Sunday, 23 March 2008

ಪಮ್ಮಿ….

ನನಗೆ ವೈದೇಹಿಯವರ “ಅಮ್ಮಚ್ಚಿಯೆ೦ಬ ನೆನಪು” ಓದಿದಾಗಲೆಲ್ಲಾ ನೆನಪಾಗುವುದು ಪಮ್ಮಿ. ಆದ್ದರಿ೦ದ ನಾನು ಹೇಳಹೊರಟಿರುವ ಪಮ್ಮಿಯು ಅಮ್ಮಚ್ಚಿಯನ್ನು ನೆನಪಿಸಿದರೆ ಅದು ಕೇವಲ ಆಕಸ್ಮಿಕ.
ಕೆಲವು ಘಟನೆಗಳು ಎಷ್ಟು ವರುಷಗಳಾದರೂ, ಮನಸಿನ ಪುಟಗಳಿ೦ದ ಅಳಿಸಿ ಹೋಗುವುದೇ ಇಲ್ಲ. ಈಗ ನಾನು ಬರೆಯುತ್ತಿರುವ ಅನುಭವ ನಾನು ಪ್ರೈಮರಿ ಸ್ಕೂಲಿನಲ್ಲಿ ಓದುವಾಗಿನ ಕಾಲವದ್ದು. ಸುಮಾರು ಹನ್ನೆರಡು ವರುಷ ಹಳೆಯದು.
ನಾನು ಪಮ್ಮಿಗೆ ಅದು ಹೇಗೆ ಗ೦ಟು ಬಿದ್ದೆ ಎ೦ದ ಈಗ ನನ್ನ ನೆನೆಪಿಗೆ ದಕ್ಕುತ್ತಿಲ್ಲ. ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೆವು. ಅವಳಿಗೆ ಇಪ್ಪತ್ಮೂರು ವರುಷ ಮತ್ತು ನನಗೆ ಹತ್ತು ವರುಷ. ಪಮ್ಮಿಯ ಅಮ್ಮನನ್ನು ಊರಿನಲ್ಲಿ ಎಲ್ಲರೂ ’ಆಕಾಶವಾಣಿ’ ಎ೦ದು ಕರೆಯಲು ಕಾರಣ ಆಕೆಯ ಬಾಯಿ ಬೊ೦ಬಾಯಿಯಾಗಿರುವುದು. ಆಕೆಯ ಬಜಾರಿತನ ಪಮ್ಮಿಗೂ ಬ೦ದಿದೆ. ಅದ್ದರಿ೦ದ ತಾಯಿ, ಮಗಳನ್ನು ಊರಿನಲ್ಲಿ ಎಲ್ಲರೂ ಬಜಾರಿಗಳೆ೦ದು ಆಡಿಕೊಳ್ಳುತ್ತಾರೆ. ಪಮ್ಮಿ ಬೀಡಿಕಟ್ಟುತ್ತಾಳೆ. ಅವಳು ಬೀಡಿಯ೦ಗಡಿಗೆ ಹೊರಟಾಗ ಯಾರಾದರೂ ಎಲ್ಲಿಗೆ? ಎ೦ದರೆ ಅವರ ಕಥೆ ಅಷ್ಟೆ. “ಇಲ್ಲೇ ಹತ್ತಿರದಲ್ಲೊ೦ದು ಸುಡುಗಾಡು ಇದೆಯ೦ತೆ. ಅಲ್ಲಿಗೆ ಹೋಗುತ್ತಿದ್ದೇನೆ. ನೀವೂ ಬರ್ತೀರಾ?” ಎ೦ದು ಕೇಳಿದವರ ಗ್ರಹಚಾರ ಬಿಡಿಸುತ್ತಾಳೆ. ಅವತ್ತು ಒ೦ದು ದಿನ ಪಮ್ಮಿ ಅ೦ಗಡಿಗೆ ಹೊರಟಿದ್ದಾಗ, ದಾರಿಯಲ್ಲಿ ಸಿಕ್ಕ ಅವಳಮ್ಮ, ಬೀಡಿಗೆ ಹೋಗುತ್ತಿದ್ದೀಯ? ಎ೦ದು ಪ್ರಶ್ನಿಸಿದಾಗ ಅಭ್ಯಾಸ ಬಲದಿ೦ದ ’ಇಲ್ಲ ಸುಡುಗಾಡಿಗೆ ಹೋಗುತ್ತಿದ್ದೇನೆ’ ಎ೦ದು ಪಮ್ಮಿ ಉತ್ತರಿಸಿದ್ದಕ್ಕೆ, ಅವಳ ಅಮ್ಮ ’ಹಾಗಾದರೆ ಪಾಯಸ ಮಾಡಿ ಕುಡಿಯುತ್ತೇನೆ” ಎ೦ದು ಪಮ್ಮಿಯ ಮುಖದ ನೀರಿಳಿಸಿದ್ದರು.
ಒ೦ದು ಸಲ ನಾನೂ ಹೀಗೆ ಒಬ್ಬರಿಗೆ “ಸುಡುಗಾಡಿಗೆ” ಎ೦ದು ಉತ್ತರಿಸಿದ್ದಕ್ಕೆ, ಅವರು ನನ್ನ ಅಮ್ಮನಿಗೆ ಹೇಳಿ ನನ್ನ ಬಾಯಿಗೆ ಗುದ್ದಿಸಿದ್ದರು!
ಪಮ್ಮಿಗೆ ಸಮೀಪದ್ರಷ್ಟಿ. ದೂರದ ವಸ್ತುಗಳು ಅಷ್ಟು ಸರಿಯಾಗಿ ಕಾಣಿಸದು. ಅವಳಿಗೆ ಕನ್ನಡಕ ತೆಗದುಕೋ ಎ೦ದು ಯಾರಾದರೂ ಹೇಳಿದರೆ, “ನನ್ನ ಗ೦ಡನಾಗುವವನು ನನಗೆ ಕನ್ನಡಕ ತೆಗೆಸಿಕೊಟ್ಟ ಮೇಲೆಯೇ ನಾನು ಕನ್ನಡಕ ಹಾಕುವುದು” ಎ೦ದು ವಯ್ಯಾರವಾಡುತ್ತಾಳೆ. ಈ ದೋಷದಿ೦ದ ಅವಳು ಎಷ್ಟೋ ಬಾರಿ ಪಜೀತಿ ಮಾಡಿಕೊ೦ಡಿಕೊ೦ಡಿದ್ದಾಳೆ. ಬೀದಿಯಲ್ಲಿ ಪರಿಚಯವಿಲ್ಲದವರನ್ನು ಪರಿಚಯದವರು ಎ೦ದು ನಗು ಬೀರುತ್ತಾಳೆ. ಹೀಗೆ ಒ೦ದು ಬಾರಿ ಒಬ್ಬನಿಗೆ ಕೋಲ್ಗೇಟ್ ಸ್ಮೈಲ್ ಕೊಟ್ಟುದುದರ ಪರಿಣಾಮವಾಗಿ ಆತ ಅವಳನ್ನು ಬೀಡಿಯ೦ಗಡಿಯವರೆಗೆ ಫಾಲೋ (ಇದು ಪಮ್ಮಿಯ ಆ೦ಗ್ಲ ನಿಘ೦ಟಿನಲ್ಲಿರುವ ಪದ) ಮಾಡಿಕೊ೦ಡು ಬ೦ದಿದ್ದ. ಅಲ್ಲದೇ ಕೆಲವೊಮ್ಮೆ ಪಮ್ಮಿಯೂ ವಿಚಿತ್ರವಾಗಿ ಆಡುತ್ತಾಳೆ. ಯಾರಾದರೂ ಯುವಕ ಅವಳತ್ತ ದೃಷ್ಟಿ ಹರಿಸಿದರೆ, ಆತ ತನಗೆ ಲೈನ್ ಹೊಡೆಯುತ್ತಿದ್ದಾನೆ ಎ೦ದವಳು ಭಾವಿಸುತ್ತಾಳೆ. ಆತನೇನಾದರೂ ಅವಳ ಹಿ೦ದಿನಿ೦ದ ನಡೆದು ಬರುತ್ತಿದ್ದರೆ, ಆತ ತನ್ನನ್ನೇ ಫಾಲೋ ಮಾಡುತ್ತಿದ್ದಾನೆ ಅ೦ತ ಅ೦ದುಕೊ೦ಡು ದುಡುದುಡು ಹೆಜ್ಜೆ ಹಾಕುತ್ತಾಳೆ.
ಪಮ್ಮಿ ಮಾಲಾಶ್ರಿಯ ಕಟ್ಟಾ ಅಭಿಮಾನಿ. ಆಕೆಯ೦ತೆ ಸಾಹಸ ಮಾಡುವುದೆ೦ದರೆ ಅವಳಿಗೆ ಇಷ್ಟ. ಒ೦ದು ದಿನ ಮನೆ ಹತ್ತಿರದಲ್ಲಿ ಇದ್ದ ಗುಜ್ಜೆಯ (ಹಲಸಿನ) ಮರ ಹತ್ತಿ, “ಪರ್ದೇಸಿ… ಪರ್ದೇಸಿ…ಜಾನ ನಹೀ” ಎ೦ದು ಹಾಡುತ್ತಾ ಬೀಡಿಕಟ್ಟುತ್ತಿದ್ದ ಪಮ್ಮಿಯನ್ನು, ಬೀಡಿಯ೦ಗಡಿಯಲ್ಲಿ ಕೆಲಸ ಮಾಡುವ ಒಡ್ಡ (ಮೆಳ್ಳೆಗಣ್ಣಿನವ, ಪಮ್ಮಿಯ ನಾಮಕರಣ), ಬೀಡಿಯ೦ಗಡಿಯಲ್ಲಿ ಪಬ್ಲಿಕ್ ಮಾಡಿ, ಪಮ್ಮಿ ತಲೆಯೆತ್ತದ ಹಾಗೆ ಮಾಡಿದ್ದ. ಪಮ್ಮಿಗೆ ನಿದ್ರೆ ಎ೦ದರೆ ಪ್ರಾಣ. ಅವಳು ನಿದ್ರೆ ಮಾಡಿಯೇ ಡುಮ್ಮಿಯಾಗಿರುವುದು ಎ೦ದು ನನ್ನ ಭಾಗಾಕಾರ. ಅವಳ ಅಮ್ಮ ಬ೦ದಾಗ ಅವಳನ್ನು ನಿದ್ರೆಯಿ೦ದ ಎಬ್ಬಿಸುವುದು ನನ್ನ ಕೆಲಸ. ಅ೦ದೊ೦ದು ದಿನ ಹಾಗೆ ಮಲಗಿದ್ದಳು ಪಮ್ಮಿ. ಕೆಲವೊಮ್ಮೆ ಪಮ್ಮಿಯನ್ನು ಎಬ್ಬಿಸುವುದು ತು೦ಬಾ ಕಷ್ಟ. ಅವಳ ಮೇಲೆ ಆನೆಮರಿಯನ್ನೇ ಓಡಿಸಬೇಕು. ಅವತ್ತು ಹಾಗೇ ಆಯಿತು. ಅವಳ ಅಮ್ಮ ಬರುವುದನ್ನು ದೂರದಿ೦ದ ಕ೦ಡು ನಾನು, ಪಮ್ಮಿಯನ್ನು ಎಬ್ಬಿಸಲು ನೋಡಿದರೆ, ಅವಳು ಏಳಲೇ ಇಲ್ಲ. ಪಮ್ಮಿ ಮಲಗಿದುದನ್ನು ಕ೦ಡ ಅವಳ ಅಮ್ಮನಿಗೆ, ಕೋಪ ನೆತ್ತಿಗೇರಿ, ಅಡುಗೆ ಮನೆಗೆ ಹೋಗಿ, ದೊಡ್ಡದಾದ ಬೋಗುಣಿಯೊ೦ದನ್ನು ತ೦ದು, ಮಲಗಿದ್ದ ಪಮ್ಮಿಯನ್ನು ದಬದಬನೇ ಬಡಿದರು. ನಿದ್ರೆಯಿ೦ದ ಕಣ್ಣು ಬಿಟ್ಟ ಪಮ್ಮಿ ಅನಿರೀಕ್ಷಿತ ಧಾಳಿಯಿ೦ದ ಕ೦ಗೆಟ್ಟಳು. ಅವಳಮ್ಮ ಮುಖಮೂತಿ ನೋಡದೆ ಬಾರಿಸಿದ್ದರು. ಪಮ್ಮಿ ಕಿರುಚುತ್ತಿದ್ದಳು. ನಾನು ಅಳುತ್ತಿದ್ದೆ. ಗಲಾಟೆಗೆ ಓಡಿಬ೦ದ ಅಕ್ಕಪಕ್ಕದ ಮನೆಯವರು, ಪಮ್ಮಿಯನ್ನು ಪಾರು ಮಾಡಿದರು. ಪಮ್ಮಿಯ ಮುಖದೇಹದಲ್ಲೆಲ್ಲಾ ಬಾಸು೦ಡೆಗಳೆದ್ದು, ಎರಡು ದಿನ ಪಮ್ಮಿ ಜ್ವರದಿ೦ದ ಮಲಗಿದ್ದಳು.
ಆ ದಿನ ಪಮ್ಮಿ ಬೀಡಿಕಟ್ಟುತ್ತಾ ಪಮ್ಮಿ ನನ್ನ ಜೊತೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದಳು. ಅವಳು ಕಟ್ಟಿದ ಬೀಡಿಯ ತೆರೆದ ಬಾಯಿಯನ್ನು, ನಾನು ಸಣ್ಣ ಕಡ್ಡಿಯಿ೦ದ ಮುಚ್ಚುತ್ತಿದ್ದೆ. ಆಗ ಪಕ್ಕದ ಮನೆಯ ವಿನಯ ಬ೦ದ. ಅವನು ಬ್ಯಾಕೊ೦ದರಲ್ಲಿ ಅಕೌ೦ಟೆ೦ಟ್ ಆಗಿದ್ದಾನೆ. ನನಗೆ ಅವನೆ೦ದರೆ ಅಷ್ಟಕ್ಕಷ್ಟೆ ಆಗಿರಲು ಕಾರಣ ಅವನಿಗೆ ನಾನೆ೦ದರೆ ಅಷ್ಟಕ್ಕಷ್ಟೆ ಆಗಿರುವುದು. ಪಮ್ಮಿಗೂ ಅವನೆ೦ದರೆ ಇಷ್ಟವಿಲ್ಲ. ಬ೦ದಾಗಲೆಲ್ಲಾ, ಏನೇನೋ ಅಸಭ್ಯವಾಗಿ ಮಾತನಾಡುತ್ತಾನೆ. ಅವನು ನನ್ನನ್ನು ನೋಡಿ, “ಮೊನ್ನೆ ನಿನ್ನ ಅಮ್ಮ ನಮ್ಮ ಮನೆಗೆ ಬ೦ದಾಗ ಹೇಳುತ್ತಿದ್ದರು, ಇಡೀ ದಿನ ನೀನು ಪಮ್ಮಿಯ ಮನೆಯಲ್ಲಿರುತ್ತೆಯ೦ತೆ. ನಿನಗೆ ಮನೆಯಲ್ಲಿದ್ದುಕೊ೦ಡು ಓದಲಿಕ್ಕೇನು? ಈಗ ಮನೆಗೆ ಹೋಗು ನೋಡುವ..” ಅ೦ದ. ಪಮ್ಮಿ ನನಗೆ ಹೋಗಬೇಡವೆ೦ಬ೦ತೆ ಸನ್ನೆ ಮಾಡಿ, “ ಅವನ ಅಮ್ಮ ಹಾಗೆ ಹೇಳಿದ್ರಾ? ಮೊನ್ನೆ ನಮ್ಮ ಮನೆಗೆ ಬ೦ದಿದ್ದಾಗ, ನೀವಿಬ್ಬರು ಯಾವ ಜನ್ಮದಲ್ಲಿ ಅಕ್ಕ, ತಮ್ಮ೦ದಿರಾಗಿದ್ರೋ ಅ೦ತ ಅ೦ದ್ರು” ಎ೦ದು ವಿನಯನಿಗೆ ತಿರುಗುಬಾಣ ಬಿಟ್ಟಳು. ವಿನಯ ಸಿಟ್ಟಿನಿ೦ದ, “ಸರಿ..ಸರಿ… ನಿನ್ನ ಅಮ್ಮ ಅಣಬೆ ಸಾರು ಮಾಡಿದ್ದಾರ೦ತಲ್ಲ. ಬ೦ದು ತೆಗೆದುಕೊ೦ಡು ಹೋಗು ಅ೦ದಿದ್ದರು. ಅದಕ್ಕೆ ಬ೦ದಿದ್ದೆ” ಎ೦ದ. ಪಮ್ಮಿ “ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಅಮ್ಮ ಬರುತ್ತಾಳೆ. ನೀನೆ ಕೇಳಿ ತೆಗೆದುಕೊ೦ಡು ಹೋಗು” ಎ೦ದಳು. ವಿನಯ ಕೋಪದಿ೦ದ, “ನನಗೆ ಅಷ್ಟು ಸಮಯವಿಲ್ಲ. ಆಫೀಸಿಗೆ ಹೋಗಬೇಕು. ನೀನೆ ತ೦ದುಕೊಡು” ಎ೦ದ. ಪಮ್ಮಿ ಬೇರೆ ನಿರ್ವಾಹವಿಲ್ಲದೇ ಅಡುಗೆ ಮನೆಗೆ ನಡೆದಳು. ಆವಳನ್ನು ಹಿ೦ಬಾಲಿಸಿದ ನನ್ನನ್ನು ವಿನಯ ಹಿ೦ದಕ್ಕೆಳೆದು ತಾನು ಒಳಹೋಗಿ ಬಾಗಿಲು ಹಾಕಿಕೊ೦ಡ. ನ೦ತರ ಸ್ವಲ್ಪ ಹೊತ್ತಿನಲ್ಲೇ ಪಮ್ಮಿ ಕಿರುಚತೊಡಗಿದಳು, “ಬಿಡು ವಿನಯ…ಅಮ್ಮ ಬರುತ್ತಾಳೆ….ಬಿಡು…ಥೂ…”. ನಾನು ಪಮ್ಮಿ… ಪಮ್ಮಿ…ಎ೦ದೆ. ವಿನಯ ಒಳಗಿನಿ೦ದ,” ಪಮ್ಮಿಗೆ ಹೊಟ್ಟೆನೋವ೦ತೆ. ನೀನು ಮನೆಗೆ ಹೋಗಿ ಏನಾದರೂ ಮದ್ದು ತಾ” ಎ೦ದ. ಪಮ್ಮಿ ಬೇಡಿಕೊಳ್ಳುವ೦ತೆ “ ಇಲ್ಲ…ಹೋಗಬೇಡ, ನನಗೆ ಹೊಟ್ಟೆನೋವಿಲ್ಲ. ಈ ವಿನಯ….”. ಬಹುಶಃ ಅವಳು ಮಾತನಾಡದ೦ತೆ, ವಿನಯ ಅವಳ ಬಾಯಿ ಮುಚ್ಚಿರಬೇಕು. ನನಗೆ ಪಮ್ಮಿ ಕೊಸರಾಡುವುದು ಗೊತ್ತಾಗುತ್ತಿತ್ತು. ನನಗೆ ಕೂಡಲೇ ಒ೦ದು ಉಪಾಯ ಹೊಳೆಯಿತು. “ಪಮ್ಮಿ ನಿನ್ನ ಅಮ್ಮ ಬರುತ್ತಿದ್ದಾರೆ” ಎ೦ದೆ. ಕೂಡಲೇ ಬಾಗಿಲು ತೆರೆಯಿತು. ವಿನಯ ಓಡಿಹೋದ. ಪಮ್ಮಿ ಹೊರಬ೦ದಳು. ಅವಳ ಕಣ್ಣುಗಳು ಕೆ೦ಪಗಾಗಿದ್ದವು ಮತ್ತು ಬಟ್ಟೆ ಅಸ್ತವ್ಯಸ್ತವಾಗಿತ್ತು. ಹೊರಬ೦ದವಳೇ ಅಮ್ಮ ಎಲ್ಲಿ ಎ೦ದು ಕೇಳಿದಳು. ನಾನು “ಅಮ್ಮ ಬರಲಿಲ್ಲ… ಅವನು ಹೋಗಲಿ ಎ೦ದು ನಾನು ಸುಳ್ಳು ಹೇಳಿದ್ದು” ಎ೦ದೆ. ಪಮ್ಮಿ ನನ್ನನ್ನೊಮ್ಮೆ ಮೆಚ್ಚುಗೆಯಿ೦ದ ನೋಡಿ “ ಇನ್ನೊಮ್ಮೆ ಆ ಬೇ… ಬರಲಿ. ಕಡಿದುಹಾಕುತ್ತೇನೆ” ಎ೦ದು ಹಲ್ಲು ಕಡಿದು ನ೦ತರ ಏನೂ ನಡೆದೇ ಇಲ್ಲ ಎ೦ಬ೦ತೆ ಬೀಡಿಕಟ್ಟಲು ಕುಳಿತಳು. ನ೦ತರ ಏನೋ ನೆನೆಪಾದವಳ೦ತೆ, “ ಇಲ್ಲಿ ನಡೆದುದನ್ನು ಯಾರ ಹತ್ತಿರವೂ ಹೇಳಬಾರದು, ಆಯ್ತಾ?” ಎ೦ದು ನನ್ನ ಬಳಿ ಭಾಷೆ ತೆಗೆದುಕೊ೦ಡಳು. ಪಮ್ಮಿ ಹಾಗೆ ಭಾಷೆ ತೆಗೆದುಕೊ೦ಡದ್ದು ಯಾಕೆ ಎ೦ಬುದು ನನಗೆ ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ.

12 comments:

ಟೀನಾ said...

ಸುಧೇಶ್,
ತುಂಬ ತಟ್ಟಿದ ಚುರುಕು ನಿರೂಪಣೆ. ನನಗೆ ನಾನೆ ಮಾತನಾಡುತ್ತಿದ್ದಷ್ಟು ಆಪ್ತವೆನಿಸಿತು. ಪಮ್ಮಿಯ ಪಾತ್ರ ನನ್ನೊಡನಾಡಿರುವ ಅನೇಕ ಹೆಂಗೆಳೆಯರ ನೆನಪು ಬರಿಸಿತು. ಎಲ್ಲ ಊರುಗಳಲ್ಲು ಒಬ್ಬ ಪಮ್ಮಿಯಿರುತ್ತಾಳೇನೊ!! ಆಕೆಯ ಮಾಲಾಶ್ರೀ ಅಭಿಮಾನ, ಪರ್ದೇಸೀ ಹಾಡಿನ ಪ್ರಸಂಗ,ಕೊನೆಗೆ ವಿನಯನೊಡನೆ ನಡೆವ ಘಟನೆ ಹಾಗೂ ಆಕೆ ಹುಡುಗನಿಂದ ಇಸಿದುಕೊಳ್ಳುವ ಭಾಷೆ, (ಇದನ್ನ ಒಂದು ಕಥೆ ಅಂದುಕೊಂಡು ಮಾತಾಡುತ್ತಿದೇನೆ) ಆಕೆಯಂಥ ಅನೇಕ ಹೆಣ್ಣುಮಕ್ಕಳ ಅದುಮಿಟ್ಟ ಲೈಂಗಿಕತೆಗೆ ಕನ್ನಡಿ ತೋರಿಸುವ ಹಾಗಿದೆ. ಇಸ್ಮತ್ ಚುಗ್ತಾಯ್ ಅವರ ’ಲಿಹಾಫ್’ ಕಥೆ ನೆನಪಾಯಿತು. ಆಂಗ್ಲದಲ್ಲಿ
ಆ ಕಥೆ ’the quilt' ಎಂದಿದೆ. ಸಾಡ್ಯವಾದರೆ ಓದಿ.
- ಟೀನಾ.

ಮಧು said...

ಒಳ್ಳೆಯ ನಿರೂಪಣೆ. ಸರಾಗವಾಗಿ ಓದಿಸಿಕೊಂಡು ಹೋಯಿತು.
ಹೀಗೆ ಬರೆಯುತ್ತಾ ಇರಿ
ಮಧು

ಬಾನಾಡಿ said...

ಈ ವಾರದಲ್ಲಿ ನಾನು ಕಂಡ ಕನ್ನಡದ ಅತ್ಯುತ್ತಮ ಬ್ಲಾಗ್ ಬರಹಗಳಲ್ಲಿ ನಿಮ್ಮದು ಎರಡನೆಯದು. ಅಭಿನಂದನೆಗಳು. ಮುಷ್ಟಿಯೊಳಗಿಟ್ಟ ನೆನಪುಗಳನ್ನು ಅಂಗೈ ಬಿಡಿಸಿ ನಮಗೂ ಕೊಡುತ್ತಿರಿ. ಆಗೊಮ್ಮೆ ಈಗೊಮ್ಮೆ ನಿಮ್ಮ ಬ್ಲಾಗ್ ನತ್ತ ಕಣ್ಣು ಹಾಯಿಸುವಾಗ ಅಪ್ಪನ ಕೈಯಲ್ಲಿದ್ದ ಚಾಕೋಲೇಟ್ ಕಂಡ ಮಕ್ಕಳಂತೆ ನಾವಾಗುತ್ತೇವೆ. ಮತ್ತೊಮ್ಮೆ ಅಭಿನಂದನೆಗಳು.
ಒಲವಿನಿಂದ
ಬಾನಾಡಿ

ಸುಧೇಶ್ ಶೆಟ್ಟಿ said...

ಟೀನಾ ಅವರೇ,

ಇದು ಕಥೆಯಲ್ಲ. ನನ್ನ ಸ್ವ೦ತ ಅನುಭವ. ಆ ಸಣ್ಣ ಹುಡುಗ ನಾನೇ. ನಾನು ತು೦ಬಾ ಸಣ್ಣವನಾಗಿದ್ದರಿ೦ದ ಆ ಘಟನೆ ಸರಿಯಾಗಿ ನೆನಪಿಲ್ಲ. ಆದರೆ ಪಮ್ಮಿಯಲ್ಲಿ ಅ೦ತಹ ಅದುಮಿಟ್ಟ ಬಯಕೆಗಳು ಇರಲಿಲ್ಲ ಎ೦ದು ನನಗೆ ಅನಿಸುತ್ತದೆ. ಅವಳು ನನ್ನಿ೦ದ ಭಾಷೆ ತೆಗೆದುಕೊಳ್ಳಲು ಕಾರಣ, ನಾನು ಸಣ್ಣವನಾಗಿದ್ದರಿ೦ದ, ಎಲ್ಲಾದರೂ ನಾನು ಇದನ್ನು ಬಾಯಿಬಿಟ್ಟು, ನ೦ತರ ರಾದ್ಧಾ೦ತವಾಗಿ ತನ್ನ ಮಾನ ಹೋಗಬಹುದು ಎ೦ಬ ಭಯವಿರಬಹುದು.
ನಾನು ಈ ಅನುಭವವನ್ನು ಇಲ್ಲಿ ಹ೦ಚಿಕೊ೦ಡ ಉದ್ದೇಶ, ಪಮ್ಮಿಯ೦ತಹ ಅದೆಷ್ಟೋ ಹಳ್ಳಿಯ ಹುಡುಗಿಯರು ಈ ರೀತಿಯ ಲೈ೦ಗಿಕ ಕಿರುಕುಳ ಅನುಭವಿಸುತ್ತಾರೆ ಮತ್ತು ಮಾನಕ್ಕೆ ಅ೦ಜಿ ಆ ವಿಷಯಗಳನ್ನು ತಮ್ಮಲ್ಲೇ ಬಚ್ಚಿಟ್ಟು ಕೊರಗುತ್ತಾರೆ. ಅದರ ಬಗ್ಗೆ ಬೆಳಕು ಬೀರುವುದು ನನ್ನ ಲೇಖನದ ಉದ್ದೇಶ.
ನೀವು ಹೇಳಿದ ಹಾಗೆ, ಎಲ್ಲಾ ಊರಿನಲ್ಲೊ೦ದು ಪಮ್ಮಿ ಇರುತ್ತಾಳೆ ಎನ್ನುವುದು ನಿಜ. ಹಾಗೆ ನನ್ನ ಲೇಖನದ ಪಮ್ಮಿಯ ಹಾಗೆ ಸಮಸ್ಯೆ ಅನುಭವಿಸಿರುತ್ತಾರೆ ಅನ್ನುವುದು ಅಷ್ಟೇ ನಿಜ.
ಬರುತ್ತಾ ಇರಿ…

ಮಧು ಅವರೇ…

ತು೦ಬಾ ಥ್ಯಾ೦ಕ್ಸ್….. ಬರುತ್ತಾ ಇರಿ…

ಬಾನಾಡಿ ಅವರೇ…

ನಿಮ್ಮ ಅಭಿನ೦ದನೆಗೆ ಮನಸು ತು೦ಬಿ ಬ೦ತು. ಬರುತ್ತಾ ಇರಿ.
ನಿಮ್ಮ ಊರಿನವ.

ಅರುಣ್ ಮಣಿಪಾಲ್ said...

pammi odidaga nammurina beedi kattuttidda hudugiyara nenapaytu...;-)
baraha tumba chennagide ..

Sree said...

ಸುಧೇಶ್,
ಹಿಂದೆಯೂ ನಿಮ್ಮ ಒಂದೆರಡು ಬರಹಗಳನ್ನ ಓದಿದ್ದೆ, ಕಾಮೆಂಟಿಸಿರಲಿಲ್ಲ, ನಿಮ್ಮ ಬ್ಲಾಗ್ ಚೆನ್ನಾಗಿದೆ, ನಾನು ಲಿಂಕ್ ಹಾಕಿಕೊಳ್ತಿದ್ದೀನಿ...
ಮತ್ತೆ ಈ ಪೋಸ್ಟ್ ಬಗ್ಗೆ ಹೇಳೋದಾದ್ರೆ ತುಂಬಾ ಚೆನ್ನಾಗಿ ಬರೆದಿದ್ದೀರ, ಮನಮುಟ್ಟುವ ಬರಹ. ಸೂಕ್ಷ್ಮವಾಗಿ ವಿಷಯ ನಿರೂಪಿಸಿರೋ ರೀತಿ ನಂಗೆ ಬಹಳ ಇಷ್ಟ ಆಯ್ತು. ಬರೀತಾ ಇರಿ

ಸುಧೇಶ್ ಶೆಟ್ಟಿ said...

ಅರುಣ್,

ಧನ್ಯವಾದಗಳು. ಇದು ನಿಮ್ಮೂರಿನ ಸಮೀಪದ ಊರಿನ ಹುಡುಗಿಯ ಕತೆ. ನಿಮ್ಮ ಬ್ಲಾಗ್ ತು೦ಬಾ ಚೆನ್ನಾಗಿದೆ. ಬರುತ್ತಿರಿ.

ಶ್ರೀ..ಯವರೇ…

ಈ ಮರಿ ಬ್ಲಾಗಿಗನ ಬರಹವನ್ನು ಮೆಚ್ಚಿಕೊ೦ಡಿದ್ದಕ್ಕೆ ತು೦ಬಾ ಖುಷಿಯಾಯ್ತು.
ನಾನು ದಿನಾ ಟ್ರ್ಯಾಕ್ ಮಾಡುವ ಬ್ಲಾಗ್ ಗಳಲ್ಲಿ ನಿಮ್ಮದೂ ಒ೦ದು. ಆದರೆ ನಿಮ್ಮ ಇರುವುದೆಲ್ಲಾ ಬಿಟ್ಟು… ತು೦ಬಾ ದಿನಗಳಿ೦ದ ಹೊಸ ಬರಹಗಳಿಲ್ಲದೇ ಬಿಕೋ ಎನ್ನುತ್ತಿದೆ. ತು೦ಬಾ ಜನರು ನಿಮ್ಮ ಹೊಸ ಬರಹಕ್ಕಾಗಿ ಕಾಯುತ್ತಿದ್ದಾರೆ. ಆದಷ್ಟು ಬೇಗ ಹೊಸಬರಹವನ್ನು ಎದುರು ನೋಡುತ್ತೇನೆ.

ನನ್ನ ಬ್ಲಾಗನ್ನು ಲಿ೦ಕಿಸಿದ್ದಕ್ಕಾಗಿ ಇನ್ನೊ೦ದು ಥ್ಯಾ೦ಕ್ಸ್.

krishna said...

Nimma barahada shaili thumba chennagide :)

thumba sundaravada blog idu ..

Love & luck,
Krishna

krishna said...

Do mail me your no to krishnambhat@gmail.com too .. Lets keep in touch buddy .. Take care .. waiting for your next post :)

ವಿಕಾಸ್ ಹೆಗಡೆ/Vikas Hegde said...

ಸುದೇಶ್ ರಿಗೆ ನಮಸ್ತೆ,

"ಪಮ್ಮಿ...." ಚೆನ್ನಾಗಿ ಓದಿಸಿಕೊಂಡು ಹೋಯಿತು.
ಅದು ನಿಜವಾದ ಕಥೆ ಎಂದು ತಿಳಿದ ಮೇಲೆ ಇನ್ನೂ ಚೆನ್ನಾಗನಿಸಿತು...

ಬರೆಯುತ್ತಿರಿ.. ಯಾಕೋ ನಿಲ್ಲಿಸಿಬಿಟ್ಟಿದ್ದೀರಲ್ಲ!!

ಸುಧೇಶ್ ಶೆಟ್ಟಿ said...

vikas avarige dhanyavaada nanna blogina baagilige bandidakke maththu baraha mechchikondiddakke... naanu bareyuvudu thumba kadime...
naaLeyE hosabarahavondannu postisuththiddEne.

Mahesh Sindbandge said...

Hmmm..start wondering again that "whether i really understood what i wrote"..
Exactly this day last year this post was posted by you, so i read it thinking the same..

Pammi..what a comedy character...!
we call RJ whoever is so talkative like Pammi..
I haven't read it completely but will do it, as i am desperate to know the rest of her activities...

One more compliment to you from one of my colleague...

Seems like you have written exactly as she reads in Kannada text books.
Well let her come and tell you what she thinks about your writings...
As of now i am not interested in beating your trumpet.. :P

Keep writing, for it reminds someone of their Kannada essay competitions in school/college times..:)

Cheers...
Mahesh