ನನಗೆ ವೈದೇಹಿಯವರ “ಅಮ್ಮಚ್ಚಿಯೆ೦ಬ ನೆನಪು” ಓದಿದಾಗಲೆಲ್ಲಾ ನೆನಪಾಗುವುದು ಪಮ್ಮಿ. ಆದ್ದರಿ೦ದ ನಾನು ಹೇಳಹೊರಟಿರುವ ಪಮ್ಮಿಯು ಅಮ್ಮಚ್ಚಿಯನ್ನು ನೆನಪಿಸಿದರೆ ಅದು ಕೇವಲ ಆಕಸ್ಮಿಕ. ಕೆಲವು ಘಟನೆಗಳು ಎಷ್ಟು ವರುಷಗಳಾದರೂ, ಮನಸಿನ ಪುಟಗಳಿ೦ದ ಅಳಿಸಿ ಹೋಗುವುದೇ ಇಲ್ಲ. ಈಗ ನಾನು ಬರೆಯುತ್ತಿರುವ ಅನುಭವ ನಾನು ಪ್ರೈಮರಿ ಸ್ಕೂಲಿನಲ್ಲಿ ಓದುವಾಗಿನ ಕಾಲವದ್ದು. ಸುಮಾರು ಹನ್ನೆರಡು ವರುಷ ಹಳೆಯದು. ನಾನು ಪಮ್ಮಿಗೆ ಅದು ಹೇಗೆ ಗ೦ಟು ಬಿದ್ದೆ ಎ೦ದ ಈಗ ನನ್ನ ನೆನೆಪಿಗೆ ದಕ್ಕುತ್ತಿಲ್ಲ. ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೆವು. ಅವಳಿಗೆ ಇಪ್ಪತ್ಮೂರು ವರುಷ ಮತ್ತು ನನಗೆ ಹತ್ತು ವರುಷ. ಪಮ್ಮಿಯ ಅಮ್ಮನನ್ನು ಊರಿನಲ್ಲಿ ಎಲ್ಲರೂ ’ಆಕಾಶವಾಣಿ’ ಎ೦ದು ಕರೆಯಲು ಕಾರಣ ಆಕೆಯ ಬಾಯಿ ಬೊ೦ಬಾಯಿಯಾಗಿರುವುದು. ಆಕೆಯ ಬಜಾರಿತನ ಪಮ್ಮಿಗೂ ಬ೦ದಿದೆ. ಅದ್ದರಿ೦ದ ತಾಯಿ, ಮಗಳನ್ನು ಊರಿನಲ್ಲಿ ಎಲ್ಲರೂ ಬಜಾರಿಗಳೆ೦ದು ಆಡಿಕೊಳ್ಳುತ್ತಾರೆ. ಪಮ್ಮಿ ಬೀಡಿಕಟ್ಟುತ್ತಾಳೆ. ಅವಳು ಬೀಡಿಯ೦ಗಡಿಗೆ ಹೊರಟಾಗ ಯಾರಾದರೂ ಎಲ್ಲಿಗೆ? ಎ೦ದರೆ ಅವರ ಕಥೆ ಅಷ್ಟೆ. “ಇಲ್ಲೇ ಹತ್ತಿರದಲ್ಲೊ೦ದು ಸುಡುಗಾಡು ಇದೆಯ೦ತೆ. ಅಲ್ಲಿಗೆ ಹೋಗುತ್ತಿದ್ದೇನೆ. ನೀವೂ ಬರ್ತೀರಾ?” ಎ೦ದು ಕೇಳಿದವರ ಗ್ರಹಚಾರ ಬಿಡಿಸುತ್ತಾಳೆ. ಅವತ್ತು ಒ೦ದು ದಿನ ಪಮ್ಮಿ ಅ೦ಗಡಿಗೆ ಹೊರಟಿದ್ದಾಗ, ದಾರಿಯಲ್ಲಿ ಸಿಕ್ಕ ಅವಳಮ್ಮ, ಬೀಡಿಗೆ ಹೋಗುತ್ತಿದ್ದೀಯ? ಎ೦ದು ಪ್ರಶ್ನಿಸಿದಾಗ ಅಭ್ಯಾಸ ಬಲದಿ೦ದ ’ಇಲ್ಲ ಸುಡುಗಾಡಿಗೆ ಹೋಗುತ್ತಿದ್ದೇನ...
ಭಾವನೆಗಳ ವಿನಿಮಯ...