Skip to main content

ಅವಳ ಚರಿತ್ರೆ.....

ಅವಳಿಗೆ ಆ ಬುದ್ಧಿ ಎಲ್ಲಿ೦ದ ತಗುಲಿಕೊ೦ಡಿತ್ತೋ ಗೊತ್ತಿಲ್ಲ. ಎಲ್ಲರೂ ತನ್ನನ್ನೇ ಓಲೈಸಬೇಕು, ತನ್ನ ಹಿ೦ದೆ ಬೀಳಬೇಕೆನ್ನುವ ಕೆಟ್ಟ ಬುದ್ಧಿ ಅವಳಿಗೆ ಬಾಲ್ಯದಿ೦ದಲೇ ಬ೦ದಿರಬೇಕು. ಅವಳಿಗೆ ಬಾಲ್ಯ ಇನ್ನೂ ಮಸುಕಾಗಿ ನೆನಪಿದೆ. ಫಾರಿನಿನಲ್ಲಿರುವ ಅಪ್ಪ ವರುಷಕೊಮ್ಮೆ ಬ೦ದು ಹೋಗುತ್ತಾನೆ. ಅಮ್ಮ ಫ್ಯಾಷನ್ ಡಿಸೈನ್, ಸಮಾಜ ಸೇವೆ, ಪಾರ್ಟಿ, ಬೋಟಿಕ್ ಎ೦ದೆಲ್ಲಾ ಬ್ಯುಸಿಯಾಗಿರುವಾಕೆ. ಆಯಾಳ ಕೈಲಿ ಬೆಳೆದವಳಾಕೆ. ಅವಳಿಗಿದ್ದ ಒ೦ದೇ ಆಭರಣವೆ೦ದರೆ ಸೌ೦ದರ್ಯ.

ಅವಳಿಗೆ ಸ್ಕೂಲಿನಲ್ಲಿ ಯಾರೂ ಆಗದಿದ್ದರೂ ಮ್ಯಾಥ್ಸ್ ಟೀಚರ್ ಮಾತ್ರ ತು೦ಬಾ ಇಷ್ಟ. ಅವಳ ಮನೆಯಲ್ಲಿದ್ದ ಗುಲಾಬಿ ಗಿಡ ಮ್ಯಾಥ್ಸ್ ಟೀಚರಿಗಾಗಿಯೇ ಹೂ ಬಿಡುತ್ತಿತ್ತು. ಅದು ಬಿಟ್ಟ ಹೂವುಗಳು ದೇವರ ಮುಡಿ ಏರದಿದ್ದರೂ ದಿನಾ ಮ್ಯಾಥ್ಸ್ ಟೀಚರ್ ಮುಡಿ ಏರುತ್ತಿತ್ತು. ಗುಲಾಬಿ ತೆಗೆದುಕೊ೦ಡು ಟೀಚರ್ ಥ್ಯಾ೦ಕ್ಸ್ ಎ೦ದರೆ ಅವಳಿಗೆ ಲೋಕ ಗೆದ್ದಷ್ಟು ಸ೦ತಸವಾಗುತ್ತಿತ್ತು. ಟೀಚರಿಗೆ ತಾನೆ೦ದರೆ ತು೦ಬಾ ಇಷ್ಟ ಅ೦ದುಕೊ೦ಡಿದ್ದಳು.

ಅದೊ೦ದು ದಿನ ಮ್ಯಾಥ್ಸ್ ಟೀಚರ್ ಹೋಮ್‍ವರ್ಕ್ ಚೆಕ್ ಮಾಡುತ್ತಿದ್ದರು. ಅವಳು ಹೋಮ್‍ವರ್ಕ್ ಮಾಡಿರದಿದ್ದರೂ ಹೆದರಲಿಲ್ಲ. ತಾನು ಟೀಚರಿಗೆ ದಿನಾ ಗುಲಾಬಿ ನೀಡುತ್ತೇನಾದ್ದರಿ೦ದ ಅವರು ನನಗೆ ಬಯ್ಯುವುದಿಲ್ಲ ಎನ್ನುವುದು ಅವಳ ಅನಿಸಿಕೆ ಮತ್ತು ಧೋರಣೆಯಾಗಿತ್ತು. “ಹೋಮ್ ವರ್ಕ್ ಯಾಕೆ ಮಾಡಿಲ್ಲ” ಎ೦ದು ಟೀಚರ್ ಕೇಳಿದಾಗ ಅವಳು ’ನನಗೆ ಮರೆತು ಹೋಯಿತು’ ಎ೦ದುಸುರಿದಳು. ಟೀಚರ್ ಕೈಯ ಗ೦ಟಿಗೆ ಎರಡೇಟು ಬಿಗಿದರು. ಇವಳು ಮನೆಗೆ ಹೋದವಳು ಬೇರು ಸಮೇತ ಗುಲಾಬಿ ಗಿಡವನ್ನು ಕಿತ್ತು ಹಾಕಿದಳು.

ಅವಳ ಮನೆಯಲ್ಲೇನೋ ಫ೦ಕ್ಷನ್ ಇತ್ತು. ಅದಕ್ಕಾಗಿ ಮಾಡಿದ್ದ ಸ್ವೀಟುಗಳನ್ನು ಅವಳು ಸ್ಕೂಲಿಗೆ ತೆಗೆದುಕೊ೦ಡು ಹೋಗಿದ್ದಳು. ತರಗತಿಯಲ್ಲಿ ಒಟ್ಟು ಎಷ್ಟು ಜನ ಇದ್ದಾರೆ೦ದು ಅವಳಿಗೆ ಗೊತ್ತಿದ್ದರೂ, ಬೇಕೆ೦ದೇ ಅವಳು ಕಡಿಮೆ ಸ್ವೀಟ್ ತೆಗೆದುಕೊ೦ಡು ಹೋಗಿದ್ದಳು. ಕ್ಲಾಸಿನಲ್ಲಿ ಸ್ವೀಟ್ ಹ೦ಚುವಾಗ ಎಲ್ಲರೂ ’ಏ ನ೦ಗೆ ಸ್ವೀಟು…” ಎ೦ದು ಮುಗಿಬಿದ್ದಾಗ ಅವಳಿಗೆ ಆನ೦ದವಾಗಿತ್ತು. ನಾನು ತ೦ದಿರುವ ಸ್ವೀಟಿನಿ೦ದಾಗಿ ಎಲ್ಲರೂ ನನ್ನನ್ನು ಓಲೈಸುತ್ತಿದ್ದಾರೆ ಎ೦ದವಳು ಅರ್ಥ ಮಾಡಿಕೊ೦ಡಳು. ತನ್ನಲ್ಲಿರುವ ವಸ್ತುವಿನಿ೦ದ ಯಾರನ್ನೂ ಬೇಕಾದರೂ ಕೊಳ್ಳಬಹುದು ಅ೦ದುಕೊ೦ಡಳು ಅವಳು. ಅಪ್ಪ ಫಾರಿನಿನಿ೦ದ ತ೦ದಿದ್ದ ಚಾಕಲೇಟುಗಳೆಲ್ಲವನ್ನೂ ಫ್ರೆ೦ಡ್ಸಿಗೆ ಕೊಡುವುದು, ಪಾಕೆಟ್ ಮನಿಯಿ೦ದ ಐಸ್‍ಕ್ರೀಮ್ ಕೊಡಿಸುವುದು ಇದೆಲ್ಲವೂ ಅವಳಿಗೆ ತು೦ಬಾ ಇಷ್ಟದ ಸ೦ಗತಿಗಳು. ಅವಳ ಸುತ್ತಾ ಫ್ರೆ೦ಡ್ಸ್ ಗ್ರೂಪ್ ಯಾವಾಗಲೂ ಸುತ್ತುವರಿದಿರುತ್ತದೆ ಮತ್ತು ಅದಕ್ಕೆ ಅವಳು ಹೆಮ್ಮೆ ಪಡುತ್ತಿದ್ದಳು.

ಅ೦ದವಳ ಸ್ಕೂಲ್ ಬ್ಯಾಗಿನಲ್ಲೊ೦ದು ಪತ್ರವಿತ್ತು. ತೆರೆದು ಓದಿದರೆ ಅದು ಅವಳ ಕ್ಲಾಸ್‍ಮೇಟ್ ಬರೆದಿದ್ದು. ಪಿ.ಟಿ, ಪೀರಿಯಡ್‍ನಲ್ಲಿ ಬ್ಯಾಗಿನೊಳಗೆ ಹಾಕಿರಬೇಕು ಅದನ್ನು. ಅವನು ಪ್ರೇಮ ನಿವೇದಿಸಿದ್ದ. ಅವಳಿಗೆ ಅವನ ರೂಪ ಕಣ್ಣೆದುರಿಗೆ ಬ೦ತು. ಆತ ಚ೦ದದ ಹುಡುಗ. ಸ್ಪೋರ್ಟ್ಸ್ ಮತ್ತು ಓದು ಎರಡರಲ್ಲೂ ಮು೦ದಿದ್ದ ಹುಡುಗ. ಆತನನ್ನು ನಿರಾಕರಿಸಲು ಕಾರಣಗಳೇ ಸಿಗಲಿಲ್ಲ ಅವಳಿಗೆ. ಅವತ್ತು ರಾತ್ರಿಯಿಡೀ ಕುಳಿತು ಅವನಿಗೊ೦ದು ಪ್ರೇಮ ಪತ್ರ ಬರೆದಳು. ಅವಳು ತನ್ನ ಡೈರಿಯಲ್ಲಿ ಬರೆದುಕೊ೦ಡಳು “First love is a great feeling”. ಮರುದಿನ ಆತ ಎದುರಾದಾಗ ಅವಳು ನಾಚಿ ನೀರಾದಳು.

ಅವನು ಅರಚಿದರೆ ಇವಳು ಕಿರುಚುತ್ತಾಳೆ. ಅವನಿಗೆ ಓದಬೇಕೆನಿಸಿದರೆ ಇವಳಿಗೆ ಐಸ್‍ಕ್ರೀಮ್ ಮೆಲ್ಲಬೇಕೆನಿಸುತ್ತದೆ. ಇವಳಿಗೆ ಸಿನಿಮಾ ಹೋಗಬೇಕು ಎ೦ದೆನಿಸಿದರೆ ಅವನಿಗೆ ಫ್ರೆ೦ಡ್ಸ್ ಜೊತೆ ಕ್ರಿಕೆಟ್ ಆಡಬೇಕೆನಿಸುತ್ತದೆ. ಆತನಿಗೆ ತನ್ನನ್ನು ಸರಿಯಾಗಿ ಪ್ರೀತಿ ಮಾಡುವಷ್ಟು ಒಳ್ಳೆಯತನವಿಲ್ಲ ಎ೦ದವಳು ಅ೦ದುಕೊ೦ಡಿದ್ದಾಳೆ. ಅದೊ೦ದು ಒ೦ದೇ ಸಮನೇ ಕಿತ್ತಾಡಿಕೊ೦ಡಿದ್ದರು. ಮರುದಿನ ಸ್ಕೂಲಿನಲ್ಲಿ ಮುಖ ತಿರುಗಿಸಿಕೊ೦ಡು ಓಡಾಡಿದರು. ಆ ಸ೦ಜೆ ಅವಳ ಬ್ಯಾಗಿನಲ್ಲೊ೦ದು ಪತ್ರವಿತ್ತು. ’ನನ್ನನ್ನು ಮರೆತುಬಿಡು’ ಎ೦ದವನು ಬರೆದಿದ್ದ. ಇವಳು ಮೂರುದಿನ ಊಟ, ನಿದ್ರೆ ಸರಿಯಾಗಿ ಮಾಡದೇ ವಿರಹ ವೇದನೆ ಅನುಭವಿಸಿದಳು.

ಅವಳೀಗ ಡಿಗ್ರಿ ಮೊದಲ ವರ್ಷ ಓದುತ್ತಿದ್ದಾಳೆ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಅನ್ನಿಸುವಷ್ಟು ಅ೦ದಗಾತಿಯಾಗಿದ್ದಾಳೆ. ’ಅವಳು ನನ್ನ ಜೊತೆ ಮಾತನಾಡಿದಳು ಕಣೋ..’ ಎ೦ದು ಹೇಳಿಕೊಳ್ಳುವುದು ಇತರ ಹುಡುಗರಿಗೆ ಹೆಮ್ಮೆಯ ವಿಷಯವಾಗಿತ್ತು. ಅವಳ ಫ್ರೆ೦ಡ್ಸ್ ಸರ್ಕಲ್ ಇನ್ನೂ ದೊಡ್ಡದಾಗಿದೆ. ಅದರಲ್ಲಿ ಶ್ರೀಮ೦ತರೂ, ಮಧ್ಯಮ ವರ್ಗದವರು ಎಲ್ಲರೂ ಇದ್ದಾರೆ. ಅವಳು ಎಲ್ಲರ ಜೊತೆಗೂ ಸಮನಾಗಿ ವರ್ತಿಸುತ್ತಾಳೆ. ಈ ಫ್ರೆ೦ಡ್ಸ್ ಎಲ್ಲಾ ನನ್ನ ಶ್ರೀಮ೦ತಿಕೆ, ಸೌ೦ದರ್ಯದ ಫಲಿತಾ೦ಶ ಎ೦ದವಳು ಬಲವಾಗಿ ನ೦ಬಿದ್ದಾಳೆ.

ಅವಳು ಅವನನ್ನು ಗಮನಿಸಿದ್ದು ಕಾಲೇಜು ಎಲೆಕ್ಷನ್ ಸಮಯದಲ್ಲಿ. ಅವನು ಫೈನಲ್ ಇಯರ್ ಡಿಗ್ರಿಯಲ್ಲಿ ಓದುತ್ತಿದ್ದ. ಅವನು ಅವಳನ್ನು ಸೂಜಿಗಲ್ಲಿನ೦ತೆ ಆಕರ್ಷಿಸಿದ್ದ. ಆದರೆ ಅವನು ಇವಳನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಅದು ಅವಳ ಅಹ೦ಗೆ ಪೆಟ್ಟು ಹಾಕಿತ್ತು. ’ಅವನು ನಿನ್ನನ್ನು ಕಣ್ಣಿತ್ತಿಯೂ ನೋಡಲ್ಲ ಕಣೇ, ಅವನು ಲವ್ ಅ೦ತೆಲ್ಲಾ ಹೋಗುವುದಿಲ್ಲ” ಅ೦ದರು ಅವಳ ಫ್ರೆ೦ಡ್ಸ್. ’ನೋಡುತ್ತಿರಿ… ಅವನು ನನ್ನ ಪ್ರೀತಿಯ ಬಲೆಗೆ ಬೀಳುವ೦ತೆ ಮಾಡುತ್ತೇನೆ” ಎ೦ದವಳು ಚಾಲೆ೦ಜ್ ಹಾಕಿದಳು. ಮರುದಿನದಿ೦ದ ಅವಳು ಆತನ ತರಗತಿಯತ್ತ ತನ್ನ ಪಟಾಲ೦ ಕಟ್ಟಿಕೊ೦ಡು ಸುತ್ತುವುದು, ಆತ ಎದುರಿಗೆ ಸಿಕ್ಕರೆ ಸುಮ್ಮನೇ ನಾಚುವುದು” ಎಲ್ಲಾ ನಡೆದಿತ್ತು.

ಆ ದಿನ ಕಾಲೇಜು ಡೇ. ಅವಳು ವಿಶೇಷವಾಗಿ ಅಲ೦ಕರಿಸಿಕೊ೦ಡಿದ್ದಳು. ಅವಳು ತನ್ನ ಗೆಳತಿಯ ಮೂಲಕ ಆತನಿಗೆ ಪ್ರೊಪೋಸ್ ಮಾಡಿದಳು. ಆತ ’ಸ್ಸಾರಿ’ ಎ೦ದು ಉತ್ತರ ಕಳುಹಿಸಿದ. ಅವಳು ತನ್ನ ಕೈಯನ್ನು ಬ್ಲೇಡಿನಿ೦ದ ಗೀಚಿದಳು.ಮರುದಿನ ಆತನಿ೦ದ ’ I love you” ಎ೦ದು ಉತ್ತರ ಬ೦ದಿತ್ತು. ಸ೦ಜೆ ಆಕೆಯ ಗೆಳತಿಯರು ಅವಳಿಗೆ ಟ್ರೀಟ್ ಕೊಡಿಸಿದರು ಬೆಟ್ ಸೋತಿದ್ದಕ್ಕಾಗಿ.

ಅ೦ದು ಡಿಗ್ರಿಯ ಕೊನೆ ದಿನ. ಆತ ಫೈನಲ್ ಇಯರ್ ಮುಗಿಸಿ ಕಾಲೇಜು ಬಿಡುವವನಿದ್ದ. ಅವರಿಬ್ಬರೂ ಐಸ್‍ಕ್ರೀಮ್ ಪಾರ್ಲರ್ ನಲ್ಲಿದ್ದರು. ಅವನು ಅನ್ನುತ್ತಿದ್ದ “ನೋಡು… ನಾನು ಇನ್ನೂ ಓದುವುದಿದೆ. ನ೦ತರ ಕೆಲಸ ಸೇರಿ ಸೆಟಲ್ ಆಗಬೇಕು

. ಅದರ ನ೦ತರ ನಾನು ಮನೆಯಲ್ಲಿ ನಮ್ಮಿಬ್ಬರ ಬಗ್ಗೆ ಮಾತನಾಡುತ್ತೇನೆ. ಅಲ್ಲಿಯವರೆಗೆ ನನಗೆ ಕಾಯುತ್ತೀಯಲ್ವಾ?”

ಅವಳು ನಕ್ಕು, “ನನ್ನ ಬಗ್ಗೆ ಪೇರೆ೦ಟ್ಸ್ ಜೊತೆ ಮಾತನಾಡಲು ಏನಿದೆ. ಇದುವರೆಗೆ ನಾನು ಮಾಡಿದ್ದು ಟೈಮ್ ಪಾಸ್ ಅಷ್ಟೇ… “ ಎ೦ದಳು.

ಮರುದಿನ ಪೇಪರಿನಲ್ಲಿ ಆಕೆಯ ಫೋಟೋ ಮುಖಪುಟದಲ್ಲಿ ಬ೦ದಿತ್ತು. ಹೆಡ್ಡಿ೦ಗ್‍ನಲ್ಲಿ ಬರೆದಿತ್ತು “ಪ್ರೀತಿ ನಿರಾಕರಿಸಿದ್ದಕ್ಕಾಗಿ ಯುವತಿಯ ಮೇಲೆ ಆಸಿಡ್ ಸುರಿದ ಭಗ್ನ ಪ್ರೇಮಿ”.

Comments

Pramod said…
ಕಿಲ್ಲರ್ ಕಥೆ :) Hero is badass..
ಕಥೆ ಚೆನ್ನಾಗಿದೆ..

@ಪ್ರಮೋದ್:
ಇದರಲ್ಲಿ ಹೀರೋ, ಹೀರೋಯಿನ್ ಇಬ್ಬರ ತಪ್ಪೂ ಇದೆ... ಹೀರೋ ಮಾಡಿದ್ದೂ ತಪ್ಪು ನಿಜ. ಆದರೆ ಸುಮ್ಮನೆ ತನ್ನಷ್ಟಕ್ಕಿದ್ದವನನ್ನು ಪ್ರೀತಿ ಎಂದು ಆತ ಆಡಿಸಿದ್ದು ಆಕೆಯ ತಪ್ಪಲ್ವಾ?
ಇದು ನಿಜ ಕಥೆಯಾ..ಇಲ್ಲ ಕಾಲ್ಪನಿಕವೋ?! ಏನೇ ಆದರೂ ತಪ್ಪು ಅವಳಿಂದ ನಡೆದಿದ್ದರೂ ಆತ ಮಾಡಿದ್ದು ಅಕ್ಷಮ್ಯ ಅಪರಾಧ. ಕ್ಷಮೆ ಎನ್ನುವುದು ತಪ್ಪಿಗೆ ಸಿಗುವುದೇ ಹೊರತು ಅಪರಾಧಕ್ಕೆ ಸಿಗುವುದು ಕೇವಲ ಶಿಕ್ಷೆ ಅಷ್ಟೇ! ಇದು ಬಾಹ್ಯ ಸೌಂದರ್ಯಕ್ಕೆ ಮಾರುಹೋಗುವವರಿಗೊಂದು ಪಾಠವೂ ಹೌದು.
Pramod said…
@Harish,
ಇಬ್ರದ್ದೂ ತಪ್ಪೇ. ಹುಡ್ಗ೦ದು ಜಾಸ್ತಿ ತಪ್ಪು ಅನ್ಸುತ್ತೆ. ಇದ್ರ ಬಗ್ಗೆ ಚರ್ಚೆ ಬೇಡ ಸರ್:):)
ಸುಧೇಶ್,
ಈಗಿನ ದಿನಗಳಲ್ಲಿ ನಡೆಯುವ ಸಾಮಾನ್ಯ ಸಂಗತಿಯನ್ನು ಕಥೆ ಮಾಡಿ ಚೆನ್ನಾಗೆ ನಿರೂಪಿಸಿದ್ದೀರ...

ಹುಡುಗಿಯರು ಮೋಸ ಮಾಡುತ್ತಾರೋ? ಹುಡುಗರು ಅಪರಾಧ ಮಾಡುತ್ತಾರೋ?... ಒಟ್ಟಿನಲ್ಲೆ ಈ ಇಬ್ಬರಿಂದ ದುಃಖ ಅನುಭವಿಸುವರು ತಂದೆ ತಾಯಿರರು.

ಏನು ಇಷ್ಟು ವೇಗವಾಗಿದೆ ಕಥೆ..ಶಾಲೆ ದಿನ ಅನ್ನುವಾಗಲೇ ಮೊದಲ ವರ್ಷ ಡಿಗ್ರಿ... ಆಮೇಲೆ ಮೂರನೆ ವರ್ಷ..
ನಿಮ್ಮಂತೆ ಕಥೆಗಳು ಬರೆಯೋರು ಇದ್ದರೆ.. ಮೆಗಾ ಸೀರಿಯಲ್ಲುಗಳೆಲ್ಲ ಇರೋದೇ ಇಲ್ಲ.. ಆಗ ನಾನು ಅಂತಹ ಸೀರಿಯಲ್ ನೋಡ ಬಹುದು.. :)
ತು೦ಬಾ ಸ೦ತೋಷವಾಯಿತು ಇಲ್ಲಿರುವ ಕಮೆ೦ಟುಗಳನ್ನು ನೋಡಿ. ಇದನ್ನು ಒ೦ದು ರೀತಿಯಲ್ಲಿ ನನ್ನ ಮೊದಲ ಕಥೆ ಅ೦ತಲೇ ಹೇಳಬಹುದು. ಆದ್ದರಿ೦ದ ಪೋಸ್ಟ್ ಮಾಡುವಾಗ ಪ್ರತಿಕ್ರಿಯೆ ಹೇಗಿರಬಹುದು ಎ೦ಬ ಕುತೂಹಲ ಇತ್ತು. ಆಗ್ಲೇ ಇಲ್ಲಿ ಚರ್ಚೆ ನಡೆದಿರುವುದನ್ನು ನೋಡಿ ಬಹಳ ಸ೦ತೋಷವಾಯಿತು.

ಪ್ರಮೋದ್, ಹರೀಶ್ ಮತ್ತು ತೇಜಸ್ವಿನಿಯವರೇ... ನಿಮ್ಮ ಪ್ರತಿಕ್ರಿಯೆಗಳಿಗೆ ತು೦ಬಾ ಧನ್ಯವಾದಗಳು.

ಹರೀಶ್ ಅ೦ದ೦ತೆ ಇದರಲ್ಲಿ ಹೀರೋ ಮತ್ತು ಹೀರೋಯಿನ್ ಇಬ್ಬರದೂ ತಪ್ಪಿದೆ. ಹುಡುಗ ಮತ್ತು ಹುಡುಗಿ ಎ೦ಬುದನ್ನು ಬಿಟ್ಟು ಪಾತ್ರಗಳಾಗಿ ಪರಿಗಣಿಸಿದರೆ ಎರಡೂ ಪಾತ್ರಗಳೂ ಕೇವಲ ಸಾ೦ಕೇತಿಕ. ಎರಡೂ ಪಾತ್ರಗಳ ಮೂಲಕ ಸಮಾಜದಲ್ಲಿ ಹೀಗೂ ನಡೆಯಬಹುದು ಎ೦ದು ಹೇಳುವುದು ನನ್ನ ಉದ್ದೇಶ.
ಹರೀಶ್ ಅ೦ದ೦ತೆ ಅವಳು ತನ್ನಷ್ಟಕ್ಕೆ ಇದ್ದವನನ್ನು ಪ್ರೀತಿ ಎ೦ದು ಆಡಿಸಿದ್ದು ತಪ್ಪು, ಹಾಗೆಯೇ ಪ್ರಮೋದ್ ಅ೦ದ೦ತೆ ಆತ ಮಾಡಿದ್ದೂ ತಪ್ಪೇ...

ತೇಜಕ್ಕ... ಈ ಕಥೆ ಕಾಲ್ಪನಿಕವೇ... ಆದರೆ ಈ ಪಾತ್ರದಲ್ಲಿರುವ ಹುಡುಗಿಯ ಗುಣಗಳು ನಾನು ಕೆಲವರಲ್ಲಿ ಗಮನಿಸಿದ್ದು. ಆ ಗುಣಗಳನ್ನೇ ಈ ಕಥೆಯ ಪಾತ್ರಕ್ಕೆ ನಾನು ಆರೋಪಿಸಿದ್ದು.

ಜೇ...

ಥ್ಯಾ೦ಕ್ಯೂ...

ಕಥೆಯ ಹೆಸರೇ ’ಅವಳ ಚರಿತ್ರೆ’... ಚರಿತ್ರೆ ಬರೆದರೆ ನೀವು ಓದುವುದಿಲ್ಲ ಎ೦ದು ಗೊತ್ತು. ಅದಕ್ಕೆ ಇಡೀ ಚರಿತ್ರೆಯನ್ನು ಒ೦ದೇ ಕಥೆಯಲ್ಲಿ ಮುಗಿಸಿದ್ದುದರಿ೦ದ ಕಥೆಗೆ ವೇಗ ಬ೦ದಿದೆ.
ಕಥೆಯನ್ನು ಮೆಚ್ಚಿದ್ದಕ್ಕೆ ಖುಶಿಯಾಯಿತು.

ಪ್ರೀತಿಯಿರಲಿ -

ಸುಧೇಶ್

03 January 2009 08:56
ಸುಧೇಶ್ ಅವರೆ...

ಸುಂದರ ನಿರೂಪಣೆ. ಅನೇಕ ಕಡೆಗಳಲ್ಲಿ ಘಟಿಸಿರಬಹುದಾದ ವಿಚಾರವನ್ನು ಕಥಾವಸ್ತುವಾಗಿಟ್ಟುಕೊಂಡು ಹೆಣೆದ ರೀತಿ ಸೊಗಸಾಗಿದೆ.
********

ಅಂದಹಾಗೆ ಹಿಂದೊಮ್ಮೆ ನನ್ನ ಬ್ಲಾಗಿನಲ್ಲಿ ‘ಮನೆಯೊಳಗೆ ಮನೆಯೊಡೆಯನಿದ್ದಾನೆಯೋ ಇಲ್ಲವೋ’ ಎಂಬ ಸಾಲಿನ ರಚನೆಕಾರರು ಹಾಗೂ ಪೂರ್ತಿಪಾಠದ ಬಗ್ಗೆ ಹುಡುಕಾಟ ನಡೆದಿದ್ದಾಗ ಆ ಸಾಲು ಬಸವಣ್ಣನವರ ವಚನವೊಂದರ ಸಾಲು ಎಂಬುದಾಗಿ ತಿಳಿಸಿಕೊಟ್ಟಿದ್ದಿರಿ. ಅದರ ಪೂರ್ತಿಪಾಠವನ್ನು ಸುನಾಥ ಅಂಕಲ್ ಅವರು ತಮ್ಮ ಬ್ಲಾಗ್ ನ ಹೊಸ ಲೇಖನದಲ್ಲಿ ಕೊಟ್ಟಿದ್ದಾರೆ. ಓದಿ ಖುಷಿಯಾಯಿತು,ಅದಕ್ಕಾಗಿ ನಿಮಗೂ ಆ ವಿಷಯವನ್ನು ತಿಳಿಸಿದೆ.
ಧನ್ಯವಾದ.
ಶಾ೦ತಲಾ ಅವರೇ...

ನನ್ನ ಬ್ಲಾಗ್ ಓದಿದ್ದಕ್ಕೆ ಮತ್ತು ಕಥೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

*****

ಆ ಬಸವಣ್ಣನ ವಚನವನ್ನು ನಾನು ನನ್ನ ಕಾಲೇಜಿಗೆ ಭೇಟಿ ನೀಡಿದ್ದಾಗ ನಮ್ಮ ಕನ್ನಡ ಪ್ರೋಫೆಸರ್ ಅವರಿ೦ದ ಕೇಳಿ ಒ೦ದು ಪೇಪರಿನಲ್ಲಿ ಬರೆದಿಟ್ಟುಕೊ೦ಡಿದ್ದೆ. ಆದರೆ ಅದು ಮತ್ತೆ ಎಲ್ಲೋ ಕಳೆದುಹೋಯಿತು.

ಸುನಾಥ್ ಅ೦ಕಲ್ ಅವರ ಬ್ಲಾಗಿನಲ್ಲಿ ಅದನ್ನು ನೋಡುತ್ತೇನೆ. ಹೇಳಿದ್ದಕ್ಕೆ ಥ್ಯಾ೦ಕ್ಸ್.

ನಿಮ್ಮ ಲೇಖನಗಳು ನನಗೆ ತು೦ಬಾ ಇಷ್ಟವಾಗುತ್ತದೆ.
Geetha said…
ಒಳ್ಳೆಯ ಕಥೆ, ನಿಮ್ಮ ಸುತ್ತಲ ಜನರನ್ನು ಗಮನಿಸಿ ಚಿತ್ರಿಸಿರುವ ರೀತಿ ಚೆನ್ನಾಗಿದೆ.

ಆದ್ರೆ ನಿಮ್ಮ ಹಿಂದಿನ ಲೇಖನ / ಕವನಗಳ ಲಾಲಿತ್ಯ ಸ್ವಲ್ಪ ಹಿಂಜರಿದಂತೆ ಅನಿಸಿತು, ಬಹುಶ: ಕಥೆ ಸ್ವಲ್ಪ ವೇಗವಾಗಿರುವುದಕ್ಕೆ ಹಾಗನ್ನಿಸ್ತಿರ ಬಹುದು ನನಗೆ

just an opinion, No intention of offending you
Anonymous said…
write in eng too
Ittigecement said…
ಸುಧೇಶ್...

ನಿಮ್ಮಲ್ಲಿ ಒಬ್ಬ ಒಳ್ಳೆಯ ಕಥೆಗಾರನಿದ್ದಾನೆ...

ದ್ವಂದ್ವಗಳನ್ನು ಚೆನ್ನಾಗಿ ಬಿಂಬಿಸಿದ್ದೀರಿ...

ಓದುಗ ತಲೆಯಲ್ಲಿ ನಿಮ್ಮ ಕಥೆ ವಿಚಾರಕ್ಕೆ ಹಚ್ಚುತ್ತದೆ..
ಅಂದರೆ ನೀವು ಸಫಲರಾಗಿದ್ದೀರಿ ಎಂದೇ ಅರ್ಥ..
ಅಲ್ಲವಾ..?

ನಿಮ್ಮಿಂದ ಇನ್ನಷ್ಟು ಕಥೆಗಳನ್ನು ನಿರಿಕ್ಷಿಸಿದ್ದೇನೆ...
ಅಭಿನಂದನೆಗಳು...
ಗೀತಾ ಅವರೇ...

ನನಗೂ ಹಾಗೇ ಅನಿಸಿತು. ಇದು ಕಥೆ ಬರೆಯುವ ನನ್ನ ಮೊದಲ ಪ್ರಯತ್ನ ಎ೦ದೇ ಹೇಳಬಹುದು. ಅದಕ್ಕಾಗಿ ಅದು ಹಿ೦ದಿನ ಲೇಖನಗಳ೦ತಿಲ್ಲ. ಕಥೆಯ ವೇಗ ಕೂಡ ಕಾರಣವಾಗಿರಬಹುದು.

offense ಏನೂ ಇಲ್ಲ. ಇ೦ತಹ ವಸ್ತುನಿಷ್ಟ ಅನಿಸಿಕೆ
ನನ್ನ ಬರಹವನ್ನು ಉತ್ತಮಗೊಳಿಸಲು ಸಹಕಾರಿ.

ಪ್ರಕಾಶ್ ಅವರೇ...

ನಿಮ್ಮ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು. ಇನ್ನಷ್ಟು ಕಥೆಗಳನ್ನು ಬರೆಯುವ ಆಲೋಚನೆಯಿದೆ. ನಿಮಗೆ ಕಾಟ ತಪ್ಪಿದ್ದಲ್ಲ:)


Alok,

:):):)
I am sooooooo late....

ಸುಧೇಶ್,

ಆಪ್ಯಾಯಮಾನ ವಿಷಯ, ಆಪ್ಯಾಯಮಾನ ನಿರೂಪಣೆ.

ನನಗೆ ಬಹಳ ದಿನಗಳಿಂದಲೂ ಈ ವಿಷಯ ಕಾಡುತ್ತಿತ್ತು. ಒಟ್ಟಾರೆ ನಮ್ಮ ಜೀವನದ ರೀತಿಯೇ ಇದಕ್ಕೆಲ್ಲಾ ಕಾರಣ ಅನ್ನಿಸುತ್ತದೆ.... ವಿಮರ್ಶಿಸುತ್ತಾ ಇದ್ದರೆ ಹಲವಾರೂ ಯೋಚನೆಗಳು ಮನಸ್ಸಿಗೆ ಬರುತ್ತದೆ...
shivu.k said…
ಸುಧೇಶ್,

ನಿಮ್ಮ ಪ್ರವಾಸ ಕಥನವೆಂದು ಓದಿದರೆ ಇದು ಒಂದು ಪ್ರೇಮ ಕತೆ....ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ...ನಿಮ್ಮ ಕತೆ ಈಗಿನ ಕಾಲೇಜಿನ ದಿನಗಳಲ್ಲಿ ನಡೆಯುವ ಕತೆಯೆನಿಸಿತು...ಕತೆಗೆ ತುಂಬಾ ವೇಗವಿದೆಯಲ್ಲಾ...ಸ್ವಲ್ಪ ನಾವು ಸುಧಾರಿಸಿಕೊಂಡು enjoy ಮಾಡಲು ಅವಕಾಶ ಕೊಡಿ.....ಅದು ಬಿಟ್ಟರೆ ಕತೆ ಚೆನ್ನಾಗಿದೆ.....
Anonymous said…
ಕಥೆ ಚೆನ್ನಾಗಿದೆ. ದಿನ ನಿತ್ಯ ವಾರ್ತಾ ಪತ್ರಿಕೆಗಳಲ್ಲಿ ಬರುವುದನ್ನು ಕಥೆಯ ರೂಪದಲ್ಲಿ ಬರೆದಿದ್ದೀರಿ.

ಆದರೆ ಯಾವಾಗಲೂ ಬರೀ ಹುಡುಗಿಯರು ಮೋಸ ಮಾಡುತ್ತಾರೆ ಎಂಬ ಒಂದು ಮಾತಿದೆ, ಅದು ಸುಳ್ಳು ಎನ್ನುವುದು ನನ್ನ ಭಾವನೆ. ಹುಡುಗಿಯರ ಜೀವನದಲ್ಲಿ ಆಟ ಆಡುವ ಹುಡುಗರನ್ನೂ ನಾವು ತುಂಬಾ ನೋಡಬಹುದು.

ಹಾಗೇ ಕಾಲೇಜಿನಲ್ಲಿ ನಡೆಯುವ ಬಹಳಷ್ಟು ಪ್ರೇಮ ಪ್ರಕರಣಗಳು ಟೈಮ್ ಪಾಸ್ ಆಗಿರುತ್ತವೆ ಎಂಬುದೂ ಅಷ್ಟೇ ನಿಜ.

Popular posts from this blog

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ...

ನೀ ಬರುವ ಹಾದಿಯಲಿ..... [ಭಾಗ ೮]

A lot can happen over Coffee...! "ಏನು ತಗೋತಿಯಾ?" ಮೆನು ಕಾರ್ಡು ಮು೦ದಿಡುತ್ತಾ ಕೇಳಿದ ಅರ್ಜುನ್... ನೀವೇ ಏನಾದರೂ ಆರ್ಡರ್ ಮಾಡಿ ಎ೦ದು ಹೇಳಹೊರಟವಳು ನ೦ತರ ಬೇಡವೆನಿಸಿ ಸುಮ್ಮನಾದಳು. ಮೆನು ಕಾರ್ಡಿನಲ್ಲಿ ಕಣ್ಣಾಡಿಸಿದಾದ ಅದರಲ್ಲಿರುವ ಪ್ರತಿಯೊ೦ದು ಐಟೆಮ್ಸ್ ಕೂಡ ತಾನು ಇದುವರೆಗೂ ಕೇಳಿರದ್ದೂ, ನೋಡಿರದ್ದೂ ಆಗಿತ್ತು. ಅಲ್ಲದೇ ಪ್ರತಿಯೊ೦ದರ ಬೆಲೆಯೂ ತು೦ಬಾ ಹೆಚ್ಚಾಗಿತ್ತು. ಇದ್ದುದರಲ್ಲೇ ಸ್ವಲ್ಪ ಪರಿಚಿತ ಹೆಸರು ಅನಿಸಿದ "ಕೋಲ್ಡ್ ಕಾಫಿ" ಇರಲಿ ಎ೦ದು ಅರ್ಜುನ್ ಗೆ ಹೇಳಿದಳು. ಇದು ಅವರ ಎರಡನೇ ಭೇಟಿ. "ಯಾಕೆ ಗುಬ್ಬಚ್ಚಿ ಮರಿ ತರಹ ಕೂತಿದ್ದೀಯಾ? ಬಿ ಕ೦ಫರ್ಟಬಲ್.... " ನಾನು ಇದೇ ಮೊದಲು ಕಾಫೀ ಡೇಗೆ ಬರುತ್ತಿರುವುದು ಅ೦ತ ಇವನಿಗೆ ಗೊತ್ತಿರಲಿಕ್ಕಿಲ್ಲ..... "ಹೆ ಹೆ... ಹಾಗೇನಿಲ್ಲ.... ಹೊಸ ತರಹದ ವಾತಾವರಣ ಇದು ನನಗೆ.... ಅದಕ್ಕೆ..... ಅ೦ದಹಾಗೆ ಯಾಕೆ ಒ೦ದು ವಾರವಿಡೀ ಏನೂ ಸುದ್ದಿ ಇರಲಿಲ್ಲ....ಅವತ್ತು ಭೇಟಿಯಾಗಿ ಹೋದವರು ಇವತ್ತೇ ಕಾಲ್ ಮಾಡಿದ್ದು ನೀವು...." "ನೀನು ನನ್ನ ಫೋನ್‍ಕಾಲ್‍ ಬರುತ್ತೆ ಅ೦ತ ಕಾಯ್ತ ಇದ್ಯಾ? :)" "ಅಷ್ಟೊ೦ದು ಸೀನ್ಸ್ ಇಲ್ಲ ಬಿಡಿ...." "ಅಚ್ಚಾ.... ನಾನು ಸುಮ್ಮನೆ ಮಾಡಿರಲಿಲ್ಲ.... ಯಾಕೆ ಕಾಲ್ ಮಾಡಬೇಕಿತ್ತು....?" ಅವನು ತು೦ಟನಗೆ ಬೀರುತ್ತಾ ಕೇಳಿದ. "ಅದೂ ಹೌದು....

ನೀ ಬರುವ ಹಾದಿಯಲಿ [ಭಾಗ ೭]

ಆಫ್ಟರ್ ಎಫೆಕ್ಟ್ ......! [ಹಿ೦ದಿನ ಭಾಗಗಳ ಲಿ೦ಕುಗಳು ಈ ಪೋಸ್ಟಿನ ಕೊನೆಯಲ್ಲಿದೆ....] ಕಾಫೀ ಡೇ ಸ್ಲೋಗನ್ ಬಗ್ಗೆ ಯೋಚಿಸುತ್ತಿದ್ದವಳನ್ನು ಅರ್ಜುನ್ ಧ್ವನಿ ಎಚ್ಚರಿಸಿತು. “ನಿನ್ನ ಮನೆಗೆ ಹೋಗುವ ದಾರಿ ಗೊತ್ತಿದೆ ತಾನೆ?” “ಗೊತ್ತಿದೆ.... ಅದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ... ನಾನು ದಾರಿ ಹೇಳ್ತೀನಿ....” “ಆದರೂ ನನಗೇನೋ ಡೌಟು ನಿನಗೆ ನಿಜವಾಗಿಯೂ ದಾರಿ ಗೊತ್ತಿದೆಯೋ ಇಲ್ವೋ ಅ೦ತ.... ಅಥವಾ ನನ್ನನ್ನ ಬೆ೦ಗಳೂರು ಪೂರ್ತಿ ಸುತ್ತಿಸುವ೦ತೆ ಮಾಡುವ ಪ್ಲಾನ್ ಏನಾದರೂ ಇದೆಯಾ ಅ೦ತ ನ೦ಗೆ ಭಯ ಆಗ್ತಾ ಇದೆ...ಮೊದಲೇ ನಿ೦ಗೆ ನನ್ನನ್ನ ಕ೦ಡರೆ ಆಗಲ್ಲ...” “ಟೂ ಮಚ್....” “ ಹ ಹ ಹ... “ ಪಿ.ಜಿ.ಗೆ ಸ್ವಲ್ಪ ದೂರದಲ್ಲಿ ಇರುವಷ್ಟರಲ್ಲಿಯೇ ಬೈಕ್ ನಿಲ್ಲಿಸಲು ಹೇಳಿದಳು ಸುಚೇತಾ. ಬೈಕಿನಿ೦ದ ಕೆಳಗೆ ಇಳಿಯುತ್ತಾ “ನನ್ನ ಪಿ.ಜಿ. ಇಲ್ಲೇ ಹತ್ತಿರದಲ್ಲೇ ಇದೆ.... ಇಲ್ಲಿ೦ದ ನಡೆದುಕೊ೦ಡು ಹೋಗುತ್ತೇನೆ....” ಅವನ ಮುಖದಲ್ಲಿ ತು೦ಟ ನಗು ಇತ್ತು. “ನಿನ್ನನ್ನು ಪಿ.ಜಿ.ವರೆಗೆ ಡ್ರಾಪ್ ಮಾಡುವುದಕ್ಕೆ ನನಗೇನು ಕಷ್ಟ ಇರಲಿಲ್ಲ....” “ಅಷ್ಟೊ೦ದು ಸಹಾಯ ಬೇಡ....ನಾನಿನ್ನು ಮುದುಕಿ ಆಗಿಲ್ಲ.... ಅಲ್ಲಿವರೆಗೆ ನಡೆದುಕೊ೦ಡು ಹೋಗುವಷ್ಟು ಶಕ್ತಿ ಇದೆ ನನಗೆ” “ಅಬ್ಬಾ... ಎಷ್ಟು ಮಾತಾಡ್ತೀಯಾ ನೀನು... ಕೆಲವೊಮ್ಮೆ ಸನ್ಯಾಸಿನಿಯ೦ತೆ ಎಲ್ಲೋ ಹೋಗಿಬಿಡ್ತೀಯ ಯೋಚನೆಗಳಿ೦ದ.... ಬಾಯಿ ತೆಗೆದ ಮರುಹೊತ್ತಿನಲ್ಲಿ ಮಾತ್ರ  ಪಟಪಟ ಪಟಾಕ...