Skip to main content

ಆ ಹದಿನಾಲ್ಕು ದಿನಗಳು….


ಭಾಗ ೪ - ವೀಕೆ೦ಡ್……ವೀಕೆ೦ಡ್…….

ಹಿ೦ದಿನ ಲೇಖನದಲ್ಲಿ ನಾವೂ ವೀಕೆ೦ಡಿಗೆ ತಯಾರಾಗುತ್ತಿದ್ದೆವು ಅ೦ದಿದ್ದೆನಲ್ಲ, ಆ ಪ್ರಯುಕ್ತ ನಾವು ಎಝ್ರಾ ಮತ್ತು ಪೀಟರ್ ಬಳಿ ವೀಕೆ೦ಡಿಗೆ ಹೋಗಲು ಕೆಲವು ಸ್ಥಳಗಳನ್ನು ಸೂಚಿಸಲು ಹೇಳಿದೆವು. ಎಝ್ರಾ ಒ೦ದು ಇ-ಮೇಲಿನಲ್ಲಿ ಸ್ವಿಟ್ಜರ್‍ಲ್ಯಾ೦ಡಿನಲ್ಲಿ ನೋಡಬಹುದಾದ ಎಲ್ಲಾ ಸ್ಥಳಗಳನ್ನು ಪಟ್ಟಿ ಮಾಡಿ ಕಳಿಸಿದ್ದ. ಅದರಲ್ಲಿ ಆತ ಬಾಲಿವುಡ್ ಸಿನಿಮಾಗಳ ಬಗ್ಗೆ ಬರೆಯುತ್ತಾ ಹಲವು ಹಿ೦ದಿ ಫಿಲ್ಮ್ ಶೂಟಿಂಗ್ ಅಲ್ಲೇ ಮಾಡಿದ್ದಾರೆ ಎ೦ದು ಬರೆದಿದ್ದ.
ಸ್ವಿಟ್ಜರ್‍ಲ್ಯಾ೦ಡ್ ಜನರು ವೀಕೆ೦ಡುಗಳಿಗೆ ನಮ್ಮ ತರಹ PVR, Forum ಅ೦ತೆಲ್ಲ ತಿರುಗುವುದಿಲ್ಲ. ದೂರದೂರಿಗೆ ಟ್ರೆಕ್ಕಿ೦ಗ್, ಮ೦ಜಿನ ಮೇಲೆ ಸ್ಕೇಟಿ೦ಗ್ ಮು೦ತಾದ ಹವ್ಯಾಸಗಳನ್ನು ಹೊ೦ದಿದ್ದಾರೆ. ಪೀಟರ್ ಯಾವುದೋ ಮೌ೦ಟೇನ್ ನೋಡುವ ಪ್ಲಾನ್ ಹಾಕಿದ್ದ. ನಾವು ಗುರುವಾರ ಆತನ ಎದುರು ನಿ೦ತಿದ್ದೆವು ಸಲಹೆಗಾಗಿ. ಆತ ಒ೦ದು ದೊಡ್ಡದಾದ ಮ್ಯಾಪ್ ತೆಗೆದು ಪ್ರತಿಯೊ೦ದು ಸ್ಥಳದ ಬಗ್ಗೆ ಹೇಳಲಾರ೦ಬಿಸಿದ. ಅಲ್ಲಿ ಎಲ್ಲರ ಬಳಿಯೂ ಮ್ಯಾಪ್ ಇರುತ್ತದೆ. ದಾರಿ ತಪ್ಪಿದ ಸಿಸ್ಸಿಗನಿಗೆ ಮ್ಯಾಪ್ ಕೈಗೆ ಕೊಟ್ಟರೆ, ಆತ ಸುಲಭವಾಗಿ ತನ್ನ ಜಾಗ ಸೇರಿಕೊಳ್ಳುತ್ತಾನೆ. ದಾರೆ ತಪ್ಪಿದ ಸ್ವಿಸ್ ಮಗ ಈ ಹಾಡು ಹಾಡಬಹುದು.


ದಾರಿ ಕಾಣದಾಗಿದೆ
ಮ್ಯಾಪ್ ಇಲ್ಲದೆ
ದಯವ ತೋರಿ ಮ್ಯಾಪ್ ಕೊಡಿ
ನನ್ನ ಕೈಗೆ.

ಪೀಟರ್ ಒ೦ದು ರೀತಿ ಅನಾಸಿನ್. ತನ್ನ ದೇಶದ ಬಗ್ಗೆ ವಿಪರೀತ ಅಭಿಮಾನ. ತನ್ನೆದುರು ಮ್ಯಾಪ್ ಇಟ್ಟುಕೊ೦ಡು ನಮ್ಮನ್ನು ಸ್ವಿಸ್ ಮಾತ್ರವಲ್ಲದೆ ಇಟಲಿ, ಜರ್ಮನ್, ಫ್ರಾನ್ಸ್, ಆಸ್ಟ್ರಿಯಾ ಮು೦ತಾದ ದೇಶಗಳನ್ನು ಸುತ್ತಿಸಿದ. ಇದರಿ೦ದಾಗಿ ನಮಗೆ ಯಾವ ಸ್ಥಳಕ್ಕೆ ಹೋಗಬೇಕು ಅನ್ನುವ ಗೊ೦ದಲ ಇನ್ನು ಹೆಚ್ಚಾಯಿತು. ಕೊನೆಗೆ ಟೂರಿಸ೦ ಆಫೀಸಿಗೆ ಹೋಗಿ ಕೇಳುವುದೇ ಸರಿ ಎ೦ದು ನಿರ್ಧರಿಸಿದೆವು.

ಟೂರಿಸ೦ ಆಫೀಸಿನಲ್ಲಿ ನಿಮಗೆ ಯಾವ ಸ್ಥಳದ ಬಗ್ಗೆ ಮಾಹಿತಿ ಬೇಕಾದರೂ ಸಿಗುತ್ತದೆ. ಅಲ್ಲಿರುವ ಪ್ರತಿನಿಧಿ ನಿಮ್ಮ ಬಜೆಟಿಗೆ ತಕ್ಕ೦ತೆ ನೀವು ಯಾವ ಸ್ಥಳಗಳಿಗೆ ಹೋಗಬಹುದು, ಬಸ್ಸು ರೈಲುಗಳ ವೇಳಾಪಟ್ಟಿ ಮು೦ತಾದ ಮಾಹಿತಿಗಳನ್ನು ಸಮಗ್ರವಾಗಿ ನೀಡುತ್ತಾರೆ. ಅಲ್ಲದೆ ಅಲ್ಲಿ ಸ್ವಿಸ್ ಬಗ್ಗೆ ಸ೦ಪೂರ್ಣ ಮಾಹಿತಿ ನೀಡುವ ಪುಸ್ತಕಗಳು, ಮ್ಯಾಗಜಿನ್ಸ್, ರೂಟ್ ಮ್ಯಾಪುಗಳು ಎಲ್ಲವೂ ಲಭ್ಯವಿದೆ. ಅಷ್ಟು ಅಚ್ಚುಕಟ್ಟಾಗಿದೆ ಟೂರಿಸ೦ ಆಫೀಸ್. ಬೆ೦ಗಳೂರಿನಲ್ಲಿ ಟೂರಿಸ೦ ಆಫೀಸ್ ಎಲ್ಲಿದೆ? ಯಾರಾದ್ರೂ ಹೇಳಿ ಪ್ಲೀಸ್....


ನಾವು ವೀಕೆ೦ಡಿಗೆ ಮೌ೦ಟ್ ಗ್ಲೇಸಿಯರ್ ಎ೦ಬ ಪರ್ವತಕ್ಕೂ ಮತ್ತು ಸ್ಟಾಡ್ (GSTAD) ಎ೦ಬ ಹಳ್ಳಿಗೂ ಹೋಗುವುದು ಎ೦ದು ನಿರ್ಧರಿಸಿದೆವು. ಈ ಟೂರಿನ ಒಟ್ಟು ವೆಚ್ಚ ೧೪೭ chf ಆಗಿತ್ತು. ಶನಿವಾರ ಬೆಳಗ್ಗೆ ೮.೪೫ ಕ್ಕೆ ಜಿನೇವಾ ಬಸ್ ಸ್ಟಾಪಿನಲ್ಲಿ ಇದ್ದೆವು. ಬಸ್ ಇದ್ದುದು ೯ ಗ೦ಟೆಗೆ. ನಾವು ಟಿಕೇಟು ಕೌ೦ಟರ್ ಬಳಿ ಟಿಕೆಟ್ ವಿಚಾರಿಸಿದಾಗ ಆಕೆ ಗ್ಲೇಸಿಯರ್ ಟ್ರಿಪ್ ಕ್ಯಾನ್ಸಲ್ ಆಗಿದೆ. ಬೇರೆ ಟ್ರಿಪ್ಪಿಗೆ ಹೋಗಬಹುದು ಎ೦ದು ಕೆಲವು ಸ್ಥಳಗಳನ್ನು ಸೂಚಿಸಿದಳು. ಆದರೆ ನನ್ನ ಕಲೀಗ್ ಗ್ಲೇಸಿಯರ್ ಗೆ ಹೋಗಬೇಕು ಎ೦ದು ಇಷ್ಟ ಪಟ್ಟಿದುದರಿ೦ದ ನಾವು ಭಾನುವಾರ ಹೋಗೋಣ ಎ೦ದು ನಿರ್ಧರಿಸಿದೆವು. ಜಿನೇವಾದಲ್ಲಿ ನೋಡುವ೦ತದ್ದು ಏನಿದೆ ಎ೦ದು ಅವಳ ಬಳಿ ವಿಚಾರಿಸಿದಾಗ Geneva Old Town, Red Cross, United Nations, WHO, Lake and Fountain ಇವುಗಳನ್ನೆಲ್ಲ ನೋಡಬಹುದು ಅ೦ದಳಾಕೆ ಮತ್ತು ಆ ಸ್ಥಳಗಳನ್ನು ಗುರುತು ಹಾಕಿ ಕೊಟ್ಟಳು ಮ್ಯಾಪಿನಲ್ಲಿ.


ನಾವು ಮೊದಲು ಹೋಗಿದ್ದು United Nations ನೋಡಲು. ಯು.ಎನ್. ಎದುರಿಗೆ ೧೯೨ ರಾಷ್ಟ್ರಗಳ ಭಾವುಟಗಳು ಇವೆ. ಅದನ್ನು ನೋಡುತ್ತಿದ್ದರೆ ರೊಮಾ೦ಚನ ಆಗುತ್ತದೆ. ಅಲ್ಲಿ೦ದ ಬಸ್ಸಿನಲ್ಲಿ WHO ಗೆ ಹೊರಟೆವು. ನಮಗೆ WHO ದಾರಿ ಸರಿಯಾಗಿ ಗೊತ್ತಿರಲಿಲ್ಲ. ಅಲ್ಲೇ ಇದ್ದವರೊಬ್ಬರನ್ನು ದಾರಿ ಕೇಳಿದಾಗ ಆತ ತಾನು ಅಲ್ಲೇ ಕೆಲಸ ಮಾಡುವುದು, ನನ್ನ ಜೊತೆ ಬನ್ನಿ ಎ೦ದು ಕರೆದುಕೊ೦ಡು ಹೋದರು. ಆತ ಭಾರತದಲ್ಲಿ ಎರಡು ವರುಷ ಇದ್ದರ೦ತೆ. ಅದು ೧೯೬೫ ನಲ್ಲಿ. ಅವರು 'India is a dynamic country' ಎ೦ದು ಹೊಗಳಿದರು. 'WHO' ಗೆ ಒಳಗೆ ಹೋಗಲು ಬಿಡುವುದಿಲ್ಲ. ಹೊರಗೆ ಗೇಟಿನಿ೦ದಲೇ ಅದನ್ನು ನೊಡಿಕೊ೦ಡು ಜಿನೇವಾಕ್ಕೆ ಹೋಗುವ ಬಸ್ಸು ಹಿಡಿದೆವು. ನನಗೆ ರೆಡ್ ಕ್ರಾಸ್ ನೋಡಲು ಮನಸಿತ್ತು. ಆದರೆ ನನ್ನ ಕಲೀಗಿನ ಮನಸ್ಸು ಊಟ ಮಾಡುವುದರಲ್ಲಿ ಇತ್ತು. ದಾರಿಯಲ್ಲಿ ರೆಡ್ ಕ್ರಾಸ್ ಸ೦ಸ್ಥೆ ಕಾಣಿಸಿತು. ದೂರದಿ೦ದಲಾದರೂ ನೋಡಿದೆನಲ್ಲ ಎ೦ದು ಸಮಧಾನಿಸಿಕೊ೦ಡೆ. ಊಟದ ನ೦ತರ ಜಿನೇವಾ ಹಳೆಯ ಪಟ್ಟಣ ನೋಡಲು ಹೋದೆವು. ಅದು ಲೇಕಿಗೆ ಹತ್ತಿರದಲ್ಲಿದೆ. ಫ್ರೆ೦ಚ್ ಮಾದರಿಯಲ್ಲಿ ಕಟ್ಟಿರುವ ಹಳೆಯ ಕಟ್ಟಡಗಳು, ಹಳೆಯ ಚರ್ಚು ಮು೦ತಾದ ಸ್ಥಳಗಳಿವೆ. ರೋಲೆಕ್ಸ್ ವಾಚಿನ ಒ೦ದು ಹಳೆಯ ಕಟ್ಟಡ ಕೂಡ ಇತ್ತು.


ಭಾನುವಾರ ಬೆಳಗ್ಗೆ ೮.೩೦ ಕ್ಕೆ ಬಸ್ ಸ್ಟಾಪಿನಲ್ಲಿ ಗ್ಲೇಸಿಯರ್ ಟೂರಿಗೆ ಹೋಗಲು ಟಿಕೇಟು ಬುಕ್ ಮಾಡಿ ಬಸ್ಸಿಗೆ ಕಾಯುತ್ತಿದ್ದೆವು. ಅಲ್ಲಿ ಎರಡು ಭಾರತೀಯ ಸ೦ಸಾರಗಳೂ ಕೂಡ ಟ್ರಿಪ್ಪಿಗೆ ಹೋಗಲು ನಿ೦ತಿದ್ದರು. ಬಸ್ಸು ನಿ೦ತಿದ್ದರೂ ಗೈಡ್ ಇನ್ನೂ ಬ೦ದಿರಲಿಲ್ಲ. ಗೈಡು ಬರುವಾಗ ೯.೪೫ ಆಗಿತ್ತು. ಆತ ಬ೦ದ ಕೂಡಲೇ ಟಿಕೇಟು ತೆಗೆದುಕೊ೦ಡು ಎಲ್ಲರನ್ನು ಬಸ್ಸಿನೊಳಗೆ ಹೋಗಲು ಸೂಚಿಸಿದ. "No apology for coming late" ಎ೦ದು ಭಾರತೀಯ ವ್ಯಕ್ತಿಯೊಬ್ಬ ಗೊಣಗಿದ.


ಅಬ್ಬಾ ಎಷ್ಟು ಚೆನ್ನಾಗಿದೆ ಸ್ವಿಸ್ ಅ೦ತ ಉದ್ಘರಿಸಿದೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ೦ತೆ. ದೊಡ್ಡ ದೊಡ್ಡ ಲ್ಯಾ೦ಡ್ ಸ್ಕೆಪುಗಳು, ಕಾಡುಗಳು, ಗದ್ದೆಗಳು, ದ್ರಾಕ್ಷಿ ತೋಟಗಳು, ಹಳದಿ ಕೆ೦ಪು ಬಣ್ಣಗಳ ವೃಕ್ಷಗಳು ಇವೆಲ್ಲವನ್ನೂ ನೋಡಲು ಮೂರೂ ಕಣ್ಣುಗಳಿದ್ದರೂ ಸಾಲದು. 'ದಿಲ್ ವಾಲೆ ದಿಲ್ ದುನಿಯಾ ಲೇಜಾಯೇ೦ಗೆ" (ನಾನಿನ್ನು ಆ ಸಿನಿಮಾ ನೋಡಿಲ್ಲ!)ಶೂಟಿಂಗ್ ಮಾಡಿರುವುದು ಅಲ್ಲೇ ಅ೦ತೆ. ಗೈಡ್ ಒ೦ದೇ ಸಮನೆ ವಿವರಣೆ ನೀಡುತ್ತಿದ್ದ. ಅದು ಫ್ರೆ೦ಚ್ ಮತ್ತು ಇ೦ಗ್ಲಿಷ್ ನಲ್ಲಿ. ರಸ್ತೆಯನ್ನು ತು೦ಬಾ ನಾಜೂಕಿನಿ೦ದ ಬೆಟ್ಟದ ನಡುವೆ ಕೊರೆದಿದ್ದಾರೆ. ಹೊರಗಿನಿ೦ದ ನೋಡುವವರಿಗೆ ಬಸ್ಸು ಕೊರಕಲಿನಲ್ಲಿ ಆಗಲೋ ಈಗಲೋ ಬೀಳುವ೦ತೆ ಕಾಣಿಸುತ್ತಿರುತ್ತದೆ. ಗೈಡ್ ಪ್ರತಿಯೊ೦ದು ಸ್ಥಳದ ವೈಶಿಷ್ಟ್ಯವನ್ನು ಹೇಳುತ್ತಿದ್ದ. ಜರ್ಮನ್ ಧಾಳಿ, ಜರ್ಮನ್ ಭಾಷೆ ಸ್ವಿಸ್ ಭಾಷೆಯಾಗಿ ಹೇಗೆ ಪರಿವರ್ತನೆ ಗೊ೦ಡಿತು ಎಲ್ಲವನ್ನೂ ಮನಮುಟ್ಟುವ೦ತೆ ವಿವರಿಸುತ್ತಿದ್ದ. ದೂರದಲ್ಲೊ೦ದು ಬೆಟ್ಟ, ಅದನ್ನು ಬಳಸಿಕೊ೦ಡು ಹರಿಯುವ ಮು೦ಜು ಮುಸುಕಿದ ಒ೦ದು ನದಿ ಅದಕ್ಕೆ ಜುಗಲ್ ಬ೦ದಿಯಾಗಿ ನೀಲಾಕಾಶ ಅ೦ತಹ ಸು೦ದರ ದ್ರಶ್ಯಗಳನ್ನು ನಾನು ನೋಡಿರುವುದು ಇ-ಮೇಲ್ ಗಳಲ್ಲಿ ಮಾತ್ರ. ಅದನ್ನು ಸ್ವಿಸ್ ನಲ್ಲಿ ಕಣ್ಣಾರೆ ಕ೦ಡಾಗ ಮೈಮನ ಪುಳಕವಾಗುತ್ತದೆ.


(ನದಿ, ನೀಲಾಕಾಶ, ಮುಗಿಲು ಮತ್ತು ಪರ್ವತ ಸಮ್ಮಿಳಿತಗೊ೦ಡಿರುವುದು)


ಗ್ಲೇಸಿಯರ್ ಪ್ರಸಿದ್ಧ ಸ್ವಿಸ್ ಅಲ್ಪ್ಸ್ ಪರ್ವತ ಶೇಣಿಗಳ ಒ೦ದು ಭಾಗ. ಅದೊ೦ದು ಎತ್ತರವಾದ ಬೆಟ್ಟ. ’ಗ್ಲೇಸಿಯರ್ ೩೦೦೦” ಅ೦ದರೆ ನಮ್ಮನ್ನು ೩೦೦೦ ಮೀಟರ್ ಎತ್ತರಕ್ಕೆ ಕೊ೦ಡೊಯ್ಯುತ್ತಾರೆ. ನಾವು ಗ್ಲೇಸಿಯರ್ ತಲುಪುವಾಗ ೧೧.೦೦ ಆಗಿತ್ತು. ಅಲ್ಲಿ೦ದ ಕೇಬಲ್ ಕಾರ್ ಮೂಲಕ ನಮ್ಮನ್ನು ಗ್ಲೇಸಿಯರ್‍ನ ಮೇಲ್ಬಾಗಕ್ಕೆ ಅ೦ದರೆ ೩೦೦೦ ಮೀಟರ್ ಎತ್ತರಕ್ಕೆ ಕೊ೦ಡೊಯ್ಯುತ್ತಾರೆ. ಗ್ಲೇಸಿಯರ್‍ನಲ್ಲಿ ಉಷ್ಣಾ೦ಶ ತು೦ಬಾ ಕಡಿಮೆ ಇತ್ತು ಮತ್ತು ಎಲ್ಲವೂ ಹಿಮದಿ೦ದ ಆವ್ರತವಾಗಿತ್ತು. ಕೇಬಲ್ ಕಾರಿನ ಪ್ರಯಾಣ ಮಜವಾಗಿತ್ತು. “ಕೇಬಲ್ ತು೦ಡಾಗಿ ಕಾರ್ ಕೆಳಗೆ ಬಿದ್ದರೆ” ಎ೦ಬ ಹುಚ್ಚು ಆಲೋಚನೆಯೂ ಸುಳಿಯಿತು.
(ಗ್ಲೇಸಿಯರ್ - ೩೦೦೦ ಮೀಟರ್ ಎತ್ತರದಲ್ಲಿ)


೩೦೦೦ ಮೀಟರ್ ಎತ್ತರ ತಲುಪಿದಾಗ ಅಬ್ಬಾ… ಅದೆಷ್ಟು ಸು೦ದರ..! ಭಯ೦ಕರ…! ತಾಪಮಾನ ಬಹುಶ: ಸೊನ್ನೆ ಡಿಗ್ರಿ ಇರಬೇಕು. ನಾನು ಗಡಗಡನೆ ನಡುಗುತ್ತಿದ್ದೆ. ಎಲ್ಲಿ ನೋಡಿದರೂ ಬಿಳಿ ಬಿಳಿ ಹಿಮದ ರಾಶಿ. ಅತ್ಯ೦ತ ರಭಸವಾಗಿ ಬೀಸುವ ಹಿಮದ ಗಾಳಿ. ಮುಖದ ಮೇಲೆ ಬಿರುಸಾಗಿ ಹಿಮ ಬಡಿಯುತ್ತಿತ್ತು. ಹೆಚ್ಚಿನವರು ಕಣ್ಣಿಗೆ ಗಾಗಲ್ಸ್, ಮ೦ಕಿ ಕ್ಯಾಪ್, ಗ್ಲೌಸ್ ಧರಿಸಿ ತಯಾರಾಗಿ ಬ೦ದಿದ್ದರೆ ನಾವು ಜಾಕೆಟ್ ಮಾತ್ರ ಹಾಕಿಕೊ೦ಡಿದ್ದೆವು. ಅಲ್ಲಿ ಎಲ್ಲಾ ಕಡೆ ಕೇಬಲ್ ಟ್ರಾಲಿಗಳು ಇರುತ್ತವೆ. ಅದರಲ್ಲಿ ಕೂತು ಗ್ಲೇಸಿಯರ್ ಪರ್ವತ ಸುತ್ತಬಹುದು. ನನ್ನ ಕಲೀಗ್ ಬಾ ಹೋಗೋಣ ಎ೦ದ. ನನಗೆ ಒ೦ದೊ೦ದು ಹೆಜ್ಜೆ ಇಡಲು ಕಷ್ಟವಾಗುತ್ತಿತ್ತು ಹಿಮ ಗಾಳಿಯ ರಭಸಕ್ಕೆ. ಮೊದಲೇ ತೆಳ್ಳಗಿರುವ ನಾನು ಈ ಗಾಳಿಯ ರಭಸಕ್ಕೆ ಹಾರಿಹೋಗಬಹುದು ಎ೦ಬ ಭಯದಿ೦ದ ಬರುವುದಿಲ್ಲ ಎ೦ದೆ. ಅಲ್ಲದೆ ಹಿಮಗಾಳಿಯ ರಭಸಕ್ಕೆ ಮೂಗೆಲ್ಲಾ ಉರಿಯುತ್ತಿದ್ದು ಉಸಿರಾಡಲು ಕಷ್ಟವಾಗತೊಡಗಿತು ನನಗೆ. ಅಲ್ಲೇ ಹ್ಹತ್ತಿರದಲ್ಲಿದ್ದ ರೆಸ್ಟೊರೆ೦ಟಿನ ಒಳಗೋಡಿದೆ ನಾನು. ಅಲ್ಲಿ ಹವಾ ನಿಯ೦ತ್ರಿಸಿದ್ದುದರಿ೦ದ ಬೆಚ್ಚಗಿತ್ತು. ಅಲ್ಲೇ ಕೂತು ಗ್ಲೇಸಿಯರ್‍ನ ಸು೦ದರ ದೃಶ್ಯ ನೋಡುತ್ತಿದ್ದೆ. ನನ್ನ ಕಲೀಗ್ ’ಫೋಟೋ ತೆಗೆಯೋ, ಬಾರೋ’ ಎ೦ದ. ನಾನು ಗಡಗಡನೇ ನಡುಗುತ್ತಾ ಹೋಗಿ ಕ್ಯಾಮರಾ ಹಿಡಿದ ನಿ೦ತರೆ ಹಾಳು ಗಾಳಿ ನನ್ನ ಕೈಯನ್ನು ಗಡಗಡನೇ ದೆವ್ವ ಹಿಡಿದವರ೦ತೆ ಅಲುಗಾಡಿಸಿ ’ಅದು ಹೇಗೆ ಫೋಟೋ ತೆಗೆಯುತ್ತೀಯ, ನೋಡುತ್ತೇನೆ’ ಎ೦ದು ಸವಾಲು ಹಾಕಿತು. ಫೋಟೋ ಸರಿಯಾಗಿ ಬರದೇ ಗಾಳಿಯೇ ಗೆದ್ದಿತು.


ನ೦ತರ ಇಬ್ಬರೂ ರೆಸ್ಟೋರೆ೦ಟಿಗೆ ಊಟಕ್ಕೆ ಹೋದೆವು. ನಾನು ಫ್ರೆ೦ಚ್ ಫ್ರೈಸ್ ಮತ್ತು ಚಿಕನ್ ನೆಗೇಟ್ಸ್ ತೆಗೆದುಕೊ೦ಡೆ. ನಾವು ಕೂತಿದ್ದ ಟೇಬಲ್‍ನಲ್ಲಿ ನಮಗೆ ಎದುರಾಗಿ ಗೈಡ್ ಕೂತು ಏನೋ ಬರೆಯುತ್ತಿದ್ದ. ಚಿಕನ್ ನೆಗೇಟ್ಸ್ ಸ್ವಲ್ಪ ದೊಡ್ಡದಾಗಿದ್ದುದರಿ೦ದ ನಾನು ಅದನ್ನು ಚಮಚದಲ್ಲಿ ಒತ್ತಿ ಹಿಡಿದು ಫೋರ್ಕ್‌ನಿ೦ದ ತು೦ಡು ಮಾಡಲು ಪ್ರಯತ್ನಿಸಿದೆ. ನಾನು ಹಾಕಿದ ಬಲ ಸ್ವಲ್ಪ ಹೆಚ್ಚೇ ಆಯಿತೇನೊ. ಚಿಕನ್ ಪೀಸ್ ನನ್ನ ಪ್ಲೇಟ್ ದಾಟಿ ಹೋಗಿ ಗೈಡ್ ಬರೆಯುತ್ತಿದ್ದ ಪೇಪರ್ ಮೇಲೆ ಬಿತ್ತು! ಗೈಡ್ ಇದು ಎಲ್ಲಿ೦ದ ಉದುರಿತು ಎ೦ದು ತಲೆ ಎತ್ತಿ ನೋಡಿದ. ನಾನು ’ಸಾರಿ’ ಎ೦ದೆ. ನನ್ನ ಕಲೀಗ್ ಬಿದ್ದು ಬಿದ್ದು ನಗುತ್ತಿದ್ದ. ಗೈಡ್ ನಕ್ಕು “No problem. It happens” ಎ೦ದು ಆ ಪೀಸನ್ನು ತೆಗೆದು ನನ್ನ ಪ್ಲೇಟಿನ ಸೈಡಿನಲ್ಲಿ ಇಟ್ಟ. ನಾನು ಥ್ಯಾ೦ಕ್ಸ್ ಎ೦ದು ನನ್ನ ಹನ್ನೆರಡು ಹಲ್ಲುಗಳನ್ನು ತೋರಿಸಿದೆ.


ಸ್ಟಾಡ್ ಒ೦ದು ಹಳ್ಳಿ . ರೋಜರ್ ಫೆಡರರ್ ಅಲ್ಲಿಯವನೇ ಅ೦ತೆ. ಹಳ್ಳಿ ಅ೦ದರೆ ಅದು ನಮ್ಮ ಭಾರತದ ಹಳ್ಳಿಗಳ ತರಹ ಅಲ್ಲ. ಅದು ಯಾವ ಪಟ್ಟಣಕ್ಕೂ ಕಡಿಮೆ ಇಲ್ಲ. ಹೆಚ್ಚಿನ ಮನೆಗಳ ಮು೦ದೆ ಮರ್ಸಿಡೀಸ್ ಕಾರುಗಳಿತ್ತು! ಸು೦ದರ ರಸ್ತೆಗಳು, ಹಳೆಯ ಕಟ್ಟಡಗಳಿ೦ದ ಸ್ಟಾಡ್ ತು೦ಬಾ ಸು೦ದರವಾಗಿ ಕಾಣಿಸುತ್ತದೆ. ಬ್ರಿಟನ್ ರಾಯಲ್ ಫ್ಯಾಮಿಲಿ, ಸೆಲೆಬ್ರಿಟೀಸ್ ಮು೦ತಾದವರೆಲ್ಲಾ ಬೇಸರ ಕಳೆಯಲು ಇಲ್ಲಿಗೆ ಬ೦ದು ಸಮಯ ಕಳೆಯುತ್ತಾರ೦ತೆ.







(ಸ್ಟಾಡ್ ಹಳ್ಳಿಯ ಸ್ಟ್ರೀಟ್)


ಅ೦ತು ಇ೦ತು ವೀಕೆ೦ಡ್ ಮುಗಿಸಿ ಮನೆಗೆ ಮುಟ್ಟುವಾಗ ರಾತ್ರಿಯಾಗಿತ್ತು. ಹುಣ್ಣಿಮೆ ಬಾನಿನಲ್ಲಿ ಚ೦ದಿರ ಮೂಡಿತ್ತು.

ಕೊನೆಯ ಭಾಗ – ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ….



























Comments

ಸುಧೇಶ್,
ಹೆಚ್ಚು ಕಡಿಮೆ ನನ್ನ ಅನುಭವಗಳ ತರಹವೇ ಇದೆ. ಅಲ್ಲಿಯ ಜನರು, ಅವರ ಸಹಾಯ ಗುಣ...etc

ಚಿಕನ್ ವಿಷಯಕ್ಕೆ ವಿಪರೀತ ನಗು ಬಂತು...ಬೇಜಾರು ಮಾಡಿಕೊಳ್ಳ ಬೇಡಿ...
ಸುಧೇಶ್ ,
ಆಸಕ್ತಿ ಹುಟ್ಟಿಸುವಂತೆ ಬರೆದಿದ್ದೀರಾ.
ಚಿಕನ್ ನಗ್ಗೆಟ್ಸ್ ಅನ್ನು ಕುಳಿತಲ್ಲಿಂದಲೇ ಗೈಡ್ ಗೆ ಪಾರ್ಸಲ್ ಕಳಿಸಿದ್ದು ಚೆನ್ನಾಗಿತ್ತು . :)) ಮುಂದಿನ ಭಾಗಕ್ಕಾಗಿ ಕಾಯುತ್ತೇನೆ.

ಬೇಸರಿಸದಿದ್ದರೆ ಒಂದು ಸಲಹೆ. ದಯವಿಟ್ಟು , ಬ್ಲಾಗ್ ನ ಹಿನ್ನೆಲೆ ಬಣ್ಣವನ್ನು ಸ್ವಲ್ಪ ತಿಳಿಯಾಗಿಸುವಿರಾ? ಓದಲು ಕೊಂಚ ಕಷ್ಟವಾಗುತ್ತದೆ.
shivu.k said…
ಸುಧೇಶ್,
ನಿಮ್ಮ ವೇಕೆಂಡ್ ನಾಲ್ಕು ಚೆನ್ನಾಗಿದೆ. ನಾನು ನಿಮ್ಮ ಪಕ್ಕದಲ್ಲಿ ಕೂತೂ ಎಲ್ಲವನ್ನು ನೋಡಿದಂತೆ ಆಯಿತು. ಚಿಕನ್ ವಿಚಾರ ಮಜವಾಗಿದೆ. ಮತ್ತೆ ಬ್ಲಾಗ್ ಹಿನ್ನೆಲೆ ಬಣ್ಣ ಬದಲಾಯಿಸಿದರೆ ಓದಲು ಸುಲಭವೆನಿಸುತ್ತದೆ[ಇದು ನನ್ನ ಅಭಿಪ್ರಾಯ ಕೂಡ]
Geetha said…
ನಮಸ್ಕಾರ ಸುಧೇಶ್ ಅವರೆ,
ಈ ವೀಕೆಂಡಿಗೆ ನಮ್ಮ್ನನ್ನೆಲ್ಲ ಸ್ವಿಟ್ಜರ್ ಲ್ಯಾ೦ಡ್ ಗೆ ಕರೆದೊಯ್ದು ಕೇಬಲ್ ಕಾರ್ ಹತ್ತಿಸಿ, ಗ್ಲೇಸಿಯರ್ ತೋರಿಸಿ, ಊರು ಸುತ್ತಿಸಿದಕ್ಕೆ ಖುಷಿಯಾಯ್ತು, ಧನ್ಯವಾದಗಳು :)

ವಿದೇಶಿಯರ ಬಗ್ಗೆ ತು೦ಬಾ ಉತ್ಪ್ರೇಕ್ಷೆ ಮಾಡಿ ಹೊಗಳದೆ,ಇದ್ದಿದ್ದು ಇದ್ದ ಹಾಗೆ ಹೇಳಿದ್ದು ಮೆಚ್ಚುಗೆಯಾಯ್ತು.

ಹಾ೦ ..ಮತ್ತೆ.......ಆ ಸಿನಿಮಾ ’ದಿಲ್ವಾಲೆ ದಿಲ್ ದುನಿಯಾ ಲೆ ಜಾಯೆ೦ಗೆ’ ಅಲ್ಲ..’ದಿಲ್ವಾಲೆ ದುಲ್ಹನಿಯ ಲೆಜಾಯೆ೦ಗೆ’ ;)
ಜೇ...
ಯುರೋಪ್ ದೇಶಗಳಲ್ಲಿ ಎಲ್ಲ ಕಡೆಯೂ ಒ೦ದೇ ತರಹ ಅನಿಸುತ್ತದಲ್ಲವೇ?
ಚಿಕನ್ ವಿಷ್ಯ ... ನನಗೂ ಕೆಲವೊಮ್ಮೆ ನಗು ಬರುತ್ತದೆ ಅದನ್ನು ನೆನೆಸಿಕೊ೦ಡಾಗ:)

ಚಿತ್ರಾ ಅವರೇ,

ಧನ್ಯವಾದಗಳು.... ಹೌದು ಚಿಕನ್ ಪಾರ್ಸೆಲ್ ಮಾಡಿದ್ದನ್ನು ಆ ಗೈಡ್ ನನಗೆ ಪಾರ್ಸೆಲ್ ಮಾಡಿ ಬಿಟ್ಟ ಹಿ೦ದಕ್ಕೆ. ನಾನು ಅದನ್ನೂ ಸೇರಿಸಿ ತಿ೦ದು ಮುಗಿಸಿದ್ದನ್ನು ಕ೦ಡು ಆ ಗೈಡ್‍ನ ಕೊಟ್ಟ ಲುಕ್ ಇನ್ನೂ ಮಜವಾಗಿತ್ತು:)

ಬ್ಲಾಗಿನ ಹಿನ್ನೆಲೆ ಬಣ್ಣ ಬದಲಿಸಿದ್ದೇನೆ. ಬೇಸರವೇನೂ ಇಲ್ಲ. ನನ್ನ ಪ್ರೆ೦ಡ್ ಹಿ೦ದೆಯೇ ಒಮ್ಮೆ ಸಲಹೆ ಕೊಟ್ಟಿದ್ದ.
ಹೊಸ ಟೆ೦ಪ್ಲೇಟ್ ಹೇಗಿದೆ ತಿಳಿಸಿ.

ಶಿವು ಅವರೇ,

ನಿಮ್ಮ ಸಲಹೆಯನ್ನು ಗ೦ಭೀರವಾಗಿ ಪರಿಗಣಿಸಿಸಿ ಮಾರ್ಪಾಡುಗಳನ್ನು ಮಾಡಲಾಗಿದೆ. ನಿಮಗೆ ತೃಪ್ತಿಕರವೇ ಎ೦ದು ತಿಳಿಸಬೇಕಾಗಿ ಕೇಳಿಕೊಳ್ಳಲಾಗಿದೆ:)

ಧನ್ಯವಾದಗಳು ಕಮೆ೦ಟಿಸಿದುದಕ್ಕೆ.

ಗೀತಾ ಅವರೇ,

ಥ್ಯಾ೦ಕ್ಸ್ ನಿಮ್ಮ ಪ್ರತಿಕ್ರಿಯೆಗೆ. ವಿದೇಶಿಯರ ಬಗ್ಗೆ ಉತ್ಪ್ರೇಕ್ಷೆ ಮಾಡುವ೦ತದ್ದೇನಿಲ್ಲ. ಅಲ್ಲಿ ಹೋದ ನ೦ತರ ಅವರು ನಮ್ಮ೦ತೆಯೇ ಎ೦ಬ ಭಾವನೆ ಬರುತ್ತದೆ.

ಆ ಫಿಲ್ಮ್... ಉಫ್.. ನ೦ಗೆ ಹಿ೦ದಿ ಸರಿಯಾಗಿ ಬರಲ್ಲ. ನಿಮ್ಮ ಲೇಖನವೊ೦ದರಲ್ಲಿ ಹಿ೦ದಿಯಲ್ಲಿ ಒ೦ದು ಸ೦ಭಾಷಣೆ ಇದೆ. ಅದನ್ನು ಅರ್ಥ ಮಾಡಿಕೊ೦ಡಿದ್ದೇ ಕಷ್ಟ ಪಟ್ಟು. ಸಲಹೆಗೆ ಧನ್ಯವಾದಗಳು. ಸರಿ ಮಾಡಹೋದರೆ ಬ್ಲಾಗ್ hang ಆಗುತ್ತಿದೆ. ಆದಷ್ಟು ಬೇಗನೇ ಸರಿ ಮಾಡುತ್ತೇನೆ.
ಸುಧೇಶ್ ಅವರೆ,

ಪ್ರವಾಸ ಕಥನದ ಅನುಭೂತಿ ತುಂಭಾ ಚೆನ್ನಾಗಿ ಮೂಡಿದೆ. ಅಬ್ಬಾ! ಸೊನ್ನೆ ಡಿಗ್ರಿಯನ್ನು ಅದು ಹೇಗೆ ನೀವೆಲ್ಲಾ ಸಹಿಸಿದರೋ!!!?
ಜನನೀ ಜನ್ಮ ಭೂಮಿಶ್ಚ ಬೇಗ ಬರಲಿ :) ಹಾಂ. ಹೊಸ ಟೆಂಪ್ಲೇಟ್ ಚೆನ್ನಾಗಿದೆ. ಕಣ್ಣಿಗೆ ಹಿತವಾಗಿದೆ. :)
Ittigecement said…
ಸುಧೇಶ್....
ಸ್ವಿಟ್ಸರ್ ಲ್ಯಾಂಡ್..ಭೂಲೋಕದ ಸ್ವರ್ಗವಂತೆ...
ನೀವು ಹೇಳಿದ ಮೇಲೆ " ದಿಲ್ ವಾಲೆ ದುಲ್ಹನಿಯಾ ಲೇಜಾಯೆಂಗೆ " ಸಿನೇಮಾ ಕ್ಲಿಪಿಂಗ್ಸ್ ನೋಡಿದೆ...
ನಿಜಕ್ಕೂ ಮನಮೋಹಕವಾಗಿದೆ...
ದಯವಿಟ್ಟು ಇನ್ನಷ್ಟು ಫೋಟೊ ಹಾಕಿ...
ಬರವಣಿಗೆ ಚಿಕ್ಕವಾಗಿ , ಚೊಕ್ಕವಾಗಿದೆ..
ನಿಮ್ಮ ಅನುಮತಿ ಇಲ್ಲದೆ ನಿಮ್ಮ ಬ್ಲೋಗನ್ನು ಅನುಸರಿಸುತ್ತಿದ್ದೇನೆ...
ಬೇಸರವಿಲ್ಲ ತಾನೇ..?

ಮುಂದಿನ ಕಂತನ್ನು ಎದುರು ನೋಡುತ್ತಿರುವೆ...
Ittigecement said…
SUDHESH....

ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು...

ಸುಖ, ಶಾಂತಿ , ಸಮ್ರುದ್ಧಿಯನ್ನು ತರಲಿ...

ನಿಮ್ಮೆಲ್ಲ ಕನಸು ನನಸಾಗಲಿ...

ಶುಭ ಹಾರೈಕೆಗಳು...
ಎಲ್ಲರಿಗೂ ಹೊಸ ವರುಷದ ಶುಭಾಶಯಗಳು.

ತೇಜಕ್ಕ...

ಥ್ಯಾ೦ಕ್ಸ್.

ಸೊನ್ನೆ ಡಿಗ್ರಿಯನ್ನು ಸಹಿಸಲು ಆಗುವ೦ತಹ ಜಾಕೆಟುಗಳು, ಸ್ಪೋರ್ಟ್ಸ್ ಶೂಗಳು ಸಿಗುತ್ತವೆ. ನಮ್ಮ ಬಳಿ ಅವಿಲ್ಲದ ಕಾರಣ ನಮಗೆ ಕಷ್ಟವಾಗಿತ್ತು.

ಟೆ೦ಪ್ಲೇಟ್ ಬದಲಿಸಿದ ಮೇಲೆ ನನಗೂ ಹಾಗೇ ಅನಿಸಿತು:)

ಪ್ರಕಾಶ್ ಅವರೇ,

ನೀವು ಕೇಳಿದ್ದು ಸರಿ. ಸ್ವಿಟ್ಜರ್‍ಲೆ೦ಡ್ ಒ೦ದು ರೀತಿಯಲ್ಲಿ ಭೂಲೋಕದ ಸ್ವರ್ಗವಿದ್ದ೦ತೆ. ಅಷ್ಟೊ೦ದು ನಯನ ಮನೋಹರವಾಗಿದೆ.
ಈ ಪ್ರವಾಸ ಕಥನದ ಕೊನೆಯ ಭಾಗದಲ್ಲಿ ಸ್ವಿಸ್ ಫೋಟೋಗಳಿರುವ ಆಲ್ಬಮ್ ಲಿ೦ಕ್ ಕೊಡುತ್ತೇನೆ. ಅದರಲ್ಲಿ ತು೦ಬಾ ಫೋಟೋಗಳಿರುತ್ತವೆ.

ನೀವು ಧಾರಾಳವಾಗಿ ನನ್ನ ಬ್ಲಾಗ್ ಅನ್ನು ಅನುಸರಿಸಬಹುದು. ಥ್ಯಾ೦ಕ್ಸ್.

Popular posts from this blog

ಒ೦ದಿಷ್ಟು ಲೋಕಾಭಿರಾಮ ಮಾತು…..

ಚಿತ್ರಾ ಅವರ “ಶರಧಿ” ಓದುತ್ತಾ ಇದ್ದೆ. ಬೆ೦ಗಳೂರಿನ ಬಗ್ಗೆ ತಾವು ಒ೦ದು ವರ್ಷದಲ್ಲಿ ಕ೦ಡಿದ್ದನ್ನು ಬರೆದಿದ್ದರು. ಹೌದಲ್ಲ…. ನಾನು ಬೆ೦ಗಳೂರಿಗೆ ಬ೦ದು ಮೊನ್ನೆಯಷ್ಟೆ ಮೂರು ವರುಷಗಳಾದವು. ಅವರ ಲೇಖನ ನನ್ನನ್ನು ಒ೦ದು ಕ್ಷಣ ಚಿ೦ತಿಸುವ೦ತೆ ಮಾಡಿತು. ಈ ಮೂರು ವರುಷಗಳಲ್ಲಿ ಏನೆಲ್ಲಾ ಆಗಿದೆ. ಡಿ.ಗ್ರಿ. ಮುಗಿದ ಕೂಡಲೇ ಬೆ೦ಗಳೂರಿಗೆ ಬ೦ದ ನನ್ನಲ್ಲಿ ಈಗ ಅದೆಷ್ಟು ಬದಲಾವಣೆಗಳಿವೆ. ಕ್ಯಾ೦ಪಸ್ ಸೆಲೆಕ್ಷನ್ ಆಗಿದ್ದುದರಿ೦ದ ಕೆಲಸ ಹುಡುಕುವ ಕಷ್ಟ ಇರಲಿಲ್ಲ. ಬೆ೦ಗಳೂರಿಗೆ ನಾನು ಹೊ೦ದಿಕೊಳ್ಳುತ್ತೇನೆಯೇ ಎ೦ಬ ಭಯ ಇತ್ತು. ಎಲ್ಲರನ್ನೂ ತನ್ನೊಳಗೆ ಒ೦ದಾಗಿಸಿಕೊ೦ಡು ಬೆರೆಸಿಕೊಳ್ಳುವ ಶಕ್ತಿ ಇದೆ ಈ ಮಹಾ ನಗರಿಗೆ. ಬ೦ದ ಮೊದಲ ದಿನವೇ ಜ್ವರದಿ೦ದ ರಸ್ತೆಯ ಮಧ್ಯ ತಲೆಸುತ್ತು ಬ೦ದು ಅಲ್ಲೇ ಹತ್ತಿರದಲ್ಲಿದ್ದ ಆಟೋದ ಒಳಗೆ ಓಡಿ ಹೋಗಿ ಕೂತಿದ್ದು, ಆತ ನಾನು ಹೇಳಿದ ಸ್ಥಳಕ್ಕೆ ಬರಲಾಗುವುದಿಲ್ಲ ಎ೦ದು ನನ್ನ ಭಾವನ ಬಳಿ ಹೇಳಿದಾಗ ಅನಿವಾರ್ಯವಾಗಿ ಕೆಳಗಿಳಿದು, ತಲೆ ಸುತ್ತಿನಿ೦ದ ಬಿದ್ದು ಬಿಡುತ್ತೇನೋ ಎ೦ದು ಭಯವಾಗಿ ಭಾವನನ್ನು ಗಟ್ಟಿಯಾಗಿ ಹಿಡಿದುಕೊ೦ಡಿದ್ದು ಎಲ್ಲವೂ ನಿನ್ನೆ ಮೊನ್ನೆ ನಡೆದ೦ತೆ ಭಾಸವಾಗಿದೆ. ಬೆ೦ಗಳೂರು ನನಗೆ ಅನ್ನ ಕೊಟ್ಟಿದೆ, ಆರ್ಥಿಕ ಸ್ವಾತ೦ತ್ರ್ಯ ಕೊಟ್ಟಿದೆ, ಎಲ್ಲದಕ್ಕಿ೦ತ ಹೆಚ್ಚಾಗಿ ಆತ್ಮವಿಶ್ವಾಸ ನೀಡಿದೆ. ತು೦ಬಾ ಆತ್ಮೀಯವಾದ ಗೆಳೆಯ ಗೆಳತಿಯರನ್ನು ನೀಡಿದೆ ಈ ಬೆ೦ಗಳೂರು. ಬ್ಲಾಗ್ ಎ೦ಬ ಹೊಸ ಪ್ರಪ೦ಚದ ಅರಿವು ಇಲ್ಲಿ ಬ೦ದ ಮೇಲೆಯೇ ಆಗಿದ್ದು. ಬ

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ

ಶಕು೦ತಲೆಗೆ……..

ಶಕು೦ತಲೆಗೆ…….. ಶಕು೦ತಲೆ….. ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು? ಆತ ಯಾರೋ ಎಲ್ಲಿಯದ್ದೋ ಅರಸ, ಆದರೂ ಮರುಳಾಗಿಬಿಟ್ಟೆಯಲ್ಲವೇ ನಿನಗೇನಾಗಿತ್ತು ಅ೦ದು? ಮುಸುಕಿತ್ತೇ ಮೋಡ, ನಿನ್ನ ಶೀಲವೆ೦ಬ ಆಕಾಶಕ್ಕೆ ಆತನೋ ಮಹಾಲ೦ಪಟ ಚೆಲುವನ್ನು ಕಣ್ಸೆರೆ ಮಾಡುವ ಚೋರ ನಿನ್ನ ನಯನಗಳು ಆತನೊ೦ದಿಗೆ ಬೆರೆತಾಗ…. ಮನವೂ ಬೆರೆಯ ಬೇಕೆ೦ದಿತ್ತೆ? ಅರಿತು ಸಾಗುವ ಮೊದಲೇ ಒಪ್ಪಿಸಿ ಬಿಟ್ಟೆಯಲ್ಲವೇ ನಿನ್ನನಾತಗೆ? ನಿನ್ನದೂ ತಪ್ಪಿಲ್ಲ ಬಿಡು ಗೌತಮಿಯ ಸೂಕ್ಷ್ಮ ಕ೦ಗಳಿಗೆ ಮಣ್ಣೆರಚಿದಾತ ನಿನ್ನ ಕೋಮಲ ಮನಸಿನಲಿ ತನಸ್ಥಿತ್ವವ ಸ್ಥಾಪಿಸದೇ ಬಿಟ್ಟಾನೆ? ನಿನ್ನ ದೇಹವೂ ಆತನೊ೦ದಿಗೆ ಬೆಸೆದಾಗ ದಿಟವ ಹೇಳು? ನಿನ್ನ ಮನವೂ ಬೆರೆದಿತ್ತೆ? ಕೊರೆಯುತ್ತಿರಲಿಲ್ಲವೇ? ಮನದ ಮೂಲೆಯಲ್ಲೆಲ್ಲೋ ಒ೦ದು ಕೀಟ…….. ಸ೦ಶಯದ ಕೀಟ! ಆದರೂ ಒಪ್ಪಿಸಿಬಿಟ್ಟೆಯಲ್ಲವೇ ನಿನ್ನನಾತಗೆ? ನಿನಗಾಗ ಹೊಳೆದಿರಲಿಲ್ಲವೇ? ಒಬ್ಬನಿಗೆ ಕೊಟ್ಟ ಮನಸು ಮಗದೊಮ್ಮೆ ಹಿ೦ತಿರುಗದೆ೦ದು? ತಡವಾಗಿ ಅದರರಿವು ಬ೦ದಿರಬೇಕು ನಿನಗೆ ನಿನ್ನ ನೆನಪುಗಳೇ ಆತನಿಗೆ ಬರುತ್ತಿಲ್ಲ ಎ೦ದಾಗ. ಯಾವ ನೆನಪುಗಳಿಗೆ ನೀನು ಮಧುರ ಸ್ಥಾನವಿತ್ತಿದ್ದೆಯೋ ಯಾವ ಕನಸುಗಳನು ಸಲಹಿ ಉದರದಲಿ ಹೊತ್ತಿದ್ದೆಯೋ ಅದೊ೦ದು ತನಗೆ ನೆನಪಾಗುತ್ತಿಲ್ಲವೆ೦ದನಾತ ಆಗಲೂ, ನೀನು ಅವನ ನೆನೆಪುಗಳ ಕಿತ್ತೊಗೆದೆಯಾ? ಸಾಧ್ಯವಾದರೆ ತಾನೇ ಕೀಳಲು! ಬಲವಾಗಿ ಬೇರೂರಿದ್ದ ಆತ ತನ್ನ ಛಾಯೆಗಳ ನಿನ್ನ ಸತ್ವಹೀನ ಮನದ ನಭದಲ್ಲಿ ಆ ಉ೦ಗುರ! ಅದೇ ನಿನಗಾತ ಮತ್ತೆ ತೋರಿಸಿದನಲ್ಲ ನಿನ್ನನ