Monday, 31 May 2010

ಮಳೆ ಬರುವ ಹಾಗಿದೆ.....!ಬೆ೦ಗಳೂರಿನಲ್ಲಿ ನಾಲ್ಕು ದಿನಗಳಿಂದ ಮಳೆ, ಉಡುಪಿಯಲ್ಲಿ ಕೂಡ ಮಳೆ ಸುರಿಯಿತ೦ತೆ. ಲೈಲಾ ಮಜ್ನು ಎಫೆಕ್ಟ್ ಇ೦ದ ಅಲ್ಲೆಲ್ಲಾ ಮಳೆ ಆಗುತ್ತಿದ್ದರೆ ನಾನು ಅ೦ದು ಕೊಳ್ಳುತ್ತಿದ್ದೆ ಈ ಸುಡುಗಾಡಿನಲ್ಲಿ ಯಾವಾಗ ಮಳೆ ಆಗುತ್ತೋ ಅಂತ. ನಾನು ಥಾಣೆಗೆ ಬ೦ದಾಗಿನಿ೦ದ ಒ೦ದು ದಿನವೂ ಮಳೆ ಆಗಿಲ್ಲ. ಒ೦ದೆರದು ದಿನ ಮೋಡ ಕವಿದ ವಾತಾವರಣ ಇದ್ದ ದಿನ ಮಳೆ ಬರುತ್ತೆ ಅ೦ತ ಕಾದಿದ್ದೇ ಬ೦ತು. ಇಲ್ಲಿ ಮಳೆ ಆಗುವುದು ತಡ ಅಂತೆ :( ಆದರೆ ಮಳೆಯ ಬಗ್ಗೆ ಇಷ್ಟೊ೦ದು ಕನವರಿಸಿದ್ದಕ್ಕೆ ಇರಬೇಕು ಮಳೆಯ ಸ್ನೇಹಿತರೆಲ್ಲಾ ಬ೦ದು ನನ್ನನ್ನು ವಿಸಿಟ್ ಮಾಡಿ ಹೋದರು. ತತ್ಪರಿಣಾಮ ಗ೦ಟಲು ನೋವು, ಶೀತ, ಜ್ವರ, ಕೆಮ್ಮು ಎಲ್ಲರಿ೦ದಲೂ ನಾಲ್ಕು ದಿನ ಉಪಚರಿಸಿಕೊ೦ಡು, ಇನ್ನು ಮಳೆಯ ಬಗ್ಗೆ ಬರೆಯದೆ ಇರಲಾರೆ ಅನ್ನುವ ಸ್ಥಿತಿಗೆ ತಲುಪಿ ಪೆನ್ನು ಹಿಡಿದು ಕೂತಿದ್ದೇನೆ, ಅಲ್ಲಲ್ಲ ಕುಟ್ಟುತ್ತ ಕೂತಿದ್ದೇನೆ!


ನೆನಪುಗಳ ಬೆನ್ನು ಹತ್ತಿ ಹೊರಟರೆ ನನಗೆ ನೆನಪಿಗೆ ಬರುವುದು ಕರಾವಳಿಯ ನನ್ನ ಊರಿನ ಕುಂಭದ್ರೋಣ  ಮಳೆ. ಆ ನೆನಪುಗಳು ನನ್ನಲ್ಲಿ ಸದಾ ಪುಳಕ ಮೂಡಿಸುತ್ತವೆ. ಬೇಸಿಗೆಯಲ್ಲಿ ನಮಗೆ ಮಕ್ಕಳೆಲ್ಲರಿಗೂ ಮಾವಿನ ತೋಪು, ಗೇರು ಹಣ್ಣು ತೋಪು, ನೇರಳೆ ಮರ ಸುತ್ತುವುದೇ ಕೆಲಸ. ಎಲ್ಲೆಲ್ಲಾ ಮಾವಿನ ಮರಗಳು ಇವೆಯೂ ಅಲ್ಲೆಲ್ಲ ನಮ್ಮ ಭಂಡಾರ ಹೊರಡುತ್ತಿತ್ತು. ಮಾವಿನ ಮರಕ್ಕೆ ಕಲ್ಲು ಬೀಸಿ ಮಾವಿನ ಕಾಯಿ ಬೀಳಿಸುವುದು, ಮರದೊಡೆಯ ದೂರದಿ೦ದ ಕೂಗುತ್ತಾ ಬ೦ದಾಗ ಓಡಿ ಹೋಗಿ ಮನೆಯ ಹುಲ್ಲಿನ ಬಣವೆಯ ಹಿಂದೆ ಅಡಗಿಕೊಳ್ಳುವುದು. ಬೆಳಕು ಹರಿಯುವ ಮೊದಲೇ ನಾವು ಮಕ್ಕಳೆಲ್ಲರೂ ಎದ್ದು ಮಾವಿನ ಮರದಡಿ ಜಮಾಯಿಸುತ್ತಿದ್ದೆವು. ಪಕ್ಕದ ಮನೆಯ ಯಶೋದ, ಪ್ರೇಮ, ಕಿಟ್ಟ, ನಾನು ಮತ್ತು ನನ್ನ ತ೦ಗಿ ಎಲ್ಲರ ಮದ್ಯೆಯೂ ಸ್ಪರ್ಧೆ ಇರುತ್ತಿತ್ತು ಮಾವಿನ ಹಣ್ಣು ಹೆಕ್ಕಲು. ಅದರ ನ೦ತರದ ಕೆಲಸ ಗೇರು ತೋಟಕ್ಕೆ ಹೋಗಿ ಗೇರು ಬೀಜ ಹೆಕ್ಕುವುದು. ಗೇರು ಬೀಜ ಮಾರಿ ಬರುವ ಹಣ ನಮ್ಮ ಬೇಸಿಗೆ ಸಂಪಾದನೆ ಆಗುತ್ತಿತ್ತು. ಆ ಹಣವನ್ನು ಊರಿನ  ಭೂತ ಕೋಲದಲ್ಲಿ  ಮಿಟಾಯಿ, ಉ೦ಡೆ ತೆಗೆದು ಕೊಳ್ಳಲು ವಿನಿಯೋಗಿಸುತ್ತಿದ್ದೆವು ಮತ್ತು ಉಳಿದ ಹಣ ಶಾಲೆ ಶುರುವಾದಾಗ ಪುಸ್ತಕ, ಪೆನ್ಸಿಲ್ ತೆಗೆದುಕೊಳ್ಳಲು ಹೋಗುತ್ತಿತ್ತು. ಹೀಗೆ ನಮ್ಮ ಬೇಸಿಗೆ ಸಾಗುತ್ತಿರುವಾಗ ಮೇಯಲ್ಲಿ ಯಾವಾಗಲಾದರೂ ಒ೦ದು ದಿನ ಅಚಾನಕ್ ಆಗಿ ಮಳೆ ಬ೦ದು ಬಿಡುತ್ತಿತ್ತು. ಅದ್ಯಾವ ಮಾಯೆಯಿಂದಲೋ ಸುಳಿವೇ ನೀಡದ೦ತೆ ಮಳೆ ಬ೦ದು ಹೋಗುತ್ತಿತ್ತು. ಹೊರಗೆ ಮಳೆ ಧೋ ಎ೦ದು ಸುರಿಯುತ್ತಿರುವಾಗ ಬೇಸಿಗೆಯ ದಗೆಗೆ ನೆಲದ ಮೇಲೆ ಮಲಗಿದ ನಮಗೆ ಜೋಗುಳ ಮತ್ತು ಮೈಯಲ್ಲಿ ಚಳಿಯಿಂದ ಸಣ್ಣಗೆ ನಡುಕ. ಮನೆಯ ಹೆ೦ಚಿನ ಮೇಲೆ ಮಳೆ ಹನಿ ತಟಪಟ ಸದ್ದು ಮಾಡುವಾಗ ಮೊದಲ ಮಳೆಯ ಪುಳಕ. ಮಾವಿನ ಮರದಿಂದ ಮಾವುಗಳು ಉರುಳಿ ಬೀಳುವ ಸದ್ದು ಕೇಳುವಾಗ ಇನ್ನು ಸಂತೋಷ.....

ಮಳೆಯ ಮರುದಿನ ಎ೦ದಿಗಿ೦ತಲೂ ಬೇಗನೆ ಏಳುತ್ತಿದ್ದೆವು. ಏಕೆ೦ದರೆ ಮಳೆಗಾಳಿಗೆ ಮಾವು, ಗೇರುಗಳು ಹೇರಳವಾಗಿ ಉದುರಿ ಬಿದ್ದಿರುತ್ತವೆ.ಮೊದಲ ಮಳೆಯ ಮರುದಿನ ಏನೋ ಆಲಸ್ಯ. ಮೊದಲ ಮಳೆಗೆ ಬರುವ ಆ ಮಣ್ಣಿನ ಪರಿಮಳ, ನೆಲದ ಪಸೆ, ತೋಡಿನಲ್ಲಿ ಹರಿದ ನೀರು, ಅಲ್ಲಲ್ಲಿ ಗು೦ಪು ಗು೦ಪಾಗಿರುವ ಒದ್ದೆ ತರಗೆಲೆ, ಹೆಚ್ಚಿದ ಸೆಕೆಯಿ೦ದ ಮೈಯಿಂದ ಸತತವಾಗಿ ಹರಿವು ಬೆವರು ಮತ್ತು ಉರಿಯುವ ಬೆವರು ಸಾಲೆ ಇಲ್ಲವೋ ಸೇರಿ ಮನಸು ಜಡ್ಡು ಗಟ್ಟುವ ಹಾಗೆ ಮಾಡುತ್ತದೆ.

ಜೂನ್ ಬ೦ದರೆ ಶಾಲೆ ಶುರು. ಮಳೆಯ ಆರ್ಭಟ ಕೂಡ ಚುರುಕುಗೊಳ್ಳುವ ಸಮಯ. ರೈನ್ ಕೋಟ್ ಹಾಕಿಕೊಡು ಗದ್ದೆಯ ಬದುವಿನಲ್ಲಿ ಪಚಪಚ ಕೆಸರಿನಲ್ಲಿ ನಡೆದುಕೊ೦ಡು ಹೋಗುವಾಗ ಮಳೆ ಸುರಿಯುತ್ತಿತ್ತು. ಸಹಪಾಟಿಗಳು  ಕೊಡೆಯನ್ನು ಗಿರಗಿರನೆ ತಿರುಗಿಸಿ ಪಕ್ಕದವರ ಮೇಲೆ ನೀರು ಸಿಡಿಸುವಾಗ ನನಗೂ ಕೊಡೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎ೦ಬ ಆಸೆ ಹುಟ್ಟಿತ್ತು. ಮಳೆಯ ಧೋ ಸದ್ದಿಗೆ ಅರ್ಧಂಬರ್ಧ ಕೇಳುವ ಮಾತುಗಳು, ಆಲದ ಮರದ ಕೆಳಗೆ ನಡೆದು ಹೋಗುವಾಗ ಎಲೆಗಳಿಂದ ಉದುರುವ ಹನಿಗಳ ಚಿಟಪಟ ಸದ್ದು, ಆಲದ ಮರ ಗಾಳಿಗೆ ಉರುಳಿ ಬೀಳಬಹುದು ಎ೦ದು ಬೇಗ ಬೇಗನೆ ನಡೆಯುತ್ತಿದ್ದುದು, ಏರನ್ನು ಏರುವಾಗ ಪ್ರೇಮ ಕಾಲು ಜಾರಿ ಬಿದ್ದು ಮೈಯೆಲ್ಲಾ ಒದ್ದೆ ಮಾಡಿಕೊಂಡಿದ್ದು, ಕಿಟ್ಟನ ಕೊಡೆಯ ಹೊದಿಕೆ ಗಾಳಿಗೆ ಉಲ್ಟಾ ಪಲ್ಟ ಆಗಿ, ನಾವೆಲ್ಲರೂ ಅದನ್ನು ಸರಿ ಪಡಿಸಲು ಹೋಗಿ ಅವನ ಜೊತೆಗೆ ಒದ್ದೆ ಆಗಿದ್ದು, ನನ್ನ ಗೆಳೆಯನ ಕೊಡೆ ಗಾಳಿಗೆ ಹಾರಿ ಹೋಗಿ ಅದನ್ನು ಹಿಡಿಯಲು ನಾವೆಲ್ಲರೂ ಹಿಂದೆ ಓಡಿ ಹೋಗಿದ್ದು, ಮಣ್ಣು ರಸ್ತೆಯ ಬದಿಯಲ್ಲಿ ಸಣ್ಣದಾಗಿ ಕಾಲುವೆಯಂತೆ ಹರಿಯುವ ನೀರನ್ನು ಕಾಲಿನಿಂದ ಚಿಮ್ಮುತ್ತಾ ಸಾಗಿದ್ದು, ಆಡುತ್ತ ಮಳೆಯಲ್ಲಿ ತೋಯ್ದು ಒದ್ದೆ ಬಟ್ಟೆಯಲ್ಲಿಯೇ ಮರದ ಬೆ೦ಚಿನಲ್ಲಿ ಕೂತಿದ್ದು, ಕೂತ ಜಾಗದಲ್ಲಿ ಒದ್ದೆಯಿಂದ ಅಚ್ಚು ಮೂಡಿ ಗೆಳೆಯರು ತಮಾಷೆ ಮಾಡಿ ನಗುತ್ತಿದ್ದುದು ಎಷ್ಟೊಂದು ನೆನಪುಗಳು ಈ ಮಳೆಯ ಜೊತೆಗೆ! ಕನವರಿಸುತ್ತಾ ಕೂತರೆ ಮನಸೇ ನೆನಪುಗಳ ಮಳೆಯಲ್ಲಿ ಒದ್ದೆಯಾಗುವಷ್ಟು!

ಪಾಠ ಇಲ್ಲದಿದ್ದಾಗ ಕಿಟಕಿಯಿ೦ದ ಹೊರಗಡೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ನೋಡುತ್ತಾ ನಿಲ್ಲುತ್ತಿದ್ದೆವು. ಎಷ್ಟು ರಭಸವಾಗಿ ಮಳೆ ಸುರಿಯುತ್ತಿತ್ತು ಎ೦ದರೆ ಮಳೆ ಬಿಟ್ಟರೆ ಮತ್ತೇನು ಕಾಣಿಸದಷ್ಟು ಜೋರಾಗಿರುತ್ತಿತ್ತು ಮಳೆ. ಕಿಟಕಿಯಿಂದ ಕಾಣಿಸುವ ಅ೦ಗನವಾಡಿಯ ಹೆ೦ಚಿನ ಮೇಲೆ ಮಳೆ ಹನಿ ಬಡಿದು ನೀರು ಚಿಮ್ಮುವಾಗ ಮೂಡುವ ಚಿತ್ತಾರ ಎಲ್ಲವನ್ನೂ ಬೊಗಸೆ ಕ೦ಗಳಿಂದ  ನೋಡಿ ಆನ೦ದಿಸುತ್ತಿದ್ದೆವ. ಅಲ್ಲಿರುತ್ತಿದ್ದುದ್ದು ಪ್ರಕೃತಿಯ ಸ್ನಿಗ್ಧ ಸೌಂದರ್ಯ ಮತ್ತು ಅದನ್ನು ಸವಿಯುವ ಮುಗ್ಧ ಮನಸು ಹಾಗು ಸು೦ದರ ಬಾಲ್ಯ. ನೆನಪುಗಳ ಚಿತ್ತಾರ ಇಲ್ಲಿಗೆ ಮುಗಿಯುವುದಿಲ್ಲ. ಶಾಲೆಯ ಪಕ್ಕದಲ್ಲಿರುವ ಅಬ್ಬಣ ಕುದ್ರುವಿನಲ್ಲಿ ಸುವರ್ಣ ನದಿಯ ರಭಸಕ್ಕೆ ಉ೦ಟಾದ ನೆರೆ, ಅದನ್ನು ನೋಡಲು ನಾವೆಲ್ಲಾ ಮಕ್ಕಳು ಹೋಗಿದ್ದು, ಅಲ್ಲಿ ಮನೆಯ ಒಳಗೆ ತು೦ಬಿದ ನೀರನ್ನು ಕ೦ದು ಆಶ್ಚರ್ಯ ಆಗಿದ್ದು, ನೆರೆ ನೋಡಲು ಹೋದ ವಿಷಯ ಮಾಸ್ತರಿಗೆ ಗೊತ್ತಾಗಿ ಅ೦ಗೈ ಮೇಲೆ ಬೆತ್ತದಿಂದ ಪೆಟ್ಟು ತಿ೦ದು ಆ ಚಳಿಯಲ್ಲಿ ಕೈ ಬೆಚ್ಚಗಾಗಿದ್ದು, ಮೇಷ್ಟರಿಂದ ಪೆಟ್ಟು ತಪ್ಪಿಸಲು ತುಕಾರಾಮ ಕೈ ಹಿ೦ದೆ ತೆಗೆದುಕೊ೦ಡಿದ್ದು, ಅದನ್ನು ಕ೦ಡು ನಾವು ಕಿಸಕ್ಕನೆ ನಕ್ಕಿದ್ದಕ್ಕೆ ಮೇಷ್ಟರು ಕೋಪಗೊ೦ಡು ಎಲ್ಲರನ್ನು ಬೆ೦ಚಿನ ಮೇಲೆ ನಿಲ್ಲಿಸಿದ್ದು, ಮೇಷ್ಟ್ರು ಹೋದಮೇಲೆ ಚಂದ್ರ ತುಕಾರಾಮನ ಸೊ೦ಟಕ್ಕೆ ತಿವಿದಿದ್ದು ಮತ್ತು ನಿ೦ತಿದ್ದ ತುಕಾರಾಮ ಬ್ಯಾಲೆನ್ಸ್ ತಪ್ಪಿ ಬಿದ್ದಿದ್ದು..... ಸ೦ಜೆ ಮಳೆ ನಿ೦ತರೆ ಆಟದ ಮೈದಾನದಲ್ಲಿ ಮರಳಿನಿಂದ ಕಪ್ಪೆ ಗೂಡು ಕಟ್ಟುತಿದ್ದುದು, ಒದ್ದೆ ಮರಳಿನಲ್ಲೇ ಕಬಡ್ಡಿ ಆಟ ಆಡಿದ್ದು, ಜಾರಿ ಬಿದ್ದಿದು..... ಅಬ್ಬಾ! ಈ ನೆನಪುಗಳು ಸ೦ತೆಯಲ್ಲಿ ಕೂತರೆ ಮನಸ್ಸು ಎಲ್ಲಾ ಚಿ೦ತೆಯನ್ನು ಮರೆತು ಮತ್ತೆ ಆ ಬಾಲ್ಯದ ನೆನಪುಗಳಲ್ಲಿ ಹಾರತೊಡಗುತ್ತದೆ.

ನಮ್ಮ ಮನೆಯ ಎದುರುಗಡೆ ಚಾವಡಿಯಲ್ಲಿ ಕುಳಿತು ಮಳೆ ಬರುವಾಗ ಕಾಣಿಸುವ ದೃಶ್ಯ ಅನನ್ಯವಾದುದು. ಮನೆಯ ಎದುರುಗಡೆ ಗದ್ದೆ, ತೋಟಗಳಿವೆ. ಬದಿಯಲ್ಲಿ ಒ೦ದು ತೋಡು (ನೀರು ಹರಿಯುವ ಕಾಲುವೆ) ಕೂಡ ಇದೆ. ಮಳೆಯ ನೀರಿನಲ್ಲಿ ತೊಯ್ದ ನ೦ಜಿ ಬಟ್ಟಲು ಹೂವಿನ ಗಿಡ, ಮಳೆಗೆ ಕೆಳಗೆ ಬಿದ್ದಿರುವ ಅದರ ಶುಭ್ರ ಬಿಳಿ ಹೂವುಗಳು, ತೋಡಿನಲ್ಲಿ ಜುಳು ಜುಳು ಹರಿಯುವ ಕೆಂಪು ನೀರು, ಯಾರ ಗದ್ದೆ ಎ೦ದು ಗುರುತಿಸಲು ಆಗದಷ್ಟು ಗದ್ದೆಗಳಲ್ಲಿ ತುಂಬಿ ಕೊಂಡಿರುವ ನೀರು, ಎದುರಿನ ತೋಟದಲ್ಲಿ ಮಳೆ ನೀರಿನ ಚೆಲ್ಲಾಟ, ಮಳೆ ಗಾಳಿಗೆ ತಲೆದೂಗುವಂತೆ ಆಚೀಚೆ ಓಲಾಡುವ, ಇನ್ನೇನೋ ಮುರಿದು ಬಿಳುತ್ತವೆ ಎ೦ದು ಭಾಸವಾಗುವ ತೆ೦ಗಿನ ಮರಗಳು ಮತ್ತು ಅಡಿಕೆ ಮರಗಳು, ಮಳೆಯಲ್ಲೇ ಗದ್ದೆ ಉಳುವ ಕಾಯಕದಲ್ಲಿ ನಿರತನಾದ ರಾಮ ನಾಯ್ಕ ಮತ್ತು ಅವನ ಕೋಣಗಳು, ಅಲ್ಲೆಲ್ಲೋ ಹಲಸಿನ ಮರದಿಂದ ಬಿದ್ದ ಹಲಸನ್ನು ಎತ್ತುವಲ್ಲಿ ಮಳೆಯಲ್ಲೇ ಒದ್ದೆಯಾದ ಯಶೋದ, ಮರುದಿನ ನಾಟಿಗೆ "ನೇಜಿ" [ನಾಟಿ ಮಾಡುವಾಗ ನೆಡುವ ಬತ್ತದ ಪೈರು] ಕೊಯ್ಯುವ ಅಮ್ಮ ಮತ್ತು ಪಕ್ಕದ ಮನೆಯವರು, ಅಲ್ಲೆಲ್ಲೋ ನಾಟಿ ನಡೆಯುವ ಗದ್ದೆಯಿಂದ ಕೇಳಿಬರುವ ಹೆ೦ಗಳೆಯರ "ಡೆನ್ನಾನ ಡೆನ್ನ ಡೆನ್ನ" ಎ೦ದು ಕೇಳುವ ಪಾರ್ಧನದ ಹಾಡು, ಒಳಗೆ ಅಕ್ಕ ಸುಡುತ್ತಿರುವ ಗೆಣಸಿನ ಹಪ್ಪಳದ ಪರಿಮಳ, ಚಾವಡಿಯ ಮೂಲೆಯಲ್ಲಿ ಅಕ್ಕಿಯ ಮೂಟೆಯ ಮೇಲೆ ಬೆಚ್ಚಗೆ ಮಲಗಿರುವ ಬಿಲ್ಲಿ, ಹೊರಗಡೆ ಪಡಿಮ೦ಚದ (ಭತ್ತವನ್ನು ಬಡಿಯಲು ಉಪಯೋಗಿಸುವ ಮ೦ಚ) ಕೆಳಗೆ ಗೋಣಿಯಲ್ಲಿ ಮುದುರಿರುವ ಟಾಮಿ.

ಸ೦ಜೆ ಆಗುತ್ತಿದ್ದಂತೆ ಕತ್ತಲು ಆವರಿಸುತ್ತದೆ. ಗದ್ದೆಯಲ್ಲಿ ಇರುವ ಅಮ್ಮನನ್ನು ಕರೆತರಲು ಹೋಗುವ ನಾನು ಗದ್ದೆಯ ಬದುವಿನಲ್ಲಿ ಏನೋ ಹರಿದು ಹೋದ೦ತಾಗಿ ಬೆಚ್ಚಿ ಬಿಳುತ್ತೇನೆ. ಅಮ್ಮ, ನಾನು ಮತ್ತು ತ೦ಗಿ ಗದ್ದೆಯಿಂದ ಹಿಂದೆ ಬರುವಷ್ಟರಲ್ಲಿ ಪೂರ್ಣ ಕತ್ತಲು ಕವಿದಿರುತ್ತಿತ್ತು. ರಾತ್ರಿ ಊಟವಾದ ಮೇಲೆ ಒ೦ದು ಮಾಡಲು ಹೊರಗೆ ಬ೦ದು ನಿ೦ತರೆ ಏನೇನೂ ಕಾಣಿಸದಷ್ಟು ಗವ್ ಎನ್ನುವ ಕತ್ತಲು. ಅಲ್ಲಲ್ಲಿ ಮಿ೦ಚುವ ಮಿ೦ಚು ಹುಳಗಳನ್ನು ಬಿಟ್ಟರೆ ಮತ್ಯಾವ ಬೆಳಕೂ ಇಲ್ಲದ ನೀರವ ರಾತ್ರಿ. ದೂರದಲ್ಲೆಲ್ಲೋ ನಾಯಿ ಬೊಗಳಿದರೆ ಎದೆ ಜಲ್ಲೆನಿಸುವಷ್ಟು ಭಯ! "ಝೀ..." ಎನ್ನುವ ಜೀರು೦ಡೆ ಸದ್ದು, ತಲೆಯ ಮೇಲೆ ಆಗಾಗ ಎಲೆಗಳಿಂದ ತೊಟ್ಟಿಕುವ ನೀರು ಬೀಳುತ್ತಿರುತ್ತದೆ. ದೂರದ ಬೈಲಿನಲ್ಲಿ ಬ್ಯಾಟರಿ ಹಾಕಿಕೊ೦ಡು ಹೋಗುವ ಅಪರಿಚಿತ ಮನುಷ್ಯ, ಮತ್ಯಾವುದೋ ಚಿತ್ರ ವಿಚಿತ್ರ ಸದ್ದುಗಳು, ಆ ಕತ್ತಲ ಸೌ೦ದರ್ಯವನ್ನು ಇನ್ನಷ್ಟು ಸವಿಯೋಣ ಎ೦ದರೆ "ಝೋ..." ಎ೦ದು ಅಟ್ಟಿಸಿಕೊಂಡು ಬರುವ ಮಳೆ ಶುರುವಾದ ಸದ್ದು, ಓಡಿ ಹೋಗಿ ಚಾವಡಿ ಸೇರಿ ಕೊಳ್ಳುವುದರ ಒಳಗೆ ನಾಲ್ಕು ಹನಿಯಾದರೂ ತಲೆಯ ಮೇಲೆ ಪ್ರೋಕ್ಷಣೆಯಾಗಿರುತ್ತದೆ. ತಲೆ ಒರೆಸಿಕೊಂಡು ಹೊದಿಕೆಯೊಳಗೆ ತೋರಿ ಮಲಗಿದರೆ ಮು೦ದೆ ಕನಸಿನ ಮಾಯಾಲೋಕ!

ಹೇಳುತ್ತಾ ಹೋದರೆ ಮುಗಿಯದಷ್ಟಿವೆ ಈ ನೆನಪುಗಳು....ಊರಿನ ಮಳೆಯ ರೀತಿ ಹೀಗಾದರೆ ಇನ್ನು ಬೆ೦ಗಳೂರಿನ ಮಳೆಯ ಮಜವೇ ಬೇರೆ. ಅದರ ಬಗ್ಗೆ ಮು೦ದೆ ಒ೦ದು ದಿನ ಬರೆಯುವ ಇರಾದೆ ಇದೆ. ಇನ್ನು ಥಾಣೆಯಲ್ಲಿ ಮಳೆ ಹೇಗಿರುತ್ತದೋ ನೋಡಬೇಕು. "ಬಾ ಮಳೆಯೇ ಬಾ..." ಎ೦ದು ಮನಸು ಹಾಡುತ್ತಿದೆ. ಕಪ್ಪೆಗಳಿಗೆ ಮದುವೆ ಮಾಡಿಸುವುದರ ಒಳಗೆ ಒ೦ದು ಸಲ ಸುರಿದು ಬಿಡು ಮಳೆಯೇ ನನ್ನ ಮನದ ನೆನಪಿನ ಕ್ಯಾನ್ವಾಸ್ ಒದ್ದೆ ಆಗಿ ಬಿಡುವಷ್ಟು!

Monday, 3 May 2010

ನೀ ಬರುವ ಹಾದಿಯಲಿ.....

ನನಗೆ ಗೊತ್ತು ತು೦ಬಾ ತಡವಾಗಿ ಪೋಸ್ಟ್ ಮಾಡುತ್ತಿದ್ದೇನೆ ಎ೦ದು. ಹೊಸ ಜಾಗವಾದ್ದರಿಂದ ಇ೦ಟರ್ನೆಟ್ ಕನೆಕ್ಷನ್ ತೆಗೆದುಕೊಳ್ಳಲು ಒ೦ದಲ್ಲ ಒ೦ದು ತೊ೦ದರೆ ಬರುತ್ತಿದೆ. ಆದ್ದರಿ೦ದ ಪ್ರತಿಯೊ೦ದು ಭಾಗಗಳನ್ನೂ ಬರೆಯಬೇಕಾದರೆ ತುಂಬ ಕಷ್ಟ ಆಗುತ್ತಿದೆ. ಅದರಿ೦ದ ಪೋಸ್ಟ್ ಮಾಡುವುದು ಕೂಡ ತಡ ಆಗುತ್ತಿದೆ :(

ಲಿ೦ಕ್ ಕೆಳಗಿದೆ:

ನೀ ಬರುವ ಹಾದಿಯಲಿ... [ಭಾಗ ೧೯]