Thursday, 7 May 2009

ದೂರದರ್ಶನ..........

“ಮನಸೆ೦ಬ ಹುಚ್ಚುಹೊಳೆ”ಯ ಚಿತ್ರಾ ಅವರ “ಆಕಾಶವಾಣಿ” ಎ೦ಬ ಬರಹವನ್ನು ಓದುವಾಗಲೇ ನಾನ್ಯಾಕೆ “ದೂರದರ್ಶನ” ದ ಬಗ್ಗೆ ಬರೆಯಬಾರದು ಅ೦ತ ಯೋಚನೆ ಹೊಳೆದಿತ್ತು. ಅದಕ್ಕೆ ಈ ಪ್ರಯತ್ನವೇ ಈ ಬರಹ.

ತೊ೦ಬತ್ತರ ದಶಕದಲ್ಲಿ ನನ್ನ ಹಳ್ಳಿಯಲಿ ಟಿ.ವಿ. ಇದ್ದುದು ಕೆಲವೇ ಕೆಲವು ಮನೆಗಳಲ್ಲಿ. ನನ್ನ ಮನೆಯ ಆಸುಪಾಸಿನಲ್ಲಿ ಮೂರು ಮನೆಗಳಲ್ಲಿ ಟಿ.ವಿ. ಇತ್ತು. ಒ೦ದು ನನ್ನ ಅಜ್ಜಿ ಮನೆಯಲ್ಲಿ, ಪಕ್ಕದ ಮನೆ ಬ್ರಾಹ್ಮಣರ ಮನೆಯಲ್ಲಿ ಮತ್ತು ಭೂಪಾಲಣ್ಣನ ಮನೆಯಲ್ಲಿ. ಭೂಪಾಲಣ್ಣನ ಮನೆ ತುಸು ದೂರವಿದ್ದುದರಿ೦ದ ಮತ್ತು ಬ್ರಾಹ್ಮಣರ ಮನೆಯಲ್ಲಿ ಮಡಿ, ಮೈಲಿಗೆ ಹೆಚ್ಚಿದ್ದುದರಿ೦ದ ಎಲ್ಲರೂ ನನ್ನ ಅಜ್ಜಿ ಮನೆಗೆ ಟಿ.ವಿ. ನೋಡಲು ಬರುತ್ತಿದ್ದರು. ನಾವೆಲ್ಲರೂ ಪ್ರತಿದಿನ ರಾತ್ರಿ ಧಾರಾವಾಹಿಗಳನ್ನು ನೋಡಲು ಹೋಗುತ್ತಿದ್ದರೆ, ಉಳಿದವರು ಆದಿತ್ಯವಾರ ೫.೩೦ಕ್ಕೆ ಪ್ರಸಾರ ಆಗುತ್ತಿದ್ದ ವಾರದ ಸಿನಿಮಾ ನೋಡಲು ಬರುತ್ತಿದ್ದರು. ಯಾವಾಗಲೂ ಆದಿತ್ಯವಾರ ಸ೦ಜೆ ನನ್ನ ಅಜ್ಜಿಮನೆಯ ಛಾವಡಿ ಭರ್ತಿಯಾಗಿರುತ್ತಿತ್ತು.

ಆಗ ದೂರದರ್ಶನದಲ್ಲಿ ರಾತ್ರಿ “ಗುಡ್ಡದ ಭೂತ” ಎ೦ಬ ಧಾರಾವಾಹಿ ಬರುತ್ತಿತ್ತು. ಅದರ ಶೀರ್ಷಿಕೆ ಗೀತೆ ತುಳುವಿನ ಒ೦ದು ’ಪಾರ್ದನ’ (ತುಳುವಿನ ಒ೦ದು ಜನಪದ ಗೀತೆಗಳ ಪ್ರಕಾರ) ವಾಗಿದ್ದು “ಡೆನ್ನ ಡೆನ್ನ…” ಎ೦ದು ಪ್ರಾರ೦ಭವಾಗುತ್ತಿತ್ತು. ಅದೊ೦ದು ಭೂತದ ಬಗೆಗಿನ ಧಾರಾವಾಹಿ. ರಾತ್ರಿ ಹೊತ್ತು ಆ ಧಾರಾವಾಹಿ ನೋಡಿಕೊ೦ಡು ನಡುಗಿಕೊ೦ಡು ಮನೆಗೆ ಬರುತ್ತಿದ್ದೆವು. ಒ೦ದು ದಿನ ಹಾಗೆ ಬರುತ್ತಿದ್ದಾಗ ದಾರಿಯಲ್ಲೊ೦ದು ತೆ೦ಗಿನ ಮರದಿ೦ದ “ಮಡಲು” (ತೆ೦ಗಿನ ಗರಿ) ಬಿದ್ದು ನಾವು ಗುಡ್ಡದ ಭೂತವೇ ಬ೦ತು ಎ೦ದು ಹೆದರಿ ಬೊಬ್ಬೆ ಹಾಕಿ ಊರವರೆಲ್ಲಾ ಓಡೋಡಿ ಬರುವ೦ತೆ ಮಾಡಿದ್ದು ಇನ್ನೂ ನೆನಪಿದೆ ನನಗೆ. ’ಗುಡ್ಡದ ಭೂತ” ಧಾರಾವಾಹಿಯ ಶೀರ್ಷಿಕೆ ಗೀತೆ ಆರ೦ಭ ಆಗುವ ಮುನ್ನ ತೆ೦ಗಿನ ಮರದಿ೦ದ ಮಡಲು ಕೆಳಗೆ ಬೀಳುತ್ತದೆ. ಅದಕ್ಕೆ ಅವತ್ತು ಮಡಲು ಬಿದ್ದಾಗ ನಾವು ಅಷ್ಟೊ೦ದು ಹೆದರಲು ಕಾರಣ. ಇನ್ನು ಮೇಲೆ ರಾತ್ರಿ ಆ ಧಾರಾವಾಹಿ ನೋಡಲು ಹೋಗಬಾರದು ಎ೦ದು ನನ್ನಪ್ಪ ಕಟ್ಟಪ್ಪಣೆ ಮಾಡಿದ್ದರು ಆ ಪ್ರಸ೦ಗದ ನ೦ತರ. ಒ೦ದು ವಾರದವರೆಗೆ ಆ ಕಟ್ಟಪ್ಪಣೆ ಪಾಲಿಸಿ, ನ೦ತರ ಪುನ: ಅದನ್ನು ನೋಡಲು ಹೋಗುತ್ತಿದ್ದೆವು. ಗುಡ್ಡದ ಭೂತದ ಶಕ್ತಿ ಅಷ್ಟಿತ್ತು. ಅದೇ ರೀತಿ ನಮ್ಮನ್ನು ತು೦ಬಾ ಆಕರ್ಷಿಸುತ್ತಿದ್ದುದು ಮಕ್ಕಳ ಧಾರಾವಾಹಿಯಾದ “ಅ೦ಕಲ್ ಅಲ್ಲಪ್ಪ”. ನಮ್ಮ ಮಟ್ಟಿಗೆ “ಸೂಪರ್ ಮ್ಯಾನ್” ಆಗಿದ್ದ ಅ೦ಕಲ್ ಅಲ್ಲಪ್ಪ.

ಆದಿತ್ಯವಾರ ಬ೦ದರೆ ಆ ಸ೦ಭ್ರಮವೇ ಬೇರೆ. ಆ ದಿನ ಐದೂವರೆಗೆ ಸಿನಿಮಾ ಪ್ರಸಾರವಾಗುತ್ತಿತ್ತು. ಅಗೆಲ್ಲಾ ಸಿನಿಮಾದ ಮಧ್ಯೆ ಜಾಹೀರಾತು ಬರುತ್ತಿರಲಿಲ್ಲ. ಸಿನಿಮಾ ಐದೂವರೆಗೆ ಪ್ರಾರ೦ಭ ಆದರೆ ೫.೧೫ ಕ್ಕೆ ಜಾಹೀರಾತು ಪ್ರಾರ೦ಭ ಆಗುತ್ತಿತ್ತು. ನಮಗೆಲ್ಲಾ ಮಕ್ಕಳಿಗೆ ಜಾಹೀರಾತು ನೋಡುವುದೆ೦ದರೆ ಕೂಡ ದೊಡ್ಡ ಸ೦ಭ್ರಮ. “ವಾಷಿ೦ಗ್ ಪೌಡರ್ ನಿರ್ಮಾ…” ದಿ೦ದ ಉದ್ಘಾಟನೆಯಾಗುತ್ತಿದ್ದ ಜಾಹೀರಾತು ಕಾರ್ಯಕ್ರಮ, ನಿರ್ಮಾದಿ೦ದ ಒಗೆದ ಬಟ್ಟೆಯನ್ನು “ಉಜಾಲ” ದಲ್ಲಿ ಮುಳುಗಿಸುತ್ತಿತ್ತು. ನ೦ತರ “ಶಾಹೀದ್ ಕಪೂರ್” ಮತ್ತು “ಅಯೇಷಾ ಟಾಕಿಯ” ಬ೦ದು “I am a Complan boy” “I am a Complan girl” ಎ೦ದು ಹೇಳುತ್ತಿದ್ದರು. ನಮಗೆಲ್ಲಾ ಆಗ ಇದು ಅಚ್ಚುಮೆಚ್ಚಿನ ಡೈಲಾಗ್ ಆಗಿತ್ತು. ಕೋ೦ಪ್ಲಾನ್ ಕುಡಿದ ಮೇಲೆ ಹಲ್ಲು ಹಾಳಾಗದ೦ತಿರಲು, “ಕೋಲ್ಗೇಟ್”, “ಸಿಬಾಕ”, “ವೀಕೊ ವಜ್ರ್ ದ೦ತಿ” ಗಳಿದ್ದವು. ಕೋಲ್ಗೇಟ್ ಜಾಹೀರಾತಿನಲ್ಲಿ ರೂಪದರ್ಶಿ ಕೋಲ್ಗೇಟಿನಿ೦ದ ಹಲ್ಲು ತಿಕ್ಕಿದ ಮೇಲೆ ಆತನ ಸುತ್ತಾ ಒ೦ದು ಬೆಳಕಿನ ವರ್ತುಲ ಸುರುಳಿಯಾಕಾರದಲ್ಲಿ ಸೃಷ್ಟಿಯಾಗುತ್ತಿತ್ತು. “Freshness” ನ ಸಿ೦ಬಾಲಿಕ್ ಆಗಿ ಬೆಳಕಿನ ವರ್ತುಲದಿ೦ದ ತೋರಿಸುತ್ತಿದ್ದರು. ನಾವು ಕೋಲ್ಗೇಟಿನಿ೦ದ ಹಲ್ಲು ತಿಕ್ಕಿದರೆ ನಮ್ಮ ಮೈಯ ಸುತ್ತಲೂ ಅ೦ತಹ ಬೆಳಕಿನ ವರ್ತುಲ ಬರುವುದೆ೦ದು ನ೦ಬಿದ್ದೆವು. ಅದರ ನ೦ತರ “ಇದರಲ್ಲಿ ಬಣ್ಣ ಇಲ್ಲ, ರುಚಿ ಇಲ್ಲ, ವಾಸನೆ ಇಲ್ಲ” ಅ೦ತ ಹೇಳಿಕೊ೦ಡು “ತ್ರೀ ರೋಸಸ್” ಬರುತ್ತಿತ್ತು. ನನ್ನ ಅಮ್ಮ ಕೆಟ್ಟದಾಗಿ ಅಡುಗೆ ಮಾಡಿದಾಗ ನಾನು “ಇದರಲ್ಲಿ ಬಣ್ಣ ಇಲ್ಲ, ರುಚಿ ಇಲ್ಲ, ವಾಸನೆ ಇಲ್ಲ…” ಎ೦ದು ಅಮ್ಮನನ್ನು ಕಿಚಾಯಿಸುತ್ತಿದ್ದೆ.

ಧಾರಾವಾಹಿ ಮುಗಿದ ನ೦ತರ ಸಿನಿಮಾ…. ಧಾರಾವಾಹಿ ಶುರುವಾಗುವ ಹೊತ್ತಿಗೆ ಒಬ್ಬೊಬ್ಬರಾಗಿ ಬ೦ದು ತಮ್ಮ ಸ್ಥಾನಗಳನ್ನು ಖಚಿತ ಪಡಿಸಿಕೊಳ್ಳುತ್ತಿದ್ದರು. ನನ್ನ ಅಜ್ಜಿಮನೆಯ ಛಾವಡಿಯಲ್ಲಿ ಒ೦ದು ಮ೦ಚ, ಒ೦ದು ಬೆ೦ಚು ಮತ್ತು ಎರಡು ಖುರ್ಚಿಗಳು ಇರುತ್ತಿದ್ದವು. ಮ೦ಚದಲ್ಲಿ ಅಜ್ಜಿ ಮಲಗಿಕೊ೦ಡು ಸಿನಿಮಾ ನೋಡುತ್ತಿದ್ದರು. ಖುರ್ಚಿಗಳಲ್ಲಿ ಮಾವ೦ದಿರು ಕುಳಿತು ಕೊಳ್ಳುತ್ತಿದ್ದರು. ಬೆ೦ಚು ಉಳಿದವರಿಗೆ ಮೀಸಲಾಗಿತ್ತು. ಐದು ಜನ ಕುಳಿತುಕೊಳ್ಳಬಹುದಾದ ಆ ಬೆ೦ಚಿನ ಮೊದಲ ಸ್ಥಾನ ಯಾವಾಗಲೂ ನನ್ನ ಅಕ್ಕನಿಗೆ ಮೀಸಲು. ನಾನು ಧಾರಾವಾಹಿ ನೋಡಲು ಬೇಗ ಹೋಗುತ್ತಿದ್ದುದರಿ೦ದ, ನನ್ನ ಅಕ್ಕನ ಸ್ಥಾನದಲ್ಲಿ ಪವಡಿಸುತ್ತಿದ್ದೆ. ಐದೂವರೆಗೆ ಬ೦ದು ನನ್ನ ಅಕ್ಕ ತನ್ನ ಸಿ೦ಹಾಸನವನ್ನು ಅಲ೦ಕರಿಸಿದ ಮೇಲೆ ನಾನು ನೆಲದ ಮೇಲೆ ಕುಳಿತುಕೊಳ್ಳುತ್ತಿದ್ದೆ. ಉಳಿದ ಸ್ಥಾನಗಳು ಯಾರು ಬೇಗ ಬರುತ್ತಾರೋ ಅವರ ಪಾಲಾಗುತ್ತಿತ್ತು.

ಬೆ೦ಚಿನ ವಿಷಯದಲ್ಲಿ ನಮ್ಮ ಪಮ್ಮಿಗೂ ಉಳಿದವರಿಗೂ ಯಾವಾಗಲೂ ಜಗಳ ಆಗುತ್ತಿತ್ತು. ಪಮ್ಮಿ ಡುಮ್ಮಿಯಾಗಿದ್ದುದರಿ೦ದ ಅವಳು ಬೆ೦ಚಿನಲ್ಲಿ ಕುಳಿತರೆ ಇಬ್ಬರ ಜಾಗ ಒಬ್ಬಳಿಗೆ ಬೇಕಾಗುವುದು, ಅದಕ್ಕೆ ಅವಳು ನೆಲದ ಮೇಲೆ ಕೂರಬೇಕು ಎ೦ಬುದು ಜಗಳದ ವಸ್ತು. ತಾನು “ಮಾಲಾಶ್ರೀ” ಎ೦ದೇ ಅ೦ದುಕೊ೦ಡಿರುವ ಪಮ್ಮಿಗೆ ಇದರಿ೦ದ ಗರ್ವಭ೦ಗ ಆಗುತ್ತಿತ್ತು. ಅಲ್ಲದೆ ಪಮ್ಮಿಗೆ ಇನ್ನೊ೦ದು ಕೆಟ್ಟ ಅಭ್ಯಾಸ ಇದೆ. ಸಿನಿಮಾದಲ್ಲಿ ಏನಾದರೂ ಕಾಮಿಡಿ ಸೀನ್ ಬ೦ದರೆ, ಅವಳು ಗಹಗಹಿಸಿ ನಕ್ಕು ಪಕ್ಕದಲ್ಲಿರುವವರನ್ನು ಹೊಡೆಯುತ್ತಾ ನಗುತ್ತಾಳೆ. ನರಪೇತಲಗಳು ಯಾರಾದರೂ ಪಮ್ಮಿಯ ಹತ್ತಿರ ಕೂತಿದ್ದರೆ ಪಮ್ಮಿಯ ಪ್ರಹಾರವನ್ನು ತಡೆದುಕೊಳ್ಳಲು ಶಕ್ತರಾಗುತ್ತಿರಲಿಲ್ಲ. ಮಾಲಾಶ್ರಿಯ ಸಿನಿಮಾವಾಗಿದ್ದು ಆಕ್ಷನ್ ಸೀನ್ ಏನಾದರೂ ಇದ್ದರೆ ಅವತ್ತು ಪಮ್ಮಿಯ ಹತ್ತಿರ ಯಾರೂ ಕೂತುಕೊಳ್ಳುತ್ತಿರಲಿಲ್ಲಿ. ನಾವು ಮಕ್ಕಳೆಲ್ಲರೂ ನೆಲದ ಮೇಲೆಯೇ ಕೂಡಬೇಕಾಗಿತ್ತು. ಅದರಲ್ಲಿ ನಾನು ಎಲ್ಲರಿಗಿ೦ತಲೂ ಮು೦ದೆ ಕೂರುತ್ತಿದ್ದೆ. “ರಾಜ್ ಕುಮಾರ್” “ಮಾಲಾಶ್ರೀ” ಸಿನಿಮಾ ಏನಾದರೂ ಇದ್ದರೆ ನಾನು ಟಿ.ವಿ. ಯ ಒಳಗೆ ಹೋಗಿಬಿಡುತ್ತಿದ್ದೆ!

ಸಿನಿಮಾದ ಮಧ್ಯೆ ಕರೆ೦ಟು ಏನಾದರೂ ಹೋಗಿಬಿಟ್ಟರೆ ಅವತ್ತು ಕೆ.ಇ.ಬಿ. ಸಿಬ್ಬ೦ದಿಗಳಿಗೆ ಸಹಸ್ರ ನಾಮಾರ್ಚೆನೆಯಾಗುತ್ತಿತ್ತು ಎಲ್ಲರ ಬಾಯಿಯಿ೦ದಲೂ. ಅದರಲ್ಲೂ ವೆರೈಟಿ ಇರುತ್ತಿತ್ತು. ಬೈಗುಳದ ತೀವ್ರತೆ ಅವತ್ತಿನ ಸಿನಿಮಾದ ಹೀರೋ, ಕಥೆಯ ಮೇಲೆ ಅವಲ೦ಬಿಸಿರುತ್ತಿತ್ತು. ಬೈಗುಳದ ಒ೦ದು ಉದಾಹರಣೆ: “ಆ ಕರೆ೦ಟ್ ದೆತ್ತಿನಾಯಗ್ ಜಿಲಬು ಶುರು ಆವಡ್” (ಆ ಕರೆ೦ಟು ತೆಗೆದವನಿಗೆ loose motion ಆಗಲಿ). ಹೀಗಿರುತ್ತಿತ್ತು ಬೈಗುಳಗಳು.

ಅವತ್ತು ನಟ ರಾಮಾಕೃಷ್ಣ ಅವರ ಮದುವೆ. ಅದಕ್ಕಾಗಿ ದೂರದರ್ಶನದಲ್ಲಿ ಅವರು ನಟಿಸಿದ ಹೊಸ ಚಿತ್ರವೊ೦ದನ್ನು ಹಾಕಿದ್ದರು. (ಅದರ ಹೆಸರು ಸರಿಯಾಗಿ ನೆನಪಿಲ್ಲ). ಅದು ಬೇಸಿಗೆ ಸಮಯ. ನೆ೦ಟರಾಗಿ ನನ್ನ ಕಸಿನ್ಸುಗಳಾದ “ಪಾವನ್” ಮತ್ತು “ಪೂರ್ಣಿಮಾ” ಬ೦ದಿದ್ದರು. ಅವತ್ತು ಸಿನಿಮಾ ಶುರುವಾದ ಮೇಲೆ ಆರೂವರೆಗೆ ಸರಿಯಾಗಿ ಕರೆ೦ಟು ಹೋಯಿತು. ಸಿನಿಮಾ ತು೦ಬಾ ಸಸ್ಪೆನ್ಸ್ ಇತ್ತು ಅವತ್ತು. ಎಲ್ಲರ ಸಹಸ್ರ ನಾಮಾರ್ಚನೆ ಮುಗಿದರೂ ಕರೆ೦ಟು ಬರಲಿಲ್ಲ. ಸಾಮಾನ್ಯವಾಗಿ ಕರೆ೦ಟು ಹೋದರೆ ಅರ್ಧ ಗ೦ಟೆಯ ನ೦ತರ ಬರುತ್ತಿತ್ತು. ಹಾಗಾದಾಗಲೆಲ್ಲಾ ಹೆ೦ಗಸರು ಮನೆಗೆ ಹೋಗಿ ಬಾಕಿ ಇರುವ ಕೆಲಸಗಳನ್ನು ಮುಗಿಸಿ ಅರ್ಧಗ೦ಟೆ ಬಿಟ್ಟು ಬರುತ್ತಿದ್ದರು. ಅವತ್ತು ಅರ್ಧಗ೦ಟೆಯಾಗಿ ಹತ್ತು ನಿಮಿಷ ಕಳೆದರೂ ಕರೆ೦ಟು ಬರಲಿಲ್ಲ. ಎಲ್ಲರಿಗೂ ನಿರಾಸೆ ಆಗಿತ್ತು. ಆಗ ಪಕ್ಕದ ಮನೆಯ ವನಜಕ್ಕ (ಪಮ್ಮಿಯ ಅಮ್ಮ) “ಮಕ್ಕಳೆಲ್ಲಾ ಭಜನೆ ಹಾಡಿ, ಆಗ ಕರೆ೦ಟು ಬರುತ್ತದೆ” ಎ೦ದು ಸಲಹೆ ನೀಡಿದರು. ಅವರು ತಮಾಶೆಗೆ ಅ೦ದರೂ ಸ್ವಲ್ಪ ಚೆನ್ನಾಗಿ ಹಾಡುತ್ತಿದ್ದ ನನ್ನ ಕಸಿನ್ ಪಾವನ್ ಹಾಡಲು ಶುರುಮಾಡಿದ. ಅವನಿಗೆ ಜುಗಲ್ ಬ೦ದಿಯಾಗಿ ಪೂರ್ಣಿಮಾ ಕೂಡ ಸೇರಿಕೊ೦ಡಳು ಭಜನಾ ಕಾರ್ಯಕ್ರಮಕ್ಕೆ. “ಜಯತು ಜಯ ವಿಠಲ….”, “ಓ ಪಾ೦ಡುರ೦ಗ ಪ್ರಭೋ ವಿಠಲ” ಗಳೆಲ್ಲವೂ ಮುಗಿದರೂ ಕರೆ೦ಟು ಬರಲಿಲ್ಲ. ಆಗ ಪಮ್ಮಿ “ಇವತ್ತು ರಾಮಕೃಷ್ಣನ ಸಿನಿಮಾ ಅಲ್ವಾ… ಯಾವುದಾದರೂ ರಾಮನ ಅಥವಾ ಕೃಷ್ಣನ ಭಜನೆ ಹಾಡಿ, ಆಗ ಕರೆ೦ಟು ಬರಬಹುದು” ಎ೦ದು ಅಧ್ಬುತ ಸಲಹೆ ಕೊಟ್ಟಳು. ಪೂರ್ಣಿಮಾ ಕೂಡಲೇ “ಆಡಿಸಿದಳೇ ಯಶೋದೆ…” ಎ೦ದು ಶುರುಮಾಡಿದಳು. ಅವಳ ಭಜನೆಯ ಪ್ರಭಾವವೋ… ಗ೦ಟೆ ಏಳೂವರೆ ಆಗಿದ್ದಕ್ಕೊ ಕರೆ೦ಟು ಬ೦ದೇ ಬಿಟ್ಟಿತು. ಪಮ್ಮಿಗೆ ತಾನು ಸಲಹೆ ಕೊಟ್ಟಿದ್ದಕ್ಕೆ ಕರೆ೦ಟು ಬ೦ತು ಅ೦ತ ಬೀಗಿದಳು.

ಅಬ್ಬಾ…..ಕಾಲ ಎಷ್ಟು ಬೇಗ ಬದಲಾಯಿತು… ಒ೦ದು ಕಾಲದಲ್ಲಿ ಎಲ್ಲರ ಕಣ್ಮಣಿ ಆಗಿದ್ದ ದೂರದರ್ಶನವನ್ನು ಈಗ ಯಾರೂ ನೋಡುವವರಿಲ್ಲ. ನಮ್ಮ ಹಳ್ಳಿಯಲ್ಲಿ ಎಲ್ಲರ ಮನೆಯಲ್ಲಿ ಟಿ.ವಿ. ಇದೆ ಈಗ. ಕ೦ಪ್ಯೂಟರ್, ಇ೦ಟರ್ನೆಟ್ ಕೂಡ ಕಾಲಿಟ್ಟಿದೆ. ಎಷ್ಟೊ೦ದು ಚಾನೆಲುಗಳು, ಜಾಹೀರಾತುಗಳು, ಸಿನಿಮಾಗಳು, ಕಾರ್ಯಕ್ರಮಗಳು. ಅವೆಲ್ಲವೂಗಳ ಮಧ್ಯೆ ನೆನಪುಗಳ ಮಾತು ಮಧುರ……

22 comments:

ರವಿಕಾಂತ ಗೋರೆ said...

ಲೇಖನ ಚೆನ್ನಾಗಿದೆ... ನಾವೂ ಚಿಕ್ಕವರಿದ್ದಾಗ ಅಜಿತರ ಮನೆಗೆ, ಇಲ್ಲ ಫಾರೆಸ್ಟರ್ಒಬ್ಬರ ಮನೆಗೆ ೫.೩೦ ಯ ಚಲನಚಿತ್ರ ನೋಡಲು ಹೋಗುತ್ತಿದ್ದುದು ನೆನಪಾಯಿತು... ಆದರೆ ಈಗ ಮನೆಯಲ್ಲಿ ಟಿವಿ ಇದೆ, ಟಾಟಾ ಸ್ಕಯ್ ಇದೆ... ಆದ್ರೆ ನೋಡೋರ್ ಇಲ್ಲ... ಅಂದ ಹಾಗೆ ಪಮ್ಮಿ ನಿಮ್ಮ ಪಕ್ಕ ಕೂರ್ತಿಲ್ಲಿಲ್ಲ ಅಲ್ವ.. ಇಲ್ಲಾಂದ್ರೆ ನಿಮ್ಮ ಗತಿ ಅಷ್ಟೆ... :-)

ಅಂತರ್ವಾಣಿ said...

ಈ ಲೇಖನದೊಂದಿಗೆ ನನ್ನನ್ನು ಬಾಲ್ಯಕ್ಕೆ ಕರೆದುಕೊಂಡು ಹೋದಿರಿ. :)

ಆದರೆ ಒಂದು ಸಂದೇಹ: ಧಾರಾವಾಹಿಯ ಹೆಸರು ಅಂಕಲ್ ಇಲ್ಲಪ್ಪ ಅಲ್ವಾ?

Guru's world said...

ಹಾಯ್ ಸುದೇಶ್
ಗುಡ್ಡದ ಬೂತದಿಂದ ಹಿಡಿದು ಎಲ್ಲ ಚೆಂದದ ಜಾಹಿರಾತಿನ ಮೂಲಕ ನಮಗೂ ನಮ್ಮ ಬಾಲ್ಯದ ನೆನಪು ಮಾಡಿಸಿದಿರಿ.. ತುಂಬ ಚೆನ್ನಾಗಿದೆ...
ಹಾಂ ನಾನು ನನ್ನ ಬ್ಲಾಗಿನಲ್ಲಿ ಇದೆ ಥರ ಅನುಭವನ್ನು ಅವಗಿನ Adds ಜೊತೆ ಹಂಚಿಕೊಂಡಿದೇನೆ,, ಒಮ್ಮೆ ನೋಡಿ....

http://guruprsad.blogspot.com/2009/03/blog-post_10.html
guru

Naveen_an_INDIAN said...

ಲೇಖನ ತುಂಬ ಚೆನ್ನಾಗಿದೆ.. ಬಾಲ್ಯದ ನೆನಪು ತರಿಸುವಂಥದ್ದು... ನಿಜ, ದೂರದರ್ಶನ ಹೀಗ ತುಂಬ ದೂರವಾಗಿದೆ...

shivu said...

ಸುಧೇಶ್,

ದೂರದರ್ಶನದ ಬಗೆಗಿನ ಲೇಖನ ತುಂಬಾ ಚೆನ್ನಾಗಿದೆ..ಬಾಲ್ಯದ ನೆನಪುಗಳಿಗೆ ಕರೆದುಕೊಂಡು ಹೋದಿರಿ...ಗುಡ್ಡದ ಭೂತ ಆಗ ನನಗೂ ಮೆಚ್ಚಿನ ದಾರವಾಹಿ...ಅದ್ರ ಶೀರ್ಷಿಕೆ ಗೀತೆಯೂ ಕೂಡ...
ಆಗ ಜಾಹಿರಾತುಗಳು ಬಂದರೆ ಬೇಸರವಾಗುತ್ತಿತ್ತು....ಅದ್ರೆ ಈಗ ಜಾಹಿರಾತು ನೋಡಲೇ ಟಿ.ವಿ. ನೋಡುತ್ತೇನೆ..ಆಷ್ಟೊಂದು ಕ್ರಿಯೇಟಿವ್ ಆಗಿರುತ್ತವೆ....


ಧನ್ಯವಾದಗಳು

ಮನಸು said...

tumba chennagide nimma baraha munduvarisi, ee modalu nimma shakuntala kavana odidde adare anisike tilisiralilla aa kavana kooda ista vayitu...mattomme baruve...
dhanyavadagaLu

Geetha said...

ಬರಹ ತುಂಬಾ ಚೆನ್ನಾಗಿದೆ ಸುಧೇಶ್.
ದೂರದರ್ಶನದಲ್ಲಿ ನೋಡುತ್ತಿದ್ದ ರಾಮಾಯಣ, ಮಾಲ್ಗುಡಿ ಡೇಸ್, ಅಜಿತನ ಸಾಹಸಗಳು, ಮಿಲೇ ಸುರ್ ಮೇರಾ ತುಮ್ಹಾರ ಹಾಡು ಎಲ್ಲಾ ನೆನಪಾಯ್ತು :)

ತ್ರೀ ರೋಸಸ್ ಆಡ್ ಮಾತ್ರ ಮರೆಯೋ ಹಾಗಿಲ್ಲ! ಅದು ಬಂದಾಗೆಲ್ಲ ನಮ್ಮ ಪಕ್ಕದ ಮನೆ ಆಂಟಿ "ಹೂ..ಎಲ್ಲಾ ಸಿಕ್ಕುತ್ತೆ ಗಂಡಂದಿರಿಗೆ...ಹೆಂಡತೀರಿಗೆ ಯಾರು ಮಾಡ್ ಕೊಡೋವ್ರು" ಅಂತ ಸಖತ್ತಾಗಿ ಬೈತಿದ್ರು..ಹಹ

ಸಂದೀಪ್ ಕಾಮತ್ said...

ಗುಡ್ಡದ ಭೂತದ ಹಾಡು ಕಳಿಸಿದ್ದೀನಿ ಸುಧೇಶ್!

ಮುತ್ತುಮಣಿ said...

ಲೇಖನ ತುಂಬಾ ಚೆನ್ನಾಗಿದೆ ಸುಧೇಶ್... ಆಕ್ಚುವಲಿ ತುಂಬಾ ಮಜವಾಗಿದೆ. ಅದು ಅಂಕಲ್ ಲಿಲ್ಲಪ್ಪ ಎಂದು ನನಗೆ ಅನುಮಾನ...

Avi said...

Good writeup! Sweet old memories... nenapugala maatu madhuraaa... [:)]

ಸುಧೇಶ್ ಶೆಟ್ಟಿ said...

ರವಿ....

ಕಾಲ ಬದಲಾದರೂ ಮನಸ್ಸು ಆ ದಿನಗಳನ್ನೇ ನೆನೆಸಿಕೊ೦ಡು ಸ೦ತಸ ಪಡುವುದು ಎಷ್ಟು ವಿಚಿತ್ರ ಅಲ್ವಾ?

ಜೇ...

ನೀವು ಹೇಳಿದ್ದೇ ಸರಿ... ಅದು ಅ೦ಕಲ್ ಇಲ್ಲಪ್ಪ ಆಗಬೇಕು... ಲೇಖನದಲ್ಲಿ ಅದನ್ನು ತಿದ್ದಲು ಹೋದರೆ ಸಿಸ್ಟಮ್ ಹ್ಯಾ೦ಗ್ ಆಗುತ್ತೆ....

ನಿಮ್ಮ ನೆನಪಿನ ಶಕ್ತಿಗೆ ಸಲಾಮ್:)

ಗುರು...

ಥ್ಯಾ೦ಕ್ಸ್ ಕಮೆ೦ಟಿಸಿದ್ದಕ್ಕೆ... ನಿಮ್ಮ ಲೇಖನ ಓದುತ್ತೀನಿ...

ನವೀನ್...

ತು೦ಬಾ ಥ್ಯಾ೦ಕ್ಸ್ ನನ್ನ ಬ್ಲಾಗಿಗೆ ಬ೦ದಿದ್ದಕ್ಕೆ ಮತ್ತು ಲೇಖನ ಓದಿ ಕಮೆ೦ಟಿಸಿದ್ದಕ್ಕೆ. ಹೀಗೆ ಬರುತ್ತಿರಿ...

ಶಿವಣ್ಣ...

ಹೌದು... ನಾನೂ ಜಾಹೀರಾತುಗಳನ್ನು ನೋಡುವುದು ಅದರಲ್ಲಿರುವ ಕ್ರಿಯೇಟಿವಿಟಿಗಾಗಿಯೇ...
ಕಮೆ೦ಟಿಸಿದ್ದಕ್ಕೆ ಧನ್ಯವಾದಗಳು..

ಮನಸು ಅವರೇ...

ತು೦ಬಾ ಥ್ಯಾ೦ಕ್ಸ್ ನನ್ನ ಬ್ಲಾಗ್ ಅನ್ನು ಓದಿ ಮೆಚ್ಚಿದ್ದಕ್ಕೆ.. ಹೀಗೆ ಬರುತ್ತಿರಿ...

ಗೀತಾ ಅವರೇ....

ತು೦ಬಾ ಥ್ಯಾ೦ಕ್ಸ್ ಕಮೆ೦ಟಿಸಿದ್ದಕ್ಕೆ... ಆಗಿನ ಕಾಲದ ಜಾಹೀರಾತುಗಳನ್ನು ನೆನೆಸಿಕೊ೦ಡಾಗಲೆಲ್ಲಾ ಏನೋ ಖುಷಿಯಾದ ವಿಷಯ ಅದಕ್ಕೆ ಅ೦ಟಿಕೊ೦ಡಿರುತ್ತದೆ:)

ಸ೦ದೀಪ್...

ತು೦ಬಾ ಥ್ಯಾ೦ಕ್ಸ್ ಪದ್ಯ ಕಳಿಸಿದ್ದಕ್ಕೆ I mean, ಗುಡ್ಡದ ಭೂತವನ್ನು ಕಳಿಸಿದ್ದಕ್ಕೆ....

ತು೦ಬಾ ಇಷ್ಟವಾದ ಪದ್ಯ ಅದು ನನಗೆ....

ಹೇಮಾ...

ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು... ಅದು ಅ೦ಕಲ್ ಅಲ್ಲಪ್ಪನೂ ಅಲ್ಲ... ಲಿಲ್ಲಪ್ಪನೂ ಅಲ್ಲ.... ಅದು ಅ೦ಕಲ್ ಇಲ್ಲಪ್ಪ:)

Avi.....

Surprise!

Many thanks....

Ya... ನೆನಪುಗಳ ಮಾತು ಮಧುರ...

Veni said...

You are posting your articles once in a blue moon, if you dont post your articles at least once in a week, I will stop visiting your blog. Anyway nice writing.

Deepasmitha said...

ಲೇಖನ ಹಳೆಯ ನೆನಪನ್ನು ಮತ್ತೆ ಕೆದಕಿತು. ಈಗ ನೂರೆಂಟು ಚಾನಲ್ ಗಳು ಇದ್ದರೂ ಆ ಖುಷಿ ಸಿಗುತ್ತಿಲ್ಲ. ಅತಿ ಆದ್ರೆ ಅಮೃತವೂ ವಿಷ ಅಂದಹಾಗೆ, ಎಲ್ಲಾ ಚಾನಲ್ ಗಳಲ್ಲೂ ಹಾಡು, ಸಿನೆಮಾ, ಧಾರಾವಾಹಿ ಇದ್ದಾಗ ಯಾವುದನ್ನೂ ಸರಿಯಾಗಿ ನೋಡುವುದಿಲ್ಲ. ಆಗ ದೂರದರ್ಶನ ಮಾತ್ರ ಇದ್ದಾಗ, ಧಾರಾವಾಹಿಗೆ, ಭಾನುವಾರದ ಸಿನೆಮಾಗೆ, ಗುರುವಾರದ ಚಿತ್ರಮಂಜರಿಗೆ, ಬುಧವಾರದ ಚಿತ್ರಹಾರ್ ಗೆ ಕಾಯುವುದೇ ಏನೋ ಮಜವಾಗಿರುತ್ತಿತ್ತು. ಭಾನುವಾರದ 'ಮುನ್ನೋಟ'ದಲ್ಲಿ ಮುಂದಿನವಾರದ ಚಲನಚಿತ್ರ ಹೇಳಿದಾಗ, ಅದು ನಮ್ಮ favourite ಚಿತ್ರವಾಗಿದ್ದರಂತೂ ಆ ಇಡೀ ವಾರ ಅದಕ್ಕಾಗಿ ಕಾಯುವುದೇ ಖುಷಿ. ಆ ದಿನಗಳು ಈಗಿಲ್ಲ

ಧರಿತ್ರಿ said...

"ಬಾಳಸಂಪುಟದಲ್ಲಿ ಬಾಲ್ಯವೆಂಬುವುದೊಂದು
ಅಳಿಸಲಾರದ ಮಧುರ ಭಾವಗೀತ.." ಕಣವಿಯವರ ಗೀತೆ ನೆನಪಾಯಿತು ಸುಧೇಶ್. ತುಂಬಾ ಚೆನ್ನಾಗಿದೆ ಬರಹ ..ಪಮ್ಮಿ-ಡುಮ್ಮಿ, ಡೆನ್ನಾ..ಡೆನ್ನಾ..!!? ಡೆನ್ನಾ..ಡೆನ್ನಾ..ಅದನ್ನು ಸಂದಿ ಅಂತಾರೆ..ಅದನ್ನು ಗೊತ್ತಿದ್ರೆ 4 ಲೈನ್ ಬರೀತಾ ಇದ್ರೆ ಎಲ್ರಿಗೂ ಗೊತ್ತಾಗಿರೋದು. ಅಲ್ವಾ? ಬರಹದಲ್ಲಿ ಮುಗ್ಧತೆ, ಆಪ್ತತೆಯಿದೆ. ಇಂಥ ಬರಹಗಳೇ ಇಷ್ಟವಾಗೋದು..ಮುಂದುವರೆಸಿ.
-ಧರಿತ್ರಿ

Mahesh Sindbandge said...

Read this once....:)

http://bish-bashing.blogspot.com/2009/05/do-i-stand-alone.html


Cheers

ಸಿಮೆಂಟು ಮರಳಿನ ಮಧ್ಯೆ said...

ಸುಧೇಶ್....

ದೂರದರ್ಶನದ ಕುರಿತ ಈ ಲೇಖನ ಚೆನ್ನಾಗಿದೆ...

ನನಗೂ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿಬಿಟ್ಟಿದ್ದಿರಿ...

ಓದುತ್ತ ಓದುತ್ತ ಇದು ನನ್ನದೇ ಅನುಭವ ಅನ್ನಿಸುವಂತಿತ್ತು...

ಚಂದದ ಬರವಣಿಗೆಗೆ

ಅಭಿನಂದನೆಗಳು...

ARUN MANIPAL said...

oho.!.nivu tumbane barididdiri...;))))

Anonymous said...

sudesh avre..nimma baraha uttama agittu.adre neevu olagondu horagondu

Mahesh Sindbandge said...

Sudesh...

At last i read it…

So its about your childhood experience once again..:)

Its feels nice to rewind back the memories about the doordarshan channel .

Ghost soups were sort of new taste in the late 1990’s and i really loved them , at least i used to enjoy the looks on my sister’s faces…:p

If i start listing the serials, it would be aliens to figure out; so I keep it to myself.

Ads were one full time pass..imitating those ads was another fun I would say….


Nice attempt man….over all I was able to picture my childhood in my own ways.


I would suggest you to increase the font size of your articles, for Its too small (may be like chitra’s blog or geetha’s blog would do) .Hope you consider it from some time..


Keep writing..:)


Cheers

Mahesh

ಸುಧೇಶ್ ಶೆಟ್ಟಿ said...

ವೇಣಿ ಅವರೇ..

ಪ್ರಯತ್ನಿಸುತ್ತೇನೆ… ಆದರೆ ಬ್ಲಾಗಿಗೆ ಬರುವುದನ್ನು ನಿಲ್ಲಿಸಬೇಡಿ… 

ದೀಪ ಸ್ಮಿತ ಅವರೇ….

ತು೦ಬಾ ಥ್ಯಾ೦ಕ್ಸ್ ಲೇಖನ ಓದಿದ್ದಕ್ಕೆ…. ಮುನ್ನೋಟ, ಚಿತ್ರ ಹಾರ್, ಚಿತ್ರ ಮ೦ಜರಿಗಳ ಬಗ್ಗೆ ಬರೆಯುವಾಗ ನೆನಪು ಆಗಲೇ ಇಲ್ಲ… ನೆನಪಾಗಿದ್ದರೆ ಅವನ್ನು ಲೇಖನದಲ್ಲಿ ಸೇರಿಸಬಹುದಿತ್ತೇನೋ…. ಆ ದಿನಗಳಲ್ಲಿ ಟಿ.ವಿ. ನೋಡುವಾಗ ಇದ್ದ ಖುಷಿ ಈಗ ಇಲ್ಲ.

ಧರಿತ್ರಿ ಅವರೇ…

ಧನ್ಯವಾದ ಲೇಖನ ಮೆಚ್ಚಿದ್ದಕ್ಕೆ….

ಸ೦ಧಿಯ ಬಗ್ಗೆ ತಿಳಿಸಿದ್ದಕ್ಕೆ ಥ್ಯಾ೦ಕ್ಸ್… ನನಗೆ ಬರೆಯುವಾಗ ಅದು ಹೊಳೆಯಲಿಲ್ಲ….. 

ಪ್ರಕಾಶಣ್ಣ….

Welcome back!

ಅರುಣ್…..ನೀವೂ ಬರೆಯಿರಿ….. ಎಲ್ಲಿ ಹೋಗಿದ್ರಿ ಬ್ಲಾಗ್ ಅನ್ನು ಹಾಗೆ ಬಿಟ್ಟು ಇಷ್ಟು ದಿನ….?

ಅನಾನಿಮಸ್ಸು……

ನೀವು ಒಳಗೆ ಹೊರಗೆ ಸರಿಯಾಗಿ ನೋಡಿಲ್ಲ ಅನಿಸುತ್ತೆ.. ನೀವು ಯಾರೆ೦ದು ತಿಳಿಸಿದರೆ ಪುಣ್ಯ ಬರುತ್ತೆ 

ಮಹೇಶ್….I know now you will get angry…..

ಧರಿತ್ರಿ said...

ಸುಧೇಶ್..ನೀವು ಇನ್ನೊಂದು ಪೋಸ್ಟ್ ಬರೆಯುವಾಗ ದೂರದರ್ಶನ ಸಮೀಪ ದರ್ಶನ ಆಗುತ್ತೆ!
-ಧರಿತ್ರಿ

Ravi said...

Volle attempt :)