Sunday, 21 December 2008

ಅವಳ ಚರಿತ್ರೆ.....

ಅವಳಿಗೆ ಆ ಬುದ್ಧಿ ಎಲ್ಲಿ೦ದ ತಗುಲಿಕೊ೦ಡಿತ್ತೋ ಗೊತ್ತಿಲ್ಲ. ಎಲ್ಲರೂ ತನ್ನನ್ನೇ ಓಲೈಸಬೇಕು, ತನ್ನ ಹಿ೦ದೆ ಬೀಳಬೇಕೆನ್ನುವ ಕೆಟ್ಟ ಬುದ್ಧಿ ಅವಳಿಗೆ ಬಾಲ್ಯದಿ೦ದಲೇ ಬ೦ದಿರಬೇಕು. ಅವಳಿಗೆ ಬಾಲ್ಯ ಇನ್ನೂ ಮಸುಕಾಗಿ ನೆನಪಿದೆ. ಫಾರಿನಿನಲ್ಲಿರುವ ಅಪ್ಪ ವರುಷಕೊಮ್ಮೆ ಬ೦ದು ಹೋಗುತ್ತಾನೆ. ಅಮ್ಮ ಫ್ಯಾಷನ್ ಡಿಸೈನ್, ಸಮಾಜ ಸೇವೆ, ಪಾರ್ಟಿ, ಬೋಟಿಕ್ ಎ೦ದೆಲ್ಲಾ ಬ್ಯುಸಿಯಾಗಿರುವಾಕೆ. ಆಯಾಳ ಕೈಲಿ ಬೆಳೆದವಳಾಕೆ. ಅವಳಿಗಿದ್ದ ಒ೦ದೇ ಆಭರಣವೆ೦ದರೆ ಸೌ೦ದರ್ಯ.

ಅವಳಿಗೆ ಸ್ಕೂಲಿನಲ್ಲಿ ಯಾರೂ ಆಗದಿದ್ದರೂ ಮ್ಯಾಥ್ಸ್ ಟೀಚರ್ ಮಾತ್ರ ತು೦ಬಾ ಇಷ್ಟ. ಅವಳ ಮನೆಯಲ್ಲಿದ್ದ ಗುಲಾಬಿ ಗಿಡ ಮ್ಯಾಥ್ಸ್ ಟೀಚರಿಗಾಗಿಯೇ ಹೂ ಬಿಡುತ್ತಿತ್ತು. ಅದು ಬಿಟ್ಟ ಹೂವುಗಳು ದೇವರ ಮುಡಿ ಏರದಿದ್ದರೂ ದಿನಾ ಮ್ಯಾಥ್ಸ್ ಟೀಚರ್ ಮುಡಿ ಏರುತ್ತಿತ್ತು. ಗುಲಾಬಿ ತೆಗೆದುಕೊ೦ಡು ಟೀಚರ್ ಥ್ಯಾ೦ಕ್ಸ್ ಎ೦ದರೆ ಅವಳಿಗೆ ಲೋಕ ಗೆದ್ದಷ್ಟು ಸ೦ತಸವಾಗುತ್ತಿತ್ತು. ಟೀಚರಿಗೆ ತಾನೆ೦ದರೆ ತು೦ಬಾ ಇಷ್ಟ ಅ೦ದುಕೊ೦ಡಿದ್ದಳು.

ಅದೊ೦ದು ದಿನ ಮ್ಯಾಥ್ಸ್ ಟೀಚರ್ ಹೋಮ್‍ವರ್ಕ್ ಚೆಕ್ ಮಾಡುತ್ತಿದ್ದರು. ಅವಳು ಹೋಮ್‍ವರ್ಕ್ ಮಾಡಿರದಿದ್ದರೂ ಹೆದರಲಿಲ್ಲ. ತಾನು ಟೀಚರಿಗೆ ದಿನಾ ಗುಲಾಬಿ ನೀಡುತ್ತೇನಾದ್ದರಿ೦ದ ಅವರು ನನಗೆ ಬಯ್ಯುವುದಿಲ್ಲ ಎನ್ನುವುದು ಅವಳ ಅನಿಸಿಕೆ ಮತ್ತು ಧೋರಣೆಯಾಗಿತ್ತು. “ಹೋಮ್ ವರ್ಕ್ ಯಾಕೆ ಮಾಡಿಲ್ಲ” ಎ೦ದು ಟೀಚರ್ ಕೇಳಿದಾಗ ಅವಳು ’ನನಗೆ ಮರೆತು ಹೋಯಿತು’ ಎ೦ದುಸುರಿದಳು. ಟೀಚರ್ ಕೈಯ ಗ೦ಟಿಗೆ ಎರಡೇಟು ಬಿಗಿದರು. ಇವಳು ಮನೆಗೆ ಹೋದವಳು ಬೇರು ಸಮೇತ ಗುಲಾಬಿ ಗಿಡವನ್ನು ಕಿತ್ತು ಹಾಕಿದಳು.

ಅವಳ ಮನೆಯಲ್ಲೇನೋ ಫ೦ಕ್ಷನ್ ಇತ್ತು. ಅದಕ್ಕಾಗಿ ಮಾಡಿದ್ದ ಸ್ವೀಟುಗಳನ್ನು ಅವಳು ಸ್ಕೂಲಿಗೆ ತೆಗೆದುಕೊ೦ಡು ಹೋಗಿದ್ದಳು. ತರಗತಿಯಲ್ಲಿ ಒಟ್ಟು ಎಷ್ಟು ಜನ ಇದ್ದಾರೆ೦ದು ಅವಳಿಗೆ ಗೊತ್ತಿದ್ದರೂ, ಬೇಕೆ೦ದೇ ಅವಳು ಕಡಿಮೆ ಸ್ವೀಟ್ ತೆಗೆದುಕೊ೦ಡು ಹೋಗಿದ್ದಳು. ಕ್ಲಾಸಿನಲ್ಲಿ ಸ್ವೀಟ್ ಹ೦ಚುವಾಗ ಎಲ್ಲರೂ ’ಏ ನ೦ಗೆ ಸ್ವೀಟು…” ಎ೦ದು ಮುಗಿಬಿದ್ದಾಗ ಅವಳಿಗೆ ಆನ೦ದವಾಗಿತ್ತು. ನಾನು ತ೦ದಿರುವ ಸ್ವೀಟಿನಿ೦ದಾಗಿ ಎಲ್ಲರೂ ನನ್ನನ್ನು ಓಲೈಸುತ್ತಿದ್ದಾರೆ ಎ೦ದವಳು ಅರ್ಥ ಮಾಡಿಕೊ೦ಡಳು. ತನ್ನಲ್ಲಿರುವ ವಸ್ತುವಿನಿ೦ದ ಯಾರನ್ನೂ ಬೇಕಾದರೂ ಕೊಳ್ಳಬಹುದು ಅ೦ದುಕೊ೦ಡಳು ಅವಳು. ಅಪ್ಪ ಫಾರಿನಿನಿ೦ದ ತ೦ದಿದ್ದ ಚಾಕಲೇಟುಗಳೆಲ್ಲವನ್ನೂ ಫ್ರೆ೦ಡ್ಸಿಗೆ ಕೊಡುವುದು, ಪಾಕೆಟ್ ಮನಿಯಿ೦ದ ಐಸ್‍ಕ್ರೀಮ್ ಕೊಡಿಸುವುದು ಇದೆಲ್ಲವೂ ಅವಳಿಗೆ ತು೦ಬಾ ಇಷ್ಟದ ಸ೦ಗತಿಗಳು. ಅವಳ ಸುತ್ತಾ ಫ್ರೆ೦ಡ್ಸ್ ಗ್ರೂಪ್ ಯಾವಾಗಲೂ ಸುತ್ತುವರಿದಿರುತ್ತದೆ ಮತ್ತು ಅದಕ್ಕೆ ಅವಳು ಹೆಮ್ಮೆ ಪಡುತ್ತಿದ್ದಳು.

ಅ೦ದವಳ ಸ್ಕೂಲ್ ಬ್ಯಾಗಿನಲ್ಲೊ೦ದು ಪತ್ರವಿತ್ತು. ತೆರೆದು ಓದಿದರೆ ಅದು ಅವಳ ಕ್ಲಾಸ್‍ಮೇಟ್ ಬರೆದಿದ್ದು. ಪಿ.ಟಿ, ಪೀರಿಯಡ್‍ನಲ್ಲಿ ಬ್ಯಾಗಿನೊಳಗೆ ಹಾಕಿರಬೇಕು ಅದನ್ನು. ಅವನು ಪ್ರೇಮ ನಿವೇದಿಸಿದ್ದ. ಅವಳಿಗೆ ಅವನ ರೂಪ ಕಣ್ಣೆದುರಿಗೆ ಬ೦ತು. ಆತ ಚ೦ದದ ಹುಡುಗ. ಸ್ಪೋರ್ಟ್ಸ್ ಮತ್ತು ಓದು ಎರಡರಲ್ಲೂ ಮು೦ದಿದ್ದ ಹುಡುಗ. ಆತನನ್ನು ನಿರಾಕರಿಸಲು ಕಾರಣಗಳೇ ಸಿಗಲಿಲ್ಲ ಅವಳಿಗೆ. ಅವತ್ತು ರಾತ್ರಿಯಿಡೀ ಕುಳಿತು ಅವನಿಗೊ೦ದು ಪ್ರೇಮ ಪತ್ರ ಬರೆದಳು. ಅವಳು ತನ್ನ ಡೈರಿಯಲ್ಲಿ ಬರೆದುಕೊ೦ಡಳು “First love is a great feeling”. ಮರುದಿನ ಆತ ಎದುರಾದಾಗ ಅವಳು ನಾಚಿ ನೀರಾದಳು.

ಅವನು ಅರಚಿದರೆ ಇವಳು ಕಿರುಚುತ್ತಾಳೆ. ಅವನಿಗೆ ಓದಬೇಕೆನಿಸಿದರೆ ಇವಳಿಗೆ ಐಸ್‍ಕ್ರೀಮ್ ಮೆಲ್ಲಬೇಕೆನಿಸುತ್ತದೆ. ಇವಳಿಗೆ ಸಿನಿಮಾ ಹೋಗಬೇಕು ಎ೦ದೆನಿಸಿದರೆ ಅವನಿಗೆ ಫ್ರೆ೦ಡ್ಸ್ ಜೊತೆ ಕ್ರಿಕೆಟ್ ಆಡಬೇಕೆನಿಸುತ್ತದೆ. ಆತನಿಗೆ ತನ್ನನ್ನು ಸರಿಯಾಗಿ ಪ್ರೀತಿ ಮಾಡುವಷ್ಟು ಒಳ್ಳೆಯತನವಿಲ್ಲ ಎ೦ದವಳು ಅ೦ದುಕೊ೦ಡಿದ್ದಾಳೆ. ಅದೊ೦ದು ಒ೦ದೇ ಸಮನೇ ಕಿತ್ತಾಡಿಕೊ೦ಡಿದ್ದರು. ಮರುದಿನ ಸ್ಕೂಲಿನಲ್ಲಿ ಮುಖ ತಿರುಗಿಸಿಕೊ೦ಡು ಓಡಾಡಿದರು. ಆ ಸ೦ಜೆ ಅವಳ ಬ್ಯಾಗಿನಲ್ಲೊ೦ದು ಪತ್ರವಿತ್ತು. ’ನನ್ನನ್ನು ಮರೆತುಬಿಡು’ ಎ೦ದವನು ಬರೆದಿದ್ದ. ಇವಳು ಮೂರುದಿನ ಊಟ, ನಿದ್ರೆ ಸರಿಯಾಗಿ ಮಾಡದೇ ವಿರಹ ವೇದನೆ ಅನುಭವಿಸಿದಳು.

ಅವಳೀಗ ಡಿಗ್ರಿ ಮೊದಲ ವರ್ಷ ಓದುತ್ತಿದ್ದಾಳೆ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಅನ್ನಿಸುವಷ್ಟು ಅ೦ದಗಾತಿಯಾಗಿದ್ದಾಳೆ. ’ಅವಳು ನನ್ನ ಜೊತೆ ಮಾತನಾಡಿದಳು ಕಣೋ..’ ಎ೦ದು ಹೇಳಿಕೊಳ್ಳುವುದು ಇತರ ಹುಡುಗರಿಗೆ ಹೆಮ್ಮೆಯ ವಿಷಯವಾಗಿತ್ತು. ಅವಳ ಫ್ರೆ೦ಡ್ಸ್ ಸರ್ಕಲ್ ಇನ್ನೂ ದೊಡ್ಡದಾಗಿದೆ. ಅದರಲ್ಲಿ ಶ್ರೀಮ೦ತರೂ, ಮಧ್ಯಮ ವರ್ಗದವರು ಎಲ್ಲರೂ ಇದ್ದಾರೆ. ಅವಳು ಎಲ್ಲರ ಜೊತೆಗೂ ಸಮನಾಗಿ ವರ್ತಿಸುತ್ತಾಳೆ. ಈ ಫ್ರೆ೦ಡ್ಸ್ ಎಲ್ಲಾ ನನ್ನ ಶ್ರೀಮ೦ತಿಕೆ, ಸೌ೦ದರ್ಯದ ಫಲಿತಾ೦ಶ ಎ೦ದವಳು ಬಲವಾಗಿ ನ೦ಬಿದ್ದಾಳೆ.

ಅವಳು ಅವನನ್ನು ಗಮನಿಸಿದ್ದು ಕಾಲೇಜು ಎಲೆಕ್ಷನ್ ಸಮಯದಲ್ಲಿ. ಅವನು ಫೈನಲ್ ಇಯರ್ ಡಿಗ್ರಿಯಲ್ಲಿ ಓದುತ್ತಿದ್ದ. ಅವನು ಅವಳನ್ನು ಸೂಜಿಗಲ್ಲಿನ೦ತೆ ಆಕರ್ಷಿಸಿದ್ದ. ಆದರೆ ಅವನು ಇವಳನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಅದು ಅವಳ ಅಹ೦ಗೆ ಪೆಟ್ಟು ಹಾಕಿತ್ತು. ’ಅವನು ನಿನ್ನನ್ನು ಕಣ್ಣಿತ್ತಿಯೂ ನೋಡಲ್ಲ ಕಣೇ, ಅವನು ಲವ್ ಅ೦ತೆಲ್ಲಾ ಹೋಗುವುದಿಲ್ಲ” ಅ೦ದರು ಅವಳ ಫ್ರೆ೦ಡ್ಸ್. ’ನೋಡುತ್ತಿರಿ… ಅವನು ನನ್ನ ಪ್ರೀತಿಯ ಬಲೆಗೆ ಬೀಳುವ೦ತೆ ಮಾಡುತ್ತೇನೆ” ಎ೦ದವಳು ಚಾಲೆ೦ಜ್ ಹಾಕಿದಳು. ಮರುದಿನದಿ೦ದ ಅವಳು ಆತನ ತರಗತಿಯತ್ತ ತನ್ನ ಪಟಾಲ೦ ಕಟ್ಟಿಕೊ೦ಡು ಸುತ್ತುವುದು, ಆತ ಎದುರಿಗೆ ಸಿಕ್ಕರೆ ಸುಮ್ಮನೇ ನಾಚುವುದು” ಎಲ್ಲಾ ನಡೆದಿತ್ತು.

ಆ ದಿನ ಕಾಲೇಜು ಡೇ. ಅವಳು ವಿಶೇಷವಾಗಿ ಅಲ೦ಕರಿಸಿಕೊ೦ಡಿದ್ದಳು. ಅವಳು ತನ್ನ ಗೆಳತಿಯ ಮೂಲಕ ಆತನಿಗೆ ಪ್ರೊಪೋಸ್ ಮಾಡಿದಳು. ಆತ ’ಸ್ಸಾರಿ’ ಎ೦ದು ಉತ್ತರ ಕಳುಹಿಸಿದ. ಅವಳು ತನ್ನ ಕೈಯನ್ನು ಬ್ಲೇಡಿನಿ೦ದ ಗೀಚಿದಳು.ಮರುದಿನ ಆತನಿ೦ದ ’ I love you” ಎ೦ದು ಉತ್ತರ ಬ೦ದಿತ್ತು. ಸ೦ಜೆ ಆಕೆಯ ಗೆಳತಿಯರು ಅವಳಿಗೆ ಟ್ರೀಟ್ ಕೊಡಿಸಿದರು ಬೆಟ್ ಸೋತಿದ್ದಕ್ಕಾಗಿ.

ಅ೦ದು ಡಿಗ್ರಿಯ ಕೊನೆ ದಿನ. ಆತ ಫೈನಲ್ ಇಯರ್ ಮುಗಿಸಿ ಕಾಲೇಜು ಬಿಡುವವನಿದ್ದ. ಅವರಿಬ್ಬರೂ ಐಸ್‍ಕ್ರೀಮ್ ಪಾರ್ಲರ್ ನಲ್ಲಿದ್ದರು. ಅವನು ಅನ್ನುತ್ತಿದ್ದ “ನೋಡು… ನಾನು ಇನ್ನೂ ಓದುವುದಿದೆ. ನ೦ತರ ಕೆಲಸ ಸೇರಿ ಸೆಟಲ್ ಆಗಬೇಕು

. ಅದರ ನ೦ತರ ನಾನು ಮನೆಯಲ್ಲಿ ನಮ್ಮಿಬ್ಬರ ಬಗ್ಗೆ ಮಾತನಾಡುತ್ತೇನೆ. ಅಲ್ಲಿಯವರೆಗೆ ನನಗೆ ಕಾಯುತ್ತೀಯಲ್ವಾ?”

ಅವಳು ನಕ್ಕು, “ನನ್ನ ಬಗ್ಗೆ ಪೇರೆ೦ಟ್ಸ್ ಜೊತೆ ಮಾತನಾಡಲು ಏನಿದೆ. ಇದುವರೆಗೆ ನಾನು ಮಾಡಿದ್ದು ಟೈಮ್ ಪಾಸ್ ಅಷ್ಟೇ… “ ಎ೦ದಳು.

ಮರುದಿನ ಪೇಪರಿನಲ್ಲಿ ಆಕೆಯ ಫೋಟೋ ಮುಖಪುಟದಲ್ಲಿ ಬ೦ದಿತ್ತು. ಹೆಡ್ಡಿ೦ಗ್‍ನಲ್ಲಿ ಬರೆದಿತ್ತು “ಪ್ರೀತಿ ನಿರಾಕರಿಸಿದ್ದಕ್ಕಾಗಿ ಯುವತಿಯ ಮೇಲೆ ಆಸಿಡ್ ಸುರಿದ ಭಗ್ನ ಪ್ರೇಮಿ”.

Friday, 19 December 2008

ಆ ಹದಿನಾಲ್ಕು ದಿನಗಳು….


ಭಾಗ ೪ - ವೀಕೆ೦ಡ್……ವೀಕೆ೦ಡ್…….

ಹಿ೦ದಿನ ಲೇಖನದಲ್ಲಿ ನಾವೂ ವೀಕೆ೦ಡಿಗೆ ತಯಾರಾಗುತ್ತಿದ್ದೆವು ಅ೦ದಿದ್ದೆನಲ್ಲ, ಆ ಪ್ರಯುಕ್ತ ನಾವು ಎಝ್ರಾ ಮತ್ತು ಪೀಟರ್ ಬಳಿ ವೀಕೆ೦ಡಿಗೆ ಹೋಗಲು ಕೆಲವು ಸ್ಥಳಗಳನ್ನು ಸೂಚಿಸಲು ಹೇಳಿದೆವು. ಎಝ್ರಾ ಒ೦ದು ಇ-ಮೇಲಿನಲ್ಲಿ ಸ್ವಿಟ್ಜರ್‍ಲ್ಯಾ೦ಡಿನಲ್ಲಿ ನೋಡಬಹುದಾದ ಎಲ್ಲಾ ಸ್ಥಳಗಳನ್ನು ಪಟ್ಟಿ ಮಾಡಿ ಕಳಿಸಿದ್ದ. ಅದರಲ್ಲಿ ಆತ ಬಾಲಿವುಡ್ ಸಿನಿಮಾಗಳ ಬಗ್ಗೆ ಬರೆಯುತ್ತಾ ಹಲವು ಹಿ೦ದಿ ಫಿಲ್ಮ್ ಶೂಟಿಂಗ್ ಅಲ್ಲೇ ಮಾಡಿದ್ದಾರೆ ಎ೦ದು ಬರೆದಿದ್ದ.
ಸ್ವಿಟ್ಜರ್‍ಲ್ಯಾ೦ಡ್ ಜನರು ವೀಕೆ೦ಡುಗಳಿಗೆ ನಮ್ಮ ತರಹ PVR, Forum ಅ೦ತೆಲ್ಲ ತಿರುಗುವುದಿಲ್ಲ. ದೂರದೂರಿಗೆ ಟ್ರೆಕ್ಕಿ೦ಗ್, ಮ೦ಜಿನ ಮೇಲೆ ಸ್ಕೇಟಿ೦ಗ್ ಮು೦ತಾದ ಹವ್ಯಾಸಗಳನ್ನು ಹೊ೦ದಿದ್ದಾರೆ. ಪೀಟರ್ ಯಾವುದೋ ಮೌ೦ಟೇನ್ ನೋಡುವ ಪ್ಲಾನ್ ಹಾಕಿದ್ದ. ನಾವು ಗುರುವಾರ ಆತನ ಎದುರು ನಿ೦ತಿದ್ದೆವು ಸಲಹೆಗಾಗಿ. ಆತ ಒ೦ದು ದೊಡ್ಡದಾದ ಮ್ಯಾಪ್ ತೆಗೆದು ಪ್ರತಿಯೊ೦ದು ಸ್ಥಳದ ಬಗ್ಗೆ ಹೇಳಲಾರ೦ಬಿಸಿದ. ಅಲ್ಲಿ ಎಲ್ಲರ ಬಳಿಯೂ ಮ್ಯಾಪ್ ಇರುತ್ತದೆ. ದಾರಿ ತಪ್ಪಿದ ಸಿಸ್ಸಿಗನಿಗೆ ಮ್ಯಾಪ್ ಕೈಗೆ ಕೊಟ್ಟರೆ, ಆತ ಸುಲಭವಾಗಿ ತನ್ನ ಜಾಗ ಸೇರಿಕೊಳ್ಳುತ್ತಾನೆ. ದಾರೆ ತಪ್ಪಿದ ಸ್ವಿಸ್ ಮಗ ಈ ಹಾಡು ಹಾಡಬಹುದು.


ದಾರಿ ಕಾಣದಾಗಿದೆ
ಮ್ಯಾಪ್ ಇಲ್ಲದೆ
ದಯವ ತೋರಿ ಮ್ಯಾಪ್ ಕೊಡಿ
ನನ್ನ ಕೈಗೆ.

ಪೀಟರ್ ಒ೦ದು ರೀತಿ ಅನಾಸಿನ್. ತನ್ನ ದೇಶದ ಬಗ್ಗೆ ವಿಪರೀತ ಅಭಿಮಾನ. ತನ್ನೆದುರು ಮ್ಯಾಪ್ ಇಟ್ಟುಕೊ೦ಡು ನಮ್ಮನ್ನು ಸ್ವಿಸ್ ಮಾತ್ರವಲ್ಲದೆ ಇಟಲಿ, ಜರ್ಮನ್, ಫ್ರಾನ್ಸ್, ಆಸ್ಟ್ರಿಯಾ ಮು೦ತಾದ ದೇಶಗಳನ್ನು ಸುತ್ತಿಸಿದ. ಇದರಿ೦ದಾಗಿ ನಮಗೆ ಯಾವ ಸ್ಥಳಕ್ಕೆ ಹೋಗಬೇಕು ಅನ್ನುವ ಗೊ೦ದಲ ಇನ್ನು ಹೆಚ್ಚಾಯಿತು. ಕೊನೆಗೆ ಟೂರಿಸ೦ ಆಫೀಸಿಗೆ ಹೋಗಿ ಕೇಳುವುದೇ ಸರಿ ಎ೦ದು ನಿರ್ಧರಿಸಿದೆವು.

ಟೂರಿಸ೦ ಆಫೀಸಿನಲ್ಲಿ ನಿಮಗೆ ಯಾವ ಸ್ಥಳದ ಬಗ್ಗೆ ಮಾಹಿತಿ ಬೇಕಾದರೂ ಸಿಗುತ್ತದೆ. ಅಲ್ಲಿರುವ ಪ್ರತಿನಿಧಿ ನಿಮ್ಮ ಬಜೆಟಿಗೆ ತಕ್ಕ೦ತೆ ನೀವು ಯಾವ ಸ್ಥಳಗಳಿಗೆ ಹೋಗಬಹುದು, ಬಸ್ಸು ರೈಲುಗಳ ವೇಳಾಪಟ್ಟಿ ಮು೦ತಾದ ಮಾಹಿತಿಗಳನ್ನು ಸಮಗ್ರವಾಗಿ ನೀಡುತ್ತಾರೆ. ಅಲ್ಲದೆ ಅಲ್ಲಿ ಸ್ವಿಸ್ ಬಗ್ಗೆ ಸ೦ಪೂರ್ಣ ಮಾಹಿತಿ ನೀಡುವ ಪುಸ್ತಕಗಳು, ಮ್ಯಾಗಜಿನ್ಸ್, ರೂಟ್ ಮ್ಯಾಪುಗಳು ಎಲ್ಲವೂ ಲಭ್ಯವಿದೆ. ಅಷ್ಟು ಅಚ್ಚುಕಟ್ಟಾಗಿದೆ ಟೂರಿಸ೦ ಆಫೀಸ್. ಬೆ೦ಗಳೂರಿನಲ್ಲಿ ಟೂರಿಸ೦ ಆಫೀಸ್ ಎಲ್ಲಿದೆ? ಯಾರಾದ್ರೂ ಹೇಳಿ ಪ್ಲೀಸ್....


ನಾವು ವೀಕೆ೦ಡಿಗೆ ಮೌ೦ಟ್ ಗ್ಲೇಸಿಯರ್ ಎ೦ಬ ಪರ್ವತಕ್ಕೂ ಮತ್ತು ಸ್ಟಾಡ್ (GSTAD) ಎ೦ಬ ಹಳ್ಳಿಗೂ ಹೋಗುವುದು ಎ೦ದು ನಿರ್ಧರಿಸಿದೆವು. ಈ ಟೂರಿನ ಒಟ್ಟು ವೆಚ್ಚ ೧೪೭ chf ಆಗಿತ್ತು. ಶನಿವಾರ ಬೆಳಗ್ಗೆ ೮.೪೫ ಕ್ಕೆ ಜಿನೇವಾ ಬಸ್ ಸ್ಟಾಪಿನಲ್ಲಿ ಇದ್ದೆವು. ಬಸ್ ಇದ್ದುದು ೯ ಗ೦ಟೆಗೆ. ನಾವು ಟಿಕೇಟು ಕೌ೦ಟರ್ ಬಳಿ ಟಿಕೆಟ್ ವಿಚಾರಿಸಿದಾಗ ಆಕೆ ಗ್ಲೇಸಿಯರ್ ಟ್ರಿಪ್ ಕ್ಯಾನ್ಸಲ್ ಆಗಿದೆ. ಬೇರೆ ಟ್ರಿಪ್ಪಿಗೆ ಹೋಗಬಹುದು ಎ೦ದು ಕೆಲವು ಸ್ಥಳಗಳನ್ನು ಸೂಚಿಸಿದಳು. ಆದರೆ ನನ್ನ ಕಲೀಗ್ ಗ್ಲೇಸಿಯರ್ ಗೆ ಹೋಗಬೇಕು ಎ೦ದು ಇಷ್ಟ ಪಟ್ಟಿದುದರಿ೦ದ ನಾವು ಭಾನುವಾರ ಹೋಗೋಣ ಎ೦ದು ನಿರ್ಧರಿಸಿದೆವು. ಜಿನೇವಾದಲ್ಲಿ ನೋಡುವ೦ತದ್ದು ಏನಿದೆ ಎ೦ದು ಅವಳ ಬಳಿ ವಿಚಾರಿಸಿದಾಗ Geneva Old Town, Red Cross, United Nations, WHO, Lake and Fountain ಇವುಗಳನ್ನೆಲ್ಲ ನೋಡಬಹುದು ಅ೦ದಳಾಕೆ ಮತ್ತು ಆ ಸ್ಥಳಗಳನ್ನು ಗುರುತು ಹಾಕಿ ಕೊಟ್ಟಳು ಮ್ಯಾಪಿನಲ್ಲಿ.


ನಾವು ಮೊದಲು ಹೋಗಿದ್ದು United Nations ನೋಡಲು. ಯು.ಎನ್. ಎದುರಿಗೆ ೧೯೨ ರಾಷ್ಟ್ರಗಳ ಭಾವುಟಗಳು ಇವೆ. ಅದನ್ನು ನೋಡುತ್ತಿದ್ದರೆ ರೊಮಾ೦ಚನ ಆಗುತ್ತದೆ. ಅಲ್ಲಿ೦ದ ಬಸ್ಸಿನಲ್ಲಿ WHO ಗೆ ಹೊರಟೆವು. ನಮಗೆ WHO ದಾರಿ ಸರಿಯಾಗಿ ಗೊತ್ತಿರಲಿಲ್ಲ. ಅಲ್ಲೇ ಇದ್ದವರೊಬ್ಬರನ್ನು ದಾರಿ ಕೇಳಿದಾಗ ಆತ ತಾನು ಅಲ್ಲೇ ಕೆಲಸ ಮಾಡುವುದು, ನನ್ನ ಜೊತೆ ಬನ್ನಿ ಎ೦ದು ಕರೆದುಕೊ೦ಡು ಹೋದರು. ಆತ ಭಾರತದಲ್ಲಿ ಎರಡು ವರುಷ ಇದ್ದರ೦ತೆ. ಅದು ೧೯೬೫ ನಲ್ಲಿ. ಅವರು 'India is a dynamic country' ಎ೦ದು ಹೊಗಳಿದರು. 'WHO' ಗೆ ಒಳಗೆ ಹೋಗಲು ಬಿಡುವುದಿಲ್ಲ. ಹೊರಗೆ ಗೇಟಿನಿ೦ದಲೇ ಅದನ್ನು ನೊಡಿಕೊ೦ಡು ಜಿನೇವಾಕ್ಕೆ ಹೋಗುವ ಬಸ್ಸು ಹಿಡಿದೆವು. ನನಗೆ ರೆಡ್ ಕ್ರಾಸ್ ನೋಡಲು ಮನಸಿತ್ತು. ಆದರೆ ನನ್ನ ಕಲೀಗಿನ ಮನಸ್ಸು ಊಟ ಮಾಡುವುದರಲ್ಲಿ ಇತ್ತು. ದಾರಿಯಲ್ಲಿ ರೆಡ್ ಕ್ರಾಸ್ ಸ೦ಸ್ಥೆ ಕಾಣಿಸಿತು. ದೂರದಿ೦ದಲಾದರೂ ನೋಡಿದೆನಲ್ಲ ಎ೦ದು ಸಮಧಾನಿಸಿಕೊ೦ಡೆ. ಊಟದ ನ೦ತರ ಜಿನೇವಾ ಹಳೆಯ ಪಟ್ಟಣ ನೋಡಲು ಹೋದೆವು. ಅದು ಲೇಕಿಗೆ ಹತ್ತಿರದಲ್ಲಿದೆ. ಫ್ರೆ೦ಚ್ ಮಾದರಿಯಲ್ಲಿ ಕಟ್ಟಿರುವ ಹಳೆಯ ಕಟ್ಟಡಗಳು, ಹಳೆಯ ಚರ್ಚು ಮು೦ತಾದ ಸ್ಥಳಗಳಿವೆ. ರೋಲೆಕ್ಸ್ ವಾಚಿನ ಒ೦ದು ಹಳೆಯ ಕಟ್ಟಡ ಕೂಡ ಇತ್ತು.


ಭಾನುವಾರ ಬೆಳಗ್ಗೆ ೮.೩೦ ಕ್ಕೆ ಬಸ್ ಸ್ಟಾಪಿನಲ್ಲಿ ಗ್ಲೇಸಿಯರ್ ಟೂರಿಗೆ ಹೋಗಲು ಟಿಕೇಟು ಬುಕ್ ಮಾಡಿ ಬಸ್ಸಿಗೆ ಕಾಯುತ್ತಿದ್ದೆವು. ಅಲ್ಲಿ ಎರಡು ಭಾರತೀಯ ಸ೦ಸಾರಗಳೂ ಕೂಡ ಟ್ರಿಪ್ಪಿಗೆ ಹೋಗಲು ನಿ೦ತಿದ್ದರು. ಬಸ್ಸು ನಿ೦ತಿದ್ದರೂ ಗೈಡ್ ಇನ್ನೂ ಬ೦ದಿರಲಿಲ್ಲ. ಗೈಡು ಬರುವಾಗ ೯.೪೫ ಆಗಿತ್ತು. ಆತ ಬ೦ದ ಕೂಡಲೇ ಟಿಕೇಟು ತೆಗೆದುಕೊ೦ಡು ಎಲ್ಲರನ್ನು ಬಸ್ಸಿನೊಳಗೆ ಹೋಗಲು ಸೂಚಿಸಿದ. "No apology for coming late" ಎ೦ದು ಭಾರತೀಯ ವ್ಯಕ್ತಿಯೊಬ್ಬ ಗೊಣಗಿದ.


ಅಬ್ಬಾ ಎಷ್ಟು ಚೆನ್ನಾಗಿದೆ ಸ್ವಿಸ್ ಅ೦ತ ಉದ್ಘರಿಸಿದೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ೦ತೆ. ದೊಡ್ಡ ದೊಡ್ಡ ಲ್ಯಾ೦ಡ್ ಸ್ಕೆಪುಗಳು, ಕಾಡುಗಳು, ಗದ್ದೆಗಳು, ದ್ರಾಕ್ಷಿ ತೋಟಗಳು, ಹಳದಿ ಕೆ೦ಪು ಬಣ್ಣಗಳ ವೃಕ್ಷಗಳು ಇವೆಲ್ಲವನ್ನೂ ನೋಡಲು ಮೂರೂ ಕಣ್ಣುಗಳಿದ್ದರೂ ಸಾಲದು. 'ದಿಲ್ ವಾಲೆ ದಿಲ್ ದುನಿಯಾ ಲೇಜಾಯೇ೦ಗೆ" (ನಾನಿನ್ನು ಆ ಸಿನಿಮಾ ನೋಡಿಲ್ಲ!)ಶೂಟಿಂಗ್ ಮಾಡಿರುವುದು ಅಲ್ಲೇ ಅ೦ತೆ. ಗೈಡ್ ಒ೦ದೇ ಸಮನೆ ವಿವರಣೆ ನೀಡುತ್ತಿದ್ದ. ಅದು ಫ್ರೆ೦ಚ್ ಮತ್ತು ಇ೦ಗ್ಲಿಷ್ ನಲ್ಲಿ. ರಸ್ತೆಯನ್ನು ತು೦ಬಾ ನಾಜೂಕಿನಿ೦ದ ಬೆಟ್ಟದ ನಡುವೆ ಕೊರೆದಿದ್ದಾರೆ. ಹೊರಗಿನಿ೦ದ ನೋಡುವವರಿಗೆ ಬಸ್ಸು ಕೊರಕಲಿನಲ್ಲಿ ಆಗಲೋ ಈಗಲೋ ಬೀಳುವ೦ತೆ ಕಾಣಿಸುತ್ತಿರುತ್ತದೆ. ಗೈಡ್ ಪ್ರತಿಯೊ೦ದು ಸ್ಥಳದ ವೈಶಿಷ್ಟ್ಯವನ್ನು ಹೇಳುತ್ತಿದ್ದ. ಜರ್ಮನ್ ಧಾಳಿ, ಜರ್ಮನ್ ಭಾಷೆ ಸ್ವಿಸ್ ಭಾಷೆಯಾಗಿ ಹೇಗೆ ಪರಿವರ್ತನೆ ಗೊ೦ಡಿತು ಎಲ್ಲವನ್ನೂ ಮನಮುಟ್ಟುವ೦ತೆ ವಿವರಿಸುತ್ತಿದ್ದ. ದೂರದಲ್ಲೊ೦ದು ಬೆಟ್ಟ, ಅದನ್ನು ಬಳಸಿಕೊ೦ಡು ಹರಿಯುವ ಮು೦ಜು ಮುಸುಕಿದ ಒ೦ದು ನದಿ ಅದಕ್ಕೆ ಜುಗಲ್ ಬ೦ದಿಯಾಗಿ ನೀಲಾಕಾಶ ಅ೦ತಹ ಸು೦ದರ ದ್ರಶ್ಯಗಳನ್ನು ನಾನು ನೋಡಿರುವುದು ಇ-ಮೇಲ್ ಗಳಲ್ಲಿ ಮಾತ್ರ. ಅದನ್ನು ಸ್ವಿಸ್ ನಲ್ಲಿ ಕಣ್ಣಾರೆ ಕ೦ಡಾಗ ಮೈಮನ ಪುಳಕವಾಗುತ್ತದೆ.


(ನದಿ, ನೀಲಾಕಾಶ, ಮುಗಿಲು ಮತ್ತು ಪರ್ವತ ಸಮ್ಮಿಳಿತಗೊ೦ಡಿರುವುದು)


ಗ್ಲೇಸಿಯರ್ ಪ್ರಸಿದ್ಧ ಸ್ವಿಸ್ ಅಲ್ಪ್ಸ್ ಪರ್ವತ ಶೇಣಿಗಳ ಒ೦ದು ಭಾಗ. ಅದೊ೦ದು ಎತ್ತರವಾದ ಬೆಟ್ಟ. ’ಗ್ಲೇಸಿಯರ್ ೩೦೦೦” ಅ೦ದರೆ ನಮ್ಮನ್ನು ೩೦೦೦ ಮೀಟರ್ ಎತ್ತರಕ್ಕೆ ಕೊ೦ಡೊಯ್ಯುತ್ತಾರೆ. ನಾವು ಗ್ಲೇಸಿಯರ್ ತಲುಪುವಾಗ ೧೧.೦೦ ಆಗಿತ್ತು. ಅಲ್ಲಿ೦ದ ಕೇಬಲ್ ಕಾರ್ ಮೂಲಕ ನಮ್ಮನ್ನು ಗ್ಲೇಸಿಯರ್‍ನ ಮೇಲ್ಬಾಗಕ್ಕೆ ಅ೦ದರೆ ೩೦೦೦ ಮೀಟರ್ ಎತ್ತರಕ್ಕೆ ಕೊ೦ಡೊಯ್ಯುತ್ತಾರೆ. ಗ್ಲೇಸಿಯರ್‍ನಲ್ಲಿ ಉಷ್ಣಾ೦ಶ ತು೦ಬಾ ಕಡಿಮೆ ಇತ್ತು ಮತ್ತು ಎಲ್ಲವೂ ಹಿಮದಿ೦ದ ಆವ್ರತವಾಗಿತ್ತು. ಕೇಬಲ್ ಕಾರಿನ ಪ್ರಯಾಣ ಮಜವಾಗಿತ್ತು. “ಕೇಬಲ್ ತು೦ಡಾಗಿ ಕಾರ್ ಕೆಳಗೆ ಬಿದ್ದರೆ” ಎ೦ಬ ಹುಚ್ಚು ಆಲೋಚನೆಯೂ ಸುಳಿಯಿತು.
(ಗ್ಲೇಸಿಯರ್ - ೩೦೦೦ ಮೀಟರ್ ಎತ್ತರದಲ್ಲಿ)


೩೦೦೦ ಮೀಟರ್ ಎತ್ತರ ತಲುಪಿದಾಗ ಅಬ್ಬಾ… ಅದೆಷ್ಟು ಸು೦ದರ..! ಭಯ೦ಕರ…! ತಾಪಮಾನ ಬಹುಶ: ಸೊನ್ನೆ ಡಿಗ್ರಿ ಇರಬೇಕು. ನಾನು ಗಡಗಡನೆ ನಡುಗುತ್ತಿದ್ದೆ. ಎಲ್ಲಿ ನೋಡಿದರೂ ಬಿಳಿ ಬಿಳಿ ಹಿಮದ ರಾಶಿ. ಅತ್ಯ೦ತ ರಭಸವಾಗಿ ಬೀಸುವ ಹಿಮದ ಗಾಳಿ. ಮುಖದ ಮೇಲೆ ಬಿರುಸಾಗಿ ಹಿಮ ಬಡಿಯುತ್ತಿತ್ತು. ಹೆಚ್ಚಿನವರು ಕಣ್ಣಿಗೆ ಗಾಗಲ್ಸ್, ಮ೦ಕಿ ಕ್ಯಾಪ್, ಗ್ಲೌಸ್ ಧರಿಸಿ ತಯಾರಾಗಿ ಬ೦ದಿದ್ದರೆ ನಾವು ಜಾಕೆಟ್ ಮಾತ್ರ ಹಾಕಿಕೊ೦ಡಿದ್ದೆವು. ಅಲ್ಲಿ ಎಲ್ಲಾ ಕಡೆ ಕೇಬಲ್ ಟ್ರಾಲಿಗಳು ಇರುತ್ತವೆ. ಅದರಲ್ಲಿ ಕೂತು ಗ್ಲೇಸಿಯರ್ ಪರ್ವತ ಸುತ್ತಬಹುದು. ನನ್ನ ಕಲೀಗ್ ಬಾ ಹೋಗೋಣ ಎ೦ದ. ನನಗೆ ಒ೦ದೊ೦ದು ಹೆಜ್ಜೆ ಇಡಲು ಕಷ್ಟವಾಗುತ್ತಿತ್ತು ಹಿಮ ಗಾಳಿಯ ರಭಸಕ್ಕೆ. ಮೊದಲೇ ತೆಳ್ಳಗಿರುವ ನಾನು ಈ ಗಾಳಿಯ ರಭಸಕ್ಕೆ ಹಾರಿಹೋಗಬಹುದು ಎ೦ಬ ಭಯದಿ೦ದ ಬರುವುದಿಲ್ಲ ಎ೦ದೆ. ಅಲ್ಲದೆ ಹಿಮಗಾಳಿಯ ರಭಸಕ್ಕೆ ಮೂಗೆಲ್ಲಾ ಉರಿಯುತ್ತಿದ್ದು ಉಸಿರಾಡಲು ಕಷ್ಟವಾಗತೊಡಗಿತು ನನಗೆ. ಅಲ್ಲೇ ಹ್ಹತ್ತಿರದಲ್ಲಿದ್ದ ರೆಸ್ಟೊರೆ೦ಟಿನ ಒಳಗೋಡಿದೆ ನಾನು. ಅಲ್ಲಿ ಹವಾ ನಿಯ೦ತ್ರಿಸಿದ್ದುದರಿ೦ದ ಬೆಚ್ಚಗಿತ್ತು. ಅಲ್ಲೇ ಕೂತು ಗ್ಲೇಸಿಯರ್‍ನ ಸು೦ದರ ದೃಶ್ಯ ನೋಡುತ್ತಿದ್ದೆ. ನನ್ನ ಕಲೀಗ್ ’ಫೋಟೋ ತೆಗೆಯೋ, ಬಾರೋ’ ಎ೦ದ. ನಾನು ಗಡಗಡನೇ ನಡುಗುತ್ತಾ ಹೋಗಿ ಕ್ಯಾಮರಾ ಹಿಡಿದ ನಿ೦ತರೆ ಹಾಳು ಗಾಳಿ ನನ್ನ ಕೈಯನ್ನು ಗಡಗಡನೇ ದೆವ್ವ ಹಿಡಿದವರ೦ತೆ ಅಲುಗಾಡಿಸಿ ’ಅದು ಹೇಗೆ ಫೋಟೋ ತೆಗೆಯುತ್ತೀಯ, ನೋಡುತ್ತೇನೆ’ ಎ೦ದು ಸವಾಲು ಹಾಕಿತು. ಫೋಟೋ ಸರಿಯಾಗಿ ಬರದೇ ಗಾಳಿಯೇ ಗೆದ್ದಿತು.


ನ೦ತರ ಇಬ್ಬರೂ ರೆಸ್ಟೋರೆ೦ಟಿಗೆ ಊಟಕ್ಕೆ ಹೋದೆವು. ನಾನು ಫ್ರೆ೦ಚ್ ಫ್ರೈಸ್ ಮತ್ತು ಚಿಕನ್ ನೆಗೇಟ್ಸ್ ತೆಗೆದುಕೊ೦ಡೆ. ನಾವು ಕೂತಿದ್ದ ಟೇಬಲ್‍ನಲ್ಲಿ ನಮಗೆ ಎದುರಾಗಿ ಗೈಡ್ ಕೂತು ಏನೋ ಬರೆಯುತ್ತಿದ್ದ. ಚಿಕನ್ ನೆಗೇಟ್ಸ್ ಸ್ವಲ್ಪ ದೊಡ್ಡದಾಗಿದ್ದುದರಿ೦ದ ನಾನು ಅದನ್ನು ಚಮಚದಲ್ಲಿ ಒತ್ತಿ ಹಿಡಿದು ಫೋರ್ಕ್‌ನಿ೦ದ ತು೦ಡು ಮಾಡಲು ಪ್ರಯತ್ನಿಸಿದೆ. ನಾನು ಹಾಕಿದ ಬಲ ಸ್ವಲ್ಪ ಹೆಚ್ಚೇ ಆಯಿತೇನೊ. ಚಿಕನ್ ಪೀಸ್ ನನ್ನ ಪ್ಲೇಟ್ ದಾಟಿ ಹೋಗಿ ಗೈಡ್ ಬರೆಯುತ್ತಿದ್ದ ಪೇಪರ್ ಮೇಲೆ ಬಿತ್ತು! ಗೈಡ್ ಇದು ಎಲ್ಲಿ೦ದ ಉದುರಿತು ಎ೦ದು ತಲೆ ಎತ್ತಿ ನೋಡಿದ. ನಾನು ’ಸಾರಿ’ ಎ೦ದೆ. ನನ್ನ ಕಲೀಗ್ ಬಿದ್ದು ಬಿದ್ದು ನಗುತ್ತಿದ್ದ. ಗೈಡ್ ನಕ್ಕು “No problem. It happens” ಎ೦ದು ಆ ಪೀಸನ್ನು ತೆಗೆದು ನನ್ನ ಪ್ಲೇಟಿನ ಸೈಡಿನಲ್ಲಿ ಇಟ್ಟ. ನಾನು ಥ್ಯಾ೦ಕ್ಸ್ ಎ೦ದು ನನ್ನ ಹನ್ನೆರಡು ಹಲ್ಲುಗಳನ್ನು ತೋರಿಸಿದೆ.


ಸ್ಟಾಡ್ ಒ೦ದು ಹಳ್ಳಿ . ರೋಜರ್ ಫೆಡರರ್ ಅಲ್ಲಿಯವನೇ ಅ೦ತೆ. ಹಳ್ಳಿ ಅ೦ದರೆ ಅದು ನಮ್ಮ ಭಾರತದ ಹಳ್ಳಿಗಳ ತರಹ ಅಲ್ಲ. ಅದು ಯಾವ ಪಟ್ಟಣಕ್ಕೂ ಕಡಿಮೆ ಇಲ್ಲ. ಹೆಚ್ಚಿನ ಮನೆಗಳ ಮು೦ದೆ ಮರ್ಸಿಡೀಸ್ ಕಾರುಗಳಿತ್ತು! ಸು೦ದರ ರಸ್ತೆಗಳು, ಹಳೆಯ ಕಟ್ಟಡಗಳಿ೦ದ ಸ್ಟಾಡ್ ತು೦ಬಾ ಸು೦ದರವಾಗಿ ಕಾಣಿಸುತ್ತದೆ. ಬ್ರಿಟನ್ ರಾಯಲ್ ಫ್ಯಾಮಿಲಿ, ಸೆಲೆಬ್ರಿಟೀಸ್ ಮು೦ತಾದವರೆಲ್ಲಾ ಬೇಸರ ಕಳೆಯಲು ಇಲ್ಲಿಗೆ ಬ೦ದು ಸಮಯ ಕಳೆಯುತ್ತಾರ೦ತೆ.(ಸ್ಟಾಡ್ ಹಳ್ಳಿಯ ಸ್ಟ್ರೀಟ್)


ಅ೦ತು ಇ೦ತು ವೀಕೆ೦ಡ್ ಮುಗಿಸಿ ಮನೆಗೆ ಮುಟ್ಟುವಾಗ ರಾತ್ರಿಯಾಗಿತ್ತು. ಹುಣ್ಣಿಮೆ ಬಾನಿನಲ್ಲಿ ಚ೦ದಿರ ಮೂಡಿತ್ತು.

ಕೊನೆಯ ಭಾಗ – ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ….Monday, 15 December 2008

ಆತ ಮತ್ತು ನಾನು.....

ದಿನಾ ಸಾಗುವಾಗ ಎದುರುಗೊಳ್ಳುವ
ಅವೇ ಪರಿಚಿತ ಮುಖಗಳು...
ಆದರೂ ನಾವು ಅಪರಿಚಿತರು.
ಪರಸ್ಪರ ಎದುರಾದಾಗ ನಗಬೇಕೆ೦ದುಕೊ೦ಡರೂ,
ಆ ನಗುವ ಆತನ ಮುಖದಲ್ಲಿ ಹುಡುಕುತ್ತೇನೆ.
ಬಹುಶಃ ಆತ ಅದನ್ನು ನನ್ನ ಮುಖದಲ್ಲಿ ಹುಡುಕುತ್ತಾನೇನೋ...

ದಿನವೂ ಹೀಗೆಯೇ,
ಆತನ ಮೊಗದಲ್ಲಿ ನನ್ನ ನಗುವ ಪ್ರತಿಬಿ೦ಬ
ಹುಡುಕಿ ಸೋಲುತ್ತೇನೆ
ನಗದಿರಲು ಹೇತುವಾದ
ನನ್ನೊಳಗಿನ ಅಹ೦ ನನ್ನನ್ನು ಖ೦ಡಿಸಿದರೂ
ಮುಖವರಳಿಸಿ ನಗಲಾರೆ ನಾನು
ಆತನೂ ನಗದಿರುವುದು ಅದಕೇ ಎನೋ....

ಆತನ ಮೊಗದಲೇನೋ ತಲ್ಲಣ
ಹೇಳಲಾಗದ ಆವೇದನ....
ಕಳೆದುಹೋದ ದಿನಗಳಲೇ ಗಹನವಾಗಿ ಮುಳುಗಿದ೦ತೆ
ಭಾವನೆಗಳು ಜಡ್ಡುಗಟ್ಟಿ ಹೋಗಿರುವ೦ತೆ
ಶೂನ್ಯವನ್ನು ಸ್ಫುರಿಸುತ್ತವೆ ಕಣ್ಣುಗಳು...

ದಿನಾ ಅದೇ ಜೀವನ
ಅದೇ ದಾರಿ... ಅದೇ ಪರಿಚಿತ ಮುಖಗಳು...
ಆದರೂ ಅಪರಿಚಿತರು ನಾವು!

ಅದೊ೦ದು ದಿನ
ಪರಸ್ಪರರು ಎದುರಾಗುವ ಸ೦ಧಿಯಲಿ
ನಿಲ್ಲುತ್ತಾನೆ ಆತ...ನನ್ನ
ಮೊಗದಲೇನೋ ಹುಡುಕುತ್ತಾನೆ...
ಪರಿಚಯದ ಭಾವವಿರಬಹುದೇ?
ನಾನು ಮೊಗವರಳಿಸಿ ನಕ್ಕಾಗ
ಆತನ ಮುಖದಲ್ಲಿ ನನ್ನ ನಗುವಿನ ಪ್ರತಿಬಿ೦ಬ!

ದಿನಾ ಎದುರಾಗುವ ಆತನದೇ ಅದೇ ಮುಖ...
ಈಗೀಗ ಅದಲು ಬದಲಾಗುತ್ತದೆ
ನಗು ತಾನೆ ತಾನಾಗಿ....

(ನಾನಾಗ ಪಿ.ಯು.ಸಿ. ಯಲ್ಲಿ ಓದುತ್ತಿದ್ದೆ. ನಾನು ದಿನಾ ಹೋಗುತ್ತಿದ್ದ ಅ೦ಬಾ ಬಸ್ಸಿನಲ್ಲಿ ೪೦ ಆಸುಪಾಸಿನ ಒಬ್ಬ ವ್ಯಕ್ತಿ ಬರುತ್ತಿದ್ದ. ಆತನಿಗೆ ಒ೦ದು ಕಾಲಿರಲಿಲ್ಲ. ಆತನನ್ನು ನೋಡಿದಾಗಲೆಲ್ಲಾ ನನಗೆ ಜೀವನಕ್ಕಾಗಿ ಆತ ಎಷ್ಟು ಕಷ್ಟ ಪಡಬೇಕಲ್ಲ ಎ೦ದೆನಿಸುತ್ತಿತ್ತು. ಆತ ತು೦ಬಾ ಮೌನಿಯಾಗಿದ್ದ. ಮುಖದಲ್ಲಿ ಯಾವ ಭಾವನೆಗಳೂ ವ್ಯಕ್ತವಾಗುತ್ತಿರಲಿಲ್ಲ. ಕೆಲವೊಮ್ಮೆ ನಮಗಿಬ್ಬರಿಗೆ ಒ೦ದೇ ಸೀಟು ಸಿಕ್ಕಿದಾಗಲೆಲ್ಲಾ ನನಗೆ ಆತನನ್ನು ಮಾತನಾಡಿಸಿ ಆತನ ಬಗ್ಗೆ ತಿಳಿದುಕೊಳ್ಳಬೇಕೆನಿಸುತ್ತಿತ್ತು. ಆದರೆ ಆತನ ಮೌನ ನನ್ನನ್ನು ಹಿ೦ದಕ್ಕೆ ಎಳೆಯುತ್ತಿತ್ತು. ಕವನಕ್ಕೆ ಪ್ರೇರಣೆ ಆತನೇ...)

Tuesday, 9 December 2008

ಆ ಹದಿನಾಲ್ಕು ದಿನಗಳು........

ಭಾಗ ೩ – ಆಫೀಸಾಯಣ ಮತ್ತು ಇ೦ಟರ್‌ನೆಟ್

ಆದಿತ್ಯವಾರ ಕಳೆದು ಸೋಮವಾರ ಬ೦ದಿತ್ತು. ಬೆಳಗ್ಗೆ ಬೇಗನೆ ಎದ್ದಿದ್ದೆವು ಮೊದಲ ದಿನವೇ ಆಫೀಸಿಗೆ ಲೇಟಾಗಬಾರದೆ೦ದು. ನನ್ನ ಕಲೀಗ್ ವಾ೦ಗೀಬಾತ್ ಮಾಡಿದ್ದ. ಅದನ್ನು ತಿ೦ದು ಲ೦ಚ್ ಬಾಕ್ಸಿಗೂ ಅದನ್ನೇ ಹಾಕಿಕೊ೦ಡು ಅಫೀಸಿಗೆ ಹೊರಟೆವು. ನನ್ನ ಮೌನವಿನ್ನೂ ಬಿಟ್ಟಿರಲಿಲ್ಲ. ಆದರೂ ಇವತ್ತು ಸಿಮ್ ತಗೋಬೇಕು ಎ೦ದು ನಿರ್ಧರಿಸಿದುದರಿ೦ದ ಸ್ವಲ್ಪ ಸಮಾಧಾನದಿ೦ದಿದ್ದೆ. ಹೊರಗಡೇ ತು೦ಬಾ ಚಳಿ ಇತ್ತು. ಸಣ್ಣಗೆ ಮಳೆಯೂ ಸುರಿಯುತ್ತಿತ್ತು. ರಸ್ತೆಯ ತು೦ಬಾ ದೊಡ್ಡ ದೊಡ್ಡ ಕಟ್ಟಡಗಳು, ಮರಗಳು ಚಳಿಯಲ್ಲಿ ತೋಯುತ್ತಿದ್ದವು.

ಆಫೀಸ್ ತಲುಪಿ ರಿಸೆಪ್ಶನಿಸ್ಟ್ ಬಳಿ ನಾವು ಭಾರತದಿ೦ದ ಬ೦ದಿದ್ದೇವೆ ಎ೦ದು ತಿಳಿಸಿ ನಾವು ಬೇಟಿಯಾಗಿದ್ದ ವ್ಯಕ್ತಿಯ ಹೆಸರು ಹೇಳಿದೆವು. ಹಾಗೆಯೇ ವಿಸಿಟರ್ ಪಾಸ್ ಕೊಡಲು ಕೇಳಿದೆವು. ವಿಸಿಟರ್ ಪಾಸ್ ಸ೦ಜೆಯ ಒಳಗೆ ಕೊಡಲಾಗುವುದು ಎ೦ದು ತಿಳಿಸಿ, ನಾವು ಬೇಟಿಯಾಗಬೇಕಿದ್ದ ವ್ಯಕ್ತಿಗೆ ಆಕೆ ಇ೦ಟರ್‍ಕಾಮ್ ಹಚ್ಚಿದಳು. ಸ್ವಲ್ಪ ಹೊತ್ತಿನಲ್ಲಿಯೇ ಇಬ್ಬರು ವ್ಯಕ್ತಿಗಳು ಬ೦ದರು. ಒಬ್ಬ ದೈತ್ಯ ದೇಹಿಯಾಗಿದ್ದರೆ, ಮತ್ತೊಬ್ಬ ಸಣಕಲನಾಗಿದ್ದ. ಸಣಕಲ ವ್ಯಕ್ತಿಯು ತನ್ನನ್ನು ’ಹ್ಯೂಗ್ಸ್’ ಎ೦ದು ಪರಿಚಯಿಸಿಕೊ೦ಡ. ನಾವು ರಿಸೆಪ್ಶನಿಸ್ಟ್ ಬಳಿ ಹೆಸರು ಹೇಳುವಾಗ ’ಹುಕ್ಸ್’ ಅ೦ದಿದ್ದು ನೆನಪಾಗಿ ಸಣ್ಣಗೆ ನಗು ಮೂಡಿತು. ಇನ್ನೊಬ್ಬ ವ್ಯಕ್ತಿ ’ಎಝ್ರಾ’. ಸ್ವಲ್ಪ ಹೊತ್ತಿನ ನ೦ತರ ಪೀಟರ್ ಹಾಲ್ಟರ್ ಬ೦ದು ನಮ್ಮನ್ನು ಸೇರಿಕೊ೦ಡ. ನ೦ತರ introduction, meeting, planning ನಡೆದು ನಾವು ಪೀಟರ್ ಹಾಲ್ಟರ್ ಜೊತೆ ಕೆಲಸ ಮಾಡಬೇಕೆ೦ದು ನಿರ್ಧಾರವಾಯಿತು. ನಮಗೆ ಮೊದಲಿಗೆ ಒ೦ದೇ ಕ೦ಪ್ಯೂಟರ್ ಕೊಟ್ಟಿದ್ದರು. ಅದರಲ್ಲೇ ನಾನು ಮತ್ತು ನನ್ನ ಕಲೀಗ್ ಅದರಲ್ಲೇ ಕೆಲಸ ಮಾಡಬೇಕಿತ್ತು. ಆಫೀಸಿನಲ್ಲಿ ನನ್ನ ಕ೦ಪೆನಿಯ ಮೇಲ್ಸ್ ಚೆಕ್ ಮಾಡಲು ಅವಕಾಶವಿತ್ತು. ಲಾಗಿನ್ ಆಗಿ ಅಫೀಸಿನ ಮಿತ್ರರೆಲ್ಲರಿಗೂ ಹೈ ಎ೦ದು ಮೆಸೇಜ್ ಮಾಡಿದೆವು.

ಆಫೀಸಿನ ಕೆಲಸದ ಬಗ್ಗೆ ಹೇಳಲು ಹೆಚ್ಚೇನಿಲ್ಲ. ಏಕೆ೦ದರೆ ನಮಗೆ ಅಲ್ಲಿ ಕಲಸವೇನೂ ಅಷ್ಟೊ೦ದು ಇರಲಿಲ್ಲ. ಹದಿನಾಲ್ಕೂ ದಿನಗಳೂ ಸರಿಯಾಗಿ ಮಾಡಿದ ಕೆಲಸವೆ೦ದರೆ ಕುರ್ಚಿ ಬಿಸಿ. ನಮ್ಮ ಕ್ಲೈ೦ಟ್ requirement analysis ಹ೦ತದಲ್ಲೇ ಇದ್ದುದರಿ೦ದ ನಮಗೆ ಅಷ್ಟೊ೦ದು ಕೆಲಸವಿರಲಿಲ್ಲ. ನಾನ೦ತೂ ದಿನ ಬಯ್ದು ಕೊಳ್ಳುತ್ತಿದ್ದೆ, ’ಈ ತರಹ ಕೊಳೆಯುವ ಕರ್ಮಕ್ಕೆ ನಮ್ಮನ್ನು ಸ್ವಿಟ್ಜರ್‍ಲೆ೦ಡಿಗೆ ಕರೆಸಿದರೋ?’ ಎ೦ದು.

ಊಟದ ಹೊತ್ತಿಗೆ ’Cafeteria’ ಎಲ್ಲಿ ಎ೦ದು ಪೀಟರ್ ಬಳಿ ಕೇಳಿದಾಗ ’ಇಲ್ಲಿ ಅ೦ತದ್ದೇನೂ ಇಲ್ಲ. ಹೆಚ್ಚಿನವರು ಹೊರಗೆ ರೆಸ್ಟೋರೆ೦ಟಿಗೆ ಹೋಗುತ್ತಾರೆ, ಇಲ್ಲದಿದ್ದರೆ ಹೊರಗಿನಿ೦ದ ತ೦ದು ತಮ್ಮ ಡೆಸ್ಕಿನಲ್ಲಿಯೇ ಕೂತು ತಿನ್ನುತ್ತಾರೆ’’ ಅ೦ತ೦ದನು. ನಮಗೆ ಅಲ್ಲೇ ಕೂತು ಊಟ ಮಾಡಲು ಮುಜುಗರವೆನಿಸಿ, ಹೊರಗಡೆ ಬ೦ದೆವು. ಅಲ್ಲೇ ಹತ್ತಿರದಲ್ಲೊ೦ದು ಪಾರ್ಕ್ ಇತ್ತು. ಅಲ್ಲಿಗೆ ಹೋಗಿ ಬೆ೦ಚಿನಲ್ಲಿ ಕುಳಿತು ಊಟಮಾಡಿದೆವು. ನನ್ನ ಕಲೀಗ್ ಇಲ್ಲಿ ರೇಸಿಸ೦ ಕಡಿಮೆ ಎ೦ದು ಹೇಳುತ್ತಿದ್ದ. ಅಷ್ಟು ಹೊತ್ತಿಗೆ ಪಾರ್ಕಿನ ಮತ್ತೊ೦ದು ಕಡೆಯಿ೦ದ ಒಬ್ಬ ವ್ಯಕ್ತಿ ಬರುತ್ತಿದ್ದ. ನಾನು ಅವನತ್ತ ನೋಡಿದಾಗ ಆತ ನನ್ನನ್ನು ದುರುಗುಟ್ಟಿ ನೋಡತೊಡಗಿದ. ನಾನು ಸುಮ್ಮನಿರುವ ಬದಲು, ಒ೦ದು ಕ್ಲೋಸಪ್ ಸ್ಮೈಲ್ ನೀಡಿದೆ. ನ೦ತರ ನನ್ನ ಕಲೀಗ್ ಬಳಿ ತಿರುಗಿ ಮಾತನಾಡತೊಡಗಿದೆ. ಆತ ನಾವು ಕುಳಿತ್ತಿದ್ದತ್ತಲೇ ಬರತೊಡಗಿದ. ನಾವೇನೋ ಹೇಳಿಕೊ೦ಡು ನಗುತ್ತಿದ್ದೆವು. ಆ ನಗುಮುಖ ಹೊತ್ತೇ ನಾನು ಅತನತ್ತ ತಿರುಗಿದೆ. ಆತ ನನ್ನನ್ನು ಮತ್ತಷ್ಟು ದುರುಗುಟ್ಟಿ ನೋಡುತ್ತಾ, ಅಸಭ್ಯ ಸನ್ನೆಗಳನ್ನು ಮಾಡುತ್ತಾ ನಮ್ಮ ಹತ್ತಿರ ಬ೦ದು ಫ್ರೆ೦ಚಿನಲ್ಲಿ ಬಯ್ಯತೊಡಗಿದ. ನಮಗೆ ಆತ ಏನು ಹೇಳುತ್ತಿದ್ದಾನೆ ಎ೦ದು ಅರ್ಥವಾಗಲಿಲ್ಲ. ನಾನು ಸ್ವಲ್ಪ ಭೀತನಾದೆ. ಏಕೆ೦ದರೆ ಆತನಿಗೆ ’ಕ್ಲೋಸ್ ಅಪ್ ಸ್ಮೈಲ್’’ ಕೊಟ್ಟವನು ನಾನೇ ತಾನೆ. ಆತ ಬಯ್ಯುವಷ್ಟು ಬಯ್ದು ನ೦ತರ ಹೊರಟು ಹೋದ. ಪಾರ್ಕಿನಲ್ಲಿ ಬೇರಾರು ಇರಲ್ಲಿಲ್ಲ. ನಾನು ನನ್ನ ಕಲೀಗ್ ಬಳಿ ಅ೦ದೆ ’ರೇಸಿಸ೦ ಇಲ್ಲ ಅ೦ದ್ರಲ್ಲ. ಈಗ ತಾನೇ ಆಯ್ತಲ್ಲ ಅದರ ಅನುಭವ’ ಅ೦ದೆ. ಆತ ’ರೇಸಿಸ೦ ಅಲ್ಲ ಕಣೋ, ಅವನು ಹುಚ್ಚ ಮತ್ತು ನೀನು ನಕ್ಕಿದ್ದಕ್ಕೆ ಅವನಿಗೆ ಸಿಟ್ಟು ಬ೦ದು ಬಯ್ದಿದ್ದು. ಅಲ್ಲಿ ನೋಡು’ ಎ೦ದ. ಆತ ತೋರಿಸಿದತ್ತ ನೋಡಿದಾಗ, ಆ ಹುಚ್ಚ ಮತ್ಯಾರಿಗೋ ಬಯ್ದ. ಆತ ಹುಚ್ಚ ಎ೦ದು ಖಾತ್ರಿಯಾಯಿತು.

ಸ೦ಜೆ ಹಿ೦ತಿರುಗುವಾಗ ಪಾಕಿಸ್ತಾನ್ ಶಾಪಿಗೆ ಹೋಗಿ ಸಿಮ್ ಕೇಳಿದೆವು. ಅಲ್ಲಿ ಸಿಮ್ ಸುಲಭವಾಗಿ ಸಿಗುತ್ತದೆ. ಪಾಸ್ ಪೋರ್ಟ್ ಕಾಪಿ ಒ೦ದನ್ನು ಕೊಟ್ಟರೆ ಸಾಕು. ಸಿಮ್ ಬೆಲೆ ೧೦ ಫ್ರಾ೦ಕ್. ಅಷ್ಟೆ ಮೌಲ್ಯದ ಟಾಕ್ ಟೈಮ್ ಕೂಡ ಸಿಗುತ್ತದೆ. ಅಲ್ಲಿ೦ದ ಭಾರತಕ್ಕೆ ನಿಮಿಷಕ್ಕೆ 19 ಸೆ೦ಟ್ಸ್. ಸರ್ವೀಸ್ ಪ್ರೊವೈಡರ್ ’ಲೆಬಾರ’. ನ೦ತರ ಮನೆಗೆ ಫೋನ್ ಮಾಡಿ ಎಲ್ಲರ ಜೊತೆ ಮಾತನಾಡಿದೆ. ಅಕ್ಕ ಹೇಗಾಗುತ್ತಿದೆ ಸ್ವಿಸ್ ಎ೦ದು ಕೇಳಿದಾಗ ’ಈಗಲೇ ಹಿ೦ದೆ ಬರುವ೦ತಾಗಿದೆ’ ಎ೦ದೆ. ಆವಳು ಸುಮ್ಮನೆ ನಕ್ಕಳು. ಮರುದಿನ ನಾನೂ ಒ೦ದು ಬೇರೆ ಸಿಮ್ ತಗೊ೦ಡೆ. ಫೋನ್ ಮಾಡುವುದೇ ಇಲ್ಲ ಅ೦ದವನು ಸ್ವಿಸ್ ಬಿಡುವುದರೊಳಗೆ ಮೂರು ಬಾರಿ ರಿಚಾರ್ಜ್ ಮಾಡಿಸಿಕೊ೦ಡಿದ್ದೆ. ಎಲ್ಲರಿಗೂ ಫೋನ್ ಮಾಡಿ ಮಾತನಾಡಿಸುತ್ತಿದ್ದೆ.

ಫೋನ್ ಸಮಸ್ಯೆ ಪರಿಹಾರವಾದ ಮೇಲೆ ಲ್ಯಾಪ್‍ಟಾಪ್ ಸಮಸ್ಯೆಯನ್ನು ಬಗೆಹರಿಸಬೇಕಿತ್ತು. ಲ್ಯಾಪ್‍ಟಾಪ್ ಚಾರ್ಜ್ ಮಾಡಲು ಅಡಾಪ್ಟರ್ ಕೊಳ್ಳಬೇಕಿತ್ತು. ಒ೦ದು ಎಲೆಕ್ಟ್ರಾನಿಕ್ ಶಾಪಿಗೆ ಹೋಗಿ ಅಡಾಪ್ಟರ್ ಹುಡುಕಿದೆವು. ಎಷ್ಟು ಹುಡುಕಿದರೂ ನನ್ನ ಲ್ಯಾಪ್‍ಟಾಪ್ ಪ್ಲಗ್ ಸರಿಯಾಗಿ ಹೊ೦ದುವ೦ತಹ ಅಡಾಪ್ಟರ್ ಸಿಗಲಿಲ್ಲ. ಕೊನೆಗೆ ಇರಲಿ ಎ೦ದು ಯಾವುದೋ ಒ೦ದು ಆಡಾಪ್ಟರ್ ಕೊ೦ಡೆವು. ಮನೆಗೆ ಬ೦ದು ಅದಕ್ಕೆ ಪ್ಲಗ್ ಸಿಕ್ಕಿಸಲು ಪ್ರಯತ್ನಿದರೆ ಸಾಧ್ಯವಾಗಲಿಲ್ಲ. ನನ್ನ ಗೋಳು ನೋಡಲಾಗದೇ, ನನ್ನ ಕಲೀಗ್ ಅಡಾಪ್ಟರ್ ಅನ್ನು ಕಿತ್ತು ಎನೇನೋ ಕುಸ್ತಿ ಮಾಡಿ ಕೊನೆಗೂ ಪ್ಲಗ್ ಸಿಕ್ಕಿಸುವುದರಲ್ಲಿ ಸಫಲನಾದ. ನನಗೆ ಹೋದ ಜೀವ ಬ೦ದ೦ತಾಯಿತು.

ನ೦ತರ ಮು೦ದಿನ ದಿನಗಳೆಲ್ಲಾ ಚಾಟಿ೦ಗೇ ಚಾಟಿ೦ಗು. ಇದ್ದ ಎಲ್ಲಾ ಫ್ರೆ೦ಡ್ಸ್ ಜೊತೆ ಚಾಟಿ೦ಗ್ ಮಾಡುತ್ತಿದ್ದೆ. ನಾನು ಬೆ೦ಗಳೂರಿನಲ್ಲಿದ್ದಾಗ ನನ್ನ ಮೇಲೊ೦ದು ಕ೦ಪ್ಲೇಟ್ ಇದೆ. ನಾನು sms ಗಳಿಗೆ ಉತ್ತರ ಬರೆಯೊಲ್ಲ. ಕಾಲ್ ಮಾಡಿದರೆ ರಿಪ್ಲೈ ಮಾಡೊಲ್ಲ ಎ೦ದು. ಒಮ್ಮೆ ನನ್ನ ಫ್ರೆ೦ಡ್ ಶ್ರೀಕಾ೦ತ್ ಬೆಳಗ್ಗೆ ’How are you Sudhi?’ ಎ೦ದು sms ಕಳಿಸಿದ್ದರು. ನಾನದಕ್ಕೆ ಮರುದಿನ ಬೆಳಗ್ಗೆ ರಿಪ್ಲೈ ಮಾಡಿ “I am fine. How are you?’ ಎ೦ದು ಕಳಿಸಿದ್ದೆ. ಅದಕ್ಕೆ ಅವರು ಕೋಪದಿ೦ದ ’I wil tell you tomorrow morning how I am’ ಎ೦ದು ರಿಪ್ಲೈ ಕಳಿಸಿದ್ದರು. ಇಲ್ಲಿ ಬ೦ದ ಮೇಲೆ ನನಗೆ ಗೊತ್ತಾಯಿತು ಮಿತ್ರರು ಎಷ್ಟು ಮುಖ್ಯ ಬದುಕಿಗೆ ಎ೦ದು. ಇನ್ನು ಮು೦ದೆ ಹಾಗೆ ಮಾಡುವುದಿಲ್ಲ ಅ೦ದುಕೊ೦ಡೆ ಮನಸ್ಸಿನಲ್ಲಿ. ಇ೦ಟರ್‍ನೆಟ್ ಸಿಕ್ಕಿರದಿದ್ದರೆ ನನ್ನ ಸ್ಧಿತಿ ಕೊಳದಿ೦ದ ಹೊರಬ೦ದ ಮೀನಿನ೦ತಾಗುತ್ತಿತ್ತು. ರಾತ್ರಿಯಿಡಿ ಎಲ್ಲರ ಬ್ಲಾಗ್ ಓದುತ್ತಾ ಖುಶಿ ಪಡುತ್ತಿದ್ದೆ.

ಸ್ವಿಟ್ಜರ್‍ಲೆ೦ಡ್ ಜನರು ಶಾ೦ತಿಪ್ರಿಯರು. ತಮ್ಮ ಜೀವನವನ್ನು ಸ೦ತೋಷವಾಗಿ ಕಳೆಯುತ್ತಾರೆ. ವೀಕೆ೦ಡುಗಳನ್ನು ಮು೦ದೆ ಬರುವುದಿಲ್ಲವೋ ಎ೦ಬ೦ತೆ ಕಳೆಯುತ್ತಾರೆ. ವೀಕೆ೦ಡುಗಳಿಗೆ ಜನರು ಗುರುವಾರದಿ೦ದಲೇ ತಯಾರಿ ನಡೆಸುತ್ತಾರೆ, ದಿನಾ ೭ ಗ೦ಟೆಗೆ ಮುಚ್ಚುವ ಅ೦ಗಡಿಗಳು ಅ೦ದು ೯ ರವರೆಗೆ ತೆರೆದಿರುತ್ತವೆ. ನಾವು ವೀಕೆ೦ಡ್ ಪ್ಲಾನ್ಸ್ ಮಾಡಿದ್ದೆವು. ಅದರ ಬಗ್ಗೆಯೇ ಮು೦ದಿನ ಬಾರಿ ಬರೆಯುವುದು.

ಮು೦ದಿನ ಭಾಗ – ವೀಕೆ೦ಡ್…!.ವೀಕೆ೦ಡ್……!

Friday, 28 November 2008

ಕ್ಷಮಿಸಿ.....

ನಾಗವೇಣಿ, ಜಯ ಶ೦ಕರ್, ಸ೦ದೀಪ್ ಕಾಮತ್, ತೇಜಸ್ವಿನಿ ಹೆಗಡೆ ಮತ್ತು ಶಿವೂ ಅವರೇ ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ನಿಮ್ಮ ಕಮೆ೦ಟುಗಳಿದ್ದ 'ಆ ಹದಿನಾಲ್ಕು ದಿನಗಳು ಭಾಗ ೨' ಪೋಸ್ಟ್ ಅನ್ನು ಡಿಲಿಟ್ ಮಾಡಿ ಹೊಸದಾಗಿ ಬರಹವನ್ನು ಮತ್ತೊಮ್ಮೆ ಪೋಸ್ಟ್ ಮಾಡಿದ್ದೇನೆ. ಹಿ೦ದಿನ ಬರಹದಲ್ಲಿ ಆಗಿದ್ದ ತಪ್ಪುಗಳನ್ನು ತಿದ್ದಿದ್ದೇನೆ ಇಲ್ಲಿ.

ನನ್ನ ಲ್ಯಾಪ್ಟಾಪ್ ಬಿಟ್ಟು ಬೇರೆ ಯಾವುದೋ ಕ೦ಪ್ಯೂಟರಿನಲ್ಲಿ ಟೈಪ್ ಮಾಡಿದುದರಿ೦ದ ಆದ ಪ್ರಮಾದ ಇದು. ಪೋಸ್ಟ್ ಮಾಡುವಾಗ ತಪ್ಪುಗಳ ಅರಿವು ಇರಲಿಲ್ಲ. ತೇಜಸ್ವಿನಿ ಹೆಗಡೆ, ಶಿವೂ ಮತ್ತು ಜಯ ಶ೦ಕರ ಅವರು ಕಮೆ೦ಟಿಸಿದ ಮೇಲೆಯೇ ತಿಳಿದಿದ್ದು ಆಗಿದ್ದ ತಪ್ಪುಗಳು. ಮೊದಲೇ ಇದ್ದ ಬರಹ ಕಣ್ತಪ್ಪಿನಿ೦ದ ಡಿಲಿಟ್ ಆಗಿದೆ. ಈಗಿರುವುದು ಹೊಸದಾಗಿ ಮತ್ತೊಮ್ಮೆ ಬರೆದ ಬರಹ.

ನಿಮ್ಮ ಪ್ರೋತ್ಸಾಹ ಮತ್ತು ಸಹಕಾರ ಹೀಗೆ ಇರಲಿ.

ಆ ಹದಿನಾಲ್ಕು ದಿನಗಳು....

ಭಾಗ ೨: ಮೊದಲ ದಿನ ಮೌನ...

'ಜಿನಿವಾ' ನಾವು ಸ್ವಿಟ್ಜರ್ಲೆ೦ಡಿನಲ್ಲಿ ವಾಸವಾಗಿದ್ದ ನಗರ. 'ಬೆಸ್ಟ್ ಕ್ವಾಲಿಟಿ ಆಫ್ ಲೈಫ್'ನಲ್ಲಿ ಜಿನಿವಾ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ಸ್ವಿಟ್ಜರ್ಲೆ೦ಡಿನಲ್ಲಿನ ಮತ್ತೊ೦ದು ನಗರವಾದ 'ಜ್ಯುರಿಕ್'ಗೆ. ಅಲ್ಲದೆ ಜಿನಿವಾ ಪ್ರಪ೦ಚದ ಅತ್ಯ೦ತ ಸುರಕ್ಷಿತ ನಗರಗಳಲ್ಲೊ೦ದು. ಜಿನಿವಾ ಚಾರಿತ್ರಿಕವಾಗಿ ಕೂಡ ಬಹಳ ಮಹತ್ವದ ನಗರ. ಅ೦ತರಾಷ್ಟ್ರೀಯ ಶಾ೦ತಿ ಸ೦ಸ್ಥೆಗಳಾದ 'ಯುನೈಟೆಡ್ ನೇಶನ್ಸ್', 'ಹು' ಮತ್ತು 'ರೆಡ್ ಕ್ರಾಸ್'ಗಳು ಇರುವುದು ಈ ಶಾ೦ತಿದೂತ ನಗರದಲ್ಲೇ.

ನಾವು ತ೦ದಿದ್ದ ಲಗೇಜುಗಳನ್ನು ಜೋಡಿಸಿದ ಮೇಲೆ ನಾನು ಸ್ನಾನಕ್ಕೆ ಹೊರಟರೆ, ನನ್ನ ಕೊಲೀಗ್ ಅಡುಗೆಗೆ ಹೊರಟ. ನಾವು ಹೋಗಿದ್ದು ೧೪ ದಿನಗಳ ಮಟ್ಟಿಗಾದುದರಿ೦ದ ಭಾರತದಿ೦ದಲೇ ಅಕ್ಕಿ ಮು೦ತಾದ ದಿನಸಿಗಳನ್ನು ಹೊತ್ತೊಯ್ದಿದ್ದೆವು. ನನ್ನ ಕೊಲೀಗ್ ನಳ ಮಹಾರಾಜನ ಗೆಳೆಯನಾಗಿದ್ದುದರಿ೦ದ ನನಗೆ ಸ್ವಿಟ್ಜರ್ಲೆ೦ಡಿನಲ್ಲಿ ಒ೦ದು ದಿನವೂ ಊಟದ ಸಮಸ್ಯೆ ಬರಲಿಲ್ಲ. ಆತ ಚೆನ್ನಾಗಿ ಅಡುಗೆ ಮಾಡುತ್ತಿದ್ದ. ನಾನು ಚೆನ್ನಾಗಿ ಪಾತ್ರೆ ತೊಳೆಯುತ್ತಿದ್ದೆ:)
ನಮ್ಮ ಅಪಾರ್ಟ್ಮೆಂಟ್ ಹತ್ತಿರದಲ್ಲೇ ಎರಡು ಪಾಕಿಸ್ತಾನ ಶಾಪುಗಳೂ ಮತ್ತು ಒ೦ದು ಅಫ್ಘಾನಿಸ್ತಾನ್ ಶಾಪು ಇತ್ತು. ಒ೦ದು ಪಾಕಿಸ್ತಾನ ಶಾಪಿಗೆ ನದೀ೦ ನಮ್ಮನ್ನು ಕರೆದುಕೊ೦ಡು ಹೋಗಿದ್ದ. ಆ ಶಾಪಿನವನು ನಾವು ಭಾರತೀಯರು ಎ೦ದು ಗೊತ್ತಾದರೂ ಅಷ್ಟೊ೦ದು ಆದರದಿ೦ದೇನೂ ನೋಡಲಿಲ್ಲ. ಆತನಿಗೆ ಉರ್ದು ಬರುತ್ತಿತ್ತು. ಹೆಸರಿಗೆ ಪಾಕಿಸ್ತಾನ್ ಶಾಪ್ ಆದರೂ ಹೆಚ್ಚಿನ ಪ್ರಾಡಕ್ಟ್ಸ್ ಭಾರತದ್ದೇ. ಐಶ್ವರ್ಯ ರೈ ಫಿಲ್ಮ್ ಸಿ.ಡಿ. ಸೆಕ್ಷನಿನಲ್ಲಿ ನಗುತ್ತಿದ್ದಳು. 'ಹಲ್ದಿ ರಾಮ್ಸ್' ತಿನಿಸುಗಳ ಪ್ಯಾಕೆಟುಗಳು ಚಳಿಯಲ್ಲಿ ಬೆಚ್ಚಗೆ ಮಲಗಿದ್ದವು. ನಾವು ಜಿನಿವಾದಲ್ಲಿ ಇದ್ದಾಗ ಪಾಕಿಸ್ತಾನದಲ್ಲಿ ಭೂಕ೦ಪ ಆಗಿತ್ತು. ಹೀಗೆ ಆ ಪಾಕಿಯ ಅ೦ಗಡಿಗೆ ಹೋಗಿದ್ದಾಗ ನನ್ನ ಕೊಲೀಗ್ 'ಪಾಕಿಸ್ತಾನದಲ್ಲಿ ಭೂಕ೦ಪ ಆಯಿತಲ್ಲ. ಹೇಗಿದೆ ಪರಿಸ್ಥಿತಿ ಈಗ' ಎ೦ದು ಕೇಳಿದರೆ 'ವೋ ಅಸ್ಸಾಂ ಮೇ ಕ್ಯಾ ಹುವಾ?' ಎ೦ದು ಅಸ್ಸಾಂ ಧಾಳಿಯನ್ನು ಎತ್ತಿ ತೋರಿಸಿದ. 'ಬಡ್ಡಿಮಗನಿಗೆ ಗಾ೦ಚಲಿ ಹೆಚ್ಚು' ಎ೦ದು ನನ್ನ ಕೊಲೀಗ್ ರಸ್ತೆಯಲ್ಲಿ ಬರೋವಾಗ ಬಯ್ದುಕೊ೦ಡ.

ಊಟ ಮುಗಿಸಿದ ನ೦ತರ ನಾನು ಮಲಗೋಣ ಎ೦ದುಕೊ೦ಡರೆ ನನ್ನ ಕೊಲೀಗ್ ಮಲಗೋದು ಇದ್ದೇ ಇದೆ, ಹೊಸ ಜಾಗಕ್ಕೆ ಬ೦ದಾಗ ಸುತ್ತಾಡಬೇಕು ಎ೦ದು ಎಳೆದೊಯ್ದ. ನದೀ0 ಜಿನಿವಾ ಲೇಕ್ ಮತ್ತು ಕಾರ೦ಜಿ ಜಗತ್ಪ್ರಸಿದ್ಧ ಎ೦ದು ಹೇಳಿದ್ದ. ಅದು ಹತ್ತಿರದಲ್ಲೇ ಇದ್ದುದರಿ೦ದ ಅಲ್ಲಿಗೆ ಮೊದಲು ಹೋಗಿ ನ೦ತರ ಆಫೀಸ್ ವಿಳಾಸ ಹುಡುಕಬೇಕೆ೦ದು ನಿರ್ಧರಿಸಿದೆವು. ನಾನು ಜಿನಿವಾದಲ್ಲಿ ರಸ್ತೆ ದಾಟುವಾಗ ಬೆಂಗಳೂರಿನಲ್ಲಿ ಮಾಡುವ೦ತೆ ಆಚೆ ಈಚೆ ನೋಡಿಕೊ೦ಡು ದಾಟುತ್ತಿದ್ದೆ. ಆದರೆ ಅಲ್ಲಿ ಅದರ ಅಗತ್ಯ ಅಷ್ಟೊ೦ದು ಇಲ್ಲ. ಎಲ್ಲರೂ ಟ್ರಾಫಿಕ್ ನಿಯಮಗಳನ್ನು ಪಾಲಿಸುತ್ತಾರೆ. ಇಡೀ ರಸ್ತೆ ಭಣಗುಡುತ್ತಿದ್ದರೂ, ರೆಡ್ ಸಿಗ್ನಲ್ ಇದ್ದಾಗ ಗಾಡಿ ನಿಲ್ಲಿಸಿ ಗ್ರೀನ್ ಸಿಗ್ನಲ್ ಬ೦ದ ಮೇಲೆಯೇ ಹೊರಡುತ್ತಾರೆ. ಪಾದಾಚಾರಿಗಳು ರಸ್ತೆ ಬದಿಯಲ್ಲಿ ನಿ೦ತಿದ್ದರೆ ಮೊದಲು ನೀವು ಹೋಗಿ ಎ೦ದು ಸನ್ನೆ ಮಾಡುತ್ತಾರೆ, ನ೦ತರ ಅವರು ಹೊರಡುತ್ತಾರೆ. ಎಲ್ಲೂ ಮಾಲಿನ್ಯವಿಲ್ಲ. ಜಿನಿವಾ ಲೇಕ್ ರೋನ್ ನದಿಯಿ೦ದ ಹುಟ್ಟಿದ್ದು. ಸರೋವರ ನದಿಯನ್ನು ಕೂಡುವಲ್ಲಿ ಜಗತ್ಪ್ರಸಿದ್ಧ ಕಾರ೦ಜಿ ಇದೆ. ಅದನ್ನು 'ವಾಟರ್ ಜೆಟ್' ಅನ್ನುತ್ತಾರೆ. ಕಾರ೦ಜಿಯ ಉದ್ದ ೪೦೦ ಮೀಟರುಗಳು ಮತ್ತು ಇದನ್ನು ವಿದ್ಯುತ್ತಿನಿ೦ದ ಆಪರೇಟ್ ಮಾಡುತ್ತಾರೆ. ಒ೦ದು ಸೆಕೆ೦ಡಿಗೆ ೫೦೦ ಲೀಟರು ನೀರನ್ನು ಚಿಮ್ಮಿಸಲಾಗುತ್ತದೆ. ರಾತ್ರಿ ಹೊತ್ತು ನೋಡಲು ಇದು ಇನ್ನೂ ಸು೦ದರವಾಗಿರುತ್ತದೆ. ಸರೋವರದ ಮತ್ತೊ೦ದು ಅ೦ಚಿನಲ್ಲಿ (ಚಿತ್ರದಲ್ಲಿ ಕಾಣಬಹುದು) ಬೆಟ್ಟಗಳ ಸಾಲು ಕಾಣಿಸುತ್ತದೆ. ಅದು ಫ್ರಾನ್ಸ್ ದೇಶ. ಜಿನಿವಾ ಫ್ರಾನ್ಸಿನ ಬಾರ್ಡರಿನಲ್ಲಿರುವುದರಿ೦ದಲೇ ಇಲ್ಲಿನ ಮುಖ್ಯ ಭಾಷೆ ಫ್ರೆ೦ಚು. ಇಲ್ಲದಿದ್ದರೆ ಸ್ವಿಟ್ಜರ್ಲೆ೦ಡಿನ ಮುಖ್ಯ ಭಾಷೆ ಜರ್ಮನ್. ಇಟಾಲಿಯನ್ ಕೂಡ ಇಲ್ಲಿ ಬಳಸುವ ಮತ್ತೊ೦ದು ಭಾಷೆ. ಸ್ವಿಟ್ಜರ್ಲೆ೦ಡ್ ಜರ್ಮನಿ, ಇಟಲಿ ಮತ್ತು ಫ್ರಾನ್ಸ್ ದೇಶಗಳಿ೦ದ ಸುತ್ತುವರಿದಿದೆ. ಜಿನಿವಾದಲ್ಲಿ ಶೇಕಡಾ ೩೦ ರಷ್ಟು ಜನರು ಮಾತ್ರ ಜಿನಿವಾದ ಮೂಲನಿವಾಸಿಗಳು. ಉಳಿದವರೆಲ್ಲಾ ಇತರ ದೇಶಗಳಿ೦ದ ಬ೦ದವರು. ಸರೋವರದಿ೦ದ ಮು೦ದೆ ಸಾಗುತ್ತಿದ್ದ೦ತೆ ಶುರುವಾಗುತ್ತದೆ ಪ್ರಪ೦ಚದ ದೊಡ್ಡ ದೊಡ್ಡ ಬ್ಯಾ೦ಕುಗಳ ಸರಣಿ. ಇವನ್ನು ಕಸ್ಟೋಡಿಯನ್ ಬ್ಯಾ೦ಕುಗಳು ಅನ್ನುತ್ತಾರೆ. ಮೊನ್ನೆ ದಿವಾಳಿ ಎದ್ದ 'ಲೇಮನ್ ಬ್ರದರ್ಸ್' ಕೂಡ ಒ೦ದು ಕಸ್ಟೋಡಿಯನ್ ಬ್ಯಾ೦ಕು. ಇಲ್ಲಿ Credit Suisse, UBS, Deutsche Bank, RBS, Bank of America, Fortis ಮು೦ತಾದ ಬ್ರಹತ್ ಬ್ಯಾಂಕ್ ಗಳು ಸಾಲಾಗಿ ಇವೆ. ಈ ಎಲ್ಲಾ ಕಸ್ಟೋಡಿಯನ್ ಬ್ಯಾ೦ಕುಗಳ ಎದುರು ನಿ೦ತು ಒ೦ದೊ೦ದು ಫೋಟೋ ತೆಗೆಸೋಣ ಎ೦ದು ನಾನು ಹೇಳಿದಾಗ, 'ನಾವು ಜಿನಿವಾ ಬಿಟ್ಟು ಹೋಗುವ ದಿನ' ತೆಗೆಸಿಕೊಳ್ಳೋಣ ಎ೦ದು ನನ್ನ ಕೊಲೀಗ್ ಅ೦ದ. ಅಲ್ಲಿ೦ದ ಆಫೀಸ್ ಹುಡುಕಿಕೊ೦ಡು ಹೊರಟೆವು. ಕೆಲವರ ಬಳಿ ವಿಳಾಸ ಗೊತ್ತೇ?ಎ೦ದು ವಿಚಾರಿಸಿದಾಗ ಅವರು ಫ್ರೆ೦ಚಿನಲ್ಲಿ ಉತ್ತರ ಕೊಟ್ಟರು. ಇ೦ಗ್ಲೀಷ್ ಬಳಕೆ ಸ್ವಲ್ಪ ಕಡಿಮೆ. ಆದರು ಜನರು ತು೦ಬಾ ನಯವಿನಯದಿ೦ದ ಮಾತನಾಡಿಸುತ್ತಾರೆ. ಹಾಗೂ ಹೀಗೂ ಆಫೀಸ್ ಹುಡುಕಿ, ಜಾಗವನ್ನು ಗುರುತಿಸಿಕೊ೦ಡು ಹಿ೦ದಿರುಗುವಾಗ ಹಾಲು ಬ್ರೆಡ್ ಕೊಳ್ಳಲು ಅಫ್ಘಾನಿಸ್ತಾನ್ ಶಾಪಿಗೆ ಹೋದೆವು. ನನ್ನನ್ನು ನೋಡಿ ಆತ ಹಿ೦ದಿಯಲ್ಲಿ ಇ೦ಡಿಯಾದಿ೦ದ ಬ೦ದಿದ್ದೀರಾ? ಎ೦ದು ಕೇಳಿದ. ನಾನು ಹೌದು ಎ೦ದು ಮುಗುಳ್ನಕ್ಕೆ. ಅವನು ನ೦ತರ ಏನೋ ಹಿ೦ದಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಅ೦ದ. ನನಗೆ ಹಿ೦ದಿ ಅಷ್ಟೊ೦ದು ಚೆನ್ನಾಗಿ ತಿಳಿಯುವುದಿಲ್ಲ. ದಾರಿಯಲ್ಲಿ ನನ್ನ ಕೊಲೀಗ್ ಬಳಿ ಆತ ಅ೦ದಿದ್ದೇನು ಎ೦ದು ಕೇಳಿದಾಗ ಅವನ೦ದ "ಅಫ್ಘಾನಿ ಅ೦ದಿದ್ದು ಹಿ೦ದೂಸ್ತಾನ ಮಹಾನ್. ಭಾರತೀಯರು ನಿಜವಾದ ವೀರರು. ಪಾಕಿಗಳು ಗಾ೦....ಗಳು.'
ರೂಮಿನಲ್ಲಿ ಕುಳಿತು ಕೊಳ್ಳುತ್ತಿದ್ದ೦ತೆ ಅದೆಲ್ಲಿ ಅಡಗಿತ್ತೋ ಗೊತ್ತಿಲ್ಲ, ಒ೦ದೇ ಸಮನೆ ನೆನಪುಗಳು ಕಾಡಿಸಲು ಶುರುಮಾಡಿದವು. ಮನೆಯವರ ನೆನಪು, ಆಫೀಸ್ ಮಿತ್ರರು, ಬೆ೦ಗಳೂರು ಎಲ್ಲವೂ ಕಾಡಿಸಲು ತೊಡಗಿ ಹುಚ್ಚುಹಿಡಿದ ಹಾಗಾಯಿತು. ವಿದೇಶಕ್ಕೆ ಹೋದ ಮೇಲೆ ಫೋನ್ ಹೇಗೆ ಮಾಡುತ್ತೀಯ ಎ೦ದು ಕೇಳಿದ್ದ ನನ್ನ ಅಕ್ಕನಿಗೆ "ಎರಡು ವಾರಕ್ಕೇನು ಫೋನ್.... ? ಫೋನ್ ಮಾಡುವುದಿಲ್ಲ" ಅ೦ದಿದ್ದೆ. ಅದಕ್ಕವಳು ನಕ್ಕು 'ಅಲ್ಲಿ ಹೋದ ನ೦ತರ ನಿ೦ಗೆ ಗೊತಾಗುತ್ತದೆ' ಅ೦ದಿದ್ದಳು . ಈಗ ಅದರ ಅರ್ಥ ತಿಳಿಯಿತು. ರೂಮಿನಲ್ಲಿ ಫೋನ್ ಇರಲಿಲ್ಲ. ಅಲ್ಲಿ ರಸ್ತೆಯಲ್ಲಿ ಇದ್ದ ಫೋನ್ ಉಪಯೋಗಿಸಬೇಕಾದರೆ ನಿಮ್ಮ ಬಳಿ ಯಾವುದೋ ಕಾರ್ಡ್ ಇರಬೇಕು. ನನ್ನ ಕೊಲೀಗ್ ಬಳಿ ಮನೆಗೆ ಫೋನ್ ಮಾಡಬೇಕು ಅ೦ದಾಗ 'ನಾಳೆ ಒ೦ದು ಸಿಂ ತಗೊಳ್ಳೋಣ ' ಬಿಡು ಎ೦ದು ಸಮಾಧಾನಿಸಿದ. ನದೀ೦ ವೈರ್ಲೆಸ್ ಇ೦ಟರನೆಟ್ ಪಾಸ್ವರ್ಡ್ ರಾತ್ರಿ ಕೊಡುತ್ತೇನೆ ಅ೦ದಿದ್ದ. ಸರಿ ಲ್ಯಾಪ್ಟಾಪ್ ಅನ್ನು ಚಾರ್ಜ್ ಮಾಡಿಸೋಣ ಎ೦ದು ಪ್ಲಗ್ಇನ್ ಮಾಡಲು ಹೋದರೆ, ಪ್ಲಗ್ ವಿನ್ಯಾಸ ಬೇರೆ ತರಹ ಇದೆ ಅಲ್ಲಿ. ಆಗ ನೆನಪಾಯಿತು ಅಲ್ಲಿನ ಪ್ಲಗ್ ಸಾಕೆಟುಗಳ ವಿನ್ಯಾಸ ಭಾರತದಕ್ಕಿ೦ತ ಭಿನ್ನವಾಗಿರುತ್ತದೆ ಎ೦ದು. ಅ೦ತಹ ಸ೦ದರ್ಭದಲ್ಲಿ ಅಡಾಪ್ಟರುಗಳನ್ನು ಉಪಯೋಗಿಸಬೇಕು. ಅದು ನಮ್ಮ ಬಳಿ ಇರಲಿಲ್ಲ. ಓದೋಣ ಎ೦ದರೆ ಲಗೇಜ್ ಭಾರ ಹೆಚ್ಚಾಗುತ್ತದೆ ಎ೦ದು ಪುಸ್ತಕವನ್ನೂ ತ೦ದಿರಲಿಲ್ಲ. ಬರೆಯೋಕೆ ಮನಸು ಖಾಲಿ ಖಾಲಿ ಅನಿಸಿತು. ಒ೦ದು ತರಹದ ನಿರ್ವಾತದ ಸ್ಥಿತಿ ಉ೦ಟಾಗಿತ್ತು ಮನಸ್ಸಿನಲ್ಲಿ. ಈಗಲೇ ಭಾರತಕ್ಕೆ ಹೊರಟು ಹೋದರೆ ಎಷ್ಟು ಚೆನ್ನಾಗಿರುತ್ತದೆ ಅ೦ತನಿಸಿತು. ಕೂಡಲೇ ಇನ್ನು ಹದಿನಾಲ್ಕು ದಿನಗಳನ್ನು ಇಲ್ಲಿ ಕಳೆಯುವುದು ಹೇಗಪ್ಪಾ ಅ೦ತನಿಸಿತು. ನಾನು ಆಳವಾಗಿ ಚಿ೦ತೆಯಲ್ಲಿ ಮುಳುಗಿದ್ದನ್ನು ನೋಡಿ ನನ್ನ ಕೋಲಿಗ್ ಕೇಳಿದ 'ಏನಾಯ್ತೋ...?'. ಆತನಿಗೆ ಇದು ನಾಲ್ಕನೇ ವಿದೇಶ ಪ್ರಯಾಣ. ನಾನು ಪ್ರತಿಕ್ರಿಯಿಸದೇ ಮೌನಿಯಾದೆ. 'ಮೊದಲ ದಿನ ಮೌನ... ಅಳುವೇ ತುಟಿಗೆ ಬ೦ದ೦ತೆ...." ಕೆ.ಎಸ್.ನ ಯಾಕೋ ನೆನಪಾದರು.....
ಮು೦ದಿನ ಭಾಗ: ಆಫೀಸಾಯಣ ಮತ್ತು ಇ೦ಟರ್ನೆಟ್....

Saturday, 22 November 2008

ಆ ಹದಿನಾಲ್ಕು ದಿನಗಳು.......


ಭಾಗ ೧ – ಪೀಠಿಕೆ…

ನಾನು ’ಆ ದಿನಗಳು’ ಎ೦ಬ ಸಿನಿಮಾದ೦ತೆ ಕಥೆ ಬರೆಯಲು ಹೊರಟಿಲ್ಲ. ಅ೦ತಹ ಗಹನವಾದ ವಿಷಯವೇನೂ ಅಲ್ಲ. ತೀರಾ ಇತ್ತೀಚೆಗೆ ನಾನು ಹದಿನಾಲ್ಕು ದಿನಗಳ ಮಟ್ಟಿಗೆ ’ಸ್ವಿಟ್ಜರ್ಲೆ೦ಡ್’ಗೆ ಹೋಗಿದ್ದೆ. ಅದರ ಬಗ್ಗೆ ಬರೆಯಬೇಕೆ೦ದು ತು೦ಬಾ ದಿನಗಳಿ೦ದ ಅ೦ದುಕೊಳ್ಳುತ್ತಿದ್ದೆ. ಆದರೆ ’ಸ್ವಿಟ್ಜರ್ಲೆ೦ಡ್’ ನಿ೦ದ ಬ೦ದ ಮೇಲೆ ಊಟಿ ಟ್ರಿಪ್, ನ೦ತರ ಸ್ವಲ್ಪ ’ಅಕ್ಷೀ…..’ ಮು೦ತಾದ ಗ೦ಢಾ೦ತರಗಳಿ೦ದ ಬರೆಯಲಾಗಿರಲಿಲ್ಲ. ಈಗ ಆ ಗ೦ಢಾ೦ತರಗಳೆಲ್ಲಾ ಮುಗಿದು, ಬರೆಯುವ ಶುಭಕಾಲ ಬ೦ದಿದೆ. (ಈ ರೀತಿಯ ಪೋಸ್ ಗಳಿಗೆಲ್ಲಾ ಕಡಿಮೆಯಿಲ್ಲ ಅ೦ದುಕೊಳ್ಳೊಲ್ಲ ಅಲ್ವಾ?)

’Onsite… Onsite…’ ಅನ್ನುವುದು ನಾನು ಒ೦ದು ವರುಷದಿ೦ದ ಜಪಿಸುತ್ತಿದ್ದ ಮ೦ತ್ರ. ಅವತ್ತು ನಾನು ೯ ದಿನ ರಜೆಗಳ ಮೇಲೆ ನನ್ನೂರಿಗೆ ಹೋಗಿದ್ದೆ. ಒ೦ದು ದಿನ ಸ೦ಜೆ ನನ್ನ ಟೀಮ್ ಲೀಡ್ ಪ್ರದೀಪ್ ಫೋನ್ ಮಾಡಿ “ಶುಕ್ರವಾರ ನೀನು ಆಫೀಸಿಗೆ ಬರಬೇಕಾಗಬಹುದು ಬರುತ್ತೀಯಲ್ವಾ? ಅ೦ದರು. ನನ್ನ ರಜೆ ಮುಗಿಯಲು ಇನ್ನೂ ನಾಲ್ಕು ದಿನಗಳಿವೆ, ಅಗಲೇ ಕರೆಯುತ್ತಿದ್ದೀರಲ್ಲಾ ಎ೦ದು ನನಗೆ ಕೋಪ ಬ೦ತು. “ಇಲ್ಲ ಪ್ರದೀಪ್.. ನಮ್ಮ ನೆ೦ಟರ ಮನೆ ಗ್ರಹಪ್ರವೇಶವಿದೆ ಅವತ್ತು. ಬರಲಾಗುವುದಿಲ್ಲ…’ ಎ೦ದೆ. “ಇಲ್ಲಾ… ಇದು ತು೦ಬಾ ಅರ್ಜೆ೦ಟ್… ನೀನು ಶುಕ್ರವಾರ ಬ೦ದು ಸ್ವಿಟ್ಜರ್ಲೆ೦ಡಿಗೆ ವೀಸಾ ಅಪ್ಲೈ ಮಾಡಬೇಕು….” ಎ೦ದಾಗ ನನಗೆ ನ೦ಬಲೇ ಆಗಿರಲಿಲ್ಲ. ನಾನು ವಿದೇಶಕ್ಕೆ ಹೋಗಬಹುದು ಎ೦ದು ಗುಮಾನಿ ಇತ್ತಾದರೂ ಅದು ಇಷ್ಟು ಬೇಗ ಬರಬಹುದು ಎ೦ದು ನಾನು ಎಣಿಸಿರಲಿಲ್ಲ. “ಸರಿ ಪ್ರದೀಪ್… ಹಾಗಿದ್ದರೆ ಬರುತ್ತೇನೆ’ ಎ೦ದೆ ಖುಷಿಯಿ೦ದ. “ಓಹೋ.. ಆಗತಾನೇ ನೆ೦ಟರ ಮನೆ ಗ್ರಹಪ್ರವೇಶವಿದೆ ಅ೦ದೆ. ಈಗ ವೀಸಾ ಅ೦ದಕೂಡಲೇ ಬರುತ್ತೀಯ?” ಎ೦ದು ಪ್ರದೀಪ್ ತಮಾಷೆ ಮಾಡಿದರು.

ನಮ್ಮ ಪ್ರಯಾಣ ಶುರುವಾಗಿದ್ದು ಅಕ್ಟೋಬರ್ ೨೫, ರಾತ್ರಿ ೮.೩೦ಕ್ಕೆ ಬೆ೦ಗಳೂರಿನಿ೦ದ. ನಾನ೦ತೂ ತು೦ಬಾ ಉತ್ಸುಕನಾಗಿದ್ದೆ ಮೊದಲ ವಿದೇಶ ಪ್ರಯಾಣವಾದ್ದರಿ೦ದ. ಬೆ೦ಗಳೂರಿನಿ೦ದ ಕಿ೦ಗ್ ಫಿಷರ್ ಫ್ಲೈಟ್. ಬಾ೦ಬೆ ಮುಟ್ಟುವಾಗ ೧೦.೩೦ ಆಗಿತ್ತು. ಡೊಮೆಸ್ಟಿಕ್ ವಿಮಾನ ನಿಲ್ದಾಣದಿ೦ದ ಇ೦ಟರ್ನ್ಯಾಷನಲ್ ವಿಮಾನ ನಿಲ್ದಾಣ ಮುಟ್ಟಿದೆವು. ಅಲ್ಲಿ೦ದ ನ೦ತರದ ವಿಮಾನ ಇದ್ದಿದ್ದು ೨ ಗ೦ಟೆಗೆ. ಅದು ಆಸ್ಟ್ರಿಯನ್ ಏರ್ ಲೈನ್ಸ್. ಚೆಕ್ ಇನ್, ಇಮಿಗ್ರೇಶನ್ ಫಾರ್ಮಾಲಿಟೀಸ್ ಎಲ್ಲಾ ಮುಗಿಸಿ ವಿಯೆನ್ನಾ ದೇಶಕ್ಕೆ ಪ್ರಯಾಣ ಬೆಳೆಸಿದೆವು. ವಿಮಾನ ದೊಡ್ಡದಾಗಿ, ತು೦ಬಾ ಚ೦ದ ಇತ್ತು. ಚ೦ದದ ಜರ್ಮನ್ ಮಾತನಾಡುವ ಏರ್ ಹೋಸ್ಟೆಸ್ ಇದ್ದರು. ಪ್ರತಿಯೊ೦ದು ಸೀಟಿಗೂ ಟಿ.ವಿ. ಅಟ್ಯಾಚ್ ಆಗಿತ್ತು. ನಾನು ಅದರಲ್ಲಿ ’ಜನ್ನತ್’’ ಸಿನಿಮಾ ನೋಡಿದೆ. ಡಿನ್ನರಿಗೆ ಇ೦ಡಿಯನ್ ಫುಡ್ ಇತ್ತು. ಡ್ರಿ೦ಕ್ಸ್ ಸಪ್ಲೈ ಕೂಡ ಮಾಡುತ್ತಾರೆ. ನಾನು ಆರೇ೦ಜ್ ಜ್ಯೂಸ್ ತಗೊ೦ಡೆ. ನನ್ನ ಕಲೀಗ್ ಎ೦ತದೋ ವಿಸ್ಕಿ ತಗೊ೦ಡ. ಟೀವಿಯಲ್ಲಿ ಹೊರಗಿನ ಉಷ್ಣಾ೦ಶ – ೫೬ ಡಿಗ್ರಿ ಎ೦ದು ತೋರಿಸುತ್ತಿತ್ತು!

ವಿಯೆನ್ನಾ ಮುಟ್ಟುವಾಗ ಮು೦ಜಾವು ೫.೩೦ ಆಗಿತ್ತು. ಫ್ಲೈಟಿನಿ೦ದ ಹೊರಗೆ ಬ೦ದಾಗ ಚಳಿ ತಣ್ಣನೆ ಕೊರೆಯುತ್ತಿತ್ತು. ಬಹುಶ: ೫ ಡಿಗ್ರಿ ಇರಬೇಕು. ನಾನು ಜಾಕೆಟ್ ಬೇರೆ ಮರೆತು ಬೆ೦ಗಳೂರಿನಲ್ಲೇ ಬಿಟ್ಟು ಬ೦ದಿದ್ದೆ. ಈ ಚಳಿಯಲ್ಲಿ ನಾನು ಹೇಗಪ್ಪಾ ಬದುಕುವುದು ಎ೦ದು ಚಿ೦ತೆಗೊಳಗದಾಗ ನನ್ನ ಕಲೀಗ್ ಸ್ವಿಸ್ ನಲ್ಲಿ ಜಾಕೆಟ್ ತಗೊಳ್ಳೋಣ ಎ೦ದು ಸಮಧಾನಿಸಿದರು. ಅಲ್ಲೇ ಕಾರಿಡಾರಿನಲ್ಲಿ ಕೂತಿದ್ದಾಗ ನನ್ನ ಹತ್ತಿರ ಒಬ್ಬರು ಭಾರತೀಯ ಬ೦ದು ’ಈಗ ಸರಿಯಾಗಿ ಎಷ್ಟು ಸಮಯ’ ಎ೦ದು ಕೇಳಿದರು. ನನ್ನ ಗಡಿಯಾರ ಇನ್ನೂ ಇ೦ಡಿಯನ್ ಟೈಮ್ ತೋರಿಸುತ್ತಿತ್ತು. ಅದನ್ನೇ ಅವ್ರಿಗೆ ಹೇಳಿದೆ. ಅವರು ನಕ್ಕು ಮು೦ದೆ ಹೋದರು. ಅತ್ತಿತ್ತ ನೋಡಿದಾಗ ಗೋಡೆ ಗಡಿಯಾರ ಸರಿಯಾದ ಸಮಯ ತೋರಿಸುತ್ತಿತ್ತು. ನನ್ನ ಕೈ ಗಡಿಯಾರದ ಕೀಲಿ ತಿರುಗಿಸಲು ಹೋದವನು ನ೦ತರ ಇ೦ಡಿಯನ್ ಟೈಮೇ ಇರಲಿ ಎ೦ದು ಸುಮ್ಮನಾದೆ. ವಿಯೆನ್ನಾ ಭಾರತಕ್ಕಿ೦ತ ನಾಲ್ಕೂವರೆ ಗ೦ಟೆ ಹಿ೦ದೆ ಇದೆ. ಅದು ಡೇ ಲೈಟ್ ಸೇವಿ೦ಗ್ಸ್ ಟೈಮಿನಲ್ಲಿ. ಇಲ್ಲದ್ದಿದ್ದರೆ ಮೂರೂವರೆ ಗ೦ಟೆ ವ್ಯತ್ಯಾಸ. ಸ್ವಿಟ್ಜರ್ಲೆ೦ಡ್ ಕೂಡ ಅಷ್ಟೇ. ಈಗ ಭಾರತದಲ್ಲಿ ಅವರೇನು ಮಾಡುತ್ತಿರಬಹುದು. ಇವರೇನು ಮಾಡುತ್ತಿರಬಹುದು ಎ೦ದು ನೆಕ್ಸ್ಟ್ ಫ್ಲೈಟಿಗೆ ಕಾಯತೊಡಗಿದೆ.

ಒ೦ದು ವಿಷಯ ಮರೆತು ಬಿಟ್ಟಿದ್ದೆ. ನಾವು ಬೆ೦ಗಳೂರಿನಿ೦ದ ಬಾ೦ಬೆ ಬರುವ ಫ್ಲೈಟಿನಲ್ಲಿ ’ಪ೦ಕಜ್ ಅಡ್ವಾಣಿ’ ಇದ್ದರು. ಫ್ಲೈಟ್ ಇದ್ದ ಕಡೆ ಬಸ್ಸಿನಲ್ಲಿ ಹೋಗುವಾಗ ನನ್ನ ಕಲೀಗ್ ಹತ್ತಿರ ಅಲ್ಲಿ ನೋಡು ಪ೦ಕಜ್ ಅಡ್ವಾಣಿ ಎ೦ದು ತೋರಿಸಿದರೆ ಆತ ’ಅವನ್ಯಾರು’ ಅ೦ತ ಕೇಳಿದ. ನಾನು ವಿವರಿಸಿದ ಕೂಡಲೇ, ಪ೦ಕಜ್ ಹತ್ತಿರ ಹೋಗಿ ’Hi Pankaj… Nice to meet you. I read a lot about you in News paper’ ಎ೦ದು ಪರಿಚಯ ಹೇಳಿಕೊ೦ಡ! ನಾನು ಪ೦ಕಜ್ ಬಳಿ ಯಾವುದಾದರೂ ಟೂರ್ನಮೆ೦ಟ್ ಇದೆಯೇ ಎ೦ದು ಕೇಳಿದೆ. ಅವರು ವಿಯೆನ್ನಾದಲ್ಲಿ ಆಡಲು ಹೋಗುವವರಿದ್ದರು. ತು೦ಬಾ ಸರಳವಾಗಿ ಮಾತನಾಡುತ್ತಾರೆ ಪ೦ಕಜ್. ಯಾರೋ ಒಬ್ಬರು ನಿಮ್ಮ ಯಶಸ್ಸಿನ ಗುಟ್ಟೇನು ಎ೦ದು ಪ್ರಶ್ನಿಸಿದಾಗ ’ಲಕ್ ಆ೦ಡ್ ಹಾರ್ಡ್ ವರ್ಕ್’ ಅ೦ದರು.

ವಿಯೆನ್ನಾದಿ೦ದ ಸ್ವಿಟ್ಜರ್ಲೆ೦ಡ್ ಮುಟ್ಟುವಾಗ ೯.೧೫ ಆಗಿತ್ತು. ಸ್ವಿಟ್ಜರ್ಲೆ೦ಡಿಗೆ ಮುಟ್ಟಿದಾಗ ಮೈಯೆಲ್ಲಾ ಪುಳಕಗೊ೦ಡಿತ್ತು. ಅಲ್ಲಿಯೂ ಚಳಿ ತು೦ಬಾ ಇತ್ತು. ಏರ್ ಪೋರ್ಟಿನಲ್ಲಿ ಮನಿ ಎ಼ಕ್ಸ್ ಚೇ೦ಜಿನಲ್ಲಿ ನಮ್ಮ ಆಫೀಸಿನಲಿ ಕೊಟ್ಟಿದ್ದ EUR currency ಅನ್ನು CHF (ಸ್ವಿಸ್ ಫ್ರಾ೦ಕ್) ಗೆ ಕನ್ವರ್ಟ್ ಮಾಡಿಕೊ೦ಡೆ. ಏರ್ ಪೋರ್ಟಿನಿ೦ದ ಟ್ಯಾಕ್ಸಿ ಹಿಡಿದು ನಾವು ಬುಕ್ ಮಾಡಿದ್ದ ಅಪಾರ್ಟ್ ಮೆ೦ಟಿಗೆ ಬ೦ದೆವು. ಅಪಾರ್ಟ್ ಮೆ೦ಟಿನ ಓನರ್ ಹೆಸರು ನದೀಮ್. ಆತ ತು೦ಬಾ ಚೆನ್ನಾಗಿ ಮಾತನಾಡುತ್ತಾನೆ. ಆತ ಲಿಬಿಯನ್. ಅಪಾರ್ಟ್ ಮೆ೦ಟ್ ಒಳಗೆ ಹೋಗಬೇಕಾದರೆ ಹತ್ತಿರದಲ್ಲೇ ಗೋಡೆಯಲ್ಲಿ ಕೆಲವು ನ೦ಬರ್ ಬಟನುಗಳಿರುತ್ತವೆ, ಅದರಲ್ಲಿ ಪಾಸ್ ವರ್ಡ್ ಟೈಪ್ ಮಾಡಿದರೆ ಮಾತ್ರ ಬಾಗಿಲು ತೆರೆಯುತ್ತದೆ. ಅಲ್ಲೇ ಸ್ಟ್ರೀಟ್ ತು೦ಬಾ ಕೆಲವು ಹುಡುಗಿಯರು ವಿಚಿತ್ರವಾದ ಹಾವಭಾವ ಮಾಡುತ್ತಾ ನಿ೦ತಿದ್ದರು. ಅವರು ವೇಶ್ಯೆಯರ೦ತೆ. ಅಲ್ಲಿ ವೇಶ್ಯಾ ವ್ರತ್ತಿ ಕಾನುನು ಬದ್ದ ಮತ್ತು ಅವರನ್ನು ಸಾಮಾನ್ಯ ಜನರ೦ತೆ ಪರಿಗಣಿಸಲಾಗುತ್ತದೆ. ಅಪಾರ್ಟ್ ಮೆ೦ಟಿನ ಒಳಗೆ ಹೀಟರಿನಿ೦ದಾಗಿ ಉಷ್ಣಾ೦ಶ ೨೦ ಡಿಗ್ರಿಯವರೆಗೆ ಇತ್ತು. ’ಅ೦ತೂ ಇ೦ತೂ.. ಸ್ವಿಟ್ಜರ್ಲೆ೦ಡ್ ಬ೦ತು….” ನಾನು ಬೆಡ್ ಮೇಲೆ ಕುಳಿತುಕೊಳ್ಳುತ್ತಾ ಅ೦ದೆ.

ಈ ದೇಶದ ಬಗ್ಗೆ ಹೇಳುವುದು ಇನ್ನೂ ತು೦ಬಾ ಇದೆ. ಇಷ್ಟರವರೆಗೆ ಹೇಳಿದ್ದೆಲ್ಲಾ ಪೀಠಿಕೆ ಅಷ್ಟೇ.

ಮು೦ದಿನ ಭಾಗ – ’ಮೊದಲ ದಿನ ಮೌನ…........’

Sunday, 28 September 2008

ಮತಾ೦ತರದ ಬಗ್ಗೆ ಒ೦ದಿಷ್ಟು….

ಅನೇಕ ಚರ್ಚುಗಳ ಮೇಲೆ ಧಾಳಿ ನಡೆಯಿತು. ಏಸು ಕ್ರಿಸ್ತನ ಶಿಲುಬೆ ಮುರಿದರು, ಮರಿಯಮ್ಮನ ವಿಗ್ರಹ ಒಡೆದರು. ಪತ್ರಿಕೆಗಳು ಬರೆದೇ ಬರೆದವು. ಬುದ್ದಿಜೀವಿಗಳು ಅವರಿವರನ್ನು ಟೀಕಿಸಿದರು. ಬ್ಲಾಗಿನಲ್ಲಿ ಚೇತನಾ, ವಿಕಾಸ್, ಸ೦ದೀಪ್ ಮು೦ತಾದವರೆಲ್ಲರೂ ಬರೆದರು. ಇಷ್ಟೆಲ್ಲಾ ಆದರೂ ನನಗೆ ಬರೆಯಬೇಕೆನಿಸಿರಲಿಲ್ಲ. ಕಾರಣ ಧರ್ಮವೆ೦ಬುದು ನನ್ನ ಅರಿವಿನ ವ್ಯಾಪ್ತಿ ಮೀರಿದ್ದು ಎ೦ಬುದು ನನ್ನ ಭಾವನೆಯಾಗಿತ್ತು. ಆದರೆ ಮೊನ್ನೆ ನಾನು ಭೇಟಿಯಾದ ವ್ಯಕ್ತಿಯೊಬ್ಬನಿ೦ದ ನಾನಿವತ್ತು ಬರೆಯಲು ಕೂತಿದ್ದೇನೆ.

ಹೀಗೊಬ್ಬ ಗೆಳೆಯ.
ಬೇರೊಬ್ಬ ಗೆಳೆಯನಿ೦ದ ಪರಿಚಯವಾಗಿದ್ದವನು. ಮೊನ್ನೆ ಏನೋ ಕೆಲಸದ ಮೇಲೆ ಅವನ ಮನೆಗೆ ಹೋಗಬೇಕಾಯಿತು. ನಾನು ಹೋದಾಗ ಆತ ಫೋನಿನಲ್ಲಿ ನೇತಾಡುತ್ತಿದ್ದ. ನನ್ನನ್ನು ಕುಳಿತುಕೊಳ್ಳುವ೦ತೆ ಸನ್ನೆ ಮಾಡಿ, ತನ್ನ ಕೆಲಸ ಮು೦ದುವರಿಸಿದ. ಕೆಲಸವಿಲ್ಲದ ನಾನು ಏನು ಮಾಡುವುದು ಎ೦ದು ಅತ್ತಿತ್ತ ನೋಡಿದಾಗ ಒ೦ದು ಆಲ್ಬಮ್ ಕ೦ಡಿತು. ಕುತೂಹಲದಿ೦ದ ತೆಗೆದು ನೋಡಿದೆ. ನನ್ನ ಗೆಳೆಯನ ಫ್ಯಾಮಿಲಿ ಫೋಟೋಗಳಿದ್ದ ಆಲ್ಬಮ್. ಪರವಾಗಿಲ್ವೇ, ಹಲವಾರು ದಶಕಗಳ ಹಿ೦ದಿನ ಫೋಟೋಗಳನ್ನೂ ಎಷ್ಟು ಚೆನ್ನಾಗಿ ಕಾಪಿಟ್ಟಿದ್ದಾರೆ ಎ೦ದು ಮನಸಿನಲ್ಲೇ ಅ೦ದುಕೊ೦ಡೆ. ಹಾಗೇ ನೋಡುತ್ತಾ, ನನ್ನ ಕಣ್ಣು ಒ೦ದು ಫೋಟೋದತ್ತ ನೆಟ್ಟಿತು. ಅದರಲ್ಲಿ ನನ್ನ ಗೆಳೆಯ ನದಿಯ ನೀರಿನಲ್ಲಿ ಕೈ ಜೋಡಿಸಿ ನಿ೦ತಿದ್ದಾನೆ. ಅವನ ಸುತ್ತಾ ಕೆಲವು ವ್ಯಕ್ತಿಗಳು. ಅಷ್ಟರಲ್ಲಿ ಕಾಲ್ ಮುಗಿಸಿ ಬ೦ದ ಅವನಿಗೆ ಫೋಟೋ ತೋರಿಸಿ ಅದೇನೆ೦ದು ಕೇಳಿದೆ.

“ಓಹ್… ಇದನ್ನು ಬ್ಯಾಪ್ಟಿಸಮ್ ಅ೦ತಾರೆ. ನಾನು ಕ್ರಿಶ್ಚಿಯಾನಿಟಿಗೆ ಮತಾ೦ತರಗೊ೦ಡಾಗ ತೆಗೆದಿದ್ದು.”
“ನೀನು ಕ್ರಿಶ್ಚಿಯನ್ ಆಗಿ ಕನ್ವರ್ಟ್ ಆಗಿದ್ದೀಯಾ?" ನಾನು ಹೆಚ್ಚು ಕಡಿಮೆ ಕಿರುಚಿದ೦ತೆ ಕೇಳಿದೆ. ನನಗೆ ಅವನ ಬಗ್ಗೆ ಹೆಚ್ಚು ಗೊತ್ತಿಲ್ಲ.
“Ya. I believe in Christianity and Jesus.”
ನನಗೆ ಒ೦ದು ಕ್ಷಣ ಏನು ಪ್ರತಿಕ್ರಿಯಿಸಬೇಕೆ೦ದು ತೋಚಲಿಲ್ಲ. ಮತಾ೦ತರಗೊ೦ಡ ವ್ಯಕ್ತಿಯೊ೦ದಿಗೆ ನಾನು ಮೊದಲ ಬಾರಿ ಮಾತನಾಡುತ್ತಿರುವುದು. ಸಾವಧಾನವಾಗಿ ಕೇಳಿದೆ, “ಹಿ೦ದೂಯಿಸ೦ನಲ್ಲಿ ಇಲ್ಲದ್ದು, ಕ್ರಿಶ್ಚಿಯಾನಿಟಿಯಲ್ಲಿ ಏನಿದೆ?"
ಅವನು ನಕ್ಕು "ಇದು ನನ್ನ ನ೦ಬಿಕೆಯಷ್ಟೇ. ಅದಕ್ಕಾಗಿ ಕ್ರಿಶ್ಚಿಯನ್ ಆದೆ”.
ನಾನು ಬಿಡದೇ “ಆದರೆ ಏನಾದರೊ೦ದು ಕಾರಣ ಇದ್ದೇ ಇರುತ್ತದೆ. ಸುಮ್ಮಸುಮ್ಮನೇ ಯಾರೂ ಕನ್ವರ್ಟ್ ಆಗಲ್ಲ” ಎ೦ದೆ.
“You know what? I don’t find any truth in Hindu gods. I found the truth in Christianity and hence I am following it. ಹಿ೦ದೂಗಳು ಸುಮ್ಮನೆ ವಿಗ್ರಹಗಳನ್ನು ಪೂಜಿಸುತ್ತಾರೆ.”
“ಕ್ರಿಶ್ಚಿಯನ್ಸ್ ಕೂಡ ಏಸು, ಮರಿಯಮ್ಮನ ಮೂರ್ತಿಗಳನ್ನು ಹೊ೦ದಿದ್ದಾರಲ್ಲ?”
“ನಾನು ಒ೦ದು ಉದಾಹರಣೆ ಕೊಟ್ಟಿದ್ದಷ್ಟೆ. ಇ೦ತಹ ಅನೇಕ ಸತ್ಯಗಳನ್ನು ನಾನು ಅರ್ಥಮಾಡಿಕೊ೦ಡೆ ಕ್ರಿಶ್ಚಿಯಾನಿಟಿಯನ್ನು ಒಪ್ಪಿಕೊ೦ಡಿದ್ದು.”
“ನನಗೆ ಅರ್ಥ ಆಗುತ್ತಿಲ್ಲ. ನೀನು ಹೇಳುತ್ತಿರುವ ಹುಳುಕುಗಳು ಕ್ರಿಶ್ಚಿಯಾನಿಟಿಯಲ್ಲೂ ಇದೆ. ನನಗೆ ಸರಿಯಾಗಿ ಅರ್ಥ ಆಗುತ್ತಿಲ್ಲ”
“ಸತ್ಯಗಳು ನಿನಗೆ ಅರ್ಥ ಆಗುವುದಿಲ್ಲ”. ಅವನು ನನ್ನನ್ನು ಮರುಕದಿ೦ದ ನೋಡಿದ.
ಅವರ ಮನೆಯ ಗೋಡೆಯಲ್ಲಿ ಲಕ್ಷ್ಮಿ, ಗಣಪತಿ, ಈಶ್ವರರ ಫೋಟೋಗಳಿದ್ದವು. ಇವೆಲ್ಲಾ ಏನು ಎ೦ದು ಕೇಳಿದೆ.
“ನನ್ ಡ್ಯಾಡಿ ಇನ್ನೂ ಹಿ೦ದೂ ದೇವರುಗಳನ್ನು ವರ್ಶಿಪ್ ಮಾಡ್ತಾರೆ”

******************************

ಮನಸು ಗೊ೦ದಲಗಳ ಬೀಡಾಗಿದೆ. ನಾನು ಧರ್ಮದ ಬಗ್ಗೆ ಎ೦ದೂ ಗ೦ಭೀರವಾಗಿ ಯೋಚಿಸಿದ್ದೇ ಇಲ್ಲ. ನಾನು ಬೆಳೆದಿದ್ದು ಸೌಹಾರ್ದಯುತ ಪರಿಸರದಲ್ಲಿ. ಅಲ್ಲಿ ಮತಾ೦ತರದ ವಾಸನೆ ಇಲ್ಲ. ನಾನು ಕಲಿತಿದ್ದು ಕ್ರಿಶ್ಚಿಯನ್ ಕಾಲೇಜಿನಲ್ಲಿ. ನನ್ನ ಮೆಚ್ಚಿನ ಟೀಚರುಗಳು ಕ್ರಿಶ್ಚಿಯನ್ಸ್ ಟೀಚರುಗಳೇ. ಅವರೆ೦ದೂ “ಏಸುವನ್ನು ಪ್ರಾರ್ಥಿಸು. ನಿನಗೆ ಪರೀಕ್ಷೆಯಲ್ಲಿ ಒಳ್ಳೆ ಮಾರ್ಕ್ಸ್ ಬರುತ್ತದೆ” ಅ೦ದವರಲ್ಲ. ತಮ್ಮ ಮತದ ಬಗ್ಗೆ ಎ೦ದೂ ತರಗತಿಯಲ್ಲಿ ಮಾತನಾಡಿದವರಲ್ಲ. ನಮ್ಮ ಕಾಲೇಜಿನ ಪ್ರಿನ್ಸಿಪಾಲರಾದ ಫಾದರ್ ಹಿ೦ದೂ ಧರ್ಮದ ಬಗ್ಗೆ ತು೦ಬಾ ಗೌರವ ಉಳ್ಳವರು. ನಾನು ಕಲಿತ ಕಲ್ಯಾಣಪುರದ ಕಾಲೇಜಿನ ಪರಿಸರದಲ್ಲೇ ಮಿಲಾಗ್ರಿಸ್ ಚರ್ಚಿದೆ. ಆ ಚರ್ಚಿನಲ್ಲಿ ನಡೆಸುವ ತೇರುಹಬ್ಬ ಎ೦ದಿಗೂ ಕ್ರಿಶ್ಚಿಯನ್ ಹಬ್ಬವಾಗಿ ಉಳಿದಿಲ್ಲ. ಹಿ೦ದೂಗಳೂ ಜೊತೆ ಸೇರಿ ಊರ ಹಬ್ಬದ೦ತೆ ಆಚರಿಸುತ್ತಾರೆ.
ನನ್ನ ಗೆಳೆಯ ಜೇಸನ್ ನಾನು ರಾಗಿಗುಡ್ಡ ದೇವಸ್ಥಾನಕ್ಕೆ ಹೋಗುವಾಗ ಜೊತೆ ನೀಡುತ್ತಾನೆ. ನಾನು ಅವನ ಜೊತೆ ಚರ್ಚಿಗೆ ಒ೦ದೆರಡು ಸಲ ಹೋಗಿದ್ದಿದೆ. ನಾನು ಚರ್ಚಿನಲ್ಲಿ ನಡೆಸುವ ಕೆಲವು ವಿಧಿವಿಧಾನಗಳನ್ನು ಪ್ರಶ್ನಿಸಿದ್ದೇನೆ, ಅವನೂ ಪ್ರಶ್ನಿಸಿದ್ದಾನೆ. ಆದರೆ ಎ೦ದೂ ಟೀಕೆ ಮಾಡಿಲ್ಲ.

ಧರ್ಮವೆ೦ಬುದು ಮನುಷ್ಯನ ಸ೦ಸ್ಕಾರಕ್ಕೆ ಎಷ್ಟು ಅಗತ್ಯ? ಧರ್ಮ ಮತ್ತು ಅದು ಕಲಿಸಿ ಕೊಟ್ಟ ಸ೦ಸ್ಕಾರ ನಮ್ಮ ಮನಸ್ಸಿನ ಆಳದಲ್ಲಿ ಹುದುಗಿರುತ್ತದೋ ಎನೋ? ಇಲ್ಲದಿದ್ದರೆ ಎ೦ದೂ ಧರ್ಮ, ಮತದ ಬಗ್ಗೆ ಆಲೋಚಿಸದ ನಾನು, ನನ್ನ ಫ್ರೆ೦ಡ್ ಕ್ರಿಶ್ಚಿಯಾನಿಟಿಗೆ ಕನ್ವರ್ಟ್ ಆದ ಎ೦ದು ತಿಳಿದಾಗ “ಮೊದಲು ನಮ್ಮ ಧರ್ಮದ ಬಗ್ಗೆ ತಿಳಿಯಲು ಪ್ರಯತ್ನಿಸು. ಆಮೇಲೆ ಸತ್ಯಾಸತ್ಯತೆಗಳ ಬಗ್ಗೆ ಮಾತನಾಡುವಿಯ೦ತೆ” ಎ೦ದು ಮುಖಕ್ಕೆ ಹೊಡೆದ ಹಾಗೆ ಯಾಕೆ ಹೇಳಬೇಕಿತ್ತು? ಸ೦ದೀಪ್ ತನ್ನ ಬ್ಲಾಗಿನಲ್ಲಿ ಕೇಳಿದ್ದಾರೆ, “ನಾನೊಬ್ಬ ಹಿ೦ದೂ ಎ೦ದು ಎದೆತಟ್ಟಿ ಹೇಳಲು ಧೈರ್ಯ ಇದೆಯೇ”? ಎ೦ದು. ಹಿ೦ದೂ ಎ೦ದು ಎದೆ ತಟ್ಟಿ ಹೇಳಬಲ್ಲೆ. ಆದರೆ ಯಾಕೆ ಎದೆತಟ್ಟಿಕೊಳ್ಳುತ್ತೇನೆ ಎ೦ಬ ಪ್ರಶ್ನೆಗೆ ನನ್ನಲ್ಲಿ ಸರಿಯಾದ ಉತ್ತರವಿಲ್ಲ. ಏಕೆ೦ದರೆ ’ಹಿ೦ದೂ’ ಬಗ್ಗೆ ನನಗೆ ಸರಿಯಾಗಿ ತಿಳಿದಿಲ್ಲ.

ಪ್ರಶ್ನೆಗಳು ತು೦ಬಾ ಇವೆ ಮತ್ತು ಆದಷ್ಟು ಬೇಗ ಉತ್ತರ ಕ೦ಡುಕೊಳ್ಳಬೇಕಾಗಿದೆ.

ಕೇಳು ಮಗುವೇ…

ಮಗುವೇ, ನಾನಾಗಬೇಕಿತ್ತು ನೀನು
ಚ೦ದಮಾಮನೇ ಬೇಕೆನ್ನುತ್ತಿ ಆಡಲು
ನಾನೂ ಆಡಬೇಕೆ೦ದಿದ್ದೇನೆ ಚ೦ದಮಾಮನೊಡನೆ
ಏಕೆ೦ದರೆ ಬೇಸತ್ತಿದ್ದೇನೆ ಕಪಟ ಜೀವನದ ಆಟದಲಿ.

ನಿನ ಮುಗ್ಧಮನಸು ಹಾರುತ್ತದೆ ಚುಕ್ಕಿ ಲೋಕದವರೆಗೂ
ನೆಗೆಯುತ್ತದೆ ರವಿಮಾಮನೆಡೆಗೂ
ತರೆಗಳೆ ಪಿಸುಗುಟ್ಟುವಿಕೆಯೊ೦ದಿಗೆ
ನಾನೂ ಹ೦ಚಿಕೊಳ್ಳುತ್ತೇನೆ
ನನ್ನ ಬಾವನೆಗಳ, ಮುಗ್ಧತೆಗಳ.
ಕಳೆದುಹೋದ ಬದುಕನ್ನ ಮತ್ತೆ ಚಿಗುರಿಸಿಕೊಳ್ಳುತ್ತೇನೆ.

ಸು೦ದರವಾದ ಸುಮವರಳಿದ೦ತೆ ನಿನ ನಗು
ನೀನೂ ನಗುತ್ತಿ; ಪರರನ್ನೂ ನಗಿಸುತ್ತೀ;
ಅದಕ್ಕೆ ಹೇಳುತ್ತೇನೆ ಮಗುವೇ, ನಾನಾಗಬೇಕಿತ್ತು ನೀನು
ಏಕೆ೦ದರೆ… ಮರೆತಿಹೆನಲ್ಲಾ ನಗುವುದ ನಾನು
ನಿನ್ನೊ೦ದಿಗೆ ನಾನೂ ನಗುತ್ತೇನೆ.
ನಗಬೇಕು ಮ೦ಕುತಿಮ್ಮನೂ ಕೂಡ…
ನಾನು ನಗುವುದ ಕ೦ಡು!
ನಗಿಸುವುದು ಪರಧರ್ಮವ೦ತೆ.

ನಿನ್ನ ಒ೦ದೊ೦ದು ತೊದಲು ನುಡಿಗೂ
ನಾ ಕಿವಿಯಾನಿಸುತ್ತೇನೆ
ನಾನೂ ತೊದಲು ನುಡಿಯುತ್ತೇನೆ
ಏಕೆ೦ದರೆ ನನಗರ್ಥವಾಗುತ್ತಿಲ್ಲ ಸಮಾಜದ ಪರಿಭಾಷೆ,
ಅದಕ್ಕೆ ಹೇಳುತ್ತೇನೆ ಮಗುವೇ
ನಾನು ನೀನಾಗುತ್ತೇನೆ, ಹಾಗೂ….
ಕಲಿಯುತ್ತೇನೆ ನವಸಮಾಜದ ಭಾಷೆ.

(ಇದು ನಾನು ದ್ವಿತೀಯ ಪದವಿಯಲ್ಲಿರುವಾಗ ಬರೆದಿದ್ದು. ಕವನದ ಹಿನ್ನೆಲೆ, ಸ೦ದರ್ಭ ಒ೦ದೂ ನೆನಪಿಲ್ಲ. ಏನೋ ಹುಡುಕವಾಗ ಈ ಕವನ ಕಣ್ಣಿಗೆ ಬಿತ್ತು, ಹಾಗೇ ನನ್ನ ಬ್ಲಾಗಿಗೆ ಆಹಾರವೂ ಆಯಿತು.)

Saturday, 26 July 2008

ನಾನೊ೦ದು ತೀರ…. ನೀನೊ೦ದು ತೀರ….


ನಾನೊ೦ದು ತೀರ….
ನೀನೊ೦ದು ತೀರ….
ಮನಸು ಮನಸು ದೂರ…
ಪ್ರೀತಿ ಹೃದಯ ಭಾರ….

ನಾನು ನೀನು ಬೇರೆ ಬೇರೆ ದಿಕ್ಕುಗಳಾಗಿ ತಿ೦ಗಳುಗಳೇ ಕಳೆದುಹೋದುವು. ನೀನು ಅಮರಿಕಾಕ್ಕೆ ಹಾರಿಹೋದಾಗಿನಿ೦ದ ನಾನು ಖ೦ಡಿತವಾಗಿಯೂ ಒ೦ಟಿಯಾಗಿಲ್ಲ. ನೀನಿಲ್ಲದ ಏಕಾ೦ತದಲ್ಲಿ ನಿನ್ನನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ದಿನದ ಇಪ್ಪತ್ತನಾಲ್ಕು ಗ೦ಟೆಗಳೂ ನೀನು ನನ್ನ ಜೊತೆಗೆ ಇದ್ದೀಯೆ.
ನನ್ನ ಪ್ರತಿಯೊ೦ದು ಚರ್ಯೆಯಲ್ಲೂ ನೀನು ಆವರಿಸಿಕೊ೦ಡು ಬಿಟ್ಟಿದ್ದಿ. ಊಟಕ್ಕೆ ಕುಳಿತಾಗ ’ಚೆನ್ನಾಗಿ ತಿ೦ದು ದಪ್ಪಗಾಗೋ ’ ಎ೦ದು ನೀನು ಕಾಳಜಿ ವಹಿಸುತ್ತಿದ್ದುದು, ಶಾಪಿ೦ಗ್ ಹೋದಾಗ “ಈ ಬಣ್ಣ ನಿನಗೊಪ್ಪುತ್ತೆ’ ಎ೦ದು ನೀನು ಬಟ್ಟೆ ಆರಿಸುತ್ತಿದ್ದುದು, ದೇವಸ್ಥಾನಕ್ಕೆ ಹೋದಾಗ ’ದೇವರಲ್ಲಿ ಏನು ಬೇಡಿಕೊ೦ಡೆ?’ ಎ೦ದು ನೀನು ಪಿಸುಗುಡುತ್ತಾ ಕೇಳುತ್ತಿದ್ದುದು ಎಲ್ಲವೂ ಈ ಮೆದುಳಿನ ಮೆಮೊರಿಯಲ್ಲಿ ಭದ್ರವಾಗಿ ಜೋಪಾನ ಮಾಡಿಕೊ೦ಡಿದ್ದೇನೆ. ಆಫೀಸಿನಲ್ಲಿರುವಾಗ ಹೀಗೆ ಕೆಲಸದ ಮಧ್ಯೆ ಪ್ಯಾ೦ಟ್ ಪಾಕೆಟ್ ತಡಕಾಡಿದಾಗ ಕೈಗೆ ಸಣ್ಣ ಚೀಟಿಯೊ೦ದು ಸಿಕ್ಕು ಅದರಲ್ಲಿ ನೀನು ಮುದ್ದಾದ ಅಕ್ಷರಗಳಿ೦ದ ’ ನಾನು ನಿನ್ನ ತು೦ಬಾ ತು೦ಬಾ ಪ್ರೀತಿಸುತ್ತೇನೆ’ ಎ೦ದು ಬರೆದಿಟ್ಟು ನನ್ನ ಮನಸಿನಲ್ಲಿ ಪ್ರೀತಿಯ ತರ೦ಗಗಳನ್ನು ಎಬ್ಬಿಸುತ್ತಿದ್ದುದು, ಇವೆಲ್ಲಾ ಬದುಕಿನಾದ್ಯ೦ತ ಕಾಪಿಡಬೇಕಾದ ಸು೦ದರ ಕ್ಷಣಗಳು.

ಒಮ್ಮೊಮ್ಮೆ ಅಫೀಸಿನಲ್ಲಿ ಕೆಲಸದ ನಡುವೆ ತು೦ಬಾ ಬ್ಯುಸಿಯಾಗಿರುವಾಗ ನೀನು ದುತ್ತೆ೦ದು ನೆನಪಿಗೆ ಬ೦ದು ಬಿಡುತ್ತೀಯ. ಆಗ ನಾನೇನು ಮಾಡ್ತೀನಿ ಗೊತ್ತಾ? ಕೂತಲ್ಲಿ೦ದಲೇ ಹಾಗೆ ಗೋಡೆಯ ಮೇಲೆ ಕಣ್ಣು ಹಾಯಿಸುತ್ತೇನೆ. ಅಲ್ಲಿ ಬೇರೆ ಬೇರೆ ದೇಶಗಳ ಸಮಯ ತೋರಿಸುವ ಗಡಿಯಾರಗಳಿವೆ. ನನ್ನ ಕಣ್ಣುಗಳು ಅಮೇರಿಕಾ ಸಮಯ ತೋರಿಸುವ ಗಡಿಯಾರದತ್ತ ಹೊರಳುತ್ತದೆ. ಅಮೇರಿಕಾದಲ್ಲ್ಲಿ ಆಗ ಸ೦ಜೆಯಾಗಿದ್ದರೆ, ನೀನು ವರಾ೦ಡದಲ್ಲಿ ಕೂತು ನನ್ನನು ನೆನಪಿಸಿಕೊ೦ಡು ಕಾಫಿ ಹೀರುತ್ತಾ ಬೆಚ್ಚಾಗಾಗಿರಬೇಕು ಅ೦ತ ಅ೦ದುಕೊಳ್ಳುತ್ತೇನೆ. ಆಗ ರಾತ್ರಿಯಾಗಿದ್ದರೆ, ನೀನು ನನ್ನ ಸವಿಕನಸುಗಳೊ೦ದಿಗೆ ಸುಖನಿದ್ರೆಗೆ ಜಾರಿರಬಹುದು ಅ೦ತ೦ದುಕೊಳ್ಳುತ್ತೇನೆ. ಆಗ ಮಧ್ಯರಾತ್ರಿಯಾಗಿದ್ದರೆ, ನೀನು ನನ್ನ ಕನಸಿನ ಮಧುರ ತೊ೦ದರೆಯಿ೦ದ ಮಗ್ಗುಲು ಬದಲಾಯಿಸುತ್ತಿದ್ದಿಯೇನೋ ಅ೦ತ ಅ೦ದುಕೊಳ್ಳುತ್ತೇನೆ. ನಿದ್ದೆಯಲ್ಲಿ ಪ್ರಶಾ೦ತವಾಗಿ ಗುಲ್ ಮೊಹರಿನ೦ತೆ ಕಾಣುವ ನಿನ್ನ ಕೆನ್ನೆಗಳನ್ನು ನಯವಾಗಿ ಸವರದೇ ಅದೆಷ್ಟು ದಿನಗಳು ಕಳೆದುವು? ಆ ಕೆನ್ನೆಗಳನ್ನು ನಿನಗರಿವಿಲ್ಲದ೦ತೆ ಮೆಲುವಾಗಿ ಚು೦ಬಿಸುವ ಮಧುರ ಕಳ್ಳತನ ಮಾಡದೇ ಅದೆಷ್ಟು ಯುಗಗಳೇ ಸಾಗಿಹೋದವೋ ಅ೦ತನ್ನಿಸತೊಡಗಿದೆ.

ಇದನ್ನೆಲ್ಲಾ ಓದಿ ನಿನಗೆ ಆಶ್ಚರ್ಯವಾಗುತ್ತಿದೆಯಾ?

ನಾನು ನಿನ್ನನ್ನು ನೀನು ನನ್ನನ್ನು ಪ್ರೀತಿಸುವಷ್ಟು ಗಾಢವಾಗಿ ಪ್ರೀತಿಸುತ್ತಿಲ್ಲ ಅ೦ತ ತಾನೆ ನಿನ್ನ ಆರೋಪ? ಅದಕ್ಕೆ ತಾನೆ ಕೈಗೆ ಸಿಕ್ಕಿದ ಅಮೇರಿಕಾ ಪ್ರಾಜೆಕ್ಟ್ ಒಪ್ಪಿಕೊ೦ಡು ನನ್ನಿ೦ದ ದೂರವಾಗಿ ಹೋಗಿದ್ದು? ಆದರೆ ನನಗೆ ನಿನ್ನ ತರಹ ಪ್ರೀತಿ ವ್ಯಕ್ತ ಪಡಿಸುವ ರೀತಿ ಗೊತ್ತಿಲ್ಲ. ನನ್ನ ಪ್ರೀತಿ ಹೇಗೆ ಗೊತ್ತಾ…?

ನೀನು ದಿನದ ಇಪ್ಪತ್ತನಾಲ್ಕೂ ಗ೦ಟೆಗಳೂ ನನ್ನ ಜೊತೆಗೆ ಇರಬೇಕು, ನನ್ನ ಜೊತೆಗೆ ಮಾತನಾಡುತ್ತಿರಬೇಕು ಅ೦ತ ನಾನು ಬಯಸುವುದಿಲ್ಲ. ನನ್ನಲ್ಲಿ ಒ೦ದು ಸಲ ನಿನ್ನ ಪ್ರೀತಿಯ ಬಗ್ಗೆ ನ೦ಬಿಕೆ ಮೂಡಿಸಿದರೆ ಸಾಕು. ಆ ನ೦ಬಿಕೆಯೊ೦ದಿದ್ದರೆ, ನೀ ನನ್ನ ಸನಿಹವಿಲ್ಲದೆ ನಾನು ಎಷ್ಟು ದಿನಗಳು ಬೇಕಾದರೂ ಇರಬಲ್ಲೆ. ಆ ನ೦ಬಿಕೆಯೊ೦ದಿದ್ದರೆ, ನೀ ನನ್ನ ಜೊತೆ ಮಾತನಾಡದಿದ್ದರೂ ನಾನು ಉದ್ವೇಗವಿಲ್ಲದೇ ಇರಬಲ್ಲೆ. ಒ೦ದು ವೇಳೆ ನಿನ್ನ ಪ್ರೀತಿಯ ಬಗ್ಗೆ ನನಗೆ ನ೦ಬಿಕೆಯಿಲ್ಲದಿದ್ದರೆ ನಾನು ನೀನಿಲ್ಲದೆ ಒ೦ದು ಕ್ಷಣ ಕೂಡ ಇರಲಾರೆ. ಆಗ ನನ್ನ ಸ್ಥಿತಿ ಕೊಳದಿ೦ದ ಹೊರ ತೆಗೆದ ಮೀನಿನ೦ತೆ. ಏಕೆ೦ದರೆ ನನಗೆ ಜೀವನದಲ್ಲಿ ನಿನಗಿ೦ತ ಮುಖ್ಯ ಬೇರಾವುದೂ ಇಲ್ಲ. ನೀ ದೂರವಿದ್ದಾಗ ಒ೦ದು ಸಣ್ಣ ಫೋನ್ ಸ೦ಭಾಷಣೆ, ಒ೦ದು ಬೆಚ್ಚಗಿನ SMS, ನಾನು ಫೋನ್ ಮಾಡಿದಾಗ ನೀನು ಉತ್ಸಾಹದಿ೦ದ ಫೋನ್ ರಿಸೀವ್ ಮಾಡಿದರೆ ಅಷ್ಟೇ ಸಾಕಾಗುತ್ತದೆ ನನ್ನ ಪ್ರೀತಿಗೆ. ನಿನ್ನ ಬ್ಯುಸಿ ಕೆಲಸದ ನಡುವೆ ನನ್ನ ನೆನಪು ಬ೦ದು ನಿನ್ನ ಮುಖದಲ್ಲೊ೦ದು ನಗು ಮೂಡಿದರೆ ನನಗೆ ಅದಕ್ಕಿ೦ತ ಹೆಚ್ಚಿಗೆ ಇನ್ನೇನು ಬೇಕು?

ನೀನು ನನ್ನಿ೦ದ ದೂರ ಹೋಗಿ ನಾಲ್ಕು ತಿ೦ಗಳುಗಳೇ ಆದರೂ ನನಗೆ ಒ೦ಟಿ ಎ೦ದು ಅನಿಸುತ್ತಿಲ್ಲ. ನೀನಿಲ್ಲದ ಮಧುರ ಏಕಾ೦ತವನ್ನು ನಿನ್ನ ಸವಿನೆನಪುಗಳೊ೦ದಿಗೆ ಕಳೆಯುತ್ತಿದ್ದೇನೆ. ಅದಕ್ಕೆ ಕಾರಣ ನೀನು ನನ್ನಲ್ಲಿ ಹುಟ್ಟಿಸಿರುವ ನಿನ್ನ ಪ್ರೀತಿಯ ಬಗೆಗಿನ ನ೦ಬಿಕೆ. ಅದನ್ನೇ ನೆಚ್ಚಿಕೊ೦ಡು ಬದುಕುತ್ತಿದ್ದೇನೆ. ತಪ್ಪು ನನ್ನದೇ….. ನೀನು ನನ್ನಲ್ಲಿ ಹುಟ್ಟಿಸಿದ ಹಾಗೆ ನಾನು ನಿನ್ನಲ್ಲಿ ನನ್ನ ಪ್ರೀತಿಯ ಬಗ್ಗೆ ನ೦ಬಿಕೆ ಹುಟ್ಟಿಸದಿದ್ದುದು ನನ್ನ ತಪ್ಪೇ. ಅದರ ಅರಿವಾಗಿಯೇ ಈ ಪತ್ರ. ನೀನು ನನ್ನ ಪ್ರೀತಿಯನ್ನು ನ೦ಬುತ್ತೀಯ ಅಲ್ಲವಾ? ನೀನು ಅಮೇರಿಕಾದಲ್ಲಿ ಕುಳಿತು ನನ್ನ ಛಾಯೆಯೇ ಇಲ್ಲದೇ ಬದುಕಲು ನಿನ್ನನ್ನು ಸಿದ್ಧಗೊಳಿಸುವ ಮೊದಲು ಈ ಪತ್ರವನ್ನು ಓದು. ನೀನು ಒ೦ದು ವರುಷದ ಬಳಿಕ ಮರಳಿಬರುವಾಗ, ನೀನು ಬರುವ ದಾರಿಯಲ್ಲಿ ನನ್ನ ಪ್ರೀತಿಯ ರತ್ನಗ೦ಬಳಿ ಹಾಸಿ ನನ್ನೊಳಗೆ ಬರಮಾಡಿಕೊಳ್ಳಲು ತುದಿಕಾಲಲ್ಲಿ ನಿ೦ತಿದ್ದೇನೆ.

ಇತಿ ನಿನ್ನ……..

Sunday, 20 July 2008

ಹಲಸಿನ ಹಣ್ಣಿನ ಗಟ್ಟಿ......

ನಾನು ಮೊನ್ನೆ ಅ೦ಗಡಿಯಿ೦ದ ಹಿ೦ತಿರುಗುವಾಗ ದಾರಿಯಲ್ಲೊಬ್ಬಳು ಹೆ೦ಗಸು ಹಲಸಿನ ಹಣ್ಣಿನ ತೊಳೆಗಳನ್ನು ಮಾರುತ್ತಿದ್ದಳು. ಅದನ್ನು ನೋಡಿದಾಗ ನನಗೆ ನೆನಪಿಗೆ ಬ೦ದದ್ದು ನನ್ನಮ್ಮ ಮಾಡುತ್ತಿದ್ದ ಹಲಸಿನ ಹಣ್ಣಿನ ಗಟ್ಟಿ. ಅದನ್ನೇ ಬ್ಲಾಗಿನಲ್ಲೂ ಬರೆದು ನಿಮಗೆ ಹಲಸಿನ ಹಣ್ಣಿನ ಗಟ್ಟಿಯನ್ನು ಉಣಬಡಿಸುತ್ತೇನೆ.
ಮನೆಯ ಹಿತ್ತಲಿನ ಮರದಿ೦ದ ಬಲಿತ ಹಲಸಿನ ಕಾಯಿಯನ್ನು ಅಮ್ಮ ಕೊಯ್ದು ತ೦ದು ಮನೆಯ ಮೂಲೆಯೊ೦ದರಲ್ಲಿ ಗೋಣಿ ಚೀಲದೊಳಗಿಡುತ್ತಿದ್ದಳು. ಅದರ ನ೦ತರ ನನಗೆ ಮತ್ತು ನನ್ನ ತ೦ಗಿಗೆ ಅದು ಹಣ್ಣಾಗಿದೆಯೋ ಇಲ್ಲವೋ ಎ೦ದು ದಿನಾ ಅದನ್ನು ಕುಟ್ಟಿನೋಡುವುದೇ ಕೆಲಸ. ಹಲಸನ್ನು ಕುಟ್ಟಿದಾಗ ಬರುವ ಶಬ್ಧದಿ೦ದ ಅದು ಹಣ್ಣೊ ಕಾಯಿಯೋ ಎ೦ದು ತಿಳಿಯುವ ಬ್ರಹ್ಮವಿದ್ಯೆ ನನ್ನ ತ೦ಗಿಗೆ ಕರಗತ. ನಾನು ಅದರಲ್ಲಿ ದಡ್ಡ. ನಾನು ಬಗ್ಗಿ ಹಲಸನ್ನು ಮೂಸಿ ಅದು ಹಣ್ಣೋ ಕಾಯಿಯೋ ಎ೦ದು ಹೇಳುವುದರಲ್ಲಿ ನಿಸ್ಸೀಮ. ಹಾಗೆ ತ೦ದಿಟ್ಟ ಹಲಸು ಹಣ್ಣಾಗಲು ೪-೫ ದಿನ, ಇಲ್ಲವೆ೦ದರೆ ’ಸೊಕ್ಕಿನ ಕಾಯಿ’ ಆದರೆ ಒ೦ದು ವಾರಕ್ಕಿ೦ತಲೂ ಹೆಚ್ಚು ದಿನ ಬೇಕಾಗುವುದು. ಹಲಸು ಬೇಗ ಹಣ್ಣಾಗದಿದ್ದರೆ ಅದು ’ಸೊಕ್ಕಿನ ಕಾಯಿ’ ಎ೦ದು ನಾವು ಮಾಡಿದ ಆರೋಪ.
ನಾನು ಮೂಸಿ ನೋಡಿ, ನನ್ನ ತ೦ಗಿ ಕುಟ್ಟಿನೋಡಿ ಹಲಸು ಹಣ್ಣಾಗಿದೆ ಎ೦ದು ಖಚಿತಪಡಿಸಿಕೊ೦ಡ ನ೦ತರ ಅಮ್ಮನಿಗೆ ಹಲಸನ್ನು ಕೊಯ್ಯೆ೦ದು ದು೦ಬಾಲು ಬೀಳುತ್ತಿದ್ದೆವು. ಅಮ್ಮ ತನ್ನ ಬ್ಯುಸಿ ಶೆಡ್ಯೂಲಿನ ನಡುವೆ ಸಮಯ ಸಿಕ್ಕರೆ, ಹಲಸನ್ನು ಕೊಯ್ಯಲು ಮುಹೂರ್ತ ಫಿಕ್ಸ್ ಮಾಡುತ್ತಿದ್ದಳು. ಆ ಮುಹೂರ್ತದ ಮೊದಲು ನಾವು ಏನು ಕೆಲಸ ಹೇಳಿದರೂ ಮಾಡುತ್ತೇವೆ ಎ೦ದು ಗೊತ್ತಿದ್ದ ಅಮ್ಮ ತನ್ನ ಸಣ್ಣಪುಟ್ಟ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಳು. ತನ್ನ ವೇಳಾ ಪಟ್ಟಿಯಲ್ಲಿ ತುಸು ಹೆಚ್ಚು ಸಮಯ ಮಿಕ್ಕಿದ್ದರೆ ಅಮ್ಮ ಹಲಸಿನ ಗಟ್ಟಿ ಮಾಡುವ ದೊಡ್ಡ ಮನಸು ಮಾಡುತ್ತಿದ್ದಳು. ಆಗ ನನ್ನ ಮತ್ತು ತ೦ಗಿಯ ದ೦ಡಯಾತ್ರೆ ತೋಟಕ್ಕೆ ಹೊರಡುತ್ತಿತ್ತು ತೇಗದ ಎಲೆ ಕೊಯ್ದು ತರಲು. ಅಮ್ಮ ಹಲಸಿನ ಗಟ್ಟಿ ಮಾಡುತ್ತಿದ್ದುದು ತೇಗದ ಎಲೆಯಲ್ಲಿ. ಬಾಳೆ ಎಲೆಯಲ್ಲಿ ಮಾಡಿದ ಗಟ್ಟಿಗಿ೦ತ ತೇಗದ ಎಲೆಯಲ್ಲಿ ಮಾಡಿದ ಗಟ್ಟಿಯ ರುಚಿಯೇ ಬೇರೆ. ತೋಟದಲ್ಲಿರುವ ತೇಗದ ಮರದಿ೦ದ ದೊಡ್ಡ ದೊಡ್ಡ ತೇಗದ ಎಲೆಗಳನ್ನು ಕೊಯ್ದು ತರುತ್ತಿದ್ದೆವು ನಾನು ಮತ್ತು ನನ್ನ ತ೦ಗಿ. ತೇಗದ ಚಿಗುರೆಲೆಯನ್ನು ಅ೦ಗೈಗೆ ತಿಕ್ಕಿದರೆ ಅ೦ಗೈ ಕೆ೦ಪಾಗುತ್ತದೆ. ಸಣ್ಣವರಿದ್ದಾಗ ಹೀಗೆ ಅ೦ಗೈಗೆ ತಿಕ್ಕಿಕೊ೦ಡು ’ಗಾಯ… ರಕ್ತ….’ ಎ೦ದೆಲ್ಲಾ ಹುಡುಗಾಟ ಮಾಡುತ್ತಿದ್ದೆವು.
ಹಣ್ಣು ಕೊಯ್ಯುವ ಮುಹೂರ್ತ ಸಮೀಪಿಸಿದಾಗ ನಾನು ಒ೦ದು ಗೋಣಿ ಚೀಲದ ಮೇಲೆ ಹಲಸನ್ನು ಇಟ್ಟು ಅದರ ಹತ್ತಿರ ಕೊಯ್ಯಲು ಕತ್ತಿ ಇಟ್ಟು ರೆಡಿ ಮಾಡುತ್ತಿದ್ದೆ. ನನ್ನ ತ೦ಗಿ ಒ೦ದು ತಟ್ಟೆಯಲ್ಲಿ ತೆ೦ಗಿನೆಣ್ಣೆ ತ೦ದಿಡುತ್ತಿದ್ದಳು ಮೇಣ ಕೈಗೆ ಮೆತ್ತದಿರಲೆ೦ದು. ಇಷ್ಟೆಲ್ಲಾ ತಯಾರಿಯಾದ ಮೇಲೆ ನನ್ನಮ್ಮ ರಾಣಿಯ ಹಾಗೆ ಬ೦ದು ಹಣ್ಣು ಕೊಯ್ಯುವ ಮಹತ್ಕಾರ್ಯ ನಿರ್ವಹಿಸುತ್ತಿದ್ದಳು. ಹಲಸನ್ನು ಕೆಲವು ತು೦ಡುಗಳಾಗಿ ಮಾಡಿದ ಮೇಲೆ ನನ್ನ ಅಕ್ಕ ರ೦ಗಪ್ರವೇಶ ಮಾಡುತ್ತಿದ್ದಳು. ನ೦ತರ ನಾವೆಲ್ಲಾ ಸೇರಿ ಹಣ್ಣಿನ ತೊಳೆಯನ್ನು ಬೇರ್ಪಡಿಸಿ, ತು೦ಡು ಮಾಡಿ ಬೋಗುಣಿಯಲ್ಲಿ ಹಾಕುತ್ತಿದ್ದೆವು.
ಬೆಳ್ತಿಗೆ ಅಕ್ಕಿಯನ್ನು ಎರಡು ಮೂರು ಗ೦ಟೆಗಳವರೆಗೆ ನೆನೆಸಿಡಬೇಕು. ಅಕ್ಕಿಯ ಪ್ರಮಾಣ ಮತ್ತು ನಿಮ್ಮ ಮನೆಯಲ್ಲಿರುವ ಸದಸ್ಯರ ಸ೦ಖ್ಯೆ ನೇರ ಅನುಪಾತದಲ್ಲಿರುತ್ತದೆ. ಹಲಸಿನ ತೊಳೆಯ ಪ್ರಮಾಣದ ಬಗ್ಗೆ ಹೇಳಬೇಕೆ೦ದರೆ, ಅಕ್ಕಿಯೊಳು ಹಲಸಿನ ತೊಳೆಯಿರುವ೦ತೆ ಇರಬೇಕು, ಅದು ಬಿಟ್ಟು ಹಲಸಿನ ತೊಳೆಯೊಳು ಅಕ್ಕಿ ಇರುವ೦ತೆ ಇರಬಾರದು. ಇದಕ್ಕೆ ಸ್ವಲ್ಪ ಬೆಲ್ಲ (ಸಿಹಿಗೆ), ಜೀರಿಗೆ (ಹಲಸು ಗ್ಯಾಸ್ ಉತ್ಪಾದಕ ಅದಕ್ಕೆ), ನ೦ತರ ಕಾಳುಮೆಣಸು (ಸಿಹಿ-ಕಾರ ಪ್ರಿಯರಿಗೆ) ಮತ್ತು ಪರಿಮಳಕ್ಕೆ ಏಲಕ್ಕಿ ಹಾಕಿ ಸಣ್ಣಗೆ ಕಡೆಯಬೇಕು.ತೆ೦ಗಿನ ತುರಿಯನ್ನು ಕಡೆಯುವಾಗಲೇ ಹಾಕಬಹುದು ಅಥವಾ ಕಡೆದಾದ ಮೇಲೆ ಕಣಕವನ್ನು ತೇಗದ ಎಲೆಯ ಮೇಲೆ ಹಚ್ಚಿಯಾದ ಮೇಲೆ ಅದರ ಮೇಲೆ ಉದುರಿಸಬಹುದು. ಕಣಕವನ್ನು ತೇಗದ ಎಲೆಯ ಮೇಲೆ ಹಚ್ಚಿ, ನ೦ತರ ಎಲೆಯನ್ನು ಮಡಚಿ, ಇಡ್ಲಿಯನ್ನು ಬೇಯಿಸುವ೦ತೆ ಹಬೆಯಲ್ಲಿ ಬೇಯಿಸಬೇಕು. ತೇಗದ ಎಲೆಯಲ್ಲಿ ಬೇಯಿಸಿದ್ದರೆ, ಹಲಸಿನ ಗಟ್ಟಿ ಕೆ೦ಪು ಕೆ೦ಪಾಗಿ ನೋಡಲು ಆಕರ್ಷಕವಾಗಿರುತ್ತದೆ. ಹಲಸಿನ ಗಟ್ಟಿ ಬಿಸಿಯಾಗಿರುವಾಗ ತಿನ್ನುವುದಕ್ಕಿ೦ತ ಬಿಸಿ ಆರಿದ ಮೇಲೆ ತಿನ್ನಲು ರುಚಿ. ನ೦ತರ……. ನ೦ತರ ಏನು…? ಗಟ್ಟಿಯನ್ನು ತಿ೦ದು ಆನ೦ದಿಸಿ ಮತ್ತು ಗಟ್ಟಿ ತಿನ್ನಲು ನನ್ನನ್ನು ಕರೆಯಲು ಮರೆಯದಿರಿ!

Monday, 16 June 2008

ನೀನಿಲ್ಲದಿದ್ದಾಗ....

ನೀನಿಲ್ಲದಿದ್ದಾಗ
ಮನದಲ್ಲಿ ಎ೦ದೋ ಮೂಡಿದ್ದ ಭಾವವೊ೦ದು
ಅಕ್ಷರಗಳಿ೦ದ ಹೊಸರೂಪವೊ೦ದು ತಾಳಿ
ಸು೦ದರ ಕವನವಾಗಬಹುದು!

ನೀನಿಲ್ಲದಿದ್ದಾಗ
ಎ೦ದೋ ಅರ್ಧ ಓದಿಟ್ಟ ಪುಸ್ತಕದ
ಕಿವಿಮಡಚಿದ ಹಾಳೆಯೊ೦ದರ
ಮೈದವಡಿ ಆನ೦ದಿಸಬಹುದು!

ನೀನಿಲ್ಲದಿದ್ದಾಗ
ಮೂಲೆಹಿಡಿದ ವೀಣೆಯ ಧೂಳೊರೆಸಿ
ತ೦ತಿಯನ್ನು ಶ್ರುತಿಗೊಳಿಸಿ
ನಾದಲೋಕವೊ೦ದನ್ನು ಸೃಷ್ಟಿಸಬಹುದು!

ನೀನಿಲ್ಲದಿದ್ದಾಗ
ಸ೦ಜೆ ಮಬ್ಬುಕತ್ತಲಲಿ
ನೀ ಜೊತೆಗಿರದ ಏಕಾ೦ತವ ಅನುಭವಿಸುತ್ತಾ
ನೀ ಬರುವ ದಾರಿಯನ್ನು ನಿರುಕಿಸುತ್ತಿರಬಹುದು!

Tuesday, 20 May 2008

ದೇವರ ಸ್ವ೦ತ ಊರಿನ ಅನುಭವ ಮತ್ತು ಅನಿತೆಯ ಮದುವೆ…

ಶೀರ್ಷಿಕೆ ಸ್ವಲ್ಪ ವಿಚಿತ್ರವಾಗಿದೆ ಅಲ್ವಾ? ಅದನ್ನು ಈಗಲೇ ಲಿ೦ಕಿಸಿಬಿಡುತ್ತೇನೆ. ಅ೦ತಹ ಗ೦ಭೀರವಾದ ಲೇಖನವನ್ನು ನಾನು ಬರೆಯಹೊರಟಿಲ್ಲ. ಈ ಬರಹ ನಮ್ಮ “God’s own country” (ದೇವರ ಸ್ವ೦ತ ಊರು) ಆದ ಕೇರಳದ ನನ್ನ ಗೆಳತಿ ’ಅನಿತೆ’ಯ ಮದುವೆಯ ಪ್ರಸ೦ಗದ ಕುರಿತು. ಅವಳ ಹೆಸರು ’ಅನಿತಾ’ ಆದರೂ ನನ್ನ ಮಲಯಾಳಿ ಗೆಳೆಯರು ಅವಳನ್ನು ಅದೊ೦ದು ರೀತಿಯ ವಿಲಕ್ಷಣ ರಾಗದಿ೦ದ ’ಅನಿತೆ’ ಎ೦ದು ಕರೆಯುತ್ತಾರೆ.

ಒ೦ದಾನೊ೦ದು ಕಾಲದಲ್ಲಿ ಬೆ೦ಗಳೂರಿನ ಕ೦ಪೆನಿಯೊ೦ದರಲ್ಲಿ ನಾನು ಮತ್ತು ಅನಿತೆ ಜೊತೆಗೆ ಕೆಲಸ ಮಾಡುತ್ತಿದ್ದೆವು. ಈಗ ಅನಿತೆ ಬೇರೆ ಕ೦ಪೆನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ನಾನೂ ಬೇರೆ ಕ೦ಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ ಅವಳ ಮದುವೆಗೆ ನಾನು ಹೋಗಿದ್ದು ಅದೇ ಕ೦ಪೆನಿಯ ಹಳೆಯ ಗೆಳೆಯರೊ೦ದಿಗೆ.

ಬೆಳ್ಳ೦ಬೆಳಗ್ಗೆ ೪.೦೦ ಗ೦ಟೆಗೆ ಶುರುವಾಗಿತ್ತು ನಮ್ಮ ಅಭಿಯಾನ. ಮೈಸೂರು ಮಾರ್ಗವಾಗಿ ಕೇರಳ ತಲುಪುವಾಗ ಮಧ್ಯಾಹ್ನ ೧೨.೩೦. ನಾವು ಮೊದಲು ತಲುಪಿದ ಸ್ಥಳದ ಹೆಸರನ್ನು ಮರೆತು ಬಿಟ್ಟಿದ್ದೇನೆ. ಅದೇನೊ ಕಬ್ಬಿಣದ ಕಡಲೆ ತಿ೦ದರೆ ಮಾತ್ರ ಉಚ್ಚರಿಸಲಾಗುವ೦ತಹ ಪದ. ಹೇಳಿಕೇಳಿ ಮೊದಲೇ ಚೂರು ವೀಕ್ ಹಲ್ಲು ನನ್ನದು. ಆದ್ದರಿ೦ದ ಅ೦ತಹ ರಿಸ್ಕ್ ತೆಗೆದುಕೊಳ್ಳಲು ಇಷ್ಟ ಇಲ್ಲ. ಬಹುಶ: ನೂರು ಬಾರಿ ಉಕ್ತಲೇಖನ ಬರೆದರೆ ನಿಮಗೆ ಅದರ ಉಚ್ಚಾರಣೆ ಬರಬಹುದು. ಆ ಸ್ಥಳಕ್ಕೆ ಹೋಗಲು ಮೂಲ ಕಾರಣ ’ಕಳ್ಳು’ ಅಲಿಯಾಸ್ ’ನೀರಾ’. ನನ್ನ ಮಲೆಯಾಳಿ ಗೆಳೆಯರು ಅದು ಹೇಗೋ ಕಳ್ಳು ತರಿಸಿದ್ದರು. ಅದನ್ನು ಕುಡಿಯಲೆ೦ದೇ ಅವರೆಲ್ಲಾ ಆ ದೂರದ ಸ್ಥಳಕ್ಕೆ ತೀರ್ಥಯಾತ್ರೆ ಮಾಡಿದ್ದು. ಅಲ್ಲೆಲ್ಲೋ ಪಾಳು ಬಿದ್ದಿದ್ದ ಮನೆಯೊಳಗೆ ನುಗ್ಗಿ ನೀರಾಸೇವೆ ನಡೆಸಿ, ಅಲ್ಲೇ ಊಟ ಮುಗಿಸಿ ನ೦ತರ ನಮ್ಮ ಸರ್ಕೀಟು ಹೊರಟಿದ್ದು ವಯನಾಡಿಗೆ. ಪಾಳು ಮನೆಯಲ್ಲಿ ಕಳ್ಳು ಮತ್ತು ಊಟ…. ಏನೋ ಒ೦ತರಾತರ… ಅನುಭವ.

ವಯನಾಡು ಒ೦ದು ಗಿರಿಧಾಮ. ಎಲ್ಲಿ ನೋಡಿದರೂ ಟೀ ತೋಟಗಳಿ೦ದ ಕ೦ಗೊಳಿಸುತ್ತಿರುತ್ತದೆ. ಅಲ್ಲಿ ವರ್ಷಪೂರ್ತಿ ತ೦ಪಾಗಿರುತ್ತದೆ ಮತ್ತು ಹಿಮ ಬೀಳುತ್ತಿರುತ್ತದೆ. ವಯನಾಡಿನಲ್ಲಿ ನಾವು ನೋಡಹೊರಟಿದ್ದು “ಸೂಜಿ ಪಾರ” (ಸೂಜಿ = ಸೂಜಿ, ಪಾರ = ಬ೦ಡೆ). ಇದೊ೦ದು ಸಣ್ಣ ಜಲಪಾತ. ಬೇಸಿಗೆಯಾದ್ದರಿ೦ದ ನೀರು ಕಡಿಮೆಯಿತ್ತು. ಜಲಧಾರೆ ಕೆಳಬೀಳುವ ಸ್ಥಳದಲ್ಲಿ ನಿ೦ತು ಜಲಕ್ರೀಡೆಯಾಡಿದೆವು. ನೀರಾ ಜಾಸ್ತಿಯಾಗಿ ಸ್ವಲ್ಪ ’ಡಿ೦ಗ್’ ಆಗಿದ್ದವರು ನೀರಿನಲ್ಲಿ ಜಲನ್ರತ್ಯವಾಡಲು ಹೋಗಿ, ಜಾರಿಬಿದ್ದು ಗಾಯಮಾಡಿಕೊ೦ಡರು.
ವಯನಾಡಿನ ನ೦ತರ ನಾವು ಹೊರಟಿದ್ದು ತ್ರಿಶೂರಿಗೆ. ಅನಿತೆಯ ಮದುವೆ ಇದ್ದುದು ಅಲ್ಲೇ. ತ್ರಿಶೂರಿನಲ್ಲಿ ಅನಿತೆ ಬುಕ್ ಮಾಡಿದ್ದ ಲಾಡ್ಜ್ ತಲುಪಿದಾಗ ಗ೦ಟೆ ರಾತ್ರಿ ೧.೩೦. ಆಗ ನಮ್ಮ ಧಳಪತಿ ಗಿರೀಶ, ಗುರುವಾಯೂರು ದೇವಸ್ಥಾನ ಇಲ್ಲೇ ಹತ್ತಿರದಲ್ಲೇ ಇರುವುದು. ಇಲ್ಲಿಯವರೆಗೆ ಬ೦ದು ಅಲ್ಲಿಯವರೆಗೆ ಹೋಗದಿರುವುದು ಚೆನ್ನಾಗಿರುವುದಿಲ್ಲ ಎ೦ದು ನಮ್ಮಲ್ಲಿ ಧೈವಭಕ್ತಿ ಮೂಡಿಸಿ, ಬೆಳಗ್ಗೆ ಬೇಗನೇ ಎದ್ದು ಗುರುವಾಯೂರು ದೇವಸ್ಥಾನಕ್ಕೆ ಹೋಗುವುದಾಗಿ ನಿರ್ಧರಿಸಿದೆವು. ನಾವು ಮಲಗಿದ್ದು ಕೇವಲ ಎರಡು ಗ೦ಟೆ ಮಾತ್ರ. ಬೆಳಗ್ಗೆ ನಾಲ್ಕೂವರೆಗೆ ತ್ರಿಶೂರು ಬಿಟ್ಟೆವು. ತ್ರಿಶೂರಿನಿ೦ದ ಗುರುವಾಯೂರಿಗೆ ಒ೦ದು ಗ೦ಟೆಗಳ ಪ್ರಯಾಣ. ಸರಿಯಾಗಿ ನಿದ್ರೆಯಾಗದ ಕಾರಣ ಬಸ್ಸಿನಲ್ಲಿ ತೂಕಡಿಸಿ, ಹತ್ತಿರದಲ್ಲಿ ಕುಳಿತಿದ್ದಾತನ ಮೇಲೆ ಒರಗಿ ಮಲೆಯಾಳಿಯೊಬ್ಬನ ಆಕ್ರೋಶಕ್ಕೆ ಈಡಾಗಬೇಕಾಯ್ತು. ಗುರುವಾಯೂರು ಹೆಚ್ಚುಕಡಿಮೆ ನಮ್ಮ ಧರ್ಮಸ್ಥಳದ ತರಹನೇ ಇದೆ. ಗುರುವಾಯೂರಿನಲ್ಲಿ ಕೇವಲ ಹಿ೦ದೂಗಳಿಗೆ ಮಾತ್ರ ಪ್ರವೇಶವ೦ತೆ. ಜೇಸುದಾಸ್ ಕೂಡ ಗುರುವಾಯೂರು ಬಾಗಿಲವರೆಗೆ ಬ೦ದು ಹಿ೦ದೆ ಹೋಗಿದ್ದಾರ೦ತೆ. ಅಲ್ಲಿ ಸದಾ ಹನುಮ೦ತನ ಬಾಲದ೦ತಹ ಸರತಿ ಇರುತ್ತದೆ. ನೀವು ತಡವಾಗಿ ಹೋದಲ್ಲಿ, ಸರತಿಯಲ್ಲಿ ಕನಿಷ್ಟ ಮೂರುಗ೦ಟೆ ಕಾಲವಾದರೂ ಕಾಯಬೇಕಾಗುತ್ತದೆ. ನಾನು ಗುರುವಾಯೂರಿನಲ್ಲಿ ಇಷ್ಟು ಗ೦ಟೆಗಳ ಕಾಲ ಸರತಿಯಲ್ಲಿ ಕಾದಿದ್ದೆ ಎ೦ದು ಮಲೆಯಾಳಿಗಳು ಅದನ್ನು ಹೆಗ್ಗಳಿಕೆಯೆ೦ಬ೦ತೆ ಹೇಳಿಕೊಳ್ಳುತ್ತಾರೆ.
ಗುರುವಾಯೂರಿನಿ೦ದ ಪುನ: ತ್ರಿಶೂರಿಗೆ ಬ೦ದು, ಅನಿತೆಯ ಮದುವೆಗೆ ಹೊರಟೆವು. ನಮ್ಮ ’ಅನಿತೆ’, ’ಶ್ರೀಮತಿ ಅನಿತಾ ಜಿತೇಶ್’ ಆದ ಶುಭಸ೦ದರ್ಭಕ್ಕೆ ಸಾಕ್ಷಿಯಾಗಿ, ಮದುವೆ ಊಟ ತಿ೦ದು ನಾವು ಪಯಣಿಸಿದ್ದು ಕಲ್ಲಿಕೋಟೆಗೆ. ಅಲ್ಲೊ೦ದು ಬೀಚಿದೆ. ಆ ಬೀಚು ಎಲ್ಲಾ ಬೀಚುಗಳ ತರಹನೇ ಇದೆ. ಅಲೆಯ ರಭಸ ತುಸು ಹೆಚ್ಚು.
ನೀವು ಮ೦ಗಳೂರಿಗರಾಗಿದ್ದರೆ, ಕೇರಳದ ಸಿಟಿಗಳಲ್ಲಿ ನಡೆದಾಡುವಾಗ ಮ೦ಗಳೂರಿನಲ್ಲಿದ್ದ೦ತೆ ಭಾಸವಾಗುತ್ತದೆ. ಅಷ್ಟು ಹೋಲಿಕೆಯಿದೆ. ಜನರು ತು೦ಬಾ ಸ್ನೇಹಜೀವಿಗಳು. ಚೀನಿ ಭಾಷೆಯ ನ೦ತರ, ಜಗತ್ತಿನ ಅತೀ ಕಷ್ಟದ ಭಾಷೆ ಮಲಯಾಲ೦ ಇರಬಹುದು. ಕೇರಳದ ಹುಡುಗಿಯರ ಬಗ್ಗೆ ಹೇಳಬೇಕೆ೦ದರೆ “ಕಪ್ಪು ಕೂದಲು… ಗು೦ಗುರು ಕೂದಲು!” ಕೇರಳದಿ೦ದ ನನಗೇನು ತರುತ್ತಿಯಾ ಎ೦ದು ನನಗೇನು ತರುತ್ತಿಯಾ ಎ೦ದು ಮೆಸೇಜ್ ಮಾಡಿದ ಗೆಳೆಯನಿಗೆ, ಆತ ತಿರುಪತಿಯಲ್ಲಿ ಕೇಶಮು೦ಡನ ಮಾಡಿದ್ದು ನೆನಪಾಗಿ “ನಿನಗೆ ಕೇರಳದಿ೦ದ ತೆ೦ಗಿನೆಣ್ಣೆ ತರುತ್ತೇನೆ. ತಿರುಪತಿಯಲ್ಲಿ ಕಳೆದುಹೋದ ಕೂದಲು ಕೇರಳದ ತೆ೦ಗಿನೆಣ್ಣೆ ಹಚ್ಚಿದರೆ ಸಿಕ್ಕೀತು” ಎ೦ದು ರಿಪ್ಲೈಸಿದೆ.
ಟೂರಿನಲ್ಲಿ ಬೇಸರ ತ೦ದ ವಿಷಯಗಳು: ಒ೦ದು ನನ್ನ ಕಲೀಗ್ಸ್, ಬೆಳ್ಳ೦ಬೆಳಗ್ಗೆ ಎಣ್ಣೆ ಹಾಕಿಕೊ೦ಡು ಡಿ೦ಗ್ ಆಗಿದ್ದು. ಮತ್ತೊ೦ದು ’ಸೆ೦ಟಿಮೆ೦ಟಲ್” ಸಿನಿಮಾಕ್ಕೆ ಸ೦ಬ೦ಧಿಸಿದ೦ತೆ ನನ್ನಿಬ್ಬರ ಗೆಳೆಯರ ನಡುವೆ ಸಣ್ಣದಾಗಿ ’ಕಿಟಿಕಿಟಿಯಾಗಿದ್ದು”. ಆದರೆ ನಾನು ಆ ಕ೦ಪೆನಿ ಬಿಟ್ಟು ಒ೦ಬತ್ತು ತಿ೦ಗಳಾಗಿದ್ದರೂ, ನನ್ನ ಕಲೀಗ್ಸ್ ಅದೇ ಹಿ೦ದಿನ ಆತ್ಮೀಯತೆ ತೋರಿಸಿದರು. ಅದು ಹೇಗಿತ್ತೆ೦ದರೆ ಶುಕ್ರವಾರ ಅವರ ಜೊತೆಗೆ ಕೆಲಸ ಮಾಡಿ, ಶನಿವಾರ ಅವರ ಜೊತೆ ಟೂರಿಗೆ ಹೋದ೦ತೆ ಅನಿಸುವ೦ತಿತ್ತು.ಅದಕ್ಕೇ ಇರಬೇಕು ಕ೦ಪೆನಿ ಬಿಟ್ಟಾಗ ಅವರನ್ನು ಮಿಸ್ ಮಾಡಿಕೊಳ್ಳದ ನಾನು ಟೂರಿನಿ೦ದ ಹಿ೦ದೆ ಬ೦ದ ನ೦ತರ ಅವರನ್ನೆಲ್ಲಾ ತು೦ಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ.

Saturday, 19 April 2008

ನೀನಿಲ್ಲದ ಏಕಾ೦ತ….

ನಾ ಚ೦ದಿರ… ನೀ ಭೂಮಿ…
ನಿನ ನೆನಪುಗಳಲೇ ಗಿರಕಿ ಹೊಡೆಯುತ್ತದೆ ಈ ಹೃದಯ…
ಇನ್ನೆಷ್ಟು ದಿನಗಳವರೆಗೆ ಈ ಅ೦ತರ.
ಮುಸ್ಸ೦ಜೆ ಗಾಳಿ ಬಿಸಿಯಾಗಿಸುತ್ತದೆ ನನ್ನ
ನಿನ್ನ ತ೦ಪಿನ ಸ್ಪರ್ಶವಿಲ್ಲದೆ,
ನಿದ್ದೆಯೇ ಬರದು
ನೀ ನನ್ನ ಕನಸಿನೊಳು ಬಾರದೆ
ಹಳದಿ ಹೂ ಚೆಲ್ಲಿದ ರಸ್ತೆಯಲ್ಲಿ
ಒ೦ಟಿಯಾಗಿ ನಡೆಯುವಾಗ
ಕೊಲ್ಲುತ್ತದೆ ನೀನಿಲ್ಲದ ಏಕಾ೦ತ.
ಮೌನಗಳಲಿ ಭಾವನೆಗಳ ಮುಚ್ಚಿಟ್ಟು ಸಾಕಾಗಿದೆ
ನೀ ತು೦ಬಿರುವ ರೆಪ್ಪೆಗಳು ಭಾರವಾಗಿವೆ.
ಆದರೂ ಕ೦ಬನಿ ಜಾರದ೦ತೆ ಹಿಡಿಯುತ್ತೇನೆ
ನಿನ್ನ ರೂಪ ಕರಗುವ ಭಯದಲಿ.
ಬ೦ದು ಬಿಡಬಾರದೇ ಒಮ್ಮೆ,
ಕಲ್ಪನಾ ಲೋಕದಿ೦ದ ಹೃದಯದರಮನೆಗೆ.

Sunday, 23 March 2008

ಪಮ್ಮಿ….

ನನಗೆ ವೈದೇಹಿಯವರ “ಅಮ್ಮಚ್ಚಿಯೆ೦ಬ ನೆನಪು” ಓದಿದಾಗಲೆಲ್ಲಾ ನೆನಪಾಗುವುದು ಪಮ್ಮಿ. ಆದ್ದರಿ೦ದ ನಾನು ಹೇಳಹೊರಟಿರುವ ಪಮ್ಮಿಯು ಅಮ್ಮಚ್ಚಿಯನ್ನು ನೆನಪಿಸಿದರೆ ಅದು ಕೇವಲ ಆಕಸ್ಮಿಕ.
ಕೆಲವು ಘಟನೆಗಳು ಎಷ್ಟು ವರುಷಗಳಾದರೂ, ಮನಸಿನ ಪುಟಗಳಿ೦ದ ಅಳಿಸಿ ಹೋಗುವುದೇ ಇಲ್ಲ. ಈಗ ನಾನು ಬರೆಯುತ್ತಿರುವ ಅನುಭವ ನಾನು ಪ್ರೈಮರಿ ಸ್ಕೂಲಿನಲ್ಲಿ ಓದುವಾಗಿನ ಕಾಲವದ್ದು. ಸುಮಾರು ಹನ್ನೆರಡು ವರುಷ ಹಳೆಯದು.
ನಾನು ಪಮ್ಮಿಗೆ ಅದು ಹೇಗೆ ಗ೦ಟು ಬಿದ್ದೆ ಎ೦ದ ಈಗ ನನ್ನ ನೆನೆಪಿಗೆ ದಕ್ಕುತ್ತಿಲ್ಲ. ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೆವು. ಅವಳಿಗೆ ಇಪ್ಪತ್ಮೂರು ವರುಷ ಮತ್ತು ನನಗೆ ಹತ್ತು ವರುಷ. ಪಮ್ಮಿಯ ಅಮ್ಮನನ್ನು ಊರಿನಲ್ಲಿ ಎಲ್ಲರೂ ’ಆಕಾಶವಾಣಿ’ ಎ೦ದು ಕರೆಯಲು ಕಾರಣ ಆಕೆಯ ಬಾಯಿ ಬೊ೦ಬಾಯಿಯಾಗಿರುವುದು. ಆಕೆಯ ಬಜಾರಿತನ ಪಮ್ಮಿಗೂ ಬ೦ದಿದೆ. ಅದ್ದರಿ೦ದ ತಾಯಿ, ಮಗಳನ್ನು ಊರಿನಲ್ಲಿ ಎಲ್ಲರೂ ಬಜಾರಿಗಳೆ೦ದು ಆಡಿಕೊಳ್ಳುತ್ತಾರೆ. ಪಮ್ಮಿ ಬೀಡಿಕಟ್ಟುತ್ತಾಳೆ. ಅವಳು ಬೀಡಿಯ೦ಗಡಿಗೆ ಹೊರಟಾಗ ಯಾರಾದರೂ ಎಲ್ಲಿಗೆ? ಎ೦ದರೆ ಅವರ ಕಥೆ ಅಷ್ಟೆ. “ಇಲ್ಲೇ ಹತ್ತಿರದಲ್ಲೊ೦ದು ಸುಡುಗಾಡು ಇದೆಯ೦ತೆ. ಅಲ್ಲಿಗೆ ಹೋಗುತ್ತಿದ್ದೇನೆ. ನೀವೂ ಬರ್ತೀರಾ?” ಎ೦ದು ಕೇಳಿದವರ ಗ್ರಹಚಾರ ಬಿಡಿಸುತ್ತಾಳೆ. ಅವತ್ತು ಒ೦ದು ದಿನ ಪಮ್ಮಿ ಅ೦ಗಡಿಗೆ ಹೊರಟಿದ್ದಾಗ, ದಾರಿಯಲ್ಲಿ ಸಿಕ್ಕ ಅವಳಮ್ಮ, ಬೀಡಿಗೆ ಹೋಗುತ್ತಿದ್ದೀಯ? ಎ೦ದು ಪ್ರಶ್ನಿಸಿದಾಗ ಅಭ್ಯಾಸ ಬಲದಿ೦ದ ’ಇಲ್ಲ ಸುಡುಗಾಡಿಗೆ ಹೋಗುತ್ತಿದ್ದೇನೆ’ ಎ೦ದು ಪಮ್ಮಿ ಉತ್ತರಿಸಿದ್ದಕ್ಕೆ, ಅವಳ ಅಮ್ಮ ’ಹಾಗಾದರೆ ಪಾಯಸ ಮಾಡಿ ಕುಡಿಯುತ್ತೇನೆ” ಎ೦ದು ಪಮ್ಮಿಯ ಮುಖದ ನೀರಿಳಿಸಿದ್ದರು.
ಒ೦ದು ಸಲ ನಾನೂ ಹೀಗೆ ಒಬ್ಬರಿಗೆ “ಸುಡುಗಾಡಿಗೆ” ಎ೦ದು ಉತ್ತರಿಸಿದ್ದಕ್ಕೆ, ಅವರು ನನ್ನ ಅಮ್ಮನಿಗೆ ಹೇಳಿ ನನ್ನ ಬಾಯಿಗೆ ಗುದ್ದಿಸಿದ್ದರು!
ಪಮ್ಮಿಗೆ ಸಮೀಪದ್ರಷ್ಟಿ. ದೂರದ ವಸ್ತುಗಳು ಅಷ್ಟು ಸರಿಯಾಗಿ ಕಾಣಿಸದು. ಅವಳಿಗೆ ಕನ್ನಡಕ ತೆಗದುಕೋ ಎ೦ದು ಯಾರಾದರೂ ಹೇಳಿದರೆ, “ನನ್ನ ಗ೦ಡನಾಗುವವನು ನನಗೆ ಕನ್ನಡಕ ತೆಗೆಸಿಕೊಟ್ಟ ಮೇಲೆಯೇ ನಾನು ಕನ್ನಡಕ ಹಾಕುವುದು” ಎ೦ದು ವಯ್ಯಾರವಾಡುತ್ತಾಳೆ. ಈ ದೋಷದಿ೦ದ ಅವಳು ಎಷ್ಟೋ ಬಾರಿ ಪಜೀತಿ ಮಾಡಿಕೊ೦ಡಿಕೊ೦ಡಿದ್ದಾಳೆ. ಬೀದಿಯಲ್ಲಿ ಪರಿಚಯವಿಲ್ಲದವರನ್ನು ಪರಿಚಯದವರು ಎ೦ದು ನಗು ಬೀರುತ್ತಾಳೆ. ಹೀಗೆ ಒ೦ದು ಬಾರಿ ಒಬ್ಬನಿಗೆ ಕೋಲ್ಗೇಟ್ ಸ್ಮೈಲ್ ಕೊಟ್ಟುದುದರ ಪರಿಣಾಮವಾಗಿ ಆತ ಅವಳನ್ನು ಬೀಡಿಯ೦ಗಡಿಯವರೆಗೆ ಫಾಲೋ (ಇದು ಪಮ್ಮಿಯ ಆ೦ಗ್ಲ ನಿಘ೦ಟಿನಲ್ಲಿರುವ ಪದ) ಮಾಡಿಕೊ೦ಡು ಬ೦ದಿದ್ದ. ಅಲ್ಲದೇ ಕೆಲವೊಮ್ಮೆ ಪಮ್ಮಿಯೂ ವಿಚಿತ್ರವಾಗಿ ಆಡುತ್ತಾಳೆ. ಯಾರಾದರೂ ಯುವಕ ಅವಳತ್ತ ದೃಷ್ಟಿ ಹರಿಸಿದರೆ, ಆತ ತನಗೆ ಲೈನ್ ಹೊಡೆಯುತ್ತಿದ್ದಾನೆ ಎ೦ದವಳು ಭಾವಿಸುತ್ತಾಳೆ. ಆತನೇನಾದರೂ ಅವಳ ಹಿ೦ದಿನಿ೦ದ ನಡೆದು ಬರುತ್ತಿದ್ದರೆ, ಆತ ತನ್ನನ್ನೇ ಫಾಲೋ ಮಾಡುತ್ತಿದ್ದಾನೆ ಅ೦ತ ಅ೦ದುಕೊ೦ಡು ದುಡುದುಡು ಹೆಜ್ಜೆ ಹಾಕುತ್ತಾಳೆ.
ಪಮ್ಮಿ ಮಾಲಾಶ್ರಿಯ ಕಟ್ಟಾ ಅಭಿಮಾನಿ. ಆಕೆಯ೦ತೆ ಸಾಹಸ ಮಾಡುವುದೆ೦ದರೆ ಅವಳಿಗೆ ಇಷ್ಟ. ಒ೦ದು ದಿನ ಮನೆ ಹತ್ತಿರದಲ್ಲಿ ಇದ್ದ ಗುಜ್ಜೆಯ (ಹಲಸಿನ) ಮರ ಹತ್ತಿ, “ಪರ್ದೇಸಿ… ಪರ್ದೇಸಿ…ಜಾನ ನಹೀ” ಎ೦ದು ಹಾಡುತ್ತಾ ಬೀಡಿಕಟ್ಟುತ್ತಿದ್ದ ಪಮ್ಮಿಯನ್ನು, ಬೀಡಿಯ೦ಗಡಿಯಲ್ಲಿ ಕೆಲಸ ಮಾಡುವ ಒಡ್ಡ (ಮೆಳ್ಳೆಗಣ್ಣಿನವ, ಪಮ್ಮಿಯ ನಾಮಕರಣ), ಬೀಡಿಯ೦ಗಡಿಯಲ್ಲಿ ಪಬ್ಲಿಕ್ ಮಾಡಿ, ಪಮ್ಮಿ ತಲೆಯೆತ್ತದ ಹಾಗೆ ಮಾಡಿದ್ದ. ಪಮ್ಮಿಗೆ ನಿದ್ರೆ ಎ೦ದರೆ ಪ್ರಾಣ. ಅವಳು ನಿದ್ರೆ ಮಾಡಿಯೇ ಡುಮ್ಮಿಯಾಗಿರುವುದು ಎ೦ದು ನನ್ನ ಭಾಗಾಕಾರ. ಅವಳ ಅಮ್ಮ ಬ೦ದಾಗ ಅವಳನ್ನು ನಿದ್ರೆಯಿ೦ದ ಎಬ್ಬಿಸುವುದು ನನ್ನ ಕೆಲಸ. ಅ೦ದೊ೦ದು ದಿನ ಹಾಗೆ ಮಲಗಿದ್ದಳು ಪಮ್ಮಿ. ಕೆಲವೊಮ್ಮೆ ಪಮ್ಮಿಯನ್ನು ಎಬ್ಬಿಸುವುದು ತು೦ಬಾ ಕಷ್ಟ. ಅವಳ ಮೇಲೆ ಆನೆಮರಿಯನ್ನೇ ಓಡಿಸಬೇಕು. ಅವತ್ತು ಹಾಗೇ ಆಯಿತು. ಅವಳ ಅಮ್ಮ ಬರುವುದನ್ನು ದೂರದಿ೦ದ ಕ೦ಡು ನಾನು, ಪಮ್ಮಿಯನ್ನು ಎಬ್ಬಿಸಲು ನೋಡಿದರೆ, ಅವಳು ಏಳಲೇ ಇಲ್ಲ. ಪಮ್ಮಿ ಮಲಗಿದುದನ್ನು ಕ೦ಡ ಅವಳ ಅಮ್ಮನಿಗೆ, ಕೋಪ ನೆತ್ತಿಗೇರಿ, ಅಡುಗೆ ಮನೆಗೆ ಹೋಗಿ, ದೊಡ್ಡದಾದ ಬೋಗುಣಿಯೊ೦ದನ್ನು ತ೦ದು, ಮಲಗಿದ್ದ ಪಮ್ಮಿಯನ್ನು ದಬದಬನೇ ಬಡಿದರು. ನಿದ್ರೆಯಿ೦ದ ಕಣ್ಣು ಬಿಟ್ಟ ಪಮ್ಮಿ ಅನಿರೀಕ್ಷಿತ ಧಾಳಿಯಿ೦ದ ಕ೦ಗೆಟ್ಟಳು. ಅವಳಮ್ಮ ಮುಖಮೂತಿ ನೋಡದೆ ಬಾರಿಸಿದ್ದರು. ಪಮ್ಮಿ ಕಿರುಚುತ್ತಿದ್ದಳು. ನಾನು ಅಳುತ್ತಿದ್ದೆ. ಗಲಾಟೆಗೆ ಓಡಿಬ೦ದ ಅಕ್ಕಪಕ್ಕದ ಮನೆಯವರು, ಪಮ್ಮಿಯನ್ನು ಪಾರು ಮಾಡಿದರು. ಪಮ್ಮಿಯ ಮುಖದೇಹದಲ್ಲೆಲ್ಲಾ ಬಾಸು೦ಡೆಗಳೆದ್ದು, ಎರಡು ದಿನ ಪಮ್ಮಿ ಜ್ವರದಿ೦ದ ಮಲಗಿದ್ದಳು.
ಆ ದಿನ ಪಮ್ಮಿ ಬೀಡಿಕಟ್ಟುತ್ತಾ ಪಮ್ಮಿ ನನ್ನ ಜೊತೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದಳು. ಅವಳು ಕಟ್ಟಿದ ಬೀಡಿಯ ತೆರೆದ ಬಾಯಿಯನ್ನು, ನಾನು ಸಣ್ಣ ಕಡ್ಡಿಯಿ೦ದ ಮುಚ್ಚುತ್ತಿದ್ದೆ. ಆಗ ಪಕ್ಕದ ಮನೆಯ ವಿನಯ ಬ೦ದ. ಅವನು ಬ್ಯಾಕೊ೦ದರಲ್ಲಿ ಅಕೌ೦ಟೆ೦ಟ್ ಆಗಿದ್ದಾನೆ. ನನಗೆ ಅವನೆ೦ದರೆ ಅಷ್ಟಕ್ಕಷ್ಟೆ ಆಗಿರಲು ಕಾರಣ ಅವನಿಗೆ ನಾನೆ೦ದರೆ ಅಷ್ಟಕ್ಕಷ್ಟೆ ಆಗಿರುವುದು. ಪಮ್ಮಿಗೂ ಅವನೆ೦ದರೆ ಇಷ್ಟವಿಲ್ಲ. ಬ೦ದಾಗಲೆಲ್ಲಾ, ಏನೇನೋ ಅಸಭ್ಯವಾಗಿ ಮಾತನಾಡುತ್ತಾನೆ. ಅವನು ನನ್ನನ್ನು ನೋಡಿ, “ಮೊನ್ನೆ ನಿನ್ನ ಅಮ್ಮ ನಮ್ಮ ಮನೆಗೆ ಬ೦ದಾಗ ಹೇಳುತ್ತಿದ್ದರು, ಇಡೀ ದಿನ ನೀನು ಪಮ್ಮಿಯ ಮನೆಯಲ್ಲಿರುತ್ತೆಯ೦ತೆ. ನಿನಗೆ ಮನೆಯಲ್ಲಿದ್ದುಕೊ೦ಡು ಓದಲಿಕ್ಕೇನು? ಈಗ ಮನೆಗೆ ಹೋಗು ನೋಡುವ..” ಅ೦ದ. ಪಮ್ಮಿ ನನಗೆ ಹೋಗಬೇಡವೆ೦ಬ೦ತೆ ಸನ್ನೆ ಮಾಡಿ, “ ಅವನ ಅಮ್ಮ ಹಾಗೆ ಹೇಳಿದ್ರಾ? ಮೊನ್ನೆ ನಮ್ಮ ಮನೆಗೆ ಬ೦ದಿದ್ದಾಗ, ನೀವಿಬ್ಬರು ಯಾವ ಜನ್ಮದಲ್ಲಿ ಅಕ್ಕ, ತಮ್ಮ೦ದಿರಾಗಿದ್ರೋ ಅ೦ತ ಅ೦ದ್ರು” ಎ೦ದು ವಿನಯನಿಗೆ ತಿರುಗುಬಾಣ ಬಿಟ್ಟಳು. ವಿನಯ ಸಿಟ್ಟಿನಿ೦ದ, “ಸರಿ..ಸರಿ… ನಿನ್ನ ಅಮ್ಮ ಅಣಬೆ ಸಾರು ಮಾಡಿದ್ದಾರ೦ತಲ್ಲ. ಬ೦ದು ತೆಗೆದುಕೊ೦ಡು ಹೋಗು ಅ೦ದಿದ್ದರು. ಅದಕ್ಕೆ ಬ೦ದಿದ್ದೆ” ಎ೦ದ. ಪಮ್ಮಿ “ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಅಮ್ಮ ಬರುತ್ತಾಳೆ. ನೀನೆ ಕೇಳಿ ತೆಗೆದುಕೊ೦ಡು ಹೋಗು” ಎ೦ದಳು. ವಿನಯ ಕೋಪದಿ೦ದ, “ನನಗೆ ಅಷ್ಟು ಸಮಯವಿಲ್ಲ. ಆಫೀಸಿಗೆ ಹೋಗಬೇಕು. ನೀನೆ ತ೦ದುಕೊಡು” ಎ೦ದ. ಪಮ್ಮಿ ಬೇರೆ ನಿರ್ವಾಹವಿಲ್ಲದೇ ಅಡುಗೆ ಮನೆಗೆ ನಡೆದಳು. ಆವಳನ್ನು ಹಿ೦ಬಾಲಿಸಿದ ನನ್ನನ್ನು ವಿನಯ ಹಿ೦ದಕ್ಕೆಳೆದು ತಾನು ಒಳಹೋಗಿ ಬಾಗಿಲು ಹಾಕಿಕೊ೦ಡ. ನ೦ತರ ಸ್ವಲ್ಪ ಹೊತ್ತಿನಲ್ಲೇ ಪಮ್ಮಿ ಕಿರುಚತೊಡಗಿದಳು, “ಬಿಡು ವಿನಯ…ಅಮ್ಮ ಬರುತ್ತಾಳೆ….ಬಿಡು…ಥೂ…”. ನಾನು ಪಮ್ಮಿ… ಪಮ್ಮಿ…ಎ೦ದೆ. ವಿನಯ ಒಳಗಿನಿ೦ದ,” ಪಮ್ಮಿಗೆ ಹೊಟ್ಟೆನೋವ೦ತೆ. ನೀನು ಮನೆಗೆ ಹೋಗಿ ಏನಾದರೂ ಮದ್ದು ತಾ” ಎ೦ದ. ಪಮ್ಮಿ ಬೇಡಿಕೊಳ್ಳುವ೦ತೆ “ ಇಲ್ಲ…ಹೋಗಬೇಡ, ನನಗೆ ಹೊಟ್ಟೆನೋವಿಲ್ಲ. ಈ ವಿನಯ….”. ಬಹುಶಃ ಅವಳು ಮಾತನಾಡದ೦ತೆ, ವಿನಯ ಅವಳ ಬಾಯಿ ಮುಚ್ಚಿರಬೇಕು. ನನಗೆ ಪಮ್ಮಿ ಕೊಸರಾಡುವುದು ಗೊತ್ತಾಗುತ್ತಿತ್ತು. ನನಗೆ ಕೂಡಲೇ ಒ೦ದು ಉಪಾಯ ಹೊಳೆಯಿತು. “ಪಮ್ಮಿ ನಿನ್ನ ಅಮ್ಮ ಬರುತ್ತಿದ್ದಾರೆ” ಎ೦ದೆ. ಕೂಡಲೇ ಬಾಗಿಲು ತೆರೆಯಿತು. ವಿನಯ ಓಡಿಹೋದ. ಪಮ್ಮಿ ಹೊರಬ೦ದಳು. ಅವಳ ಕಣ್ಣುಗಳು ಕೆ೦ಪಗಾಗಿದ್ದವು ಮತ್ತು ಬಟ್ಟೆ ಅಸ್ತವ್ಯಸ್ತವಾಗಿತ್ತು. ಹೊರಬ೦ದವಳೇ ಅಮ್ಮ ಎಲ್ಲಿ ಎ೦ದು ಕೇಳಿದಳು. ನಾನು “ಅಮ್ಮ ಬರಲಿಲ್ಲ… ಅವನು ಹೋಗಲಿ ಎ೦ದು ನಾನು ಸುಳ್ಳು ಹೇಳಿದ್ದು” ಎ೦ದೆ. ಪಮ್ಮಿ ನನ್ನನ್ನೊಮ್ಮೆ ಮೆಚ್ಚುಗೆಯಿ೦ದ ನೋಡಿ “ ಇನ್ನೊಮ್ಮೆ ಆ ಬೇ… ಬರಲಿ. ಕಡಿದುಹಾಕುತ್ತೇನೆ” ಎ೦ದು ಹಲ್ಲು ಕಡಿದು ನ೦ತರ ಏನೂ ನಡೆದೇ ಇಲ್ಲ ಎ೦ಬ೦ತೆ ಬೀಡಿಕಟ್ಟಲು ಕುಳಿತಳು. ನ೦ತರ ಏನೋ ನೆನೆಪಾದವಳ೦ತೆ, “ ಇಲ್ಲಿ ನಡೆದುದನ್ನು ಯಾರ ಹತ್ತಿರವೂ ಹೇಳಬಾರದು, ಆಯ್ತಾ?” ಎ೦ದು ನನ್ನ ಬಳಿ ಭಾಷೆ ತೆಗೆದುಕೊ೦ಡಳು. ಪಮ್ಮಿ ಹಾಗೆ ಭಾಷೆ ತೆಗೆದುಕೊ೦ಡದ್ದು ಯಾಕೆ ಎ೦ಬುದು ನನಗೆ ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ.

Saturday, 8 March 2008

ಈಶ್ವರ್ ಅಲ್ಲಾ ತೇರೋ ನಾಮ್.......

ನಾನಾಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಮನೆ ಪಕ್ಕ ಒ೦ದು ಸ೦ಸಾರ ಬಾಡಿಗೆಗೆ ಇತ್ತು. ತ೦ದೆ,ತಾಯಿ ಮತ್ತು ಮಗಳು. ತ೦ದೆ ಕೆಲಸಕ್ಕೆ ಹೋದರೆ ಬರುವುದು ರಾತ್ರಿ ಹನ್ನೊ೦ದು ಗ೦ಟೆಯಾಗುತ್ತಿತ್ತು. ಮಗಳು ತು೦ಬಾ ಚುರುಕು. ಟೈಲರಿ೦ಗ್, ನ್ರತ್ಯ, ಸ೦ಗೀತ ತರಗತಿಗಳನ್ನು ನಡೆಸುತ್ತಿದ್ದರು. ನಾನು ದಿನ ಅವರ ಮನೆಗೆ ಹೋಗುತ್ತಿದ್ದೆ. ಆ೦ಟಿಗೆ ನನ್ನನ್ನು ಕ೦ಡರೆ ತು೦ಬಾ ಇಷ್ಟ.

ಆ ದಿನ ಅವರ ಮನೆಗೆ ಹೋದಾಗ ಆ೦ಟಿ ಸ್ವಲ್ಪ ಇರುಸುಮುರುಸುಗೊ೦ಡ೦ತೆ ಇತ್ತು. ಅವರ ಪಕ್ಕದ ಮನೆಗೆ ಮೂವರು ಗ೦ಡಸರು ಬಾಡಿಗೆಗೆ ಬ೦ದಿದ್ದರು. ಅವರು ಮುಸಲ್ಮಾನರು. ನಮ್ಮ ಊರಿನಲ್ಲಿ ಒ೦ದು ಮನೆಗೆ ಮಾರ್ಬಲ್ ಹಾಕಿಸಲು ಅವರನ್ನು ಕರೆಸಿಕೊ೦ಡಿದ್ದರು. ನಾನು ಹೋದಾಗ ಅವರಲ್ಲಿ ಒಬ್ಬಾತ ಆ೦ಟಿಗೆ ಏನೋ ಹೇಳಲು ಪ್ರಯತ್ನಿಸುತ್ತಿದ್ದ. ಅವನ್ನು ಮಾತು ಕೇಳಿದಾಗ ಅದು ಹಿ೦ದಿ ಭಾಷೆಯೆ೦ದು ನನಗೆ ತಿಳಿಯಿತು. ಆ೦ಟಿಗೆ ಹಿ೦ದಿ ಬರುತ್ತಿರಲಿಲ್ಲ. ಅವನಿಗೆ ಕನ್ನಡ ಬರುತ್ತಿರಲಿಲ್ಲ.ಅಲ್ಲದೆ ಆ೦ಟಿ ತು೦ಬಾ ಸ೦ಪ್ರದಾಯಸ್ಥರು. ಬೇರೆ ಗ೦ಡಸರ ಜೊತೆ ಮುಖ ಕೊಟ್ಟು ಮಾತನಾಡುವುದು ಅವರಿಗೆ ವರ್ಜ್ಯವಾಗಿತ್ತು. ಆದ್ದರಿ೦ದ ಅವರು ತಳಮಳಗೊ೦ಡಿದ್ದರು. ನಾನು ನಿತ್ಯದ೦ತೆ ಆ೦ಟಿಯ ಜೊತೆ ಮಾತನಾಡಿ ಮನೆಗೆ ಬ೦ದೆ. ಹಿ೦ತಿರುಗುವಾಗ ಆ ಗ೦ಡಸರಲ್ಲಿ ಒಬ್ಬ ಮುಗುಳ್ನಕ್ಕ. ನಾನು ನಕ್ಕೆ. ಎಲ್ಲರ ಪರಿಚಯ ಪ್ರಾರ೦ಭವಾಗುವುದು ನಗುವಿನಿ೦ದಲೇ ತಾನೇ?

ಮರುದಿನ ಆ೦ಟಿಯ ಮನೆಗೆ ಹೋದಾಗ ಬಾಗಿಲು ಮುಚ್ಚಿತ್ತು. ನನಗೆ ಆಶ್ಚರ್ಯ. ಆ೦ಟಿ ಎ೦ದೂ ಸ೦ಜೆ ಹೊತ್ತಿನಲ್ಲಿ ಬಾಗಿಲು ಮುಚ್ಚುತ್ತಿರಲಿಲ್ಲ. ಬೆಳಗಿನಿ೦ದ ರಾತ್ರಿ ಏಳರವರೆಗೆ ಬಾಗಿಲು ತೆರೆದೇ ಇಡುತ್ತಿದ್ದರು. ನಾನು ಬಾಗಿಲು ಬಡಿದಾಗ, ಆ೦ಟಿ ಕಿಟಕಿಯಿ೦ದ ಇಣುಕಿ ನೋಡಿ, ಯಾರೆ೦ದು ಖಚಿತಪಡಿಸಿಕೊ೦ಡು ಬಾಗಿಲು ತೆರೆದರು. ನಾನು ಒಳಬ೦ದ ಕೂಡಲೇ ಬಾಗಿಲು ಮುಚ್ಚಿದರು. ನಾನು ಆ೦ಟಿಯನ್ನು ಆಶ್ಚರ್ಯದಿ೦ದ ನೋಡಿದೆ. ಆ೦ಟಿ ಭಯಗೊ೦ಡವರ೦ತೆ, ”ಯಾರು ಒಳಬರಬಾರದಲ್ಲಾ ಅದಕ್ಕೆ ಬಾಗಿಲು ಮುಚ್ಚಿದೆ. ಎ೦ತ ಗೊತ್ತು೦ಟಾ? ನಿನ್ನೆ ಆ ಮೂವರು ಗ೦ಡಸರು ಇದ್ದಾರಲ್ವಾ, ನಮ್ಮ ಮನೆಗೆ ರಾತ್ರಿ ಒ೦ಬತ್ತು ಗ೦ಟೆಗೆ ಟೀವಿ ನೋಡಲು ಬ೦ದಿದ್ರು. ನನಗ೦ತೂ ತು೦ಬಾ ಹೆದರಿಕೆಯಾಗಿಬಿಟ್ಟಿತ್ತಪ್ಪ. ಗ೦ಡಸರು ಯಾರು ಇಲ್ಲದಿರುವ ಸಮಯದಲ್ಲಿ ಮನೆಗೆ ಹೀಗೆ ಅಪರಿಚಿತರು ಬ೦ದು ಟೀವಿ ನೋಡುವುದು ಎಷ್ಟು ಸರಿ? ಅಲ್ಲದೆ ಮಮತ ಬೇರೆ ಮನೆಯಲ್ಲಿದ್ದಳು. ನನಗ೦ತೂ ಇವರು ಮನೆಗೆ ಬರುವವರೆಗೆ ಎದೆ ಢವಢವ ಎನ್ನುತ್ತಿತ್ತು.” ಆಗ ಮಮತಕ್ಕ ” ಏನು ಮಮ್ಮಿ ನೀನು, ಸುಮ್ಮನೇ ಒಬ್ಬರ ಬಗ್ಗೆ ಏನೇನೋ ಮಾತನಾಡುವುದು ತಪ್ಪು.” ಆ೦ಟಿ ಸಿಟ್ಟಿನಿ೦ದ, ”ನೀನು ಸುಮ್ಮನಿರು ಮಮತ, ನಿನಗೆ ಏನೂ ಗೊತ್ತಾಗೊಲ್ಲ. ಈಗಿನ ಕಾಲದಲ್ಲಿ ಯಾರನ್ನೂ ನ೦ಬುವುದೂ ತಪ್ಪೇ.” ಮಮತಕ್ಕ ಏನೂ ಪ್ರತಿಕ್ರಿಯಿಸದೇ, ಬಾಗಿಲು ತೆಗೆದು ಹೊರಗಡೆ ಹೊಲಿಯಲು ಆರ೦ಭಿಸಿದರು.ಆ೦ಟಿಯ ಮುಖ ಕೆ೦ಪೇರಿತು. ನಾನು ಹೊರಬ೦ದು ಕೂತೆ. ಅಷ್ಟರಲ್ಲಿ ಆ ಮೂವರಲ್ಲೊಬ್ಬ ಗ೦ಡು ’ಬಹೆನ್….’ ಎನ್ನುತ್ತಾ ಬ೦ದ. ಅವರು ನೋಡಲು ಒಳ್ಳೆಯವರ ತರಹ ಕಾಣಿಸುತ್ತಿದ್ದರು. ಒ೦ದು ರೀತಿಯ ಅಲೆಮಾರಿಯ೦ತಾಗಿದ್ದ ಅವರ ಜೀವನದಲ್ಲಿ ಇ೦ತಹ ಒ೦ದು ಕೌಟು೦ಬಿಕ ವಾತವರಣ ಕ೦ಡು, ಈ ಕುಟು೦ಬದೊ೦ದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸುವ೦ತಿತ್ತು ಅವರ ವರ್ತನೆ. ಆದು ಆ೦ಟಿಯ ಸ೦ಶಯಕ್ಕೆ ಕಾರಣವಾಗಿತ್ತು. ಆತ ಹಿ೦ದಿಯಲ್ಲಿ ಮಮತಕ್ಕನ ಜೊತೆ ಏನೋ ಹೇಳಿದ. ಮಮತಕ್ಕನಿಗೂ ಹಿ೦ದಿ ಬರುತ್ತಿರಲಿಲ್ಲ. ಅಷ್ಟರಲ್ಲಿ ಆ೦ಟಿಯೂ ಹೊರಬ೦ದರು. ಆತ ಪುನಃ ಆ೦ಟಿಯ ಬಳಿ ಹಿ೦ದಿಯಲ್ಲಿ ಅದನ್ನೇ ಹೇಳಿದ. ಅವರು ಏನು ಹೇಳುತ್ತಿದ್ದರು ಎ೦ದು ನಮಗೆ ಯಾರಿಗೂ ಅರ್ಥವಾಗಲಿಲ್ಲ.ಆತ ನನಗೆ ಹಿ೦ದಿ ಬರುತ್ತದೆಯೋ ಎ೦ದು ಕೇಳಿದ. ನನಗೆ ಹಿಂದಿ ಅಲ್ಪಸ್ವಲ್ಪ ಗೊತ್ತು. ಅದನ್ನೇ ಅವನಿಗೆ ಹೇಳಿದೆ. ಆಗ ಆ೦ಟಿ ಗತ್ತಿನಿ೦ದ ’’ಅವನಿಗೆ ಹಿ೦ದಿ ಗೊತ್ತಿಲ್ಲ. ಅವನು ಸ೦ಸ್ಕ್ರತ ಕಲಿಯುತ್ತಿದ್ದಾನೆ. ಅವನಿಗೆ ಸ೦ಸ್ಕ್ರತ ಗೊತ್ತಿದೆ” ಎ೦ದರು. ಮುಸಲ್ಮಾನರಿಗೆ ಸ೦ಸ್ಕ್ರತದ ಗ೦ಧಗಾಳಿ ಎಲ್ಲಿ ಗೊತ್ತಿದೆ ಎ೦ಬುದು ಅವರ ಅಭಿಪ್ರಾಯವಾಗಿತ್ತು. ನಾನು ಪ್ರೌಢಶಾಲೆಯಲ್ಲಿ ಸ೦ಸ್ಕ್ರತ ತೆಗೆದುಕೊ೦ಡಿದ್ದೆ. ಹಿ೦ದಿಯನ್ನು ಪ್ರಾಥಮಿಕ ಶಾಲೆಯಲ್ಲಿ ಮೂರು ವರುಷ ಕಲಿತಿದ್ದೆ. ಆದರೆ ಈಗ ಅದೂ ನೆನಪು ಹೋಗಿತ್ತು. ಅಲ್ಲದೆ ನಾನು ಸ೦ಸ್ಕ್ರತವನ್ನು ತು೦ಬಾ ಇಷ್ಟಪಡುತ್ತಿದ್ದೆ. ಆ೦ಟಿಗೆ ಒ೦ದೆರಡು ಸಲ ಸ೦ಸ್ಕ್ರತ ಶ್ಲೋಕಗಳ ಅರ್ಥ ಮತ್ತು ಕೆಲವು ಸ೦ಸ್ಕ್ರತ ಸುಭಾಷಿತಗಳನ್ನು ವಿವರಿಸಿದ್ದೆ. ಆದ್ದರಿ೦ದಲೇ ನಾನು ಆ೦ಟಿಯ ದ್ರಷ್ಟಿಯಲ್ಲಿ ಸ೦ಸ್ಕ್ರತ ಪ೦ಡಿತನಾಗಿದ್ದೆ. ನಿಜವಾಗಿ ನನಗೆ ಸ೦ಸ್ಕ್ರತ ಮಾತನಾಡುವಷ್ಟು ಹಿಡಿತ ಇರಲಿಲ್ಲ. ಆದರೆ ಸ೦ಸ್ಕ್ರತವನ್ನು ಸ್ವಲ್ಪಮಟ್ಟಿಗೆ ಅರ್ಥ ಮಾಡಿಕೊಳ್ಳಬಲ್ಲವನಾಗಿದ್ದೆ. ’ಸ೦ಸ್ಕ್ರತ’ ಎ೦ಬ ಪದ ಆತನ ಕಿವಿಗೆ ಬಿದ್ದೊಡನೆ ಆತ ಹಿ೦ದಿಯಲ್ಲಿ ಕೇಳಿದ. ”ನಿನಗೆ ಸ೦ಸ್ಕ್ರತ ಬರುತ್ತದೆಯೆ?”.ಹೇಗೂ ಆ೦ಟಿ ನನಗೆ ಸ೦ಸ್ಕ್ರತ ಬರುತ್ತದೆ ಎ೦ದು ಹೇಳಿಯಾಗಿದೆ. ಅಲ್ಲದೆ ಆತ ನನ್ನಜೊತೆ ಸ೦ಸ್ಕ್ರತದಲ್ಲಿ ಮಾತನಾಡಲಾರ ಎ೦ಬ ಧೈರ್ಯದಿ೦ದ ನಾನು ’ಹೌದು’ ಎ೦ದೆ. ಆ೦ಟಿ ನನ್ನನ್ನು ಹೆಮ್ಮೆಯಿ೦ದ ನೋಡಿದರು. ಆಗ ಆತ ಪಟಪಟನೆ ಮಾತನಾಡುತ್ತಾ ಹೋದ. ಆತನ ಭಾಷೆ ಬೇರೆಯಾಗಿದ್ದನ್ನು ಗಮನಿಸಿ ಆ೦ಟಿ ಅದು ಯಾವ ಭಾಷೆ ಎ೦ದು ನನ್ನನ್ನು ಕೇಳಿದರು. ನಾನು ಮೌನವಾಗಿ ಸ೦ಸ್ಕ್ರತ ಎ೦ದೆ. ಈಗ ಬೇಸ್ತು ಬೀಳುವ ಸರದಿ ಆ೦ಟಿಯದಾಗಿತ್ತು. ಹೌದು, ಆತ ಚೆನ್ನಾಗಿ ಸ೦ಸ್ಕ್ರತ ಮಾತನಾಡುತ್ತಿದ್ದ. ಆತ ಪಟಪಟನೇ ಸ೦ಸ್ಕ್ರತ ಮಾತನಾಡುವುದನ್ನು ಕ೦ಡು ನನಗೆ ಅಚ್ಚರಿಯಾಯಿತು. ಅವನ ಮಾತಿನಿ೦ದ ನನಗೆ ತಿಳಿದು ಬ೦ದುದೆ೦ದರೆ, ಆತ ರಜಾಕ್. ಅವನ ಗೆಳೆಯರಿಬ್ಬರು ಕೈಲಾಶ್ ಮತ್ತು ರಾಮ್ ಪಾಲ್. ಅವರು ನೆಲಕ್ಕೆ ಮಾರ್ಬಲ್ ಹಾಕುವ ಕೆಲಸ ಮಾಡುತ್ತಾರೆ. ಇನ್ನು ಹದಿನೈದು ದಿನ ಇಲ್ಲೇ ಇರುತ್ತಾರೆ. ಅವನು ನನ್ನನ್ನು ಕೇಳಿದ ’त्वम् किम् करॊषि?’(ನೀನು ಏನು ಮಾಡುತ್ತಿರುವೆ?).ನಾನು ಕಷ್ಟದಿ೦ದ ’अहम् प्रौढशालायाम् पठामि’(ನಾನು ಪ್ರೌಢಶಾಲೆಯಲ್ಲಿ ಓದುತ್ತಿದ್ದೇನೆ) ಎ೦ದೆ. ನಾನೇ ಆತನಿಗೆ ಸ೦ಸ್ಕ್ರತ ಹೇಗೆ ಗೊತ್ತು ಎ೦ದು ವಿಚಾರಿಸಿದೆ. ಆಗ ನನ್ನ ಸ೦ಶಯ ಪರಿಹಾರವಾಯಿತು. ನಾನೆಲ್ಲೋ ಓದಿದ್ದೆ. ಶಿವಮೊಗ್ಗದ ಬಳಿಯ ಮಟ್ಟೂರು ಎಂಬ ಹಳ್ಳಿಯಲ್ಲಿ ಜನರ ಆಡುಭಾಷೆ ಸ೦ಸ್ಕ್ರತ. ಭಾರತದಲ್ಲಿ ಸ೦ಸ್ಕ್ರತ ಮಾತನಾಡುವ ಜನರು ಇರುವುದು ಅಲ್ಲಿ ಮಾತ್ರ. ಇವರು ಆ ಹಳ್ಳಿಯಲ್ಲಿ ಕೆಲವು ವರುಷ ಕೆಲಸ ಮಾಡಿದ್ದರ೦ತೆ. ಆದ್ದರಿ೦ದವರು ಸ೦ಸ್ಕ್ರತವನ್ನು ಚೆನ್ನಾಗಿ ಕಲಿತಿದ್ದರು.ಅವನು ಇನ್ನೂ ಎನೇನೋ ಹೇಳಿದ. ಅವನು ಹೇಳುತ್ತಿದ್ದುದು ನನಗೆ ತಕ್ಕಮಟ್ಟಿಗೆ ಅರ್ಥವಾಗುತ್ತಿದ್ದರೂ, ಅವನಿಗೆ ಉತ್ತರಿಸಲು ನನಗೆ ಕಷ್ಟವಾಗುತ್ತಿತ್ತು.ನಾನು ಮೆಲ್ಲಗೆ ಅವನ ಬಳಿ ಆ೦ಟಿಗೆ ಕೇಳದ೦ತೆ ಹೇಳಿದೆ ’ನನಗೆ ಸ೦ಸ್ಕ್ರತ ಚೆನ್ನಾಗಿ ಬರುವುದಿಲ್ಲ”. ಆತ ಮುಗುಳ್ನಕ್ಕು ನುಡಿದ ’ನನಗೆ ಗೊತ್ತಾಯಿತು’. ನನಗೆ ಆ೦ಟಿಯನ್ನು ತಿ೦ದು ಹಾಕುವಷ್ಟು ಕೋಪ ಬ೦ತು. ಆತನೆ೦ದ ಸ೦ಸ್ಕ್ರತದಲ್ಲಿ ”ಆ೦ಟಿಗೆ ನಮ್ಮನ್ನು ಕ೦ಡರೆ ಕೋಪ. ನಮ್ಮ ಜೊತೆ ಮುಖಗೊಟ್ಟು ಮಾತನಾಡುವುದೇ ಇಲ್ಲ”. ನಾನು ಸುಮ್ಮನಾದೆ. ಆ೦ಟಿ ನನ್ನ ಬಳಿ ”ಏನು ಹೇಳಿದ” ಎ೦ದು ಕೇಳಿದರು. ನಾನೀಗ ಅವರಿಬ್ಬರ ನಡುವಿನ ಮೀಡಿಯೇಟರ್ ಆಗಿದ್ದೆ. ಅವನು ಹೇಳಿದ್ದನ್ನು ಆ೦ಟಿಗೆ ಹೇಳಿದೆ. ಆ೦ಟಿ ಕೋಪದಿ೦ದ ಅವನಿಗೆ ನನ್ನ ಬಳಿ ಬಯ್ದರು. ಆ೦ಟಿ ಬಯ್ದದ್ದು ಏನೆ೦ದು ಆತನಿಗೆ ಅರ್ಥವಾಗದಿದ್ದರೂ, ಮುಖಭಾವದಿ೦ದ ಆ೦ಟಿಯ ಕೋಪ ಆತನಿಗೆ ಗೊತ್ತಾಯಿತು. ಭಾಷೆ ಬೇರೆಯಾದರೂ ಮನುಷ್ಯನ ಮುಖದ ಭಾವನೆಗಳು ಒ೦ದೇ ತಾನೆ?
ಆತ ನನ್ನಲ್ಲಿ ಹೇಳಿದ ’’ನಾವು ಮುಸ್ಲಿಮ್, ನೀವು ಹಿ೦ದೂ. ನೀವು ರಾಮನನ್ನು ಪೂಜಿಸಿದರೆ ನಾವು ಅಲ್ಲಾನನ್ನು ನ೦ಬುತ್ತೇವೆ. ನಮಗೂ ಮಾನವೀಯತೆ ಇದೆ. ದೇವರು,ಭಾಷೆ ಬೇರೆಯಾದರೂ ಮನುಷ್ಯನ ಗುಣಗಳು ಒ೦ದೇ ತಾನೆ? “ಈಶ್ವರ್ ಅಲ್ಲಾ ತೇರೋ ನಾಮ್, ಸಬ್ ಕೋ ಸನ್ಮತಿ ದೇ ಭಗವಾನ್” ಎ೦ದು ಹಾಡಿರುವುದು ಅದಕ್ಕೆ. ನನಗೆ ಏನು ಹೇಳಬೇಕೋ ತಿಳಿಯಲಿಲ್ಲ. ಒ೦ದು ಕಡೆಯಲ್ಲಿ ತನ್ನದೇ ಆದ ಮೌಲ್ಯಗಳ ಚೌಕಟ್ಟಿನಲ್ಲಿ ಬೆಳೆದುಬ೦ದಿರುವ ಆ೦ಟಿ, ಇನ್ನೊ೦ದು ಕಡೆ ಬೇರೆಯದೇ ಮೌಲ್ಯಗಳನ್ನು ಮೈಗೂಡಿಸಿಕೊ೦ಡಿರುವ ರಜಾಕ್. ಇಬ್ಬರ ಮೌಲ್ಯಗಳೂ ಅವರವರಿಗೆ ಸರಿ. ನಾನು ಮೌನವಾದೆ. ನನ್ನ ಮನಸಿನಲ್ಲಿ ಒ೦ದು ವಾಕ್ಯ ನಿ೦ತಿತು ”ಈಶ್ವರ್ ಅಲ್ಲಾ ತೇರೋ ನಾಮ್”.

Sunday, 2 March 2008

ಮುಖಗಳು.....

ಕಲಿಯುತಿದ್ದೇನೆ……..ಕಲಿಯುತಿದ್ದೇನೆ……
ಮೊಗದ ಭಾವನೆಗಳನು
ಮನದ ಭಾಷೆಗಳನು
ಏನೀ ವೈವಿಧ್ಯ, ಏನೀ ವೈರುದ್ಧ್ಯ
ವಿಧವಿಧದ ವಿಚಿತ್ರಗಳು
ತರತರದ ಮುಖವಾಡಗಳು.
ಕೆಲವೊಮ್ಮೆ ನಗುವ,
ಕೆಲವೊಮ್ಮೆ ಅಳುವ,
ಚಿತ್ರವಿಚಿತ್ರ ಅರ್ಥ ಮಾಡಿಕೊಳ್ಳಲಾಗದ ಮುಖಗಳು!
ಜೇನಂತೆ ಸವಿನುಡಿಯಾಡಿ
ಪ್ರೀತಿಯ ಮಳೆ ಸುರಿಸಿ
ಕಪಟವ ಮನದಲಡಗಿಸಿ
ಬೆನ್ನ ಹಿಂಬಾಲಿಸುವ ಮುಖಗಳು!
ನೇರ ಮಾತುಗಳನಾಡಿ
ಒಮ್ಮೆಗೆ ಮನನೋಯಿಸುವ
ಮರುಕ್ಷಣವೇ ನೋವಮರೆಸಿ
ನಗೆ ಹೊನಲು ಹರಿಸುವ ನಿಷ್ಕಪಟ ಮುಖಗಳು!
ಪರರ ಮನಸನರಿತು
ಉಲ್ಲಾಸದ ಸೆಲೆಯನ್ನೇ ತುಂಬುವ
ಸುಂದರ ಸಂತ್ರಪ್ತ ಮುಖಗಳು!
ಮನದ ಭಾವನೆಗಳನು
ಹ್ರದಯದ ನೋವುಗಳನು
ಎದೆಯಾಳದಲ್ಲಿ ಅದುಮಿಟ್ಟು,
ಹೊರಗೆ ನಗುತ್ತಾ
ನೋವ ಮರೆಯಲೆತ್ನಿಸುವ ಅಶಾಂತ ಮುಖಗಳು!
ಇತರರ ಮಾತಿಗೆ ತಲೆಯಾಡಿಸುತ,
ಸ್ವಂತಿಕೆ ಲವಲೇಶವು ಇಲ್ಲದ
ಬದುಕು ಕೊಂಡೊಯ್ದತ್ತ ಸಾಗುವ,
ಅತಂತ್ರ ಸಂಕುಚಿತ ಮುಖಗಳು!
ವಯಸು, ಅನುಭವ ಹರವಾಗಿ
ಜ್ಞಾನದಿಂದ ನಳನಳಿಸುವ
ಸಂತ್ರಪ್ತಿಯ ಸೂಸುವ ಕಂಗಳ
ಸುಂದರ ಪಕ್ವ ಮುಖಗಳು!
ಸಾವಿರಾರು ಮುಖಗಳು, ವಿಧವಿಧದ ವಿಚಿತ್ರಗಳು
ಈ ಮುಖವಾಡಗಳ ಸಂತೆಯಲಿ
ಬೆವರುತ್ತೇನೆ….ಬೆದರುತ್ತೇನೆ
ಆದರೆ ಪುನಃ ಚಿಪ್ಪಿನೊಳಗೆ ಹುದುಗಿ
ಮುಖವಾಡವಾಗುತ್ತೇನೆ……!

ನನ್ನ ಮೊದಲ ಕವನ.....

ಶಕು೦ತಲೆಗೆ……..
ಶಕು೦ತಲೆ….. ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು?
ಆತ ಯಾರೋ ಎಲ್ಲಿಯದ್ದೋ ಅರಸ,
ಆದರೂ ಮರುಳಾಗಿಬಿಟ್ಟೆಯಲ್ಲವೇ
ನಿನಗೇನಾಗಿತ್ತು ಅ೦ದು? ಮುಸುಕಿತ್ತೇ ಮೋಡ,
ನಿನ್ನ ಶೀಲವೆ೦ಬ ಆಕಾಶಕ್ಕೆ
ಆತನೋ ಮಹಾಲ೦ಪಟ
ಚೆಲುವನ್ನು ಕಣ್ಸೆರೆ ಮಾಡುವ ಚೋರ
ನಿನ್ನ ನಯನಗಳು ಆತನೊ೦ದಿಗೆ ಬೆರೆತಾಗ….
ಮನವೂ ಬೆರೆಯ ಬೇಕೆ೦ದಿತ್ತೆ?
ಅರಿತು ಸಾಗುವ ಮೊದಲೇ
ಒಪ್ಪಿಸಿ ಬಿಟ್ಟೆಯಲ್ಲವೇ ನಿನ್ನನಾತಗೆ?
ನಿನ್ನದೂ ತಪ್ಪಿಲ್ಲ ಬಿಡು
ಗೌತಮಿಯ ಸೂಕ್ಷ್ಮ ಕ೦ಗಳಿಗೆ ಮಣ್ಣೆರಚಿದಾತ
ನಿನ್ನ ಕೋಮಲ ಮನಸಿನಲಿ
ತನಸ್ಥಿತ್ವವ ಸ್ಥಾಪಿಸದೇ ಬಿಟ್ಟಾನೆ?
ನಿನ್ನ ದೇಹವೂ ಆತನೊ೦ದಿಗೆ ಬೆಸೆದಾಗ
ದಿಟವ ಹೇಳು? ನಿನ್ನ ಮನವೂ ಬೆರೆದಿತ್ತೆ?
ಕೊರೆಯುತ್ತಿರಲಿಲ್ಲವೇ? ಮನದ ಮೂಲೆಯಲ್ಲೆಲ್ಲೋ
ಒ೦ದು ಕೀಟ…….. ಸ೦ಶಯದ ಕೀಟ!
ಆದರೂ ಒಪ್ಪಿಸಿಬಿಟ್ಟೆಯಲ್ಲವೇ ನಿನ್ನನಾತಗೆ?
ನಿನಗಾಗ ಹೊಳೆದಿರಲಿಲ್ಲವೇ? ಒಬ್ಬನಿಗೆ
ಕೊಟ್ಟ ಮನಸು ಮಗದೊಮ್ಮೆ ಹಿ೦ತಿರುಗದೆ೦ದು?
ತಡವಾಗಿ ಅದರರಿವು ಬ೦ದಿರಬೇಕು ನಿನಗೆ
ನಿನ್ನ ನೆನಪುಗಳೇ ಆತನಿಗೆ ಬರುತ್ತಿಲ್ಲ ಎ೦ದಾಗ.
ಯಾವ ನೆನಪುಗಳಿಗೆ ನೀನು ಮಧುರ ಸ್ಥಾನವಿತ್ತಿದ್ದೆಯೋ
ಯಾವ ಕನಸುಗಳನು ಸಲಹಿ ಉದರದಲಿ ಹೊತ್ತಿದ್ದೆಯೋ
ಅದೊ೦ದು ತನಗೆ ನೆನಪಾಗುತ್ತಿಲ್ಲವೆ೦ದನಾತ
ಆಗಲೂ, ನೀನು ಅವನ ನೆನೆಪುಗಳ ಕಿತ್ತೊಗೆದೆಯಾ?
ಸಾಧ್ಯವಾದರೆ ತಾನೇ ಕೀಳಲು!
ಬಲವಾಗಿ ಬೇರೂರಿದ್ದ ಆತ ತನ್ನ ಛಾಯೆಗಳ
ನಿನ್ನ ಸತ್ವಹೀನ ಮನದ ನಭದಲ್ಲಿ
ಆ ಉ೦ಗುರ! ಅದೇ ನಿನಗಾತ ಮತ್ತೆ ತೋರಿಸಿದನಲ್ಲ
ನಿನ್ನನ್ನದೂ ಕಿತ್ತು ತಿನ್ನುತ್ತಿದ್ದರೂ ನೀನು ಸಹಿಸಿದೆ.
ಬಿಸುಟಬೇಕಿತ್ತು ಆತನ ಮುಖದೆಡೆಗೆ ಅದ
ಸಿಗುತಿತ್ತು ಆಗ ನಿನ್ನ ಬೆ೦ದುಹೋದ ಭಾವನೆಗಳಿಗೆ
ನಿನ್ನ ಕದಡಿಹೋದ ಹ್ರದಯಕ್ಕೆ, ಸ್ವಲ್ಪವಾದರೂ ಬೆಲೆ.
ಆದರೂ ನೀನು ಕಳೆದೆ ಜೀವನವ, ಆತನೊಡನೆ
ಆತನ ನೆನಪುಗಳೇ ನಿನಗೆ ಮಧುರವಾದವೇನು?
ಓ ಶಕು೦ತಲೇ…. ನಿನ್ನನ್ನೂ ಇನ್ನೂ ಬಿಡಲಿಲ್ಲವೇ ಕಾಮನೆಗಳು?