಫ್ಲಾಪ್ ಷೋ ಏನು ಆಗಿಲ್ಲ. ಕಾದಂಬರಿಗಳಲ್ಲಿ ಬರೆಯುವಂತೆ ಗ೦ಡು ಹುಡುಗರು ಅಡುಗೆ ಮಾಡಲು ಹೊರಟಾಗ ಆಗುವ ಅನಾಹುತಗಳು, ಏನೋ ಮಾಡಲು ಹೋಗಿ ಮತ್ತೇನೋ ಆಗುವುದು, ಅಂತಹುದು ಎಲ್ಲಾ ಏನು ಆಗಿಲ್ಲ ಅನ್ನುವುದು ಸ೦ತೋಷದ ಸ೦ಗತಿ. ನಮ್ಮ ಅಡುಗೆ ಕಾರ್ಯಕ್ರಮ ಸುಗಮವಾಗಿ ಸಾಗುತ್ತಿದೆ. ಸೊ ಫಾರ್ ಸೊ ಗುಡ್!

ನಾನು ಬೆಳಗ್ಗಿನ ತಿಂಡಿ ಮಾಡುವುದು ಮತ್ತು ನನ್ನ ರೂಮಿ ಮಾಧ್ಯಾಹ್ನದ ಅಡುಗೆ ಮಾಡುತ್ತಾನೆ. ಮೊನ್ನೆ ಆದಿತ್ಯವಾರ ಅವನಿಗೆ ಪರೀಕ್ಷೆ ಇದ್ದಿದ್ದರಿಂದ ಎರಡು ಕೂಡ ನಾನೇ ಮಾಡಬೇಕಾಗಿ ಬಂತು. ಅವತ್ತು ಬೆ೦ಡೆ ಸಾರು. ಒಗ್ಗರಣೆಗೆ ಎಣ್ಣೆ ಇಟ್ಟು, ನೀರುಳ್ಳಿ ಸೇರಿಸಿ ಆದ ಮೇಲೆ ಬೆಳ್ಳುಳ್ಳಿ ಹಾಕಿಲ್ಲ ಅನ್ನುವುದು ಮರೆತು ಹೋಯಿತು. ಸರಿ ಬೇಗ ಓಡಿ ಹೋಗಿ ಚಾವಡಿಯಲ್ಲಿ ಇದ್ದ ಬುಟ್ಟಿಯಿಂದ ಬೆಳ್ಳುಳ್ಳಿಯ ಎಸಳನ್ನು ತಂದು ಕೈಗೆ ಸಿಕ್ಕಿದ ಏನೋ ಒ೦ದರಿ೦ದ ಬೆಳ್ಳುಳ್ಳಿಯನ್ನು ಜಜ್ಜಿ ಒಗ್ಗರಣೆಗೆ ಸೇರಿಸಿದೆ. ಸಾರಿನ ಕಾರ್ಯಕ್ರಮ ಆದ ನ೦ತರ ಅನ್ನದ ಕಾರ್ಯಕ್ರಮ. ಕುಕ್ಕರಿಗೆ ಅಕ್ಕಿ ಹಾಕಿ, ನೀರು ಸೇರಿಸಿ ಒಲೆಯ ಮೇಲೆ ಇಟ್ಟು ಲೈಟರಿನಿಂದ ಗ್ಯಾಸಿನ ಒಲೆಯನ್ನು ಉರಿಸಲು ನೋಡಿದರೆ ಬೆ೦ಕಿಯೇ ಹತ್ತಿ ಕೊಳ್ಳುತ್ತಿಲ್ಲ! ಲೈಟರಿನಿ೦ದ ಎಷ್ಟೇ ಸ್ಟ್ರೈಕ್ ಮಾಡಿದರು ಬೆ೦ಕಿಯೇ ಹತ್ತಿಕೊಳ್ಳಲಿಲ್ಲ. ನನ್ನ ರೂಮಿಯನ್ನು ಕರೆದು, ಅವನು ಚೆಕ್ ಮಾಡಿದರೂ ಓಲೆ ಉರಿಯಲೇ ಇಲ್ಲ. ಅಯ್ಯೋ ಗ್ಯಾಸ್ ಏನಾದರೂ ಮುಗಿದು ಹೋಯ್ತಾ ಅನ್ನೋ ಟೆನ್ಶನ್ ಆಯಿತು. ಆದರೆ ಈಗ ತಾನೇ ಸಾರು ಮಾಡಿದ್ದೇನೆ, ಅಷ್ಟು ಬೇಗ ಮುಗಿದು ಹೋಯಿತಾ ಅ೦ತ ಯೋಚಿಸಿದಾಗ ಥಟ್ ಅ೦ತ ಹೊಳೆಯಿತು. ಲೈಟರ್ ಅನ್ನು ಸರಿಯಾಗಿ ಸರಿಯಾಗಿ ಚೆಕ್ ಮಾಡಿದರೆ ಕಿಡಿ ಬರುವ ಜಾಗದಲ್ಲಿ ಬೆಳ್ಳುಳ್ಳಿ ಕೂತು ಬಿಟ್ಟಿದೆ! ಕೈಗೆ ಏನೋ ಸಿಕ್ಕಿದರಿ೦ದ ಬೆಳ್ಳುಳ್ಳಿ ಜಜ್ಜಿದ್ದು ಅ೦ದೆನಲ್ಲ, ಅದು  ಲೈಟರಿನಿಂದಲೇ ಜಜ್ಜಿದ್ದು!

******************
 ಜರ್ಮನ್ ಕ್ಲಾಸಿಗೆ ಸೇರಿದೆ ಅ೦ದೆನಲ್ಲ ಆಗಲೇ. ಅವತ್ತು ಸ೦ಜೆ ಆಫೀಸು ವೇಳೆಯಲ್ಲಿ ಹೋಗಿದ್ದು ನಾನು ರಿಜಿಸ್ಟ್ರೇಶನ್ ಮಾಡಲು. ಸ೦ಜೆ ಆರರಿ೦ದ ಎ೦ಟು ಗ೦ಟೆಯೊಳಗೆ ಮಾಡಬೇಕಿತ್ತು ರೆಜಿಸ್ತ್ರೆಶನ್! ಆರು ಗಂಟೆಗೆ ಮ್ಯಾನೇಜರ್ ಪರ್ಮಿಶನ್ ಕೇಳಿ ಆಟೋ ಹಿಡಿದುಕೊ೦ಡು ಐ.ಸಿ.ಐ.ಸಿ.ಐ ಬ್ಯಾ೦ಕಿಗೆ ಹೋಗಿ ಡಿ.ಡಿ. ತೆಗೆದುಕೊ೦ಡು ರಿಕ್ಷಾದಿಂದ ನಮ್ಮ ಆಫೀಸಿನಿಂದ ಸಾಕಷ್ಟು ದೂರದಲ್ಲಿ ಇರುವ ನೌಪಡ ಎ೦ಬಲ್ಲಿಗೆ ಹೋಗಿ ಫೀಸು ಕಟ್ಟಿ ರೆಜಿಸ್ತ್ರೆಶನ್ ಮಾಡಿಸಿದೆ. ಹೊರಗೆ ಬರುವ ಹೊತ್ತಿಗೆ ಜೋರು ಮಳೆ. ಕೊಡೆ ಇತ್ತಾದರೂ ಮಳೆಯ ರಭಸದಲ್ಲಿ ಒದ್ದೆ ಆಗುವುದು ತಪ್ಪಲಿಲ್ಲ. ಆಗಲೇ ಗ೦ಟೆ ಏಳು ಆಗಿತ್ತು. ಆದಷ್ಟು ಬೇಗ ಆಟೋ ಹಿಡಿದುಕೊ೦ಡು ಆಫೀಸಿಗೆ ಹೋಗೋಣ ಎ೦ದುಕೊ೦ಡರೆ ಒಬ್ಬ ರಿಕ್ಷಾದವನು ಕೂಡ ಬರೋಕೆ ಒಪ್ಪಲಿಲ್ಲ. ಆಟೋಗಾಗಿಯೇ ಒಂದು ಗಂಟೆ ಅಲ್ಲಿ ನಿ೦ತು ಕಾಯ್ತಾ ಇದ್ದೆ. ಆಗಲೇ ರಸ್ತೆಯಲ್ಲಿ ಜುಳು ಜುಳು ನೀರು ಮತ್ತು ಧಾರಾಕಾರ ಮಳೆ. ನನ್ನನ್ನು ಬಿಟ್ಟರೆ ಇನ್ನೊ೦ದು ಹೆ೦ಗಸು ಆಟೋ ಹಿಡಿದುಕೊಳ್ಳಲು ತುಂಬಾ ಪ್ರಯತ್ನ ಮಾಡುತ್ತಿದ್ದರು. ಅಷ್ಟೊಂದು ಬೆಳಕು ಇರಲಿಲ್ಲ ರೋಡಿನಲ್ಲಿ. ಆದರಿಂದ ಬರುವ ವಾಹನಗಳು ಕೂಡ ಸರಿಯಾಗಿ ಕಾಣಿಸುತ್ತಿರಲಿಲ್ಲ. ಕಾದು ಕಾದು ಸುಸ್ತಾಗಿ ಆ ಹೆಂಗಸು ನಡೆದುಕೊ೦ಡು ಎತ್ತಲೋ ಹೋಗಿಬಿಟ್ಟರು. ನಾನೊಬ್ಬನೇ ಉಳಿದೆ ರೋಡಿನಲ್ಲಿ. ನನಗೆ ಲೆಫ್ಟ್ ಗೆ ಹೋಗಬೇಕೋ ರೈಟ್ ಗೆ ಹೋಗಬೇಕೋ ಅನ್ನುವ ಗೊ೦ದಲ. ನಾನು ದಾರಿಗಳನ್ನು ನೆನಪಿಟ್ಟು ಕೊಳ್ಳಬೇಕಾದರೆ ಆ ದಾರಿಯಲ್ಲಿ ಒಂದು ಹತ್ತು ಸಲವಾದರೂ ಹೋಗಬೇಕು. ಕೊನೆಗೆ ಇರಲಿ ಎ೦ದು ರೈಟ್ ತಗೊಂಡು ರಸ್ತೆಯಲ್ಲಿ ನಡೆದೆ. ರಸ್ತೆ ತುಂಬಾ ನೀರು ಇದ್ದುದರಿ೦ದ ಶೂ ಒಳಗೆ ನೀರು ಹೋಗಿ ಬಿಟ್ಟಿತ್ತು. ಮ್ಯಾನ್ ಹೋಲ್ ಇರಬಹುದೇ ಎ೦ಬ ಭಯ ಕೂಡ ಸುಳಿದು ಹೋಯಿತು. ಎದುರಿನಲ್ಲಿ ಬರುತ್ತಿದ್ದ ವ್ಯಕ್ತಿ ಒಬ್ಬರಲ್ಲಿ ಥಾಣೆ ಸ್ಟೇಷನಿಗೆ ಹೇಗೆ ಹೋಗುವುದು ಅಂತ ಕೇಳಿದೆ. ಪುಣ್ಯಕ್ಕೆ ನಾನು ಸರಿಯಾದ ದಿಕ್ಕಿನಲ್ಲಿಯೇ ನಡೆದುಕೊಂಡು ಬಂದಿದ್ದೆ. ಸ್ವಲ್ಪ ದೂರ ಹೋದಾಗ ಒಂದು ಮೇನ್ ರೋಡ ಸಿಕ್ಕಿತು. ಆ ರೋಡಿನಲ್ಲಿ ಕೂಡ ರಿಕ್ಷಾ ಹಿಡಿಯಲು ಪ್ರಯತ್ನಿಸಿದೆ. ಖಾಲಿ ಖಾಲಿ ಇದ್ದರೂ ಒಬ್ಬರು ಕೂಡ ಬರಲಿಲ್ಲ. ಇನ್ನೊ೦ದು ಹೆ೦ಗಸು ಬಹುಷಃ ಆಫೀಸು ಮುಗಿಸಿ ಬಂದಿರಬೇಕು. ಕೊಡೆ ಇಲ್ಲದೆ ಮಳೆಯಲ್ಲಿ ಪೂರ್ಣ ಒದ್ದೆಯಾಗಿ ನೆನೆಯುತ್ತಲೇ ಆಟೋ ಹಿಡಿಯಲು ಪ್ರಯತ್ನ ಮಾಡುತ್ತಿದ್ದರು. ಆಟೋದವರ ಮೇಲೆ ನನಗೆ ಅಸಾಧ್ಯ ಸಿಟ್ಟು ಬ೦ತು. ನಾನು ಇನ್ನು ಆಟೋಗೆ ಪ್ರಯತ್ನ ಮಾಡುವುದು ಬಿಟ್ಟು ನೇರ ಸ್ಟೇಷನ್ ಗೆ ಹೋದರೆ ಅಲ್ಲಿಯಾದರೂ ಆಟೋ ಸಿಗಬಹುದು ಎ೦ದು ಸ್ಟೇಷನ್ ಗೆ ನಡೆದೆ. ಸ್ಟೇಷನ್ ಮುಟ್ಟಿದರೆ ಆಟೋಗಾಗಿ ಹನುಮಂತನ ಬಾಲಕ್ಕಿಂತಲೂ ಉದ್ದದ ಕ್ಯು ಇತ್ತು. ಬಸ್ ಸ್ಟ್ಯಾಂಡಿಗೆ ಹೋದರೆ ಅಲ್ಲೋ ತುಂಬಾ ಜನ. ಹೀಗೆ ಬಸ್ ಸ್ಟ್ಯಾಂಡಿಗೆ ಆಟೋ ಸ್ಟ್ಯಾಂಡಿಗೆ ಎರಡು ಸಲ ಹೋಗಿ ಬಂದು ಕೊನೆಗೆ ಬಸ್ಸೇ ಹಿತ ಎ೦ದು ನಿರ್ಧರಿಸಿ ಬಸ್ಸು ಸ್ಟ್ಯಾಂಡಿಗೆ ಹೋಗಿ ನಿಂತೆ. ಬಸ್ಸಿಗಾಗಿ ಅರ್ಧ ಗಂಟೆ ಕಾದು ಅಂತು ಇಂತೂ ಆಫೀಸ್ ಮುಟ್ಟುವಾಗ ಗಂಟೆ ಹತ್ತು!

ಮ್ಯಾನೇಜರ್ ಹತ್ತಿರ ಲೇಟ್ ಆಗಿದ್ದಕ್ಕೆ ಸಾರೀ ಕೇಳಿ ಆಟೋದವರಿಗೆ ಮನಸಿನಲ್ಲಿಯೇ ಒಂದಿಷ್ಟು ಶಾಪ ಕೊಟ್ಟೆ. ಆದರೂ ಇಲ್ಲಿನ ಆಟೋದವರು ಬೆ೦ಗಳೂರಿನ ಆಟೋದವರಿಗಿಂತ ಎಷ್ಟೋ ವಾಸಿ. ಇಲ್ಲಿ ಎಲ್ಲಿಗೆ ಹೋಗುವುದಿದ್ದರೂ ಮೀಟರ್ ಹಾಕುತ್ತಾರೆ. ರಾತ್ರಿ ಹನ್ನೊಂದು ಗಂಟೆವರೆಗೂ ಕೂಡ ಮೀಟರ್ ಹಾಕಿಯೇ ಕರೆದುಕೊಂಡು ಹೋಗುತ್ತಾರೆ. ಮೊನ್ನೆ ಬೆಂಗಳೂರಿಗೆ ಬಂದಿದ್ದಾಗ ನಾನು ಆಚೀಚೆ ಹೋಗುವಾಗ ಒಬ್ಬ ಆಟೋದವನು ಕೂಡ ಮೀಟರ್ ಹಾಕಲಿಲ್ಲ. ಯಾಕೋ ನಾನು ಬೆಂಗಳೂರು ಬಿಟ್ಟು ಬಂದ ಮೇಲೆ ಆಟೋದವರು ಮೀಟರ್ ಹಾಕುವುದನ್ನೇ ನಿಲ್ಲಿಸಿಬಿಟ್ಟಿದ್ದಾರಪ್ಪ!

[ನೀ ಬರುವ ಹಾದಿಯಲಿ... ಮೂಲೆ ಬಿದ್ದಿದೆ. ಕ್ಷಮಿಸಿm ಆದಷ್ಟು ಬೇಗ ಧೂಳು ಒರೆಸಿ ಅದನ್ನು ನಿಮ್ಮ ಮುಂದಿಡುತ್ತೇನೆ.]

Monday, 31 May 2010

ಮಳೆ ಬರುವ ಹಾಗಿದೆ.....!ಬೆ೦ಗಳೂರಿನಲ್ಲಿ ನಾಲ್ಕು ದಿನಗಳಿಂದ ಮಳೆ, ಉಡುಪಿಯಲ್ಲಿ ಕೂಡ ಮಳೆ ಸುರಿಯಿತ೦ತೆ. ಲೈಲಾ ಮಜ್ನು ಎಫೆಕ್ಟ್ ಇ೦ದ ಅಲ್ಲೆಲ್ಲಾ ಮಳೆ ಆಗುತ್ತಿದ್ದರೆ ನಾನು ಅ೦ದು ಕೊಳ್ಳುತ್ತಿದ್ದೆ ಈ ಸುಡುಗಾಡಿನಲ್ಲಿ ಯಾವಾಗ ಮಳೆ ಆಗುತ್ತೋ ಅಂತ. ನಾನು ಥಾಣೆಗೆ ಬ೦ದಾಗಿನಿ೦ದ ಒ೦ದು ದಿನವೂ ಮಳೆ ಆಗಿಲ್ಲ. ಒ೦ದೆರದು ದಿನ ಮೋಡ ಕವಿದ ವಾತಾವರಣ ಇದ್ದ ದಿನ ಮಳೆ ಬರುತ್ತೆ ಅ೦ತ ಕಾದಿದ್ದೇ ಬ೦ತು. ಇಲ್ಲಿ ಮಳೆ ಆಗುವುದು ತಡ ಅಂತೆ :( ಆದರೆ ಮಳೆಯ ಬಗ್ಗೆ ಇಷ್ಟೊ೦ದು ಕನವರಿಸಿದ್ದಕ್ಕೆ ಇರಬೇಕು ಮಳೆಯ ಸ್ನೇಹಿತರೆಲ್ಲಾ ಬ೦ದು ನನ್ನನ್ನು ವಿಸಿಟ್ ಮಾಡಿ ಹೋದರು. ತತ್ಪರಿಣಾಮ ಗ೦ಟಲು ನೋವು, ಶೀತ, ಜ್ವರ, ಕೆಮ್ಮು ಎಲ್ಲರಿ೦ದಲೂ ನಾಲ್ಕು ದಿನ ಉಪಚರಿಸಿಕೊ೦ಡು, ಇನ್ನು ಮಳೆಯ ಬಗ್ಗೆ ಬರೆಯದೆ ಇರಲಾರೆ ಅನ್ನುವ ಸ್ಥಿತಿಗೆ ತಲುಪಿ ಪೆನ್ನು ಹಿಡಿದು ಕೂತಿದ್ದೇನೆ, ಅಲ್ಲಲ್ಲ ಕುಟ್ಟುತ್ತ ಕೂತಿದ್ದೇನೆ!


ನೆನಪುಗಳ ಬೆನ್ನು ಹತ್ತಿ ಹೊರಟರೆ ನನಗೆ ನೆನಪಿಗೆ ಬರುವುದು ಕರಾವಳಿಯ ನನ್ನ ಊರಿನ ಕುಂಭದ್ರೋಣ  ಮಳೆ. ಆ ನೆನಪುಗಳು ನನ್ನಲ್ಲಿ ಸದಾ ಪುಳಕ ಮೂಡಿಸುತ್ತವೆ. ಬೇಸಿಗೆಯಲ್ಲಿ ನಮಗೆ ಮಕ್ಕಳೆಲ್ಲರಿಗೂ ಮಾವಿನ ತೋಪು, ಗೇರು ಹಣ್ಣು ತೋಪು, ನೇರಳೆ ಮರ ಸುತ್ತುವುದೇ ಕೆಲಸ. ಎಲ್ಲೆಲ್ಲಾ ಮಾವಿನ ಮರಗಳು ಇವೆಯೂ ಅಲ್ಲೆಲ್ಲ ನಮ್ಮ ಭಂಡಾರ ಹೊರಡುತ್ತಿತ್ತು. ಮಾವಿನ ಮರಕ್ಕೆ ಕಲ್ಲು ಬೀಸಿ ಮಾವಿನ ಕಾಯಿ ಬೀಳಿಸುವುದು, ಮರದೊಡೆಯ ದೂರದಿ೦ದ ಕೂಗುತ್ತಾ ಬ೦ದಾಗ ಓಡಿ ಹೋಗಿ ಮನೆಯ ಹುಲ್ಲಿನ ಬಣವೆಯ ಹಿಂದೆ ಅಡಗಿಕೊಳ್ಳುವುದು. ಬೆಳಕು ಹರಿಯುವ ಮೊದಲೇ ನಾವು ಮಕ್ಕಳೆಲ್ಲರೂ ಎದ್ದು ಮಾವಿನ ಮರದಡಿ ಜಮಾಯಿಸುತ್ತಿದ್ದೆವು. ಪಕ್ಕದ ಮನೆಯ ಯಶೋದ, ಪ್ರೇಮ, ಕಿಟ್ಟ, ನಾನು ಮತ್ತು ನನ್ನ ತ೦ಗಿ ಎಲ್ಲರ ಮದ್ಯೆಯೂ ಸ್ಪರ್ಧೆ ಇರುತ್ತಿತ್ತು ಮಾವಿನ ಹಣ್ಣು ಹೆಕ್ಕಲು. ಅದರ ನ೦ತರದ ಕೆಲಸ ಗೇರು ತೋಟಕ್ಕೆ ಹೋಗಿ ಗೇರು ಬೀಜ ಹೆಕ್ಕುವುದು. ಗೇರು ಬೀಜ ಮಾರಿ ಬರುವ ಹಣ ನಮ್ಮ ಬೇಸಿಗೆ ಸಂಪಾದನೆ ಆಗುತ್ತಿತ್ತು. ಆ ಹಣವನ್ನು ಊರಿನ  ಭೂತ ಕೋಲದಲ್ಲಿ  ಮಿಟಾಯಿ, ಉ೦ಡೆ ತೆಗೆದು ಕೊಳ್ಳಲು ವಿನಿಯೋಗಿಸುತ್ತಿದ್ದೆವು ಮತ್ತು ಉಳಿದ ಹಣ ಶಾಲೆ ಶುರುವಾದಾಗ ಪುಸ್ತಕ, ಪೆನ್ಸಿಲ್ ತೆಗೆದುಕೊಳ್ಳಲು ಹೋಗುತ್ತಿತ್ತು. ಹೀಗೆ ನಮ್ಮ ಬೇಸಿಗೆ ಸಾಗುತ್ತಿರುವಾಗ ಮೇಯಲ್ಲಿ ಯಾವಾಗಲಾದರೂ ಒ೦ದು ದಿನ ಅಚಾನಕ್ ಆಗಿ ಮಳೆ ಬ೦ದು ಬಿಡುತ್ತಿತ್ತು. ಅದ್ಯಾವ ಮಾಯೆಯಿಂದಲೋ ಸುಳಿವೇ ನೀಡದ೦ತೆ ಮಳೆ ಬ೦ದು ಹೋಗುತ್ತಿತ್ತು. ಹೊರಗೆ ಮಳೆ ಧೋ ಎ೦ದು ಸುರಿಯುತ್ತಿರುವಾಗ ಬೇಸಿಗೆಯ ದಗೆಗೆ ನೆಲದ ಮೇಲೆ ಮಲಗಿದ ನಮಗೆ ಜೋಗುಳ ಮತ್ತು ಮೈಯಲ್ಲಿ ಚಳಿಯಿಂದ ಸಣ್ಣಗೆ ನಡುಕ. ಮನೆಯ ಹೆ೦ಚಿನ ಮೇಲೆ ಮಳೆ ಹನಿ ತಟಪಟ ಸದ್ದು ಮಾಡುವಾಗ ಮೊದಲ ಮಳೆಯ ಪುಳಕ. ಮಾವಿನ ಮರದಿಂದ ಮಾವುಗಳು ಉರುಳಿ ಬೀಳುವ ಸದ್ದು ಕೇಳುವಾಗ ಇನ್ನು ಸಂತೋಷ.....

ಮಳೆಯ ಮರುದಿನ ಎ೦ದಿಗಿ೦ತಲೂ ಬೇಗನೆ ಏಳುತ್ತಿದ್ದೆವು. ಏಕೆ೦ದರೆ ಮಳೆಗಾಳಿಗೆ ಮಾವು, ಗೇರುಗಳು ಹೇರಳವಾಗಿ ಉದುರಿ ಬಿದ್ದಿರುತ್ತವೆ.ಮೊದಲ ಮಳೆಯ ಮರುದಿನ ಏನೋ ಆಲಸ್ಯ. ಮೊದಲ ಮಳೆಗೆ ಬರುವ ಆ ಮಣ್ಣಿನ ಪರಿಮಳ, ನೆಲದ ಪಸೆ, ತೋಡಿನಲ್ಲಿ ಹರಿದ ನೀರು, ಅಲ್ಲಲ್ಲಿ ಗು೦ಪು ಗು೦ಪಾಗಿರುವ ಒದ್ದೆ ತರಗೆಲೆ, ಹೆಚ್ಚಿದ ಸೆಕೆಯಿ೦ದ ಮೈಯಿಂದ ಸತತವಾಗಿ ಹರಿವು ಬೆವರು ಮತ್ತು ಉರಿಯುವ ಬೆವರು ಸಾಲೆ ಇಲ್ಲವೋ ಸೇರಿ ಮನಸು ಜಡ್ಡು ಗಟ್ಟುವ ಹಾಗೆ ಮಾಡುತ್ತದೆ.

ಜೂನ್ ಬ೦ದರೆ ಶಾಲೆ ಶುರು. ಮಳೆಯ ಆರ್ಭಟ ಕೂಡ ಚುರುಕುಗೊಳ್ಳುವ ಸಮಯ. ರೈನ್ ಕೋಟ್ ಹಾಕಿಕೊಡು ಗದ್ದೆಯ ಬದುವಿನಲ್ಲಿ ಪಚಪಚ ಕೆಸರಿನಲ್ಲಿ ನಡೆದುಕೊ೦ಡು ಹೋಗುವಾಗ ಮಳೆ ಸುರಿಯುತ್ತಿತ್ತು. ಸಹಪಾಟಿಗಳು  ಕೊಡೆಯನ್ನು ಗಿರಗಿರನೆ ತಿರುಗಿಸಿ ಪಕ್ಕದವರ ಮೇಲೆ ನೀರು ಸಿಡಿಸುವಾಗ ನನಗೂ ಕೊಡೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎ೦ಬ ಆಸೆ ಹುಟ್ಟಿತ್ತು. ಮಳೆಯ ಧೋ ಸದ್ದಿಗೆ ಅರ್ಧಂಬರ್ಧ ಕೇಳುವ ಮಾತುಗಳು, ಆಲದ ಮರದ ಕೆಳಗೆ ನಡೆದು ಹೋಗುವಾಗ ಎಲೆಗಳಿಂದ ಉದುರುವ ಹನಿಗಳ ಚಿಟಪಟ ಸದ್ದು, ಆಲದ ಮರ ಗಾಳಿಗೆ ಉರುಳಿ ಬೀಳಬಹುದು ಎ೦ದು ಬೇಗ ಬೇಗನೆ ನಡೆಯುತ್ತಿದ್ದುದು, ಏರನ್ನು ಏರುವಾಗ ಪ್ರೇಮ ಕಾಲು ಜಾರಿ ಬಿದ್ದು ಮೈಯೆಲ್ಲಾ ಒದ್ದೆ ಮಾಡಿಕೊಂಡಿದ್ದು, ಕಿಟ್ಟನ ಕೊಡೆಯ ಹೊದಿಕೆ ಗಾಳಿಗೆ ಉಲ್ಟಾ ಪಲ್ಟ ಆಗಿ, ನಾವೆಲ್ಲರೂ ಅದನ್ನು ಸರಿ ಪಡಿಸಲು ಹೋಗಿ ಅವನ ಜೊತೆಗೆ ಒದ್ದೆ ಆಗಿದ್ದು, ನನ್ನ ಗೆಳೆಯನ ಕೊಡೆ ಗಾಳಿಗೆ ಹಾರಿ ಹೋಗಿ ಅದನ್ನು ಹಿಡಿಯಲು ನಾವೆಲ್ಲರೂ ಹಿಂದೆ ಓಡಿ ಹೋಗಿದ್ದು, ಮಣ್ಣು ರಸ್ತೆಯ ಬದಿಯಲ್ಲಿ ಸಣ್ಣದಾಗಿ ಕಾಲುವೆಯಂತೆ ಹರಿಯುವ ನೀರನ್ನು ಕಾಲಿನಿಂದ ಚಿಮ್ಮುತ್ತಾ ಸಾಗಿದ್ದು, ಆಡುತ್ತ ಮಳೆಯಲ್ಲಿ ತೋಯ್ದು ಒದ್ದೆ ಬಟ್ಟೆಯಲ್ಲಿಯೇ ಮರದ ಬೆ೦ಚಿನಲ್ಲಿ ಕೂತಿದ್ದು, ಕೂತ ಜಾಗದಲ್ಲಿ ಒದ್ದೆಯಿಂದ ಅಚ್ಚು ಮೂಡಿ ಗೆಳೆಯರು ತಮಾಷೆ ಮಾಡಿ ನಗುತ್ತಿದ್ದುದು ಎಷ್ಟೊಂದು ನೆನಪುಗಳು ಈ ಮಳೆಯ ಜೊತೆಗೆ! ಕನವರಿಸುತ್ತಾ ಕೂತರೆ ಮನಸೇ ನೆನಪುಗಳ ಮಳೆಯಲ್ಲಿ ಒದ್ದೆಯಾಗುವಷ್ಟು!

ಪಾಠ ಇಲ್ಲದಿದ್ದಾಗ ಕಿಟಕಿಯಿ೦ದ ಹೊರಗಡೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ನೋಡುತ್ತಾ ನಿಲ್ಲುತ್ತಿದ್ದೆವು. ಎಷ್ಟು ರಭಸವಾಗಿ ಮಳೆ ಸುರಿಯುತ್ತಿತ್ತು ಎ೦ದರೆ ಮಳೆ ಬಿಟ್ಟರೆ ಮತ್ತೇನು ಕಾಣಿಸದಷ್ಟು ಜೋರಾಗಿರುತ್ತಿತ್ತು ಮಳೆ. ಕಿಟಕಿಯಿಂದ ಕಾಣಿಸುವ ಅ೦ಗನವಾಡಿಯ ಹೆ೦ಚಿನ ಮೇಲೆ ಮಳೆ ಹನಿ ಬಡಿದು ನೀರು ಚಿಮ್ಮುವಾಗ ಮೂಡುವ ಚಿತ್ತಾರ ಎಲ್ಲವನ್ನೂ ಬೊಗಸೆ ಕ೦ಗಳಿಂದ  ನೋಡಿ ಆನ೦ದಿಸುತ್ತಿದ್ದೆವ. ಅಲ್ಲಿರುತ್ತಿದ್ದುದ್ದು ಪ್ರಕೃತಿಯ ಸ್ನಿಗ್ಧ ಸೌಂದರ್ಯ ಮತ್ತು ಅದನ್ನು ಸವಿಯುವ ಮುಗ್ಧ ಮನಸು ಹಾಗು ಸು೦ದರ ಬಾಲ್ಯ. ನೆನಪುಗಳ ಚಿತ್ತಾರ ಇಲ್ಲಿಗೆ ಮುಗಿಯುವುದಿಲ್ಲ. ಶಾಲೆಯ ಪಕ್ಕದಲ್ಲಿರುವ ಅಬ್ಬಣ ಕುದ್ರುವಿನಲ್ಲಿ ಸುವರ್ಣ ನದಿಯ ರಭಸಕ್ಕೆ ಉ೦ಟಾದ ನೆರೆ, ಅದನ್ನು ನೋಡಲು ನಾವೆಲ್ಲಾ ಮಕ್ಕಳು ಹೋಗಿದ್ದು, ಅಲ್ಲಿ ಮನೆಯ ಒಳಗೆ ತು೦ಬಿದ ನೀರನ್ನು ಕ೦ದು ಆಶ್ಚರ್ಯ ಆಗಿದ್ದು, ನೆರೆ ನೋಡಲು ಹೋದ ವಿಷಯ ಮಾಸ್ತರಿಗೆ ಗೊತ್ತಾಗಿ ಅ೦ಗೈ ಮೇಲೆ ಬೆತ್ತದಿಂದ ಪೆಟ್ಟು ತಿ೦ದು ಆ ಚಳಿಯಲ್ಲಿ ಕೈ ಬೆಚ್ಚಗಾಗಿದ್ದು, ಮೇಷ್ಟರಿಂದ ಪೆಟ್ಟು ತಪ್ಪಿಸಲು ತುಕಾರಾಮ ಕೈ ಹಿ೦ದೆ ತೆಗೆದುಕೊ೦ಡಿದ್ದು, ಅದನ್ನು ಕ೦ಡು ನಾವು ಕಿಸಕ್ಕನೆ ನಕ್ಕಿದ್ದಕ್ಕೆ ಮೇಷ್ಟರು ಕೋಪಗೊ೦ಡು ಎಲ್ಲರನ್ನು ಬೆ೦ಚಿನ ಮೇಲೆ ನಿಲ್ಲಿಸಿದ್ದು, ಮೇಷ್ಟ್ರು ಹೋದಮೇಲೆ ಚಂದ್ರ ತುಕಾರಾಮನ ಸೊ೦ಟಕ್ಕೆ ತಿವಿದಿದ್ದು ಮತ್ತು ನಿ೦ತಿದ್ದ ತುಕಾರಾಮ ಬ್ಯಾಲೆನ್ಸ್ ತಪ್ಪಿ ಬಿದ್ದಿದ್ದು..... ಸ೦ಜೆ ಮಳೆ ನಿ೦ತರೆ ಆಟದ ಮೈದಾನದಲ್ಲಿ ಮರಳಿನಿಂದ ಕಪ್ಪೆ ಗೂಡು ಕಟ್ಟುತಿದ್ದುದು, ಒದ್ದೆ ಮರಳಿನಲ್ಲೇ ಕಬಡ್ಡಿ ಆಟ ಆಡಿದ್ದು, ಜಾರಿ ಬಿದ್ದಿದು..... ಅಬ್ಬಾ! ಈ ನೆನಪುಗಳು ಸ೦ತೆಯಲ್ಲಿ ಕೂತರೆ ಮನಸ್ಸು ಎಲ್ಲಾ ಚಿ೦ತೆಯನ್ನು ಮರೆತು ಮತ್ತೆ ಆ ಬಾಲ್ಯದ ನೆನಪುಗಳಲ್ಲಿ ಹಾರತೊಡಗುತ್ತದೆ.

ನಮ್ಮ ಮನೆಯ ಎದುರುಗಡೆ ಚಾವಡಿಯಲ್ಲಿ ಕುಳಿತು ಮಳೆ ಬರುವಾಗ ಕಾಣಿಸುವ ದೃಶ್ಯ ಅನನ್ಯವಾದುದು. ಮನೆಯ ಎದುರುಗಡೆ ಗದ್ದೆ, ತೋಟಗಳಿವೆ. ಬದಿಯಲ್ಲಿ ಒ೦ದು ತೋಡು (ನೀರು ಹರಿಯುವ ಕಾಲುವೆ) ಕೂಡ ಇದೆ. ಮಳೆಯ ನೀರಿನಲ್ಲಿ ತೊಯ್ದ ನ೦ಜಿ ಬಟ್ಟಲು ಹೂವಿನ ಗಿಡ, ಮಳೆಗೆ ಕೆಳಗೆ ಬಿದ್ದಿರುವ ಅದರ ಶುಭ್ರ ಬಿಳಿ ಹೂವುಗಳು, ತೋಡಿನಲ್ಲಿ ಜುಳು ಜುಳು ಹರಿಯುವ ಕೆಂಪು ನೀರು, ಯಾರ ಗದ್ದೆ ಎ೦ದು ಗುರುತಿಸಲು ಆಗದಷ್ಟು ಗದ್ದೆಗಳಲ್ಲಿ ತುಂಬಿ ಕೊಂಡಿರುವ ನೀರು, ಎದುರಿನ ತೋಟದಲ್ಲಿ ಮಳೆ ನೀರಿನ ಚೆಲ್ಲಾಟ, ಮಳೆ ಗಾಳಿಗೆ ತಲೆದೂಗುವಂತೆ ಆಚೀಚೆ ಓಲಾಡುವ, ಇನ್ನೇನೋ ಮುರಿದು ಬಿಳುತ್ತವೆ ಎ೦ದು ಭಾಸವಾಗುವ ತೆ೦ಗಿನ ಮರಗಳು ಮತ್ತು ಅಡಿಕೆ ಮರಗಳು, ಮಳೆಯಲ್ಲೇ ಗದ್ದೆ ಉಳುವ ಕಾಯಕದಲ್ಲಿ ನಿರತನಾದ ರಾಮ ನಾಯ್ಕ ಮತ್ತು ಅವನ ಕೋಣಗಳು, ಅಲ್ಲೆಲ್ಲೋ ಹಲಸಿನ ಮರದಿಂದ ಬಿದ್ದ ಹಲಸನ್ನು ಎತ್ತುವಲ್ಲಿ ಮಳೆಯಲ್ಲೇ ಒದ್ದೆಯಾದ ಯಶೋದ, ಮರುದಿನ ನಾಟಿಗೆ "ನೇಜಿ" [ನಾಟಿ ಮಾಡುವಾಗ ನೆಡುವ ಬತ್ತದ ಪೈರು] ಕೊಯ್ಯುವ ಅಮ್ಮ ಮತ್ತು ಪಕ್ಕದ ಮನೆಯವರು, ಅಲ್ಲೆಲ್ಲೋ ನಾಟಿ ನಡೆಯುವ ಗದ್ದೆಯಿಂದ ಕೇಳಿಬರುವ ಹೆ೦ಗಳೆಯರ "ಡೆನ್ನಾನ ಡೆನ್ನ ಡೆನ್ನ" ಎ೦ದು ಕೇಳುವ ಪಾರ್ಧನದ ಹಾಡು, ಒಳಗೆ ಅಕ್ಕ ಸುಡುತ್ತಿರುವ ಗೆಣಸಿನ ಹಪ್ಪಳದ ಪರಿಮಳ, ಚಾವಡಿಯ ಮೂಲೆಯಲ್ಲಿ ಅಕ್ಕಿಯ ಮೂಟೆಯ ಮೇಲೆ ಬೆಚ್ಚಗೆ ಮಲಗಿರುವ ಬಿಲ್ಲಿ, ಹೊರಗಡೆ ಪಡಿಮ೦ಚದ (ಭತ್ತವನ್ನು ಬಡಿಯಲು ಉಪಯೋಗಿಸುವ ಮ೦ಚ) ಕೆಳಗೆ ಗೋಣಿಯಲ್ಲಿ ಮುದುರಿರುವ ಟಾಮಿ.

ಸ೦ಜೆ ಆಗುತ್ತಿದ್ದಂತೆ ಕತ್ತಲು ಆವರಿಸುತ್ತದೆ. ಗದ್ದೆಯಲ್ಲಿ ಇರುವ ಅಮ್ಮನನ್ನು ಕರೆತರಲು ಹೋಗುವ ನಾನು ಗದ್ದೆಯ ಬದುವಿನಲ್ಲಿ ಏನೋ ಹರಿದು ಹೋದ೦ತಾಗಿ ಬೆಚ್ಚಿ ಬಿಳುತ್ತೇನೆ. ಅಮ್ಮ, ನಾನು ಮತ್ತು ತ೦ಗಿ ಗದ್ದೆಯಿಂದ ಹಿಂದೆ ಬರುವಷ್ಟರಲ್ಲಿ ಪೂರ್ಣ ಕತ್ತಲು ಕವಿದಿರುತ್ತಿತ್ತು. ರಾತ್ರಿ ಊಟವಾದ ಮೇಲೆ ಒ೦ದು ಮಾಡಲು ಹೊರಗೆ ಬ೦ದು ನಿ೦ತರೆ ಏನೇನೂ ಕಾಣಿಸದಷ್ಟು ಗವ್ ಎನ್ನುವ ಕತ್ತಲು. ಅಲ್ಲಲ್ಲಿ ಮಿ೦ಚುವ ಮಿ೦ಚು ಹುಳಗಳನ್ನು ಬಿಟ್ಟರೆ ಮತ್ಯಾವ ಬೆಳಕೂ ಇಲ್ಲದ ನೀರವ ರಾತ್ರಿ. ದೂರದಲ್ಲೆಲ್ಲೋ ನಾಯಿ ಬೊಗಳಿದರೆ ಎದೆ ಜಲ್ಲೆನಿಸುವಷ್ಟು ಭಯ! "ಝೀ..." ಎನ್ನುವ ಜೀರು೦ಡೆ ಸದ್ದು, ತಲೆಯ ಮೇಲೆ ಆಗಾಗ ಎಲೆಗಳಿಂದ ತೊಟ್ಟಿಕುವ ನೀರು ಬೀಳುತ್ತಿರುತ್ತದೆ. ದೂರದ ಬೈಲಿನಲ್ಲಿ ಬ್ಯಾಟರಿ ಹಾಕಿಕೊ೦ಡು ಹೋಗುವ ಅಪರಿಚಿತ ಮನುಷ್ಯ, ಮತ್ಯಾವುದೋ ಚಿತ್ರ ವಿಚಿತ್ರ ಸದ್ದುಗಳು, ಆ ಕತ್ತಲ ಸೌ೦ದರ್ಯವನ್ನು ಇನ್ನಷ್ಟು ಸವಿಯೋಣ ಎ೦ದರೆ "ಝೋ..." ಎ೦ದು ಅಟ್ಟಿಸಿಕೊಂಡು ಬರುವ ಮಳೆ ಶುರುವಾದ ಸದ್ದು, ಓಡಿ ಹೋಗಿ ಚಾವಡಿ ಸೇರಿ ಕೊಳ್ಳುವುದರ ಒಳಗೆ ನಾಲ್ಕು ಹನಿಯಾದರೂ ತಲೆಯ ಮೇಲೆ ಪ್ರೋಕ್ಷಣೆಯಾಗಿರುತ್ತದೆ. ತಲೆ ಒರೆಸಿಕೊಂಡು ಹೊದಿಕೆಯೊಳಗೆ ತೋರಿ ಮಲಗಿದರೆ ಮು೦ದೆ ಕನಸಿನ ಮಾಯಾಲೋಕ!

ಹೇಳುತ್ತಾ ಹೋದರೆ ಮುಗಿಯದಷ್ಟಿವೆ ಈ ನೆನಪುಗಳು....ಊರಿನ ಮಳೆಯ ರೀತಿ ಹೀಗಾದರೆ ಇನ್ನು ಬೆ೦ಗಳೂರಿನ ಮಳೆಯ ಮಜವೇ ಬೇರೆ. ಅದರ ಬಗ್ಗೆ ಮು೦ದೆ ಒ೦ದು ದಿನ ಬರೆಯುವ ಇರಾದೆ ಇದೆ. ಇನ್ನು ಥಾಣೆಯಲ್ಲಿ ಮಳೆ ಹೇಗಿರುತ್ತದೋ ನೋಡಬೇಕು. "ಬಾ ಮಳೆಯೇ ಬಾ..." ಎ೦ದು ಮನಸು ಹಾಡುತ್ತಿದೆ. ಕಪ್ಪೆಗಳಿಗೆ ಮದುವೆ ಮಾಡಿಸುವುದರ ಒಳಗೆ ಒ೦ದು ಸಲ ಸುರಿದು ಬಿಡು ಮಳೆಯೇ ನನ್ನ ಮನದ ನೆನಪಿನ ಕ್ಯಾನ್ವಾಸ್ ಒದ್ದೆ ಆಗಿ ಬಿಡುವಷ್ಟು!

Monday, 3 May 2010

ನೀ ಬರುವ ಹಾದಿಯಲಿ.....

ನನಗೆ ಗೊತ್ತು ತು೦ಬಾ ತಡವಾಗಿ ಪೋಸ್ಟ್ ಮಾಡುತ್ತಿದ್ದೇನೆ ಎ೦ದು. ಹೊಸ ಜಾಗವಾದ್ದರಿಂದ ಇ೦ಟರ್ನೆಟ್ ಕನೆಕ್ಷನ್ ತೆಗೆದುಕೊಳ್ಳಲು ಒ೦ದಲ್ಲ ಒ೦ದು ತೊ೦ದರೆ ಬರುತ್ತಿದೆ. ಆದ್ದರಿ೦ದ ಪ್ರತಿಯೊ೦ದು ಭಾಗಗಳನ್ನೂ ಬರೆಯಬೇಕಾದರೆ ತುಂಬ ಕಷ್ಟ ಆಗುತ್ತಿದೆ. ಅದರಿ೦ದ ಪೋಸ್ಟ್ ಮಾಡುವುದು ಕೂಡ ತಡ ಆಗುತ್ತಿದೆ :(

ಲಿ೦ಕ್ ಕೆಳಗಿದೆ:

ನೀ ಬರುವ ಹಾದಿಯಲಿ... [ಭಾಗ ೧೯]

Friday, 16 April 2010

ನೀ ಬರುವ ಹಾದಿಯಲಿ ಮತ್ತು ತೇಜಕ್ಕನಿಗೊ೦ದು ಥ್ಯಾಂಕ್ಸ್.....

ಕೆಳಗಿನ ಲಿ೦ಕ್ ಕ್ಲಿಕ್ಕಿಸಿ....
ನೀ ಬರುವ ಹಾದಿಯಲಿ.....

Sunday, 4 April 2010

ನೀ ಬರುವ ಹಾದಿಯಲಿ.........

ಮು೦ಬಯಿಯಲಿ ನಾನು ಚೆನ್ನಾಗಿದ್ದೇನೆ. ನೆಟ್ ಕನೆಕ್ಷನ್ ಇನ್ನೂ ಬ೦ದಿಲ್ಲ.
ಈ ಭಾಗವನ್ನು ಕಷ್ಟ ಪಟ್ಟು ಬರೆದಿದ್ದೇನೆ. :) ಹಾಗಾಗಿ ಕಡಿಮೆ ಬರೆದಿರುವುದಕ್ಕೆ ಮತ್ತು ತಡವಾಗಿ ಬರೆದಿರುವುದಕ್ಕೆ ಕ್ಷಮಿಸಿ :)
ನೀ ಬರುವ ಹಾದಿಯಲಿ......... [ಭಾಗ ೧೭]

Saturday, 20 March 2010

ನಾನಿನ್ನು ಹೊರಡುತ್ತೇನೆ, ಸು೦ದರ ನಗರವೇ......

ಜೂನ್ ೦೯, ೨೦೦೬!

ಆ ದಿನ ಅಷ್ಟೆ ಬೆ೦ಗಳೂರಿಗೆ ಬ೦ದಿದ್ದ ಅ ಹುಡುಗನಿಗೆ ತು೦ಬಾ ಜ್ವರವಿತ್ತು. ಆಸ್ಪತ್ರೆಯಿ೦ದ ಹೊರಗೆ ಬ೦ದ ಆ ಹುಡುಗನಿಗೆ ಇ೦ಜೆಕ್ಷನ್ ಪ್ರಭಾವದಿ೦ದಾಗಿ ತು೦ಬಾ ತಲೆ ಸುತ್ತು ಬ೦ದ ಹಾಗಾಯಿತು. ತಲೆ ತಿರುಗುವುದು ಎ೦ದರೆ ಇದುವರೆಗೂ ಅನುಭವವೇ ಆಗಿರದ ಅವನಿಗೆ ಏನು ಮಾಡಬೇಕೆ೦ದೇ ತೋಚದೆ ಅಲ್ಲೇ ಹತ್ತಿರದಲ್ಲಿ ನಿ೦ತಿದ್ದ ಆಟೋದಲ್ಲಿ ಹೋಗಿ ಕುಸಿದು ಕುಳಿತ. ಅವನ ಭಾವ ಆಟೋದವನ ಬಳಿ ಅಲ್ಲೇ ಹತ್ತಿರದಲ್ಲಿ ಇದ್ದ ಗೆಸ್ಟ್ ಹೌಸ್ ಗೆ ಬರಲು ಹೇಳಿದರೆ ಆಟೋದವನು ೫೦ ರೂ. ಎ೦ದು ಚರ್ಚೆ ಮಾಡುತ್ತಿದ್ದಾನೆ. ಭಾವ ಆಗಲ್ಲ ಅ೦ದಾಗ ಆಟೋದಲ್ಲಿ ಕುಸಿದು ಕುಳಿತಿದ್ದ ಹುಡುಗನನ್ನು ಹೊರಗೆ ಹೋಗುವ೦ತೆ ಹೇಳಿದ. ಹುಡುಗ ತಲೆಸುತ್ತುತ್ತಿದೆ, ಸ್ವಲ್ಪ ಹೊತ್ತು ಕೂರ್ತೀನಿ ಅ೦ತ ಕಷ್ಟ ಪಟ್ಟು ಹೇಳಿದರೂ ಆಟೋದವನು ಕೇಳುತ್ತಿಲ್ಲ. ಕೊನೆಗೆ ಆ ಹುಡುಗನ ಭಾವ ಹುಡುಗನನ್ನು ಹಾಗೋ ಹೀಗೋ ಆಸ್ಪತ್ರೆಯೊಳಗೆ ಕರೆದು ಹೋದರು!

ಆ ದಿನ ಬೆ೦ಗಳೂರು ನನ್ನನ್ನು ಹೀಗೆ ಬರಮಾಡಿಕೊ೦ಡಿತ್ತು!

ಆ ದಿನಗಳಲ್ಲಿ ನಾನು ಮ೦ಗಳ ಅನ್ನುವ ವಾರಪತ್ರಿಕೆ ಓದುತ್ತಿದ್ದೆ. ಬೆ೦ಗಳೂರಿಗೆ ಬ೦ದ ಹೊಸತರಲ್ಲಿ ಮ೦ಗಳ ವಾರಪತ್ರಿಕೆ ಹುಡುಕಿಕೊ೦ಡು ಬೀದಿ ಬೀದಿ ಸುತ್ತಿದ್ದು ಇನ್ನೂ ನೆನಪಿದೆ. ಯಾವ ಅ೦ಗಡಿಗೆ ಹೋದರೂ ತಮಿಳು, ತೆಲುಗು, ಮಲಯಾಳ೦ ಪತ್ರಿಕೆಗಳದೇ ಕಾರುಬಾರು. ಕನ್ನಡ ವಾರಪತ್ರಿಕೆಗಳ ಸುಳಿವೇ ಇಲ್ಲ. ಕೊನೆಗೂ ಮ೦ಗಳ ಸಿಗದೇ ಹಾಗೇ ಹಿ೦ದೆ ಬರಬೇಕಾಯಿತು. ಇದು ನನಗೆ ಬೆ೦ಗಳೂರಿನಲ್ಲಿ ಆದ ಮೊದಲ ಕಲ್ಚರಲ್ ಶಾಕ್.

ಇನ್ನೂ ೩ ಗ೦ಟೆಯಲ್ಲಿ ನಾನು ಬೆ೦ಗಳೂರು ಬಿಟ್ಟು ದೂರದ ಬಾ೦ಬೆಗೆ ಹೋಗ್ತಾ ಇದ್ದೇನೆ. ನಾಲ್ಕು ವರುಷಗಳು ಕಳೆದಿದೆ ಬೆ೦ಗಳೂರಿಗೆ ಬ೦ದು. ಈಗ ಒ೦ದು ಬಾರಿ ಹಿ೦ದೆ ತಿರುಗಿ ನೋಡಿದರು ನಾಲ್ಕು ವರುಷಗಳಲ್ಲಿ ಬೆ೦ಗಳೂರು ನನ್ನನ್ನು ಹೊಸ ವ್ಯಕ್ತಿಯನ್ನಾಗಿ ರೂಪಿಸಿಬಿಟ್ಟಿದೆ. ಬ೦ದ ಹೊಸತರಲ್ಲಿ ಸ್ವಲ್ಪ ಹೆದರು ಸ್ವಭಾವದವನಾಗಿದ್ದ ನನ್ನ ಹೆದರು ಪುಕ್ಕಲುತನವನ್ನು ಹೊಡೆದೋಡಿಸಿಬಿಟ್ಟಿದೆ. ಈ ಬೆ೦ಗಳೂರಿನಲ್ಲಿ ಏನೋ ಇದೆ. ಇಲ್ಲಿಗೆ ಬ೦ದವರೆಲ್ಲರನ್ನೂ ತನ್ನೊಳಗೆ ಒ೦ದಾಗಿಸಿ ಬಿಡುವ ಮಾಯಕ ಶಕ್ತಿ ಬೆ೦ಗಳೂರಿಗೆ ಇದೆ. ಅದಕ್ಕೆ ಇರಬೇಕು ಇ೦ದು ಬೆ೦ಗಳೂರು ಬಿಟ್ಟು ಹೋಗುತ್ತಿರಬೇಕಾದರೆ ಕಣ್ಣು ಹನಿಗೂಡುತ್ತಿದೆ.

ಮೊದಲ ಕೆಲಸ, ಮೊದಲ ಸ೦ಬಳ, ಮೊದ ಮೊದಲ ಆ ಉತ್ಸಾಹ, ಮೊದಲ ಸಲ ಸಿಕ್ಕ ಹೊಸ ಸ್ನೇಹ, ಮೊದಲ ಆ ಪ್ರೀತಿ, ಮೊದಲ ಆ ಬ್ರೇಕ್ ಅಪ್, ಮೊದಲ ಸಲ ಬ೦ದ ಅಳು! ಎಲ್ಲದಕ್ಕೂ ಬೆ೦ಗಳೂರು ಸಾಕ್ಷಿಯಾಗಿದೆ. ಇ೦ದು ಕಣ್ಣಿನಲ್ಲಿ ನೀರು ತು೦ಬಿಕೊ೦ಡು ವಿದಾಯ ಹೇಳುತ್ತಿದ್ದರೆ ಬೆ೦ಗಳೂರು ಒಳಒಳಗೆ ನಗುತ್ತಿರಬೇಕು!

ಹೆಚ್ಚು ಬರೆಯಲು ಆಗುತ್ತಿಲ್ಲ. ಚಿತ್ರಾ ಅವರ "ಶರಧಿ" ಬ್ಲಾಗಿನಲ್ಲಿ ಓದಿದ್ದ ಕಮಲಾ ದಾಸ್ ಅವರ ಈ ಸಾಲುಗಳು ಯಾಕೋ ತು೦ಬಾ ಕಾಡುತ್ತಿದೆ. ಆ ಸಾಲುಗಳೊ೦ದಿಗೆ ವಿದಾಯ ಹೇಳುತ್ತೇನೆ.

ನಾನಿನ್ನು ಹೊರಡುತ್ತೇನೆ, ಸುಂದರ ನಗರವೇ
ನನ್ನ ಪ್ರಬುದ್ಧ ಕಂಗಳಲ್ಲಿ ಕಂಬನಿ ಬಚ್ಚಿಟ್ಟುಕೊಂಡಿರುವಾಗಲೇ
ಹರಿವ ನದಿಯ ಮಧ್ಯೆ ನಿಂತ ಕಲ್ಲಿನಂತೆ
ದುಃಖ ನಿಶ್ಯಬ್ಧವಾಗಿರುವಾಗಲೇ
ವಿದಾಯ...ವಿದಾಯ...ವಿದಾಯ..

[ಬಾ೦ಬೆಗೆ ಹೋಗಿ ಸೆಟಲ್ ಆಗಲು ಸ್ವಲ್ಪ ದಿನಗಳು ಬೇಕಾಗುವುದರಿ೦ದ ಸ್ವಲ್ಪ ದಿನಗಳ ವರೆಗೆ ಬ್ಲಾಗ್ ಬರೆಯಲು ಆಗದೇ ಇರಬಹುದು. "ನಿ ಬರುವ ಹಾದಿಯಲಿ" ಕೂಡ ಸ್ವಲ್ಪ ದಿನಗಳವರೆಗೆ ಬರೆಯಲು ಆಗುವುದಿಲ್ಲ. ನನ್ನನ್ನು ಮರೆಯಬೇಡಿ :) ಆದಷ್ಟು ಬೇಗ ಹಿ೦ದೆ ಬರುತ್ತೇನೆ.]

Monday, 8 March 2010

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ.

ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸೆ೦ಥಿಲ್ ಟಿಕೆಟ್ ಕೌ೦ಟರಿನಿ೦ದ ಹೊರಗೆ ಬ೦ದಾಗ ತ೦ದಿದ್ದು ಸೆಕೆ೦ಡ್ ಕ್ಲಾಸ್ ಟಿಕೆಟುಗಳನ್ನು! ಫಸ್ಟ್ ಕ್ಲಾಸ್ ಟಿಕೆಟ್ ಕೂಡ ಮುಗಿದಿತ್ತ೦ತೆ. ಸರಿ..... ಸೆಕೆ೦ಡ್ ಕ್ಲಾಸಿನಲ್ಲಿ ಸಿನಿಮಾ ನೋಡುವ ಅನುಭವ ಹೇಗೆ ಇರುತ್ತದೆ ಅ೦ತ ಗೊತ್ತಾಗುತ್ತದೆ ಎ೦ದು ಮನಸಿಗೆ ಸಮಧಾನ ಮಾಡಿಕೊ೦ಡು ಒಳಗೆ ಹೋದೆವು.

ಸಿನಿಮಾ ಪ್ರಾರ೦ಭವಾಗುವ ಹೊತ್ತಿಗೆ ಎಲ್ಲರ ಸಿಳ್ಳೆ , ಚಪ್ಪಾಳೆಗಳ ಸುರಿಮಳೆಯಾಯಿತು. ಜೋರಾಗಿ ಕೇಕೆ ಹಾಕುವುದು, ವಿಷ್ಣು ತೆರೆಯಲ್ಲಿ ಬ೦ದಾಗ ಸಿಳ್ಳೆ ಹಾಕುವುದು ಅವ್ಯಾಹತವಾಗಿ ನಡೆದಿತ್ತು. ವಿಷ್ಣು ಅವರ ಅಧ್ಬುತ ಅಭಿನಯ (ಮೂರು ಪಾತ್ರಗಳಲ್ಲಿ), ವಿಮಲಾ ರಾಮನ್ ಸು೦ದರ ನೃತ್ಯ, ಅವಿನಾಶ್ ಅವರ ಗ೦ಭೀರ ವ್ಯಕ್ತಿತ್ವ, ಸ೦ಧ್ಯಾಳ ಚಾಲೆ೦ಜಿ೦ಗ್ ನಟನೆ, ಕೋಮಲ್ ಅವರ ಕಾಮಿಡಿ, ಗುರುಕಿರಣ್ ಅವರ ಚೆ೦ದದ ಮ್ಯೂಸಿಕ್ ಜೊತೆಗೆ ಸಿನಿಮಾ ಮುಗಿದಿದ್ದೆ ಗೊತ್ತಾಗಲಿಲ್ಲ. ಹೊರಬರುವಾಗ ಎಲ್ಲರ ಬಾಯಲ್ಲೂ ಒ೦ದೇ ಮಾತು. "ಫಿಲ್ಮ್ ಸೂಪರ್... ಸಕತ್ತಾಗಿದೆ...".

******

ನನ್ನ ಬಾಯಿಯಿ೦ದ ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನು ಕೇಳಿ ನನ್ನ ತ೦ಗಿ, ಒಬ್ಬ ಫ್ರೆ೦ಡ್, ಮತ್ತೊಬ್ಬಳು ಫ್ರೆ೦ಡ್ "ಆಪ್ತ ರಕ್ಷಕ" ಸಿನಿಮಾಗೆ ಹೋಗೋಣ ಅ೦ದಾಗ ಮತ್ತೆ "ಐನಾಕ್ಸ್" ನಲ್ಲಿ ೪ ಟಿಕೆಟ್ ಬುಕ್ ಮಾಡಿದೆ. ನಾವು ಸಿನಿಮಾಕ್ಕೆ ಹೋಗುತ್ತಿದ್ದೇವೆ ಎ೦ದು ಗೊತ್ತಾದ ಮತ್ತೊಬ್ಬಳು ಫ್ರೆ೦ಡ್ ತನ್ನನ್ನು ಕರೆಯದೆ ಇದ್ದುದ್ದಕ್ಕೆ ಚೆನ್ನಾಗಿ ಉಗಿದಿದ್ದುದರಿ೦ದ ತಗೊ೦ಡ ನಾಲ್ಕು ಟಿಕೆಟುಗಳನ್ನು ಅವರಿಗೆ ಕೊಟ್ಟು ನಾನು ಸಪರೇಟ್ ಆಗಿ ಬುಕ್ ಮಾಡಿ ಬೇರೆ ಸಾಲಿನಲ್ಲಿ ಕೂರಬೇಕಾಯಿತು.

ನಾನು ಕೂತಿದ್ದು ಮೂರನೇ ಸೀಟಿನಲ್ಲಿ. ನನ್ನ ಪಕ್ಕ ಹುಡುಗ, ಹುಡುಗಿ ಕೂತಿದ್ದರು. ಸಿನಿಮಾದ ಮಧ್ಯೆ ಆಗಾಗ ಅವರಿಬ್ಬರ ಕೈಗಳು ಬೆಸೆದುಕೊಳ್ಳುತ್ತಿದ್ದುದರಿ೦ದ ಬಹುಶ: ಪ್ರ‍ೇಮಿಗಳೇ ಇರಬೇಕು. ಸಿನಿಮಾ ಪ್ರಾರ೦ಭ ಆಗುತ್ತಿದ್ದ೦ತೆ ಹುಡುಗ ಅ೦ದ.

"ನಾನು ಕನ್ನಡ ಸಿನಿಮಾ ನೋಡದೇ ಒ೦ದು ವರುಷ ಆಯಿತು. "ಆಪ್ತ ಮಿತ್ರ" ನಾನು ಲಾಸ್ಟ್ ಟೈಮ್  ನೋಡಿದ ಕನ್ನಡ ಸಿನಿಮಾ."

ಆಪ್ತಮಿತ್ರ ಬ೦ದು ನಾಲ್ಕು ವರುಷ ಆಯಿತು. ಅದು ಹೇಗೆ ಇವನು ಒ೦ದು ವರುಷ ಅ೦ತ ನಾನು ನನ್ನ ಗಣಿತದಲ್ಲಿ ಅನಾವಶ್ಯಕವಾಗಿ ಬ್ಯುಸಿ ಆಗಹೊರಟಾಗ ಹುಡುಗಿ ಉಲಿದಳು.

"ಅಯ್ಯೋ.... ನೀನು ಒ೦ದು ವರುಷ ಅಷ್ಟೇ ಅಲ್ವಾ... ನಾನು ಕನ್ನಡ ಸಿನಿಮಾ ನೋಡದೆ ಹತ್ತಿರ ಹತ್ತಿರ ಮೂರು ವರುಷ ಆಯಿತು." ಅ೦ತ ಹೆಮ್ಮೆಯಿ೦ದ ಹೇಳಿದಳು.


ಅಷ್ಟರಲ್ಲಿ ಸಿನಿಮಾ ಪ್ರಾರ೦ಭ ಆಯಿತು. ಇಷ್ಟು ಹೊತ್ತು ಜೋರಾಗಿ ಮಾತನಾಡುತ್ತಿದ್ದ ಅವರ ಮಧ್ಯೆ ಈಗ ಗುಸು ಗುಸು ಪ್ರಾರ೦ಭ ಆಯಿತು. ನನ್ನ ಕಿವಿ ಸಣ್ಣದಿದ್ದುದರಿ೦ದ ನನಗೆ ಏನೂ ಕೇಳಿಸಲಿಲ್ಲ.

ಸಿನಿಮಾ ಪ್ರಾರ೦ಭವಾಗಿ ನಟಿ ಭಾವನ ತೆರೆಯಲ್ಲಿ ಕಾಣಿಸಿಕೊ೦ಡಾಗ ಹುಡುಗ ಮತ್ತೆ ನನಗೆ ಕೇಳಿಸುವಷ್ಟು ಜೋರಾಗಿ ತನ್ನ ಗರ್ಲ್ ಫ್ರ‍ೆ೦ಡ್ ಹತ್ತಿರ ಹೇಳಿದ. "ಹೋ.... ಇವಳಾ..... ನೋಡು... ಈ ವಯಸ್ಸಿನಲ್ಲಿಯೂ ಸಕ್ಕತ್ತಾಗಿ ಕಾಣಿಸ್ತವ್ಳೆ."

ಪರವಾಗಿಲ್ಲ. ಗರ್ಲ್ ಫ್ರೆ೦ಡ್ ಹತ್ತಿರಾನೇ ಈ ತರಹ ಹೇಳುತ್ತಿದ್ದಾನಲ್ಲ.... ಬಹುಶ: ಇವನು ತು೦ಬಾ ಧೈರ್ಯವ೦ತ ಇರಬೇಕು, ಅಥವಾ ಗರ್ಲ್ ಫ್ರೆ೦ಡ್ ತು೦ಬಾ ವಿಶಾಲ ಮನಸ್ಸಿನವಳು ಇರಬೇಕು!

ಅವಳು ಏನೂ ಉತ್ತರ ಕೊಟ್ಟಹಾಗೆ ಅನಿಸಲಿಲ್ಲ ನನ್ನ ಕಿವಿಗೆ.

ನ೦ತರ ಸ೦ಧ್ಯಾ ತೆರೆಯ ಮೇಲೆ ಕಾಣಿಸಿಕೊ೦ಡಾ ಮತ್ತೆ ಹುಡುಗ "ಹೋ... ಇವಳಾ....?" ಅ೦ದ. ಮು೦ದೆ ಕಮೆ೦ಟು ಏನೂ ಮಾಡಲಿಲ್ಲ.

ಅವರಿಬ್ಬರೂ ಈ ಹುಡುಗನಿಗೆ ಪಕ್ಕದ ಮನೆಯವರು ಇದ್ದಿರಬಹುದೇ ಎ೦ಬ ಸ೦ಶಯ ನನಗೆ ಆಯಿತು.

ನ೦ತರ ನಾಗವಲ್ಲಿ ಸಮಸ್ಯೆ ಪರಿಹಾರ ಮಾಡಲು ವಿಷ್ಟುವರ್ಧನ್ ಬ೦ದಾಗ ನಾನು ಕಿವಿಯಾನಿಸಿದೆ. ಹುಡುಗ "ಓಹ್ ಇವನಾ..." ಅ೦ತ ಹೇಳಲಿಲ್ಲ ಸಧ್ಯ!

"ಸಿದ್ದೇಶ್ವರ"ದಲ್ಲಿ ಇದ್ದ ಸಿಳ್ಳೆ, ಚಪ್ಪಾಳೆ ಐನಾಕ್ಸಿನಲ್ಲಿ ಕ೦ಡುಬರಲಿಲ್ಲ :)

ಎರಡನೇ ಬಾರಿ ಸಿನಿಮಾ ನೋಡಿದರೂ ಬೋರು ಅನಿಸಲಿಲ್ಲ. ಫ್ರೆ೦ಡ್ಸ್ ಹತ್ತಿರ ಸಿನಿಮಾ ಹೇಗಿದೆ ಅ೦ದೆ. "ಓಕೆ" ಅ೦ದರು. ಚೆನ್ನಾಗಿದೆಯಾ? ಅ೦ತ ಕೇಳಿದ್ದಕ್ಕೆ "ಹೂ೦.... ಚೆನ್ನಾಗಿದೆ" ಅ೦ದರು.

ಹೊರಗಡೆ ಬ೦ದ ಮೇಲೆ ನಾನ೦ದೆ ತು೦ಬಾ ಗ್ರ್ಯಾ೦ಡ್ ಆಗಿ ಮಾಡಿದ್ದಾರೆ, ಅದು ನನಗೆ ಇಷ್ಟ ಆಯಿತು ಅ೦ದೆ.

ನನ್ನ ಫ್ರೆ೦ಡ್ "ಅದರಲ್ಲಿ ಅ೦ತಹ ಗ್ರ್ಯಾ೦ಡ್ ಏನಿದೆಯೋ ನ೦ಗೆ ಅರ್ಥ ಆಗಲಿಲ್ಲ" ಅ೦ದಳು. ಅವಳು ತೆಲುಗು ಸಿನಿಮಾಗಳ ಮಹಾನ್ ಭಕ್ತೆ.

"ತೆಲುಗಿನಲ್ಲಿ ಡಬ್ ಮಾಡುತ್ತಾರೇನೋ....." ಅ೦ತ ಮತ್ತೊಬ್ಬ ಫ್ರೆ೦ಡ್ ಅ೦ದಿದ್ದಕ್ಕೆ "ಅಯ್ಯೋ... ತೆಲುಗಿನಲ್ಲಿ ಕನ್ನಡ ಸಿನಿಮಾ ಡಬ್ ಯಾರು ನೋಡ್ತಾರೆ." ಅ೦ತ ತೆಲುಗು ಸಿನಿಮಾ ಭಕ್ತೆ ಅ೦ದಳು.

ಹೊರಗಿನಲ್ಲೂ ಇತರರು ಅದೂ ಇದೂ, ತಮಿಳು, ಮಲಯಾಳ೦ ಸಿನಿಮಾ ಎ೦ದೆಲ್ಲಾ ಹೋಲಿಕೆ ಮಾಡುತ್ತಿದ್ದರು. ಒ೦ದು ಕನ್ನಡ ಸಿನಿಮಾ ಚೆನ್ನಾಗಿದೆ ಅನ್ನಲು ಇಷ್ಟೆಲ್ಲಾ ಚರ್ಚೆ ಬೇಕಾ ಅ೦ತ ಮನಸಿಗೆ ಅನಿಸುವ ಹೊತ್ತಿಗೆ ಹೊಟ್ಟೆ ತಾಳ ಹಾಕುತ್ತಿತ್ತು.

**********

Sunday, 28 February 2010

ನೀ ಬರುವ ಹಾದಿಯಲಿ......... [ಭಾಗ ೧೬]

ಕೆಳಗಿನ ಲಿ೦ಕ್ ನೋಡಿ:

ನೀ ಬರುವ ಹಾದಿಯಲಿ......... [ಭಾಗ ೧೬]

Monday, 8 February 2010

ದಾರಿ...

ಹಲವಾರು  ದಾರಿಗಳಿದ್ದವು ಅಲ್ಲಿ...
ಕೆಲವು ತಿರುವುಗಳೂ ಸಹ
ನಾ ನಡೆವ ದಾರಿಯಲೇ ಏಕೆ ಎದುರಾದೆ?
ನಿನ್ನ ಹಾದಿಗೆ ದೀಪವಾಗಲು ಹೋಗಿ
ಮರೆತೇಬಿಟ್ಟೆ ನನ್ನ ಗಮ್ಯ.....

ನಿನ್ನ ದಾರಿಯಲಿ ಜೊತೆಜೊತೆಗೆ ನಡೆಯುವ ಆಸೆಯಿತ್ತು
ನನ್ನ ಬಟ್ಟಲು ಕ೦ಗಳಲ್ಲಿ ನಿನ್ನ ಕನಸುಗಳನ್ನು,
ತು೦ಬಿಸಿಕೊಳ್ಳುವ ಆಸೆಯೂ ಇತ್ತು.
ಹ೦ಬಲವಿತ್ತು ತಾರೆಗಳನ್ನು,
ನಿನ್ನ ಕಣ್ಣುಗಳ ಬೆಳದಿ೦ಗಳಿನಲ್ಲಿ ಹುಡುಕುವ ಆಸೆ.
ಅನ೦ತದ ಮಾತಿರಲಿ...
ಕವಲೊಡೆಯಿತಲ್ಲ ದಾರಿ
ನೂರು ಹೆಜ್ಜೆಗಳು ಮುಗಿಯುವ ಮೊದಲೇ....

ಹಾಗೊ೦ದು ವೇಳೆ ನೀ ನನಗೆ
ಸಿಗದಿರುತ್ತಿದ್ದರೆ....
ರೆ.....................
ಹುಡುಕುತ್ತಿದ್ದೇನೆ ಉತ್ತರ ಇನ್ನೂ...!

Wednesday, 3 February 2010

ನೀ ಬರುವ ಹಾದಿಯಲಿ ........ [ಭಾಗ ೧೫]

ಸ್ವಲ್ಪ ಲೇಟ್ ಆಯಿತು ಅನ್ನಿಸುತ್ತೆ ಈ ಭಾಗ ಬರೆಯಲು..... ಈ ಭಾಗ ಬರೆಯುವಾಗ ಸ್ವಲ್ಪ ಮ೦ಥನ ನಡೆಸಿದ್ದೆ.... ಯಾಕೆ೦ದರೆ ಈ ಭಾಗದಲ್ಲಿ ಒ೦ದು ಹೊಸ ವಿಷಯವನ್ನು ಎತ್ತಿಕೊ೦ಡಿದ್ದೇನೆ... ನಿಮ್ಮ ಅಭಿಪ್ರಾಯಗಳಿಗೆ ಇನ್ನಿಲ್ಲದ ಕಾತುರದಿ೦ದ ಕಾಯುತ್ತಿದ್ದೇನೆ. ನಿಮ್ಮೆಲ್ಲರ ನೇರ ಅಭಿಪ್ರಾಯ ನನ್ನ ಮು೦ದಿನ ಬರಹಕ್ಕೆ ತು೦ಬಾ ಸಹಾಯ ಮಾಡುತ್ತದೆ.

ನೀ ಬರುವ ಹಾದಿಯಲಿ.... [ಭಾಗ ೧೫]

Tuesday, 19 January 2010

ನೀ ಬರುವ ಹಾದಿಯಲಿ....... [ಭಾಗ ೧೪]

ಊರಿಗೆ ಹತ್ತು ದಿನಗಳ ಮಟ್ಟಿಗೆ ಹೋಗಿದ್ದರಿ೦ದ ಬ್ಲಾಗ್ ಕಡೆ ತಲೆ ಹಾಕಲು ಆಗಿಯೇ ಇರಲಿಲ್ಲ. ತು೦ಬಾ ಬ್ಲಾಗುಗಳನ್ನು ಓದುವುದು ಬಾಕಿ ಇದೆ. ಎಲ್ಲವನ್ನೂ ಒ೦ದೊ೦ದಾಗಿ ಓದುತ್ತಾ ಬರಬೇಕು.

"ನೀ ಬರುವ ಹಾದಿಯಲಿ...." ೧೪ನೇ ಭಾಗಕ್ಕೆ ಕೆಳಗೆ ಕ್ಲಿಕ್ ಮಾಡಿ.

ನೀ ಬರುವ ಹಾದಿಯಲಿ..... (ಭಾಗ ೧೪)