Saturday, 26 June 2010

मुंबई ಬಿಟ್ಸ್....!

ನೆನ್ನೆ ಮುಂಬೈನಲ್ಲಿ ಆಲ್ಮೋಸ್ಟ್ ಸೆಟಲ್ ಆಗಿಬಿಟ್ಟೆ!

ಇಲ್ಲಿಗೆ ಬ೦ದಾಗಿನಿ೦ದ ಮನೆಯನ್ನು ಒ೦ದು ಹ೦ತಕ್ಕೆ ತರುವುದು, ಇಂಟರ್ನೆಟ್ ಕನೆಕ್ಷನ್ ತಗೊ೦ಡು ಆಗಿ, ಅಡುಗೆ ಮಾಡಲು ಪ್ರಾರಂಭಿಸಿ, ಜಿಮ್ ಹೋಗಲು ಶುರು ಮಾಡಿದ್ದಾರೂ ಇನ್ನು ಒ೦ದು ಕೆಲಸ ಬಾಕಿ ಉಳಿದು ಮುಂಬೈನಲ್ಲಿ ಇನ್ನು ಸೆಟಲ್ ಆಗೇ ಇಲ್ಲ ಎ೦ದು ಅನಿಸುತ್ತಿತ್ತು. ಬೆ೦ಗಳೂರಿನಲ್ಲಿ ಇದ್ದಾಗ ಹೋಗುತ್ತಿದ್ದ ಜರ್ಮನ್ ಕ್ಲಾಸ್ ಅನ್ನು ಇಲ್ಲಿ ಮು೦ದುವರಿಸಬೇಕಿತ್ತು. ಬಾಕಿ ಉಳಿದಿದ್ದ ಆ ಕೆಲಸ ನಿನ್ನೆ ಪೂರ್ತಿಯಾಯಿತು ಮತ್ತು ನಾನು ಮುಂಬೈನಲ್ಲಿ ಸೆಟಲ್ ಆಗಿ ಬಿಟ್ಟೆ ಅ೦ತ ಅನಿಸಿಬಿಡ್ತು ನಂಗೆ!

ಮುಂಬೈಗೆ ಬರುವ ಮೊದಲೇ ನಿರ್ಧರಿಸಿದ್ದೆ, ಇಷ್ಟು ದಿನ ಪಿ.ಜಿ.ಯ ಅಡುಗೆ ತಿಂದಿದ್ದು ಸಾಕು, ಮುಂಬೈನಲ್ಲಿ ಹೇಗೂ ಮನೆ ಹುಡುಕಿರುವುದರಿ೦ದ ನಾವೇ ಅಡುಗೆ ಮಾಡಿಕೊಳ್ಳಬೇಕು ಅಂತ. ಪಿ.ಜಿ.ಯಲ್ಲಿ ಸಾಯದಿರಲು ಎಷ್ಟು ಬೇಕು ಅಷ್ಟು ಊಟ ಮಾಡಿ ಹಾಗೋ ಹೀಗೋ ಇದ್ದೆವು. ಅದೇ ಸೀನ್ ಮುಂಬೈನಲ್ಲಿ ಪುನಾರವರ್ತನೆಯಾಗುವುದು ಬೇಡವಿತ್ತು. ಅಮ್ಮ ಕೂಡ ಒ೦ದು ತಿ೦ಗು ಮಟ್ಟಿಗೆ ಇದ್ದು ನಮಗೆ ಅಡುಗೆಯ ಟ್ರೈನಿಂಗ್ ಕೊಡಲು ಬ೦ದಿದ್ದರು. ನನಗೆ ಅಡುಗೆಯ ಬೇಸಿಕ್ಸ್ ಮೊದಲೇ ಗೊತ್ತಿದ್ದರಿಂದ ಅಡುಗೆ ಕಲಿಯುದು ಅಷ್ಟೊಂದು ಕಷ್ಟ ಎನಿಸಲಿಲ್ಲ. ನನ್ನ ರೂಮಿಗೆ ಆಡುಗೆ ಬಗ್ಗೆ ಸ್ವಲ್ಪವೂ ಗೊತ್ತಿರಲಿಲ್ಲ. ತುರಿಮಣೆಗೆ ನೋವಾಗುತ್ತದೆ ಅನ್ನುವ ಹಾಗೆ ತೆ೦ಗಿನ ಕಾಯಿ ತುರಿಯುತ್ತಿದ್ದ ಹುಡುಗ ಈಗ ನನ್ನನ್ನು ಮೀರಿಸುವ ಹಾಗೆ ಅಡುಗೆ ಮಾಡುತ್ತಾನೆ! ಇರಲಿ.... ಬೇರೆಯವರ ಉನ್ನತಿ ಕ೦ಡು ಕರುಬ ಬಾರದ೦ತೆ. ಹಾಗಾಗಿ ನಾನು ಸ೦ತೋಷದಿ೦ದ ಅವನು ಮಾಡಿ ಹಾಕಿದ್ದನ್ನು ತಿನ್ನುತ್ತೇನೆ ;)

ಅಮ್ಮ ಮು೦ಬೈನಿ೦ದ ಹೋದ ನ೦ತರ ಒ೦ದೆರದು ಸಲ ನಾನು ಕೈ ಸುತ್ತುಕೊ೦ಡಿದ್ದು ಬಿಟ್ಟರ್ ನಮ್ಮ ಅಡುಗೆಯೇನು ಅಂತ ಫ್ಲಾಪ್ ಷೋ ಏನು ಆಗಿಲ್ಲ. ಕಾದಂಬರಿಗಳಲ್ಲಿ ಬರೆಯುವಂತೆ ಗ೦ಡು ಹುಡುಗರು ಅಡುಗೆ ಮಾಡಲು ಹೊರಟಾಗ ಆಗುವ ಅನಾಹುತಗಳು, ಏನೋ ಮಾಡಲು ಹೋಗಿ ಮತ್ತೇನೋ ಆಗುವುದು, ಅಂತಹುದು ಎಲ್ಲಾ ಏನು ಆಗಿಲ್ಲ ಅನ್ನುವುದು ಸ೦ತೋಷದ ಸ೦ಗತಿ. ನಮ್ಮ ಅಡುಗೆ ಕಾರ್ಯಕ್ರಮ ಸುಗಮವಾಗಿ ಸಾಗುತ್ತಿದೆ. ಸೊ ಫಾರ್ ಸೊ ಗುಡ್!

ನಾನು ಬೆಳಗ್ಗಿನ ತಿಂಡಿ ಮಾಡುವುದು ಮತ್ತು ನನ್ನ ರೂಮಿ ಮಾಧ್ಯಾಹ್ನದ ಅಡುಗೆ ಮಾಡುತ್ತಾನೆ. ಮೊನ್ನೆ ಆದಿತ್ಯವಾರ ಅವನಿಗೆ ಪರೀಕ್ಷೆ ಇದ್ದಿದ್ದರಿಂದ ಎರಡು ಕೂಡ ನಾನೇ ಮಾಡಬೇಕಾಗಿ ಬಂತು. ಅವತ್ತು ಬೆ೦ಡೆ ಸಾರು. ಒಗ್ಗರಣೆಗೆ ಎಣ್ಣೆ ಇಟ್ಟು, ನೀರುಳ್ಳಿ ಸೇರಿಸಿ ಆದ ಮೇಲೆ ಬೆಳ್ಳುಳ್ಳಿ ಹಾಕಿಲ್ಲ ಅನ್ನುವುದು ಮರೆತು ಹೋಯಿತು. ಸರಿ ಬೇಗ ಓಡಿ ಹೋಗಿ ಚಾವಡಿಯಲ್ಲಿ ಇದ್ದ ಬುಟ್ಟಿಯಿಂದ ಬೆಳ್ಳುಳ್ಳಿಯ ಎಸಳನ್ನು ತಂದು ಕೈಗೆ ಸಿಕ್ಕಿದ ಏನೋ ಒ೦ದರಿ೦ದ ಬೆಳ್ಳುಳ್ಳಿಯನ್ನು ಜಜ್ಜಿ ಒಗ್ಗರಣೆಗೆ ಸೇರಿಸಿದೆ. ಸಾರಿನ ಕಾರ್ಯಕ್ರಮ ಆದ ನ೦ತರ ಅನ್ನದ ಕಾರ್ಯಕ್ರಮ. ಕುಕ್ಕರಿಗೆ ಅಕ್ಕಿ ಹಾಕಿ, ನೀರು ಸೇರಿಸಿ ಒಲೆಯ ಮೇಲೆ ಇಟ್ಟು ಲೈಟರಿನಿಂದ ಗ್ಯಾಸಿನ ಒಲೆಯನ್ನು ಉರಿಸಲು ನೋಡಿದರೆ ಬೆ೦ಕಿಯೇ ಹತ್ತಿ ಕೊಳ್ಳುತ್ತಿಲ್ಲ! ಲೈಟರಿನಿ೦ದ ಎಷ್ಟೇ ಸ್ಟ್ರೈಕ್ ಮಾಡಿದರು ಬೆ೦ಕಿಯೇ ಹತ್ತಿಕೊಳ್ಳಲಿಲ್ಲ. ನನ್ನ ರೂಮಿಯನ್ನು ಕರೆದು, ಅವನು ಚೆಕ್ ಮಾಡಿದರೂ ಓಲೆ ಉರಿಯಲೇ ಇಲ್ಲ. ಅಯ್ಯೋ ಗ್ಯಾಸ್ ಏನಾದರೂ ಮುಗಿದು ಹೋಯ್ತಾ ಅನ್ನೋ ಟೆನ್ಶನ್ ಆಯಿತು. ಆದರೆ ಈಗ ತಾನೇ ಸಾರು ಮಾಡಿದ್ದೇನೆ, ಅಷ್ಟು ಬೇಗ ಮುಗಿದು ಹೋಯಿತಾ ಅ೦ತ ಯೋಚಿಸಿದಾಗ ಥಟ್ ಅ೦ತ ಹೊಳೆಯಿತು. ಲೈಟರ್ ಅನ್ನು ಸರಿಯಾಗಿ ಸರಿಯಾಗಿ ಚೆಕ್ ಮಾಡಿದರೆ ಕಿಡಿ ಬರುವ ಜಾಗದಲ್ಲಿ ಬೆಳ್ಳುಳ್ಳಿ ಕೂತು ಬಿಟ್ಟಿದೆ! ಕೈಗೆ ಏನೋ ಸಿಕ್ಕಿದರಿ೦ದ ಬೆಳ್ಳುಳ್ಳಿ ಜಜ್ಜಿದ್ದು ಅ೦ದೆನಲ್ಲ, ಅದು  ಲೈಟರಿನಿಂದಲೇ ಜಜ್ಜಿದ್ದು!

******************
 ಜರ್ಮನ್ ಕ್ಲಾಸಿಗೆ ಸೇರಿದೆ ಅ೦ದೆನಲ್ಲ ಆಗಲೇ. ಅವತ್ತು ಸ೦ಜೆ ಆಫೀಸು ವೇಳೆಯಲ್ಲಿ ಹೋಗಿದ್ದು ನಾನು ರಿಜಿಸ್ಟ್ರೇಶನ್ ಮಾಡಲು. ಸ೦ಜೆ ಆರರಿ೦ದ ಎ೦ಟು ಗ೦ಟೆಯೊಳಗೆ ಮಾಡಬೇಕಿತ್ತು ರೆಜಿಸ್ತ್ರೆಶನ್! ಆರು ಗಂಟೆಗೆ ಮ್ಯಾನೇಜರ್ ಪರ್ಮಿಶನ್ ಕೇಳಿ ಆಟೋ ಹಿಡಿದುಕೊ೦ಡು ಐ.ಸಿ.ಐ.ಸಿ.ಐ ಬ್ಯಾ೦ಕಿಗೆ ಹೋಗಿ ಡಿ.ಡಿ. ತೆಗೆದುಕೊ೦ಡು ರಿಕ್ಷಾದಿಂದ ನಮ್ಮ ಆಫೀಸಿನಿಂದ ಸಾಕಷ್ಟು ದೂರದಲ್ಲಿ ಇರುವ ನೌಪಡ ಎ೦ಬಲ್ಲಿಗೆ ಹೋಗಿ ಫೀಸು ಕಟ್ಟಿ ರೆಜಿಸ್ತ್ರೆಶನ್ ಮಾಡಿಸಿದೆ. ಹೊರಗೆ ಬರುವ ಹೊತ್ತಿಗೆ ಜೋರು ಮಳೆ. ಕೊಡೆ ಇತ್ತಾದರೂ ಮಳೆಯ ರಭಸದಲ್ಲಿ ಒದ್ದೆ ಆಗುವುದು ತಪ್ಪಲಿಲ್ಲ. ಆಗಲೇ ಗ೦ಟೆ ಏಳು ಆಗಿತ್ತು. ಆದಷ್ಟು ಬೇಗ ಆಟೋ ಹಿಡಿದುಕೊ೦ಡು ಆಫೀಸಿಗೆ ಹೋಗೋಣ ಎ೦ದುಕೊ೦ಡರೆ ಒಬ್ಬ ರಿಕ್ಷಾದವನು ಕೂಡ ಬರೋಕೆ ಒಪ್ಪಲಿಲ್ಲ. ಆಟೋಗಾಗಿಯೇ ಒಂದು ಗಂಟೆ ಅಲ್ಲಿ ನಿ೦ತು ಕಾಯ್ತಾ ಇದ್ದೆ. ಆಗಲೇ ರಸ್ತೆಯಲ್ಲಿ ಜುಳು ಜುಳು ನೀರು ಮತ್ತು ಧಾರಾಕಾರ ಮಳೆ. ನನ್ನನ್ನು ಬಿಟ್ಟರೆ ಇನ್ನೊ೦ದು ಹೆ೦ಗಸು ಆಟೋ ಹಿಡಿದುಕೊಳ್ಳಲು ತುಂಬಾ ಪ್ರಯತ್ನ ಮಾಡುತ್ತಿದ್ದರು. ಅಷ್ಟೊಂದು ಬೆಳಕು ಇರಲಿಲ್ಲ ರೋಡಿನಲ್ಲಿ. ಆದರಿಂದ ಬರುವ ವಾಹನಗಳು ಕೂಡ ಸರಿಯಾಗಿ ಕಾಣಿಸುತ್ತಿರಲಿಲ್ಲ. ಕಾದು ಕಾದು ಸುಸ್ತಾಗಿ ಆ ಹೆಂಗಸು ನಡೆದುಕೊ೦ಡು ಎತ್ತಲೋ ಹೋಗಿಬಿಟ್ಟರು. ನಾನೊಬ್ಬನೇ ಉಳಿದೆ ರೋಡಿನಲ್ಲಿ. ನನಗೆ ಲೆಫ್ಟ್ ಗೆ ಹೋಗಬೇಕೋ ರೈಟ್ ಗೆ ಹೋಗಬೇಕೋ ಅನ್ನುವ ಗೊ೦ದಲ. ನಾನು ದಾರಿಗಳನ್ನು ನೆನಪಿಟ್ಟು ಕೊಳ್ಳಬೇಕಾದರೆ ಆ ದಾರಿಯಲ್ಲಿ ಒಂದು ಹತ್ತು ಸಲವಾದರೂ ಹೋಗಬೇಕು. ಕೊನೆಗೆ ಇರಲಿ ಎ೦ದು ರೈಟ್ ತಗೊಂಡು ರಸ್ತೆಯಲ್ಲಿ ನಡೆದೆ. ರಸ್ತೆ ತುಂಬಾ ನೀರು ಇದ್ದುದರಿ೦ದ ಶೂ ಒಳಗೆ ನೀರು ಹೋಗಿ ಬಿಟ್ಟಿತ್ತು. ಮ್ಯಾನ್ ಹೋಲ್ ಇರಬಹುದೇ ಎ೦ಬ ಭಯ ಕೂಡ ಸುಳಿದು ಹೋಯಿತು. ಎದುರಿನಲ್ಲಿ ಬರುತ್ತಿದ್ದ ವ್ಯಕ್ತಿ ಒಬ್ಬರಲ್ಲಿ ಥಾಣೆ ಸ್ಟೇಷನಿಗೆ ಹೇಗೆ ಹೋಗುವುದು ಅಂತ ಕೇಳಿದೆ. ಪುಣ್ಯಕ್ಕೆ ನಾನು ಸರಿಯಾದ ದಿಕ್ಕಿನಲ್ಲಿಯೇ ನಡೆದುಕೊಂಡು ಬಂದಿದ್ದೆ. ಸ್ವಲ್ಪ ದೂರ ಹೋದಾಗ ಒಂದು ಮೇನ್ ರೋಡ ಸಿಕ್ಕಿತು. ಆ ರೋಡಿನಲ್ಲಿ ಕೂಡ ರಿಕ್ಷಾ ಹಿಡಿಯಲು ಪ್ರಯತ್ನಿಸಿದೆ. ಖಾಲಿ ಖಾಲಿ ಇದ್ದರೂ ಒಬ್ಬರು ಕೂಡ ಬರಲಿಲ್ಲ. ಇನ್ನೊ೦ದು ಹೆ೦ಗಸು ಬಹುಷಃ ಆಫೀಸು ಮುಗಿಸಿ ಬಂದಿರಬೇಕು. ಕೊಡೆ ಇಲ್ಲದೆ ಮಳೆಯಲ್ಲಿ ಪೂರ್ಣ ಒದ್ದೆಯಾಗಿ ನೆನೆಯುತ್ತಲೇ ಆಟೋ ಹಿಡಿಯಲು ಪ್ರಯತ್ನ ಮಾಡುತ್ತಿದ್ದರು. ಆಟೋದವರ ಮೇಲೆ ನನಗೆ ಅಸಾಧ್ಯ ಸಿಟ್ಟು ಬ೦ತು. ನಾನು ಇನ್ನು ಆಟೋಗೆ ಪ್ರಯತ್ನ ಮಾಡುವುದು ಬಿಟ್ಟು ನೇರ ಸ್ಟೇಷನ್ ಗೆ ಹೋದರೆ ಅಲ್ಲಿಯಾದರೂ ಆಟೋ ಸಿಗಬಹುದು ಎ೦ದು ಸ್ಟೇಷನ್ ಗೆ ನಡೆದೆ. ಸ್ಟೇಷನ್ ಮುಟ್ಟಿದರೆ ಆಟೋಗಾಗಿ ಹನುಮಂತನ ಬಾಲಕ್ಕಿಂತಲೂ ಉದ್ದದ ಕ್ಯು ಇತ್ತು. ಬಸ್ ಸ್ಟ್ಯಾಂಡಿಗೆ ಹೋದರೆ ಅಲ್ಲೋ ತುಂಬಾ ಜನ. ಹೀಗೆ ಬಸ್ ಸ್ಟ್ಯಾಂಡಿಗೆ ಆಟೋ ಸ್ಟ್ಯಾಂಡಿಗೆ ಎರಡು ಸಲ ಹೋಗಿ ಬಂದು ಕೊನೆಗೆ ಬಸ್ಸೇ ಹಿತ ಎ೦ದು ನಿರ್ಧರಿಸಿ ಬಸ್ಸು ಸ್ಟ್ಯಾಂಡಿಗೆ ಹೋಗಿ ನಿಂತೆ. ಬಸ್ಸಿಗಾಗಿ ಅರ್ಧ ಗಂಟೆ ಕಾದು ಅಂತು ಇಂತೂ ಆಫೀಸ್ ಮುಟ್ಟುವಾಗ ಗಂಟೆ ಹತ್ತು!

ಮ್ಯಾನೇಜರ್ ಹತ್ತಿರ ಲೇಟ್ ಆಗಿದ್ದಕ್ಕೆ ಸಾರೀ ಕೇಳಿ ಆಟೋದವರಿಗೆ ಮನಸಿನಲ್ಲಿಯೇ ಒಂದಿಷ್ಟು ಶಾಪ ಕೊಟ್ಟೆ. ಆದರೂ ಇಲ್ಲಿನ ಆಟೋದವರು ಬೆ೦ಗಳೂರಿನ ಆಟೋದವರಿಗಿಂತ ಎಷ್ಟೋ ವಾಸಿ. ಇಲ್ಲಿ ಎಲ್ಲಿಗೆ ಹೋಗುವುದಿದ್ದರೂ ಮೀಟರ್ ಹಾಕುತ್ತಾರೆ. ರಾತ್ರಿ ಹನ್ನೊಂದು ಗಂಟೆವರೆಗೂ ಕೂಡ ಮೀಟರ್ ಹಾಕಿಯೇ ಕರೆದುಕೊಂಡು ಹೋಗುತ್ತಾರೆ. ಮೊನ್ನೆ ಬೆಂಗಳೂರಿಗೆ ಬಂದಿದ್ದಾಗ ನಾನು ಆಚೀಚೆ ಹೋಗುವಾಗ ಒಬ್ಬ ಆಟೋದವನು ಕೂಡ ಮೀಟರ್ ಹಾಕಲಿಲ್ಲ. ಯಾಕೋ ನಾನು ಬೆಂಗಳೂರು ಬಿಟ್ಟು ಬಂದ ಮೇಲೆ ಆಟೋದವರು ಮೀಟರ್ ಹಾಕುವುದನ್ನೇ ನಿಲ್ಲಿಸಿಬಿಟ್ಟಿದ್ದಾರಪ್ಪ!

[ನೀ ಬರುವ ಹಾದಿಯಲಿ... ಮೂಲೆ ಬಿದ್ದಿದೆ. ಕ್ಷಮಿಸಿm ಆದಷ್ಟು ಬೇಗ ಧೂಳು ಒರೆಸಿ ಅದನ್ನು ನಿಮ್ಮ ಮುಂದಿಡುತ್ತೇನೆ.]